ಇಂದಿನ ಇತಿಹಾಸ
ಜುಲೈ 15
ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರನ್ನು ನೇಮಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಅಧಿಸೂಚನೆ ಹೊರಡಿಸಿದರು. ಎನ್. ವೆಂಕಟಾಚಲ ಅವರ ನಿವೃತ್ತಿಯಿಂದ ಈ ಸ್ಥಾನ ತೆರವಾಗಿತ್ತು.
2007: ಭೋಪಾಲಿನ ಬರ್ಕತ್ ಉಲ್ಲಾ ಉಲ್ಲಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೊಳವೆ ಬಾವಿ ಮತ್ತು ಕಂದಕದಲ್ಲಿ ಬಿದ್ದ ಮಕ್ಕಳನ್ನು ಸುರಕ್ಷಿತವಾಗಿ ಮೇಲೆತ್ತಲು ಕಡಿಮೆ ವೆಚ್ಚದ ಯಂತ್ರ ರೂಪಿಸಿದ್ದನ್ನು ಬಹಿರಂಗಪಡಿಸಿದರು. ಇಪ್ಪತ್ತರ ಹರೆಯದ ವಿದ್ಯಾರ್ಥಿಗಳಾದ ಮಯಂಕ್ ಜೈನ್, ಗೌರವ್ ಭಾರ್ಗವ, ಆಶಿಶ್ ಮುಚ್ರಿಕರ್ ಮತ್ತು ಅಶುತೋಷ್ ಶ್ರೀವಾಸ್ತವ್ ಅವರು ಹೆಚ್ಚು ತೂಕದ ಗೊಂಬೆಯನ್ನು ಪ್ರಯೋಗಾರ್ಥವಾಗಿ ಬಳಸಿ, ಕಂದಕದಿಂದ ಮಕ್ಕಳನ್ನು ಪಾರು ಮಾಡುವಂತಹ ಸಲಕರಣೆಯ ವಿನ್ಯಾಸ ರೂಪಿಸಿದವರು. ಪ್ರೊ.ದಿನೇಶ್ ಅಗರವಾಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಿಸಿದರು. ಬಾವಿಯಲ್ಲಿ ಸಿಲುಕಿದ ಮಗುವನ್ನು ಹೊರತೆಗೆಯಲು ಜೆಸಿಬಿ ಯಂತ್ರ 40-45 ಗಂಟೆ ತೆಗೆದುಕೊಂಡರೆ, ಈ ಯಂತ್ರ ಕೇವಲ ಎರಡು ಗಂಟೆಗಳಲ್ಲಿ ಈ ಕೆಲಸ ಮಾಡಬಲ್ಲುದು. ಎರಡು ಸಾವಿರ ರೂಪಾಯಿಗಳಷ್ಟು ಕಡಿಮೆ ವೆಚ್ಚದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಳಿಸಬಹುದು. ಯಾವುದೇ ಬೃಹತ್ ಯಂತ್ರಗಳ ಸಹಾಯವಿಲ್ಲದೆ ಇದನ್ನು ಕಂದಕಕ್ಕೆ ಇಳಿಸಬಹುದು. ಇದರಲ್ಲಿ ಕ್ಯಾಮೆರಾ ಮತ್ತು ಮೈಕ್ ಅಳವಡಿಸಬಹುದು.
2007: ಹದಿನೈದು ದಿನಗಳ ಹಿಂದಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿಗೆ ಬೆಂಕಿ ಹಚ್ಚಿದ್ದ ಶಸ್ತ್ರಸಜ್ಜಿತ ನಕ್ಸಲೀಯರ ತಂಡ, ಈದಿನ ಬೆಳಗಿನ ಜಾವ ಪುನಃ ಆಗುಂಬೆ ಸಮೀಪದ ಗುಬ್ಬಿಗ, ತಲ್ಲೂರು ಅಂಗಡಿ ಗ್ರಾಮಗಳ ಮೇಲೆ ದಾಳಿ ಮಾಡಿ ಅಂಗಡಿ ಮಾಲೀಕ ನಾಗೇಶ, ಇವರ ಸೋದರ ಗುತ್ತಿಗೆದಾರ ಉಮೇಶ, ಬಿದರಗೋಡು ಪಂಚಾಯ್ತಿ ಸದಸ್ಯ ಸತೀಶ ಮತ್ತು ಕೃಷಿಕ ಶಂಕರಪ್ಪ ಅವರ ಮನೆಗೆ ನುಗ್ಗಿ 85,000 ರೂಪಾಯಿ ನಗದು ಹಣ,500 ಗ್ರಾಂ ಚಿನ್ನವನ್ನು ದೋಚಿತು.
2007: ಚಿತ್ರದುರ್ಗದ ಕಾತ್ರಾಳ್ ಕೆರೆ ಸಮೀಪ ಹೆದ್ದಾರಿ 4ರಲ್ಲಿ ಖಾಸಗಿ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ 14 ಜನ ಮೃತರಾಗಿ, ಇಬ್ಬರು ಗಾಯಗೊಂಡರು. ಮಧ್ಯರಾತ್ರಿ 1.30ರ ವೇಳೆಗೆ ಈ ದುರಂತ ಸಂಭವಿಸಿತು. ಮೃತರಾದವರಲ್ಲಿ ಕೆಲವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟಿನ ನಿವಾಸಿಗಳು. ಮೂವರು ಚಳ್ಳಕೆರೆಯ ಸೋಮಗುದ್ದಿನವರು. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, 16 ಜನ ಟಾಟಾ ಸುಮೋದಲ್ಲಿ ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಹೊರಟಿದ್ದರು.
2007: ಕರ್ನಾಟಕದ ಆರು ಕೃಷಿ ಸಂಶೋಧಕರಿಗೆ ಮತ್ತು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಈ ಬಾರಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಪ್ರಶಸ್ತಿ ಲಭಿಸಿತು. ಬೆಂಗಳೂರಿನ ಡಾ. ಸುಧೀರ್ ಚಂದ್ರ ರಾಯ್, ಧಾರವಾಡದ ಡಾ. ಪ್ರತಿಮಾ ಸಿ ಬಿಲೆಹಾಳ್ ಮತ್ತು ಮಂಗಳೂರಿನ ಡಾ. ಸ್ವಾತಿ ಲಕ್ಷ್ಮಿ ಅವರು ಅತ್ಯುತ್ತಮ ಸ್ನಾತಕೋತ್ತರ ಸಂಶೋಧಕರಿಗೆ ನೀಡುವ 2006ರ ಸಾಲಿನ `ಜವಾಹರಲಾಲ್ ನೆಹರು' ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರು ಮೂಲದ ಮತ್ತೊಬ್ಬ ವಿಜ್ಞಾನಿ ಡಾ. ವಿ. ರಾಮಮೂರ್ತಿ 2005-06ರ ಸಾಲಿನ `ಸ್ವಾಮಿ ಸಹಜಾನಂದ ಸರಸ್ವತಿ' ಪ್ರಶಸ್ತಿಗೆ ಆಯ್ಕೆಯಾದರು. ಡಾ. ರವೀಂದ್ರ ಎಚ್ ಪಾಟೀಲ್ ಅವರು 2005-06ರ ಸಾಲಿನ `ಲಾಲ್ ಬಹದೂರ್ ಶಾಸ್ತ್ರಿ ಯುವ ವಿಜ್ಞಾನಿ' ಪ್ರಶಸ್ತಿಗೆ ಪಾತ್ರರಾದರೆ, ಡಾ. ಇಂದ್ರಾಣಿ ಕರುಣಸಾಗರ್ ಅವರು ಒಂದು ಲಕ್ಷ ರೂ. ಬಹುಮಾನ ಮೊತ್ತದ `ರಫಿ ಅಹ್ಮದ್ ಕಿದ್ವಾಯಿ' ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರವು ವಿಸ್ತರಣಾ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅದಕ್ಕೆ ಒಂದು ಲಕ್ಷ ರೂ. ಬಹುಮಾನ ಪ್ರಕಟಿಸಲಾಯಿತು.
2007: ಭಾರತದ ಖ್ಯಾತ ಚೆಸ್ ಆಟಗಾರ್ತಿ ಕೊನೇರು ಹಂಪಿ ಅವರು ಈ ರಾತ್ರಿ ಡಿಫೆರ್ಡಾಂಗಿನಲ್ಲಿ (ಲಕ್ಸೆಂಬರ್ಗ್) ಮುಕ್ತಾಯವಾದ ಕೌಪ್ ಥಿಂಗ್ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ವಿಜಯ ಸಾಧಿಸಿ, ಚಾಂಪಿಯನ್ ಪಟ್ಟ ಬಗಲಿಗೆ ಹಾಕಿಕೊಂಡರು. ಕಳೆದ ತಿಂಗಳ ಅಂತ್ಯದಲ್ಲಿ ಹಾಲೆಂಡಿನ ಹಿಲ್ವೆರ್ಸಮ್ ನಲ್ಲಿ ನಡೆದ ಎಚ್ ಎಸ್ ಜಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಹಂಪಿ ಚಾಂಪಿಯನ್ ಪಟ್ಟ ಪಡೆದಿದ್ದರು.
2007: ವಾಹನಗಳ ದಟ್ಟಣೆ ಮತ್ತು ವಾಯು ಮಾಲಿನ್ಯದಿಂದ ಬಿಡುಗಡೆ ಹೊಂದಲು ಪ್ಯಾರಿಸ್ ನಗರದಾದ್ಯಂತ ಬಾಡಿಗೆ ಸೈಕಲ್ ಬಳಸಲು ಅವಕಾಶ ಕಲ್ಪಿಸಲಾಯಿತು. ಎಲ್ಲ ಕಡೆಗಳಲ್ಲೂ ಸೈಕಲ್ ನಿಲ್ದಾಣಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಯುರೋಪಿನ ಇತರ ನಗರಗಳಲ್ಲೂ ಇದು ಜನಪ್ರಿಯವಾಗುತ್ತಿದೆ. ನಗರದ ಒಂದು ಸೈಕಲ್ ನಿಲ್ದಾಣದಿಂದ ಇನ್ನೊಂದು ನಿಲ್ದಾಣ ಅಥವಾ ಬೇರೆ ಕಡೆಗೆ ಹೋಗಲು ಬಾಡಿಗೆ ಸೈಕಲ್ಲುಗಳ ವ್ಯವಸ್ಥೆಯನ್ನೂ ಮಾಡಲಾಯಿತು.
2006: ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರನ್ನು ನೇಮಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಅಧಿಸೂಚನೆ ಹೊರಡಿಸಿದರು. ಎನ್. ವೆಂಕಟಾಚಲ ಅವರ ನಿವೃತ್ತಿಯಿಂದ ಈ ಸ್ಥಾನ ತೆರವಾಗಿತ್ತು.
2006: ಸ್ವೀಡನ್ ನೇತೃತ್ವದ ವಿಜ್ಞಾನಿಗಳ ತಂಡವೊಂದು ಕರಡಿಯೊಂದರ ಹಲ್ಲಿನಲ್ಲಿ 4 ಲಕ್ಷ ವರ್ಷಗಳಷ್ಟು ಹಳೆಯ ಡಿ ಎನ್ ಎ ಪತ್ತೆ ಮಾಡಿದೆ ಎಂದು ಸ್ವೀಡನ್ನಿನ ಉಪ್ಸಾಲಾ ವಿಶ್ವವಿದ್ಯಾಲಯ ಪ್ರತಿಪಾದಿಸಿತು. ಈ ತಂಡದಲ್ಲಿ ಸ್ವೀಡನ್, ಸ್ಪೇನ್ ಮತ್ತು ಜರ್ಮನಿಯ ಸಂಶೋಧಕರಿದ್ದು, ಉತ್ತರ ಸ್ಪೇನಿನ ಅಟಪ್ಯುಯೆರ್ಕ ಎಂಬಲ್ಲಿನ ಗುಹೆಯೊಂದರಲ್ಲಿ ಈ ಕರಡಿಯ ಹಲ್ಲನ್ನು ಶೋಧಿಸಿತ್ತು ಎಂದು ಎಎಫ್ ಪಿ ಸುದ್ದಿ ಸಂಸ್ಥೆ ಸ್ಟಾಕ್ ಹೋಮಿನಿಂದ ವರದಿ ಮಾಡಿತು.
2006: ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ, ಭಾರತದ ಮೊತ್ತ ಮೊದಲ ಪ್ಲಾಸ್ಟಿಕ್ ತಂತ್ರಜ್ಞಾನ ವಿಜ್ಞಾನಿ ಎಂದು ಗುರುತಿಸಲ್ಪಟ್ಟ ಡಾ. ಕೆ.ಎಸ್. ಜಗದೀಶ್ (51) ತುಮಕೂರಿನಲ್ಲಿ ನಿಧನರಾದರು.
1991: ಕರ್ನಾಟಕ ಕೇಸರಿ ಜಗನ್ನಾಥ ಜೋಶಿ ನಿಧನ.
1932: ಸಾಹಿತಿ ಮನೋರಮ ಎಂ. ಭಟ್ ಜನನ.
1906: ರಸಿಕ ರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಸಾಹಿತಿ, ಕಾದಂಬರಿಕಾರ ರಂಗನಾಥ ಶ್ರೀನಿವಾಸ ಮುಗಳಿ (ರಂ.ಶ್ರೀ. ಮುಗಳಿ) ಶ್ರೀನಿವಾಸರಾಯ- ಕಮಲಮ್ಮ ದಂಪತಿಯ ಪುತ್ರನಾಗಿ ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ ಜನಿಸಿದರು. 1993ರ ಫೆಬ್ರುವರಿ 20ರಂದು ಅವರು ನಿಧನರಾದರು.
1904: ಜೈಪುರ ಘರಾನಾದ ಖ್ಯಾತ ಹಾಡುಗಾರ್ತಿ ಮೊಗುಬಾಯಿ ಕುರ್ದಿಕರ ಜನನ.
1903: ಸ್ವಾತಂತ್ರ್ಯ ಸೇನಾನಿ, ಸಮಾಜ ಸುಧಾರಕ ರಾಜಕಾರಣಿ ಕುಮಾರಸ್ವಾಮಿ ಕಾಮರಾಜ್ ಜನನ.
1783: ಭಾರತದ ಖ್ಯಾತ ಸಮಾಜ ಸುಧಾರಕ, ವರ್ತಕ, ಕೈಗಾರಿಕೋದ್ಯಮಿ ಸರ್ ಜೆಮ್ ಶೆಟ್ ಜಿ ಜೀಜಾಭಾಯಿ ಅವರು ಈದಿನ ಮುಂಬೈಯಲ್ಲಿ ಜನಿಸಿದರು. ಕೆರೆ, ಬಾವಿ, ರಸ್ತೆ, ಆಸ್ಪತ್ರೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಆರಂಭ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇತ್ಯಾದಿಗಳ ಮೂಲಕ ತಮ್ಮ ಅಪಾರ ಸಂಪತ್ತನ್ನು ಇವರು ಸಮಾಜ ಸೇವೆಗೆ ವಿನಿಯೋಗಿಸಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment