ಇಂದಿನ ಇತಿಹಾಸ
ಜೂನ್ 1
ಕರಣಂ ಮಲ್ಲೇಶ್ವರಿ ಹುಟ್ಟಿದ ದಿನ. ಭಾರತದ ವೇಯ್ಟ್ ಲಿಫ್ಟರ್ ಆದ ಈಕೆ ಸಿಡ್ನಿಯಲ್ಲಿ 2000ದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2007: ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ರೈತರಲ್ಲ ಎಂದು ತೀರ್ಪು ನೀಡಿದ ಫೈಜಾಬಾದ್ ನ್ಯಾಯಾಲಯವೊಂದು ರೈತನೆಂದು ಘೋಷಿಸಿ ಬಾರಾಬಂಕಿಯಲ್ಲಿ ಖರೀದಿಸಿದ್ದ ಎರಡು ಎಕರೆ ಜಮೀನಿನ ಒಡೆತನಕ್ಕೆ ಅಮಿತಾಭ್ ಅವರು ಮಂಡಿಸಿದ್ದ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿತು.
2007: ನಟ ಸಂಜಯದತ್ ಅವರಿಗೆ ಎಕೆ-56 ರೈಫಲ್ ಪೂರೈಸಿದ್ದ ಸಮೀರ್ ಹೀಂಗೋರಾಗೆ ಟಾಡಾ ನ್ಯಾಯಾಲಯವು 8 ವರ್ಷಗಳ ಕಠಿಣ ಸಜೆ ವಿಧಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯವು ಹಿಂಗೋರಾಗೆ 2 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತು.
2007: `ಆಶಾಪೂರ ಗೌಡ' ಎಂದೇ ಖ್ಯಾತರಾಗಿದ್ದ ಹಿರಿಯ ರಂಗಕರ್ಮಿ ಬಸವರಾಜ ಪಾಟೀಲ (60) ರಾಯಚೂರಿನಲ್ಲಿ ನಿಧನರಾದರು. ಕೃಷಿಕ, ರಂಗಭೂಮಿ ಕಲಾವಿದರಾಗಿದ್ದ ಬಸವರಾಜ ಪಾಟೀಲ ಅವರು ಸ್ಥಾಪಿಸಿದ ಶ್ರೀಸಂಗಮೇಶ್ವರ ನಾಟ್ಯಸಂಘ ಆಶಾಪೂರ' ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.
2007: ಎನ್ ಸಿಪಿ ಖಜಾಂಚಿ ರಾಮ್ ಅವತಾರ್ ಜಗ್ಗಿ ಕೊಲೆ ಪ್ರಕರಣದ ಆರೋಪಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ರಾಯಪುರದ ವಿಶೇಷ ನ್ಯಾಯಾಲಯವು ಈದಿನ ಖುಲಾಸೆ ಗೊಳಿಸಿತು.
2007: ಭಾಷಾ ಮಾಧ್ಯಮ ನೀತಿ ಉಲ್ಲಂಘಿಸಿದ ಸುಮಾರು 400 ಶಾಲೆಗಳು ಸಕಾಲದಲ್ಲಿ ಪ್ರಮಾಣಪತ್ರ ಸಲ್ಲಿಸದ ಕಾರಣ ಅವುಗಳ ಮಾನ್ಯತೆ ರದ್ದು ಮಾಡುವ ಸರ್ಕಾರದ ನಿರ್ಧಾರಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿತು.
2006: ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿ ಧ್ವಂಸಗೊಳಿಸುವ ಉಗ್ರಗಾಮಿಗಳ ಸಂಚು ವಿಫಲಗೊಳಿಸಲಾಯಿತು. ಕಚೇರಿ ಮೇಲೆ ನುಗ್ಗಲು ಯತ್ನಿಸಿದ ಮೂವರು ಸಶಸ್ತ್ರ ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ನಸುಕಿನ 4 ಗಂಟೆ ಸುಮಾರಿಗೆ ಸಬ್ ಇನ್ ಸ್ಪೆಕ್ಟರ್ ದಿರಿಸಿನಲ್ಲಿ ಕೆಂಪು ಗೂಟದ ಅಂಬಾಸಿಡರ್ ಕಾರಿನಲ್ಲಿ ಬಂದು ಉಗ್ರಗಾಮಿಗಳು ಪ್ರಧಾನ ಕಚೇರಿ ಬಳಿಯ ಅಡೆತಡೆ ಉಲ್ಲಂಘಿಸಲು ಯತ್ನಿಸಿದಾಗ ಚಕಮಕಿ ಹಾಗೂ ಗುಂಡಿನ ಘರ್ಷಣೆ ನಡೆದು, ಪೊಲೀಸರು ಕಾರಿನಲ್ಲಿದ್ದ ಮೂರೂ ಮಂದಿ ಉಗ್ರಗಾಮಿಗಳನ್ನು ಕೊಂದು ಹಾಕಿದರು.
