ಇಂದಿನ ಇತಿಹಾಸ
ಏಪ್ರಿಲ್ 13
ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.
ರಾಯಚೂರು ತಾಲ್ಲೂಕಿನ ಹೆಂಬೇರಾಳು ಗ್ರಾಮದಲ್ಲಿ 1924ರ ಏಪ್ರಿಲ್ 7ರಂದು ಜನಿಸಿದ್ದ ಶಾಂತರಸ 50ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಯಾವುದೇ ಪದವಿ-ಪುರಸ್ಕಾರಗಳ ಬೆನ್ನುಹತ್ತದ ಇವರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. 1962ರಲ್ಲಿ `ಸತ್ಯಸ್ನೇಹಿ' ರಗಳೆ ನಾಟಕಕ್ಕೆ ಮೈಸೂರು ಸರ್ಕಾರದಿಂದ ಪ್ರಶಸ್ತಿ, `ನಾಯಿ ಮತ್ತು ಪಿಂಚಣಿ' ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿವಿಯಿಂದ ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ. 2006ರಲ್ಲಿ ಬೀದರಿನಲ್ಲಿ ನಡೆದ 72ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದರು. ತಮ್ಮ ದಿಟ್ಟ ಹಾಗೂ ನೇರ ನುಡಿಗಳಿಗೆ ಅವರು ಹೆಸರುವಾಸಿಯಾಗಿದ್ದರು. ಉರ್ದು ಭಾಷೆಯ ಹಲವು ಮಹತ್ವದ ಕೃತಿಗಳು, ಘಜಲ್ ಗಳನ್ನು ಶಾಂತರಸ ಕನ್ನಡಕ್ಕೆ ಅನುವಾದಿಸಿದ್ದರು. ಹೈದರಾಬಾದ್ ಕರ್ನಾಟಕದ ಸಾಹಿತಿಗಳನ್ನು ಕೈಬಿಟ್ಟು ಹೊರತಂದ `ಅಕ್ಷರ ಹೊಸ ಕಾವ್ಯ'ವೇ ಕನ್ನಡದ ಪ್ರಾತಿನಿಧಿಕ ಕಾವ್ಯ ಎಂದು ಬೀಗುತ್ತಿದ್ದ ದಿನಗಳಲ್ಲಿ ಅದಕ್ಕೆ ಪರ್ಯಾಯವಾಗಿ ಕೈಬಿಟ್ಟ ಸಾಹಿತಿಗಳ `ಬೆನ್ನ ಹಿಂದಿನ ಬೆಳಕು' ಸಂಕಲನವನ್ನು ಶಾಂತರಸ ಹೊರತಂದರು. ಪತ್ರಿಕೆಗಳಿಂದ ವಾಪಸಾಗಿದ್ದ ಹೈದರಾಬಾದ್ ಕರ್ನಾಟಕ ಭಾಗದ ಸಾಹಿತಿಗಳ ಕತೆ, ಕವನಗಳನ್ನು ಸೇರಿಸಿಕೊಂಡು 'ಮುಸುಕು ತೆರೆ' ಸಂಕಲನ ಹೊರತಂದರು. ಇವೆರಡೂ ಅತ್ಯಂತ ಮೌಲಿಕ ಕೃತಿಗಳು ಎಂದು ಅವೇ ಪತ್ರಿಕೆ ಹಾಗೂ ವಿಮರ್ಶಕರಿಂದ ನಂತರ ಪ್ರಶಂಸೆಗೊಳಗಾದವು. ಎಂ.ಎ.ಬಿ.ಎಡ್. ಪದವೀಧರರಾದ ಇವರು ಪ್ರಾಥಮಿಕದಿಂದ ಬಿ.ಎ.ವರೆಗೆ ಉರ್ದು ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದರು. ಸುಮಾರು 35 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶಾಂತರಸರು ರಾಯಚೂರಿನ ಹಮ್ ದರ್ದ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಮುಂದೆ ಅದೇ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಅನಂತರ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.
2008: ಅತ್ಯಂತ ಕಿರಿಯ ವಯಸ್ಸಿನ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ಗೆ ತರಬೇತಿ ನೀಡಿದ್ದ ಖ್ಯಾತಿಯ ಕೋಚ್ ಬಿರಾಂಚಿ ದಾಸ್ ಅವರನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಭುವನೇಶ್ವರದಲ್ಲಿ ಗುಂಡಿಟ್ಟು ಕೊಲೆಗೈದರು. ಜೂಡೊ ತರಬೇತುದಾರರಾದ ಬಿರಾಂಚಿ ದಾಸ್ ಅವರು ಇಲ್ಲಿನ ಬಿಜೆಬಿ ಕಾಲೇಜಿನ ಜೂಡೊ ಕೇಂದ್ರದಲ್ಲಿ ತಮ್ಮ ಗೆಳೆಯರೊಡನೆ ಮಾತನಾಡುತ್ತಾ ಕುಳಿತಿದ್ದಾಗ ಈ ಘಟನೆ ನಡೆಯಿತು ಎಂದು ಪೊಲೀಸ್ ಉಪ ಆಯುಕ್ತ ಅಮಿತಾಭ್ ಠಾಕೂರ್ ತಿಳಿಸಿದರು. ಗುಂಡು ಬಿರಾಂಚಿ ದಾಸ್ ಅವರ ಕೊರಳು, ಎದೆ ಮತ್ತು ಕಾಲಿಗೆ ತಾಗಿತು. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದರು ಎಂದೂ ಅವರು ಹೇಳಿದರು. ಬುಧಿಯಾನ ಪ್ರತಿಭೆಯನ್ನು ಆತನ ಎಳವೆಯಲ್ಲಿಯೇ ಗುರುತಿಸಿದ್ದ ಬಿರಾಂಚಿದಾಸ್, ಬುಧಿಯಾ ಪುರಿಯಿಂದ ಭುವನೇಶ್ವರದವರೆಗಿನ 65 ಕಿ.ಮೀ. ದೂರವನ್ನು ನಿರಂತರವಾಗಿ ಓಡಿ ದಾಖಲೆ ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
2008: ನೇಪಾಳದಲ್ಲಿ ಪ್ರಚಂಡ ಜಯಭೇರಿಯೊಂದಿಗೆ ಸಿಪಿಎನ್-ಮಾವೋ ಪಕ್ಷ ಉದಯವಾಗುವ ಮೂಲಕ 240 ವರ್ಷಗಳ ರಾಜ ಮನೆತನದ ಪಾರಂಪರಿಕ ಆಡಳಿತಕ್ಕೆ ಮಂಗಳ ಹಾಡಿದಂತಾಯಿತು. ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಫಲಿತಾಂಶ ಹೊರಬಿದ್ದ 73 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಸಿಪಿಎನ್- ಮಾವೋವಾದಿ ಪಕ್ಷ ತನ್ನದಾಗಿಸಿಕೊಂಡಿತು. ಸಿಪಿಎನ್ -ಯುಎಂಎಲ್- 12, ಪ್ರಧಾನಮಂತ್ರಿ ಗಿರಿಜಾಪ್ರಸಾದ್ ಕೊಯಿರಾಲ ಅವರ ಕಾಂಗ್ರೆಸ್ ಪಕ್ಷ-10, ಮಾದೇಶಿ ಪೀಪಲ್ಸ್ ರೈಟ್ಸ್ ಫೋರಂ-5, ನೇಪಾಲ್ ವರ್ಕರ್ಸ್ ಅಂಡ್ ಪೀಸಂಟ್ಸ್ ಪಾರ್ಟಿ-2 ಮತ್ತು ಟೆರಾಯ್ ಮಾದೇಶ್ ಡೆಮಾಕ್ರಟಿಕ್ ಪಾರ್ಟಿ-1 ಸ್ಥಾನವನ್ನು ಪಡೆದವು.
2008: ಬ್ರಿಟಿಷ್ ಪಡೆಗಳು ಆಫ್ಘಾನಿಸ್ಥಾನದಲ್ಲಿ ಕಳೆದ 2 ವರ್ಷಗಳಲ್ಲಿ ಸುಮಾರು 7000 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿವೆ. ಆದರೆ ಇಂತಹ ದಾಳಿಗಳಿಂದ ಸ್ಥಳೀಯವಾಗಿ ಉಗ್ರಗಾಮಿಗಳ ಜನಪ್ರಿಯತೆ ಹೆಚ್ಚುವ ಸಂಭವವಿರುವುದರಿಂದ ದಾಳಿ ಯೋಜನೆಗಳನ್ನು ಕಡಿತಗೊಳಿಸಲಾಗಿದೆ ಎಂದು 'ದಿ ಸಂಡೇ ಟೈಮ್ಸ್' ವರದಿ ಮಾಡಿತು. ಪತ್ರಿಕೆಯ ವರದಿಯಂತೆ 2006 ರಲ್ಲಿ ಹೆಲ್ಮಂಡ್ ಪ್ರಾಂತ್ಯದಲ್ಲಿ ಮೊದಲು ನಿಯೋಜಿಸಿದ್ದ ವಾಯು ಪಡೆಯವರು ಕನಿಷ್ಠ 1000 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿದ್ದಾರೆ. ಅಲ್ಲಿಂದೀಚೆಗೆ 6000 ತಾಲಿಬಾನ್ ಉಗ್ರಗಾಮಿಗಳನ್ನು ಬ್ರಿಟಿಷ್ ಪಡೆಗಳು ಹತ್ಯೆಗೈದಿವೆ.
2008: ತರಕಾರಿಗಳು ಮತ್ತು ಹಣ್ಣುಗಳನ್ನು ಕೇವಲ ತೊಳೆಯುವುದರಿಂದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲಾಗುವುದಿಲ್ಲ ಎಂಬ ಸಂಗತಿಯನ್ನು ಹೊಸ ಅಧ್ಯಯನವೊಂದು ಹೊರಗೆಡವಿತು. ತರಕಾರಿ, ಹಣ್ಣುಗಳನ್ನು ತೊಳೆಯುವುದರಿಂದ ಆಹಾರ ವಿಷವಾಗುವುದು ತಪ್ಪುತ್ತದೆ. ಆದರೆ, ತೊಳೆಯುವಾಗ ಕ್ಲೋರಿನ್ನಿನಂತಹ ರಾಸಾಯನಿಕ ಬಳಸಿ ತೊಳೆದರೂ ಬ್ಯಾಕ್ಟೀರಿಯಾಗಳು ಬಗ್ಗುವುದಿಲ್ಲ ಎಂದು ಬ್ರಿಟನ್ನಿನ `ದಿ ಡೈಲಿ ಟೆಲಿಗ್ರಾಫ್' ಪತ್ರಿಕೆ ವರದಿ ಮಾಡಿತು.
2008: ರಫ್ತುದಾರರ ಉತ್ಪನ್ನವನ್ನು ತಡವಾಗಿ ಮುಟ್ಟಿಸಿದ್ದಕ್ಕಾಗಿ 50,000 ರೂ. ದಂಡ ಪಾವತಿಸುವಂತೆ ದೆಹಲಿ ಗ್ರಾಹಕ ನ್ಯಾಯಾಲಯವು ಯುನೈಟೆಡ್ ಏರ್ ಲೈನ್ಸಿಗೆ ಸೂಚಿಸಿತು. ಅನಿಘ್ ಎಕ್ಸ್ ಪೋರ್ಟ್ ಇಂಟರ್ ನ್ಯಾಷನಲ್ನ ಮಾಲೀಕ ಎ.ಪಿ. ಶರ್ಮಾ ಅವರ ದೂರನ್ನು ಅಂಗೀಕರಿಸಿದ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಜೆ.ಡಿ. ಕಪೂರ್, ವ್ಯಾಜ್ಯದ ವೆಚ್ಚವಾಗಿ ಹೆಚ್ಚುವರಿ 10,000 ರೂ.ಪಾವತಿಸುವಂತೆ ಏರ್ ಲೈನ್ಸಿಗೆ ಆದೇಶಿಸಿದರು. ವಸ್ತು ತಲುಪಿಸುವುದು ವಿಳಂಬವಾದಲ್ಲಿ ಪರಿಹಾರ ನೀಡಬೇಕು ಎಂದು ಏರ್ ಲೈನ್ಸ್ ಮತ್ತು ಗ್ರಾಹಕರು ಮೊದಲೇ ಒಪ್ಪಂದ ಮಾಡಿಕೊಳ್ಳದಿದ್ದರೂ, ಸೇವೆಯಲ್ಲಿ ನ್ಯೂನತೆಯಾದಲ್ಲಿ ಸೇವೆ ಒದಗಿಸುವವರು ಗ್ರಾಹಕರಿಗೆ ಪರಿಹಾರ ಒದಗಿಸಲೇಬೇಕಾಗುತ್ತದೆ ಎಂದು ಆಯೋಗ ಹೇಳಿತು. ಗಿಡಮೂಲಿಕೆ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ರಫ್ತಿನಲ್ಲಿ ತೊಡಗಿಕೊಂಡ ಶರ್ಮಾ 1998ರ ಮಾರ್ಚ್ ತಿಂಗಳಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ವಾಣಿಜ್ಯ ಮೇಳದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಮೇಳ ಮುಕ್ತಾಯಗೊಂಡ 3 ದಿನಗಳ ನಂತರ ವಸ್ತುಗಳನ್ನು ತಲುಪಿಸಲಾಯಿತು. ತನ್ನ ವ್ಯವಹಾರ ನಷ್ಟವಾದುದಕ್ಕಾಗಿ, ಆ ಸಂದರ್ಭದಲ್ಲಿ ಎದುರಿಸಿದ ಅಡಚಣೆ, ಮಾನಸಿಕ ಒತ್ತಡಕ್ಕಾಗಿ 40,000 ಅಮೆರಿಕ ಡಾಲರ್ ಪರಿಹಾರ ನೀಡುವಂತೆ ಶರ್ಮಾ ಅರ್ಜಿಯಲ್ಲಿ ಕೋರಿದ್ದರು.
2008: ಈಶಾನ್ಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟದಿಂದಾಗಿ 14 ಗಣಿ ಕಾರ್ಮಿಕರು ಮೃತರಾಗಿರುವುದಾಗಿ ಸರ್ಕಾರಿ ಮಾಧ್ಯಮ ತಿಳಿಸಿತು.
2007: ಪ್ರಸ್ತುತ ಸಾಲಿನ ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ಆನಂದಿ ಸದಾಶಿವರಾವ್ ಆಯ್ಕೆಯಾದರು.
2007: ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯೊಳಗೆ 25 ಮಂದಿಗೆ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಕೇಂದ್ರವು ರಾಷ್ಟ್ರೀಯ ದಾಖಲೆ ಮಾಡಿತು ಎಂದು ಕೇಂದ್ರದ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಪ್ರಕಟಿಸಿದರು.
2007: 2006-07 ಸಾಲಿನ ಪ್ರೌಢಶಾಲಾ ಸಹಾಯಕ ಶಿಕ್ಷಕರ (ಗ್ರೇಡ್-2) ನೇಮಕಾತಿಯಲ್ಲಿ ಅಂಗವಿಕಲರಿಗೆ ಶಾಸನಬದ್ಧವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತು.
2007: ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಾನೂನು ಹೋರಾಟ ಮುಂದುವರೆಸಿದ ಲೋಕಾಯುಕ್ತರು ಬೆಂಗಳೂರಿನಲ್ಲಿ ವಿಧಾನಸೌಧದ ಮೊಗಸಾಲೆಯಲ್ಲಿ ಎಲ್ಲರಿಗೂ ನೋಟಿಸ್ ಜಾರಿಮಾಡಿದರು.
2006: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗಾಗಿ ಮೊದಲ ಬಾರಿ ಜಾರಿಗೆ ತರಲಾಗಿರುವ ಸೂಕ್ಷ್ಮ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಉದ್ಘಾಟಿಸಿದರು. ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ (ಸೇವಾ ಬ್ಯಾಂಕ್) ತನ್ನ ಎಂಟು ಲಕ್ಷ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಸಂಸ್ಥಾಪಕಿ ಇಳಾ ಭಟ್ ಅವರ ಚಿಂತನೆಯ ಮೂಸೆಯಲ್ಲಿ ರೂಪುಗೊಂಡ ಈ ಯೋಜನೆಗೆ ಆರಂಭದ ದಿನವೇ 25,025 ಮಹಿಳೆಯರು ಸದಸ್ಯರಾದರು.
2006: ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಚಿತ್ರಾ ಪೌರ್ಣಮಿಯಂದು ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ಅವರ ಕರ್ಮಭೂಮಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಸಂಭವಿಸಿದ ಹಿಂಸಾಚಾರ, ಪೊಲೀಸ್ ಗೋಲಿಬಾರಿಗೆ 8 ಜನ ಬಲಿಯಾದರು, ಬಸ್ ಮತ್ತಿತರ ವಾಹನಗಳು ಬೆಂಕಿಗೆ ಆಹುತಿಯಾದವು.
2006: ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಪಿನಾಕ ಬಹುಬ್ಯಾರೆಲ್ ರಾಕೆಟ್ ವ್ಯವಸ್ಥೆಯನ್ನು ಎರಡು ಬಾರಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಪಿನಾಕವನ್ನು ಅಭಿವೃದ್ಧಿ ಪಡಿಸಿದೆ. ಅತಿ ಶೀಘ್ರವಾಗಿ ಚಲಿಸಬಲ್ಲ ಈ ರಾಕೆಟ್ ವ್ಯವಸ್ಥೆ 30 ಕಿ.ಮೀ. ವ್ಯಾಪ್ತಿ ಮೀರಿ ಗುರಿ ಇಡುವ ಹಾಗೂ ಬಂಕರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದು 44 ಸೆಕೆಂಡುಗಳಲ್ಲಿ 144 ರಾಕೆಟ್ಟುಗಳನ್ನು ಚಿಮ್ಮಿಸಬಲ್ಲುದು.
2006: ಜಾರ್ಖಂಡಿನ ರಾಂಚಿಯ ತಪೋವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಐದು ದಿನಗಳ ಭಾರತ ಸುರಕ್ಷಾ ಯಾತ್ರೆಯ ಎರಡನೇ ಸುತ್ತನ್ನು ಆರಂಭಿಸಿದರು.
1999: `ಡಾ. ಡೆತ್' ಎಂದೇ ಕುಖ್ಯಾತಿ ಪಡೆದ ಜ್ಯಾಕ್ ಕೆರ್ವೋರ್ಕಿಯನ್ ಗೆ ಮಿಚಿಗನ್ನಿನ ಪೊಂಟಿಯಾಕಿಯಲ್ಲಿ 10ರಿಂದ 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 1998ರಲ್ಲಿ ಥಾಮಸ್ ಯೌಕ್ ಎಂಬ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿ ಅದನ್ನು ವಿಡಿಯೋಟೇಪ್ ಮಾಡಿ ಟೆಲಿವಿಷನ್ನಿನಲ್ಲಿ ಪ್ರಸಾರ ಮಾಡಿದುದಕ್ಕಾಗಿ ಈತನಿಗೆ ಈ ಶಿಕ್ಷೆ ವಿಧಿಸಲಾಯಿತು.
1968: ಕಲಾವಿದ ಗೋವಿಂದರಾಜ ಸ್ವಾಮಿ ಜನನ.
1963: ಗ್ಯಾರಿ ಕ್ಯಾಸ್ಪರೋವ್ ಹುಟ್ಟಿದ ದಿನ. ರಷ್ಯಾದ ಚೆಸ್ ಮಾಸ್ಟರ್ ಆದ ಇವರು 1985ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1951: ಗಾನಕೋಗಿಲೆ ಎನಿಸಿದ ಭಾಗ್ಯಮೂರ್ತಿ ಅವರು ಸುಬ್ರಹ್ಮಣ್ಯ ಶಾಸ್ತ್ರಿ- ರಂಗನಾಯಕಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1948: ಕಲಾವಿದ ಜಿ.ಎಂ. ಹೆಗಡೆ ಜನನ.
1919: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.
1772: ವಾರನ್ ಹೇಸ್ಟಿಂಗ್ಸ್ ನನ್ನು ಬಂಗಾಳದ ಗವರ್ನರ್ ಆಗಿ ನೇಮಿಸಲಾಯಿತು.
1772: ಅಮೆರಿಕದ ಗಡಿಯಾರ ತಯಾರಕ ಎಲಿ ಟೆರ್ರಿ (1772-1852) ಹುಟ್ಟಿದ ದಿನ. ಅಮೆರಿಕದಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ವಿನ್ಯಾಸದ ಗಡಿಯಾರಗಳನ್ನು ತಯಾರಿಸಿದ ಈತ `ಹೆನ್ರಿ ಫೋರ್ಡ್ ಆಫ್ ಕ್ಲಾಕ್ಸ್' ಎಂಬ ಹೆಸರನ್ನು ಗಳಿಸಿದ.
1743: ಅಮೆರಿಕದ ಮೂರನೇ ಅಧ್ಯಕ್ಷ ಥಾಮಸ್ ಜೆಫರ್ ಸನ್ (1743-1826) ಜನ್ಮದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment