ಬೆಂಗಳೂರಿನಲ್ಲೂ 'ಕೋಜಾಗರಿ' ಸಂಭ್ರಮ
ಶರನ್ನವರಾತ್ರಿಯ ಸಂಭ್ರಮದ ಮಧ್ಯೆ ಬೆಂಗಳೂರಿನ ಬಸವೇಶ್ವರನಗರದ ಆವನಿ ಶೃಂಗೇರಿ ಶಂಕರಮಠದಲ್ಲಿ 'ಕೋಜಾಗರಿ ವೈಭವ' ಕಾರ್ಯಕ್ರಮ ನಡೆಯುತ್ತದೆ. ಕೋಜಾಗರಿ ಅಂದರೆ ಏನು ಎಂಬುದು ನಿಮಗೆ ಗೊತ್ತಾ?
ನೆತ್ರಕೆರೆ ಉದಯಶಂಕರ
ಶರನ್ನವರಾತ್ರಿ ಉತ್ಸವದ ಸಡಗರ ಮುಗಿದಿದೆ. ಬೆಂಗಳೂರಿನ ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ ಜೊತೆಗೆ 'ಕೋಜಾಗರಿ ವೈಭವ' ಎಂಬ ಅಪೂರ್ವ ಕಾರ್ಯಕ್ರಮ ನಡೆಯುತ್ತದೆ. ಇದು ಅಹೋರಾತ್ರಿ ನಡೆಯುವ ಅಖಂಡ ಸಂಗೀತ ಕಾರ್ಯಕ್ರಮ. ಮುಂಜಾನೆಯಿಂದ ಮುಂಜಾನೆಯವರೆಗೆ ಸತತ 24 ಗಂಟೆಗಳ ಕಾಲ ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ಕುಳಿತು ಆಸ್ವಾದಿಸಬಹುದಾದಂತಹ ಕಾರ್ಯಕ್ರಮ ಇದು.
ಇಪ್ಪತ್ನಾಲ್ಕು ಗಂಟೆಗಳ ಈ ನಿರಂತರ ಸಂಗೀತೋತ್ಸವದಲ್ಲಿ ನಾಡಿನ ಅನೇಕಾನೇಕ ಖ್ಯಾತ ಸಂಗೀತಗಾರರು ಪಾಲ್ಗೊಂಡು ಸಂಗೀತ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.
ಹಂಸಧ್ವನಿಯಿಂದ ಆರಂಭವಾಗಿ ತೋಡಿ, ಕಾಂಭೋಜ, ಶ್ರೀ, ಆರಭಿ, ಆಭೋಗಿ, ಭೈರವಿ, ಬೇಗಡೆ, ಕಲ್ಯಾಣಿ, ಸಾವೇರಿ, ಖರಹರ ಪ್ರಿಯ, ಶಂಕರಾಭರಣ, ಷಣ್ಮುಖಪ್ರಿಯ, ಆನಂದಭೈರವಿ, ಮೋಹನ, ಧನ್ಯಾಸಿ, ಕೀರವಾಣಿ, ಅಠಾಣ, ರೀತಿಗೌಳ, ಕಾಪಿ, ಶುದ್ಧ ಧನ್ಯಾಸಿ, ದರ್ಬಾರ್, ರಂಜನಿ, ಸುರುಟಿ ರಾಗಗಳೊಂದಿಗೆ ಮುಂದುವರಿದು ಮರುದಿನ ಪ್ರಾತಃಕಾಲ ಮಂಗಳವಾದ್ಯ ಹಾಗೂ ಗೋಷ್ಠಿ ಗಾಯನದೊಂದಿಗೆ ಈ ಅಪೂರ್ವ ಕಾರ್ಯಕ್ರಮ ಕೊನೆಗೊಳ್ಳುತ್ತದೆ.
ಈ ಸಲ ಅಕ್ಟೋಬರ್ 13ರ ಪ್ರಾತಃಕಾಲ 6 ಗಂಟೆಗೆ ಜಿ. ರವಿಕಿರಣ ತಂಡದೊಂದಿಗೆ ಆರಂಭವಾದ ಸಂಗೀತ ಮೇಳದಲ್ಲಿ .ಆರ್. ರಮಾಮಣಿ, ಅಮೃತ ವೆಂಕಟೇಶ್, ಕೆ. ವರದ ರಂಗನ್, ಡಾ. ಹಂಸಿನಿ ನಾಗೇಂದ್ರ, ವಿ. ಜಯಮಂಗಲ ಕೃಷ್ಣಮಣಿ, ಎಂ.ಎಸ್. ವಿದ್ಯಾ, ಅನುಪಮ ಅರವಿಂದ್, ವೃಂದ ಆಚಾರ್ಯ, ಪದ್ಮಾ ಗುರುದತ್, ಡಾ. ಸುಕನ್ಯಾ ಪ್ರಭಾಕರ್, ವಿದ್ಯಾಭೂಷಣ, ಸುಗುಣಾ ಪುರುಷೋತ್ತಮ್, ಡಾ. ಆರ್.ಕೆ. ಶ್ರೀಕಂಠನ್- ಆರ್. ಎಸ್. ರಮಾಕಾಂತ, ಮಾನಸಿ ಪ್ರಸಾದ್, ಎ. ಸದಾಶಿವ, ವಾಣಿ ಸತೀಶ್, ಶ್ರೀನಾಥ ಸುಬ್ಬರಾಯನ್, ರೂಪಾ ಶ್ರೀಕಾಂತ್, ಎಸ್.ಆರ್. ವಿನಯ್- ಕೆ.ವಿ. ಕೃಷ್ಣ ಪ್ರಸಾದ್, ಶ್ವೇತಾ ವೆಂಕಟೇಶ್, ಎಸ್. ರಮಣಿ, ವಿ.ಆರ್. ರಾಘವೇಂದ್ರ, ರುದ್ರಪಟ್ಟಣ ಸಹೋದರರೆಂದೇ ಖ್ಯಾತರಾದ ಆರ್.ಎನ್. ತ್ಯಾಗರಾಜನ್, ಡಾ. ಆರ್.ಎನ್. ತಾರನಾಥನ್, ವಿ.ವಿ. ಮುರಳಿ ಅವರು ತಮ್ಮ ಸಂಗಡಿಗರೊಂದಿಗೆ ಸಂಗೀತದ ರಸದೌತಣ ನೀಡಿದ್ದಾರೆ.
ಈ ಅಹೋರಾತ್ರಿ ಅಖಂಡ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಅಭಿನವ ವಿದ್ಯಾಶಂಕರ ಭಾರತೀ ಸ್ವಾಮೀಜಿ ಅವರು ದೇವಿಗೆ ಅಖಂಡ ಪೂಜೆ ನೆರವೇರಿಸುವುದು ವಿಶೇಷ.
ಏನಿದು ಕೋಜಾಗರಿ?
'ಕೋಜಾಗರಿ' ಅಂದರೆ 'ಜಾಗೃತಿಯ ರಾತ್ರಿ' ಎಂದು ಅರ್ಥ. ಇದು ಮೂಲತಃ ಮರಾಠಿಯಿಂದ ಬಂದ ಶಬ್ದ. ಭಾರತದ ಕೆಲವು ಭಾಗಗಳಲ್ಲಿ ನಡೆಯುವ ದೀಪಾವಳಿ ಹೊರತಾದ ಉತ್ಸವ ಇದು. ಅಶ್ವಯುಜ ಮಾಸದ ಪೌರ್ಣಿಮೆಯ ದಿನ ಈ ಉತ್ಸವಾಚರಣೆ ನಡೆಯುತ್ತದೆ.
ಚೌತಿಯ ಸಂದರ್ಭದಲ್ಲಿ ಗಣಪತಿ ಭೂಮಿಗೆ ಬರುತ್ತಾನೆ ಎಂಬ ನಂಬಿಕೆ ಇರುವಂತೆ, ಈದಿನ ರಾತ್ರಿ ದೇವಿ ಲಕ್ಷ್ಮಿ ಭೂಮಿಗೆ ಭೇಟಿ ನೀಡುತ್ತಾಳೆ. 'ಯಾರು ಎಚ್ಚರದಲ್ಲಿ ಇದ್ದೀರಿ' ಎಂದು ಪ್ರಶ್ನಿಸುತ್ತಾ ಸುತ್ತಾಡುತ್ತಾಳೆ. ಆಕೆ ಭೇಟಿ ನೀಡುವ ವೇಳೆಯಲ್ಲಿ ಯಾರು ಎಚ್ಚರದಲ್ಲಿದ್ದು ಆಕೆಯ ಸ್ಮರಣೆ ಮಾಡುತ್ತಿರುತ್ತಾರೋ ಅವರಿಗೆ ಆಕೆ ಆರೋಗ್ಯ- ಸಂಪತ್ತನ್ನು ಕರುಣಿಸುತ್ತಾಳೆ ಎಂಬ ಭಕ್ತರ ನಂಬಿಕೆಯೇ ಈ ಉತ್ಸವ ಅಚರಣೆಗೆ ಮೂಲ. ಮಧ್ಯ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬುಂದೇಲಖಂಡ ಹಾಗೂ ಬಿಹಾರ ರಾಜ್ಯದ ದರ್ಭಾಂಗ ಪ್ರದೇಶದಲ್ಲಿ ಈ ಉತ್ಸವ ಆಚರಣೆಗೆ ಮಹತ್ವ ಹೆಚ್ಚು.
ಪೌರ್ಣಮಿಯ ಈ ರಾತ್ರಿ ದೇವಿ ಲಕ್ಷ್ಮಿ ಮತ್ತು ದೇವೇಂದ್ರನ ಸಲುವಾಗಿ ವ್ರತಾಚಾರಣೆ ನಡೆಯುವುದು ವಾಡಿಕೆ. ಇಡೀ ದಿನ ಹಗಲು- ರಾತ್ರಿ ಉಪವಾಸದೊಂದಿಗೆ ಪೂಜೆ ನಡೆಯುತ್ತದೆ. ದೇವರಿಗೆ ಎಳನೀರು ಮತ್ತು ಅವಲಕ್ಕಿಯ ನೈವೇದ್ಯ. ಪೂಜೆಯ ಬಳಿಕ ಭಕ್ತರಿಗೆ ಅದುವೇ ಪ್ರಸಾದ. ದೇವಿಯ ಆಗಮನ ಕಾಲದಲ್ಲಿ ಸ್ವಾಗತ ಕೋರಲು ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಬೀದಿಗಳಲ್ಲಿ ದೀಪಾಲಂಕಾರದ ಸಡಗರ ಸಾಮಾನ್ಯ.
'ಕೋಜಾಗರಿ' ಉತ್ಸವ ಬರುವುದು ಮಳೆಗಾಲ ಮುಗಿದು ಹೊಲಗಳಲ್ಲಿ ಪೈರು ಪಚ್ಚೆ ತುಂಬುವ ಕಾಲದಲ್ಲಿ. ಶರದೃತುವಿನ ಆಹ್ಲಾದಕರ ಸುಂದರ ರಾತ್ರಿಗಳು ಈ ಉತ್ಸವಾಚರಣೆಗೆ ಜನರಿಗೆ ಸ್ಫೂರ್ತಿ ನೀಡಿರಲೂ ಸಾಧ್ಯ. ಇದೇ ಕಾಲದಲ್ಲಿ 'ನವಾನ್ನ' ಅಂದರೆ ಹೊಸ ಊಟದ (ದಕ್ಷಿಣ ಕನ್ನಡದಲ್ಲಿ ಇದನ್ನು 'ಹೊಸ್ತು' ಅರ್ಥಾತ್ 'ಹೊಸತು' ಅಕ್ಕಿಯ ಊಟ ಎಂದು ಕರೆಯುತ್ತಾರೆ) ಉತ್ಸವವೂ ನಡೆಯುತ್ತದೆ. ರೈತರಿಗೆ ಈ ಹೊಸ ಊಟದ ಬಳಿಕ ಕೊಯ್ಲಿನ ಸಂಭ್ರಮ ಶುರುವಾಗುತ್ತದೆ.
'ಕೋಜಾಗರಿ' ಆಚರಣೆಯ ರಾತ್ರಿ ಘನ ಆಹಾರದ ಬದಲು ದ್ರವ ಆಹಾರ ಸ್ವೀಕರಿಸಿ ಉಪವಾಸ ಆಚರಿಸುವುದು ಕ್ರಮ. ಎಳ್ನೀರು, ಹಾಲಿನಂತಹ ದ್ರವಾಹಾರ ಸೇವನೆಗೆ ಹೆಚ್ಚಿನ ಮಹತ್ವ. ಹಾಡುತ್ತಾ, ಭಜನೆ ಮಾಡುತ್ತಾ ರಾತ್ರಿ ಕಳೆಯುವುದೆಂದರೆ ಬಲು ಸಡಗರ.
'ಕೋಜಾಗರಿ' ಉತ್ಸವಕ್ಕೆ ಸಂಬಂಧ ಪಟ್ಟಂತೆ ಸ್ವಾರಸ್ಯಕರವಾದ ಕಥೆ ಒಂದು ಉಂಟು. ಬಡ ಬ್ರಾಹ್ಮಣನೊಬ್ಬ ಇದ್ದನಂತೆ. ಸರಳ ಜೀವನಾಸಕ್ತನಾಗಿದ್ದ ಆತನಿಗೆ ಶ್ರೀಮಂತನಾಗುವುದರಲ್ಲಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಆದರೆ ಆತನ ಪತ್ನಿಗೆ ದಾರಿದ್ರ್ಯದ ಜೀವನ ಸಾಕು ಸಾಕಾಗಿ ಹೋಗಿತ್ತು. 'ಏನಾದರೂ ಮಾಡಿ, ಕಳ್ಳತನವಾದರೂ ಸರಿಯೇ, ಹಣ ಸಂಪಾದಿಸಿ ಈ ದಾರಿದ್ರ್ಯ ತೊಲಗಿಸಿ' ಎಂದು ಪತಿಯ ಮೇಲೆ ಆಕೆ ನಿತ್ಯ ಒತ್ತಡ ತರುತ್ತಿದ್ದಳು.
ಕಡೆಗೊಂದು ದಿನ, ಏನಾದರೂ ಮಾಡಿ ಹಣ ಸಂಪಾದಿಸಬೇಕೆಂದು ಈ ಬ್ರಾಹ್ಮಣ ಹೊರಟ. ನಡೆಯುತ್ತಾ ಕಡಲ ತೀರದ ಬಳಿಗೆ ಬಂದಾಗ ನಿರ್ಜನ ಪ್ರದೇಶದಲ್ಲಿ ಕನ್ಯೆಯರ ಇನಿದನಿ ಕಿವಿಗೆ ಬಿತ್ತು. ಅವರ ಬಳಿಗೆ ಬಂದ ಬ್ರಾಹ್ಮಣ ತನ್ನ ಸಂಕಷ್ಟಗಳನ್ನು ಅವರ ಬಳಿ ಹೇಳಿದ. ಆತನ ಬಗ್ಗೆ ಕನಿಕರ ಪಟ್ಟ ಅವರು ಅವನ್ನು ಮನೆಗೆ ಕರೆದೊಯ್ದು ಕುಡಿಯಲು ಎಳ್ನೀರು ಕೊಟ್ಟು ತಮ್ಮೊಂದಿಗೆ 'ಪಗಡೆ' ಆಡಲು ಬರುವಂತೆ ಆಹ್ವಾನಿಸಿದರು.
ಹಣಕ್ಕಾಗಿ ಪಗಡೆ ಆಡುವುದು ಪಾಪ ಎಂದುಕೊಂಡ ಬ್ರಾಹ್ಮಣ ಮೊದಲು ನಿರಾಕರಿಸಿದನಾದರೂ, ಕನ್ಯೆಯರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡ. ಆದರೆ ಪಗಡೆಯಾಟದ ಗಂಧಗಾಳಿಯೂ ಗೊತ್ತಿರಲಿಲ್ಲ. ಪ್ರತಿಸಲವೂ ಸೋತ ಆತ ಕೊನೆಗೆ ತನ್ನ 'ಜನಿವಾರ'ವನ್ನೇ ಪಣಕ್ಕೆ ಇಟ್ಟು ಕಳೆದುಕೊಂಡ.
ಅದು ಕೋಜಾಗರಿ ಪೌರ್ಣಮಿಯ ರಾತ್ರಿ. ಪಣಕ್ಕೆ ಇಡಲು ಇನ್ನೇನೂ ಇಲ್ಲವೆಂಬ ಸ್ಥಿತಿಗೆ ತಲುಪಿದ್ದ ಬ್ರಾಹ್ಮಣನ ಬಳಿ ಕನ್ಯೆಯರು 'ಈಗ ಸೋತರೆ ಏನು ಕೊಡುತ್ತಿ' ಎಂದು ಪ್ರಶ್ನಿಸಿದರು. 'ನಿಮ್ಮ ಸೇವಕನಾಗುವೆ' ಎಂದುತ್ತರಿಸಿದ ಬ್ರಾಹ್ಮಣ 'ನೀವು ಸೋತರೆ ನನಗೆ ಏನು ಕೊಡುತ್ತೀರಿ' ಅಂತ ಮರುಪ್ರಶ್ನೆ ಹಾಕಿದ. 'ನೀನು ಕೇಳಿದ್ದನ್ನು ಕೊಡುತ್ತೇವೆ' ಎಂಬ ಉತ್ತರ ಬಂತು ಆ ಕನ್ಯೆಯರಿಂದ.
'ನೀವು ಸೋತರೆ ನನ್ನನ್ನು ಮದುವೆಯಾಗಬೇಕು' ಎಂಬ ಷರತ್ತನ್ನು ಬ್ರಾಹ್ಮಣ ಮುಂದಿಟ್ಟ. 'ಓಹೋ. ಆಯಿತು' ಎಂದರು ಮೂರೂ ಮಂದಿ ಕನ್ಯೆಯರು. ಬಡ ಬ್ರಾಹ್ಮಣ ಗೆಲ್ಲುವ ಪ್ರಶ್ನೆಯೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.
'ಕೋಜಾಗರಿ'ಯ ಆದಿನ ಮಧ್ಯರಾತ್ರಿ ಎಚ್ಚರದಲ್ಲಿದ್ದ ಬ್ರಾಹ್ಮಣನ ಕಡೆಗೆ ಲಕ್ಷ್ಮಿ ತನ್ನ ಕೃಪಾಕಟಾಕ್ಷ ಬೀರಿದಳು. ಹೀಗಾಗಿ ಬ್ರಾಹ್ಮಣ ಪಗಡೆಯಾಟದಲ್ಲಿ ಗೆದ್ದ. ಮೂರೂ ಮಂದಿ ಶ್ರೀಮಂತ ಕನ್ಯೆಯರು ಅವನ ಪತ್ನಿಯರಾಗಿ ಸಂಪತ್ತು, ಸಮೃದ್ಧಿ ಅವನ ಮನೆ ತುಂಬಿತು. ಅಂದಿನಿಂದ ಆತ ಲಕ್ಷ್ಮಿಯ ಭಕ್ತನಾಗಿ ಪ್ರತಿವರ್ಷವೂ 'ಕೋಜಾಗರಿ' ವ್ರತ ಆಚರಿಸಿದ.
ಬೆಂಗಳೂರಿನಲ್ಲಿ 'ಕೋಜಾಗರಿ' ವ್ರತ ಆಚರಿಸಬೇಕಿದ್ದರೆ ನೇರವಾಗಿ ಬಸವೇಶ್ವರ ನಗರದ ಶಂಕರ ಮಠದತ್ತ ಹೆಜ್ಜೆ ಹಾಕಬಹುದು.
ಚಿತ್ರಗಳು:
1) ಆವನಿ ಶಂಕರ ಮಠದಲ್ಲಿರುವ ಸುಂದರ ಶಾರದಾಂಬಾ ಪ್ರತಿಮೆ.
2) ಕೋಜಾಗರಿ ವೈಭವ ಸಂದರ್ಭದಲ್ಲಿ ವ್ರತನಿರತರಾದ ಅಭಿನವ ವಿದ್ಯಾಶಂಕರ ಭಾರತೀ ಸ್ವಾಮೀಜಿ.
No comments:
Post a Comment