2006: ರಾಜ್ಯಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಯಾಬಚ್ಚನ್ ಅವರು ತಮ್ಮ ಹೆಸರನ್ನು ಬಚ್ಚನ್ ಜಯಾ ಅಮಿತಾಭ್ ಎಂದು ಬದಲಾಯಿಸಿಕೊಂಡರು.
2001: ನೇಪಾಳದ ಕಠ್ಮಂಡುವಿನಲ್ಲಿ ದೊರೆ ಬೀರೇಂದ್ರ, ರಾಣಿ ಐಶ್ವರ್ಯ ಮತ್ತು ರಾಜಕುಟುಂಬದ 8 ಮಂದಿ ಸದಸ್ಯರನ್ನು ರಾಜಕುಮಾರ ದೀಪೇಂದ್ರ ಗುಂಡು ಹೊಡೆದು ಕೊಂದು ಹಾಕಿದ. ನಂತರ ತನಗೂ ಗುಂಡು ಹಾರಿಸಿಕೊಂಡ ದೀಪೇಂದ್ರ ಮೂರು ದಿನಗಳ ಬಳಿಕ ಮೃತನಾದ.
1975: ಕರಣಂ ಮಲ್ಲೇಶ್ವರಿ ಹುಟ್ಟಿದ ದಿನ. ಭಾರತದ ವೇಯ್ಟ್ ಲಿಫ್ಟರ್ ಆದ ಈಕೆ ಸಿಡ್ನಿಯಲ್ಲಿ 2000ದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1967: ಕಲಾವಿದ ರವೀಂದ್ರ ಸೋರೆಗಾಂವಿ ಜನನ.
1951: ಕಲಾವಿದ ಬಸವರಾಜ ಹಿರೇಮಠ ಜನನ.
1951: ಕಲಾವಿದ ನೀರ್ನಳ್ಳಿ ಗಣಪತಿ ಜನನ.
1950: ಹೊನ್ನಾವರ ಕರ್ಕಿಕೋಡಿಯ ಕವಿ, ವಿಮರ್ಶಕ, ಜಾನಪದ ವಿದ್ವಾಂಸ ವಿ.ಗ. ನಾಯಕ್ ಅವರು ಗಣಪತಿ ನಾಯಕ್- ಸೀತಾದೇವಿ ದಂಪತಿಯ ಮಗನಾಗಿ ಜನಿಸಿದರು.
1939: ಕಲಾವಿದ ಎನ್.ವಿ. ಗೋಪೀನಾಥ ಜನನ.
1933: ಸಂವೇದನಾಶೀಲ ಪಾತ್ರಗಳಿಗೆ ತಮ್ಮದೇ ಆದ ವಿಶಿಷ್ಟ ರೂಪ ನೀಡಿ ನಟನೆಯಲ್ಲಿ ವಿಶೇಷ ಛಾಪು ಮೂಡಿಸಿಕೊಂಡ ಖ್ಯಾತ ನಟಿ ಯಮುನಾ ಮೂರ್ತಿ ಅವರು ಎಸ್.ಪಿ. ರಂಗರಾವ್- ಸಂಗೀತಗಾರ್ತಿ ವೆಂಕಟಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1926: ಅಮೆರಿಕದ ಖ್ಯಾತ ಚಿತ್ರನಟಿ ಮರ್ಲಿನ್ ಮನ್ರೋ ಹುಟ್ಟಿದ್ದು ಇದೇ ದಿನ.
1892: ಆಫ್ಘಾನಿಸ್ಥಾನದ ಆಡಳಿತಗಾರ ಅಮಾನೊಲ್ಲಾ ಖಾನ್ (1892-1960) ಜನ್ಮದಿನ. ಆಫ್ಘಾನಿಸ್ಥಾನವನ್ನು ಬ್ರಿಟಿಷರ ಪ್ರಭಾವದಿಂದ ಹೊರತಂದು ಪೂರ್ಣ ಸ್ವಾತಂತ್ರ್ಯದತ್ತ ಮುನ್ನಡೆಸಿದ ಆಡಳಿತಗಾರ ಈತ.
1889: ಚಾರ್ಸ್ ಕೆ. ಆಗ್ಡನ್ (1889-1957) ಜನ್ಮದಿನ. ಬ್ರಿಟಿಷ್ ಬರಹಗಾರ ಹಾಗೂ ಭಾಷಾ ತಜ್ಞನಾದ ಈತ ಇಂಗ್ಲಿಷ್ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಮಾಧ್ಯಮವಾಗಿ ಬಳಸಲು ಸಾಧ್ಯವಾಗುವಂತೆ ಸರಳಗೊಳಿಸಿದ. ಈತ ಸರಳಗೊಳಿಸಿದ ಏಕರೂಪದ ಇಂಗ್ಲಿಷ್ ಭಾಷೆಯೇ `ಮೂಲ ಇಂಗ್ಲಿಷ್' (ಬೇಸಿಕ್ ಇಂಗ್ಲಿಷ್) ಎಂದು ಪರಿಗಣಿತವಾಗಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment