ಗೋಕರ್ಣ: ಯಾವುದು ಸೌಜನ್ಯ?
ಯಾವುದು ದೌರ್ಜನ್ಯ?
ಯಾವುದು ದೌರ್ಜನ್ಯ?
ಕೆಲ ಸಮಯದಿಂದ ಸುದ್ದಿಯ ಕೇಂದ್ರ ಬಿಂದುವಾದ ಗೋಕರ್ಣದಲ್ಲಿ ಅಕ್ಟೋಬರ್ 9ರ ಗುರುವಾರ ಮತ್ತು ಅಕ್ಟೋಬರ್ 10ರ ಶುಕ್ರವಾರ ಎರಡು ಘಟನೆಗಳು ನಡೆದವು. ಒಂದು ಘಟನೆ ಒಬ್ಬರ ಪ್ರಾಣತೆಗೆಯುವ ಯತ್ನದ್ದು, ಇನ್ನೊಂದು ಘಟನೆ ಗೋಕರ್ಣ ಆಸುಪಾಸಿನ ಜನರ ಜೀವನಕ್ಕೆ ದಾರಿತೋರುವಂತಹ ಮಾರ್ಗದರ್ಶನದ ಯತ್ನದ್ದು. ಗುರುವಾರದ ಘಟನೆಯಲ್ಲಿ ಸೀಮೆ ಎಣ್ಣೆ ಸುರಿದು ಅಮೂಲ್ಯವಾದ ಪ್ರಾಣ ಹರಣದ ಯತ್ನ ನಡೆದರೆ, ಶುಕ್ರವಾರದ ಘಟನೆಯಲ್ಲಿ ಅಳಿವಿನತ್ತ ಸಾಗುತ್ತಿರುವ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜನರ ಜೀವನ ನಿರ್ವಹಣೆಗೆ ಬೇಕಾದ ಆದಾಯ ತರಲು ಮಾರ್ಗ ರೂಪಿಸಿಕೊಡುವ ಯತ್ನ ನಡೆಯಿತು.
ಗೋಕರ್ಣ ಹಸ್ತಾಂತರ ಕುರಿತು ಭಾರಿ ಹುಯಿಲು ಎಬ್ಬಿಸಿ, ಅದನ್ನು ವಿರೋಧಿಸುವ ಚಳವಳಿಯ ಮುಂಚೂಣಿಯಲ್ಲಿದ್ದವರ ಮುಖವನ್ನು ಪರಿಚಯಿಸಿದ ಘಟನೆ ಒಂದಾದರೆ, ಹಸ್ತಾಂತರದ ಬಳಿಕ ಎಂತಹ ವಿಧೇಯಕ ಕಾರ್ಯ ನಡೆಯಬಲ್ಲುದು ಎಂಬುದನ್ನು ತೋರಿಸುವ
ಘಟನೆ ಇನ್ನೊಂದು.
ಇನ್ನಾದರೂ ಯಾರನ್ನೇ ಆದರೂ ಬೆಂಬಲಿಸುವ ಮುನ್ನ ಸಭ್ಯತೆ- ಅಸಭ್ಯತೆ, ಸೌಜನ್ಯ - ಅಸೌಜನ್ಯ ಯಾವುದು ಎಂದು ಅಳೆದು ತೂಗಿ ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ತೋರಿಸುವ ಘಟನೆಗಳಿವು ಎಂದರೆ ಖಂಡಿತ ತಪ್ಪಾಗದು ಅಲ್ಲವೇ?
-ನೆತ್ರಕೆರೆ ಉದಯಶಂಕರ
ಘಟನೆ 1:
ಗೋವುಗಳಿಂದ ಗೋಕರ್ಣ ಸಮೃದ್ಧ :
ರಾಘವೇಶ್ವರ ಶ್ರೀ ಆಶಯ
ರಾಘವೇಶ್ವರ ಶ್ರೀ ಆಶಯ
ಗೋಕರ್ಣ: ಶ್ರೀಕ್ಷೇತ್ರದ ಇತಿಹಾಸದಲ್ಲಿ ಈ ದಿನ ಮಹಾಸುದಿನವಾಗಿದೆ. ಕ್ಷೇತ್ರದಿಂದ ಜನಹಿತ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿವೆ ಎಂದು ರಾಮಚಂದ್ರಾಪುರ ಮಠಾಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.
ಶ್ರೀ ಮಹಾಬಲೇಶ್ವರ ದೇವಾಲಯ ಬಳಿಯ ಸಮುದ್ರ ತೀರದ ಬೃಹತ್ ಸಭಾ ಭವನದಲ್ಲಿ ನೂರು ಗೋವುಗಳನ್ನು ಗೋಕರ್ಣ ಸುತ್ತಲಿನ ಗ್ರಾಮಸ್ಥರಿಗೆ ಶುಕ್ರವಾರ ವಿತರಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ನೂರು ಗೋವುಗಳ ವಿತರಣೆ ಕಾರ್ಯಕ್ರಮ ಸಾವಿರ ಗೋದಾನ ಸಮಾರಂಭದ ಪೂರ್ವಭಾವಿಯಾಗಿದೆ. ಒಂದು ತಿಂಗಳಿನಲ್ಲಿ ಸಾವಿರ ಗೋವು ಗಳನ್ನು ಸುತ್ತಮುತ್ತಲಿನ ಜನರಿಗೆ ನೀಡಲಾಗುವುದು. ಗೋವುಗಳನ್ನು ಸಾಕುವ ಆಸಕ್ತರಿದ್ದಲ್ಲಿ ಒಂದು ವರ್ಷದಲ್ಲಿ ೧೦ ಸಾವಿರ ಗೋವುಗಳನ್ನು ವಿತರಿಸುವ ಹಂಬಲ ಕೂಡ ಇದೆ ಎಂದರು.
ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ತಮ್ಮ ಆಶಯ ಎಂದರು.
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬುದು ಸತ್ಯ. ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವ ಕಾಶವಾಗಲಿ ಎಂದು ಶ್ರೀಗಳು ಹಾರೈಸಿದರು.
ದೇವಾಲಯವನ್ನು ಸರಕಾರ ಶ್ರೀ ಮಠಕ್ಕೆ ಹಸ್ತಾಂತರ ಮಾಡುವ ಪೂರ್ವ ದಿಂದಲೂ ಗೋಕರ್ಣದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ನಮಗೆ ಹಸ್ತಾಂತರಿಸಿದ ಮೇಲೂ ದೇವಾಲಯದಿಂದ ಸಮಾಜದ ಕಾರ್ಯಗಳು ನಡೆ ದಿರಲಿಲ್ಲ. ವಿಜಯ ದಶಮಿಯ ಸುಮುಹೂರ್ತದಲ್ಲಿ ಈ ಕಾರ್ಯ ಆರಂಭ ವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ‘ಅಮೃತಾನ್ನ ಭೋಜನ’ ಆರಂಭಿಸಲಾಗಿದೆ ಎಂದು ಶ್ರೀಗಳು ನುಡಿದರು.
ರಾಜ್ಯ ಇಂಧನ ಸಚಿವ ಈಶ್ವರಪ್ಪ ಮಾತನಾಡಿ, ಶ್ರೀಗಳು ದೇವಾಲಯದಿಂದ ಉತ್ತಮ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಜಾತಿಗೆ ತುಂಬ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಸಮಾಜ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದೆ. ಆದರೆ ರಾಘವೇಶ್ವರ ಭಾರತಿ ಶ್ರೀಗಳು ಜಾತಿ ವ್ಯವಸ್ಥೆ ಮೀರಿ ಎಲ್ಲರಿಗೂ ಗೋವು ಸಂಪತ್ತನ್ನು ವಿತರಿಸುವ ಮೂಲಕ ಎಲ್ಲರನ್ನು ಜಾತ್ಯತೀತ ವಾಗಿ ಕಂಡಿದ್ದಾರೆ. ಈ ಜವಾಬ್ದಾರಿ ಅರಿತು ಸರಕಾರ ಶ್ರೀಗಳಿಗೆ ದೇವಾಲಯ ವನ್ನು ಹಸ್ತಾಂತರ ಮಾಡಿದೆ. ಅದಕ್ಕೆ ಪಕ್ಷ ಭೇದ ಮರೆತು ನಾವೆಲ್ಲ ಬೆಂಬಲಿಸುತ್ತೇವೆ ಎಂದರು.
ಅಭಿವೃದ್ಧಿ ಕಾರ್ಯದಲ್ಲಿ ಎಂಥ ಅಡ್ಡಿ ಆತಂಕ ಬಂದರೂ ಯಾರೂ ವಿಚಲಿತರಾಗ ಬಾರದು. ಶ್ರೀಗಳ ಹೆಜ್ಜೆ ದಿಟ್ಟ ಹಾಗೂ ಆದರಣೀಯವಾಗಿದೆ. ಈಗ ವಿರೋಧ ವ್ಯಕ್ತಪಡಿಸುತ್ತಿರುವ ಜನರಿಗೂ ಮುಂದೆ ಇದರ ಪೂರ್ಣ ಅರಿವು ಆಗಲಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶ್ರೀಗಳಿಗೆ ಸರ ಕಾರ ದೇವಸ್ಥಾನ ಹಸ್ತಾಂತರಿಸಿದ ದಿನದಿಂದ ಈವರೆಗೆ ಕೆಲ ಕಿಡಿಗೇಡಿಗಳು ಹಾಗೂ ಕೆಲ ಮಾಧ್ಯಮಗಳಿಂದ ತೊಂದರೆ ಉಂಟಾಗಿರಬಹುದು. ಆದರೆ ಶ್ರೀಗಳ ಜನಹಿತ ಯೋಜನೆಗಳು ನೆರವೇರುವುದು ಶತಸಿದ್ಧ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ಹೆಗಡೆ, ಗೋಕರ್ಣ ಗ್ರಾಪಂ ಉಪಾಧ್ಯಕ್ಷೆ ಭಾರತಿ ದೇವತೆ ಮಾತನಾಡಿದರು.
ಆರ್. ಎಸ್. ಭಾಗ್ವತ, ವಿನೋದ ಪ್ರಭು, ಉಪಾವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ, ಕಾರ್ಯದರ್ಶಿ ಬಾಲಕೃಷ್ಣ ಜಂಬೆ ಇನ್ನಿತರರು ವೇದಿಕೆಯ ಲ್ಲಿದ್ದರು.
ಘಟನೆ 2:
ಗೋಕರ್ಣ: ಕೊಲೆ ಯತ್ನ, ಆರೋಪಿ ನ್ಯಾಯಾಂಗ ವಶಕ್ಕೆ
ಗೋಕರ್ಣ (ಕಾರವಾರ): ರಾಮಚಂದ್ರಾಪುರ ಮಠದ ಕಾರ್ಯಕರ್ತರೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸರು ಗೋಕರ್ಣ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ್ಷ ಹಾಗೂ ಜಿಲ್ಲಾ ಕಾಂಗೆಸ್ಸಿನ ಯುವ ಮೋರ್ಚಾ ಘಟಕದ ಅಧ್ಯಕ್ಷ ರಾಜು ಅಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ಅ. 15ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ರಾಜು ಅಡಿ ಅವರ ಸಹೋದರ ರವಿ ಅಡಿ ಹಾಗೂ ಮನೋಹರ ನಾವುಡ ಸೇರಿದಂತೆ ಎಂಟು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಅವರ ಶೋಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಅಕ್ಟೋಬರ್ 9ರಂದು ಗೋಕರ್ಣದ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮರಳುತ್ತಿದ್ದ ರಾಮಚಂದ್ರಾಪುರ ಮಠದ ಕಾರ್ಯಕರ್ತ ಗುರುಮೂರ್ತಿ ಭಟ್ ಅವರ ಬೈಕನ್ನು ರಾಜು ಅಡಿ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಮೇಲೆ ಪೆಟ್ರೋಲ್ ಸುರಿದರು. ಈ ಸಂದರ್ಭದಲ್ಲಿ ರಾಜಿಗೆ ಯತ್ನಿಸಲು ಬಂದ ಗೋಕರ್ಣ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ನಾಯ್ಕ ಅವರ ಮೇಲೂ ಹಲ್ಲೆ ನಡೆಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ನಂತರ ರಾಮಚಂದ್ರಾಪುರ ಮಠದ ಭಕ್ತರು ಪೊಲೀಸ್ ಠಾಣೆ ಎದುರು ಸೇರಿ, ಎಲ್ಲ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದರು. ಗೋಕರ್ಣ ಸುತ್ತಮುತ್ತಲಿನ ಊರುಗಳ ಜನರೂ ರಾಮಚಂದ್ರಾಪುರ ಮಠಕ್ಕೆ ಬೆಂಬಲ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ಘೋಷಣೆ ಕೂಗಿದರು.
ಗೋಕರ್ಣ ಮಹಾಬಲೇಶ್ವರ ಮಂದಿರದ ಆಡಳಿತವನ್ನು ವಹಿಸಿಕೊಂಡಿರುವ ರಾಮಚಂದ್ರಾಪುರ ಮಠದ ಆಡಳಿತವನ್ನು ಬೆಂಬಲಿಸಿ ಅದೇ ದಿನ ಸಂಜೆ ಗೋಕರ್ಣದಲ್ಲಿ ಮೆರವಣಿಗೆ ನಡೆಯಿತು.
1 comment:
ಒಂದು ಹೆಮ್ಮೆಯ ಕಾರ್ಯಕ್ರಮವಾದರೇ, ಇನ್ನೊಂದು ಹೇಯ ಕೃತ್ಯ. ಇಷ್ಟಾದರೂ ಕೆಲವರು ಅಂತವರ ಬೆಂಬಲಕ್ಕಿರುವುದು ನಾಚಿಕೆಗೇಡಿನ ವಿಷಯ
ನೈಜ ವರದಿಗೆ ಧನ್ಯವಾದಗಳು
Post a Comment