ಇಂದಿನ ಇತಿಹಾಸ
ಫೆಬ್ರುವರಿ 17
ನವದೆಹಲಿಯ ಅಖಿಲ ಭಾರತ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಎದೆನೋವಿಗೆ ಚಿಕಿತ್ಸೆ ಪಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಣಮುಖವಾಗಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು. ವಾಜಪೇಯಿ ಅವರು ಪೂರ್ಣವಾಗಿ ಚೇತರಿಸಿ ಕೊಂಡಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ವ್ಯವಸ್ಥೆ ನಿಲ್ಲಿಸಲಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಸಂಪತ್ ಕುಮಾರ್ ತಿಳಿಸಿದರು. ಎಂಬತ್ನಾಲ್ಕು ವರ್ಷದ ವಾಜಪೇಯಿ ಅವರು ಫೆಬ್ರುವರಿ 3ರಂದು ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.
2009: ಬಾಗಲಕೋಟೆ- ಯಶವಂತಪುರ ಬಸವ ಎಕ್ಸ್‌ಪ್ರೆಸ್ ರೈಲನ್ನು ಗುಲ್ಬರ್ಗ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ನಾಗಣಸೂರ ಬಳಿ ತಡೆದು ದರೋಡೆ ಮಾಡಿದ ಘಟನೆ ಸಂಭವಿಸಿತು. ನಾಗಣಸೂರು ಬಳಿ ರೈಲು 'ಕ್ರಾಸಿಂಗ್' ಮಾಡುತ್ತಿದ್ದಾಗ ಸಾವಕಾಶವಾಗಿ ಚಲಿಸುತಿತ್ತು. ಆಗ ಎಂಟು ಜನರಿದ್ದ ಗುಂಪೊಂದು ಹಠಾತ್ತನೇ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿತು. ಹೀಗಾಗಿ ರೈಲನ್ನು ನಿಲ್ಲಿಸಲಾಯಿತು. ದರೋಡೆಕೋರರ ತಂಡ 4 ಬೋಗಿಯೊಳಗೆ ನುಗ್ಗಿ ಕೆಲವರಿಂದ ಚಿನ್ನದ ಸರ, ಸೂಟ್ ಕೇಸ್ ಮತ್ತಿತರ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಯಿತು.
2009: ಬೆಂಗಳೂರು, ಅಹ್ಮದಾಬಾದ್ ಮತ್ತು ದೆಹಲಿಗಳಲ್ಲಿ (ಬ್ಯಾಡ್ ಕಾರ್ಯಾಚರಣೆ) ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಸಹಿತ ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ದುಷ್ಕೃತ್ಯಗಳಲ್ಲಿ ಶಾಮೀಲಾಗಿದ್ದ ಆರೋಪದ ಮೇಲೆ ಬಂಧಿತರಾದ 21 ಉಗ್ರರ ವಿರುದ್ಧ ಮುಂಬೈ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು. 1,800 ಪುಟಗಳ ಈ ಆರೋಪಪಟ್ಟಿಯನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆಯ (ಮೊಕಾ) ವಿಶೇಷ ನ್ಯಾಯಾಧೀಶ ವೈ. ಡಿ. ಶಿಂಧೆ ಅವರ ಮುಂದೆ ಸಲ್ಲಿಸಲಾಯಿತು.
2009: ನವದೆಹಲಿಯ ಅಖಿಲ ಭಾರತ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಎದೆನೋವಿಗೆ ಚಿಕಿತ್ಸೆ ಪಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಣಮುಖವಾಗಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು. ವಾಜಪೇಯಿ ಅವರು ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ವ್ಯವಸ್ಥೆ ನಿಲ್ಲಿಸಲಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಸಂಪತ್ ಕುಮಾರ್ ತಿಳಿಸಿದರು. ಎಂಬತ್ನಾಲ್ಕು ವರ್ಷದ ವಾಜಪೇಯಿ ಅವರು ಫೆಬ್ರುವರಿ 3ರಂದು ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.
2009: ಕೇಂದ್ರ ಸಾಹಿತ್ಯ ಅಕಾಡೆಮಿಯ 2008ರ ಸಾಲಿನ ಅನುವಾದ ಬಹುಮಾನಕ್ಕಾಗಿ ಆಯ್ಕೆಯಾದ ವಿವಿಧ ಭಾಷೆಗಳ 16 ಪುಸ್ತಕಗಳ ಪೈಕಿ ಕನ್ನಡಕ್ಕೆ ಸಂಬಂಧಿಸಿದ ಎರಡು ಕೃತಿಗಳು ಗೌರವಕ್ಕೆ ಪಾತ್ರವಾದವು. ಮಣಿಪುರಿ ಭಾಷೆಗೆ ಅನುವಾದಗೊಂಡ ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಹಾಗೂ ಕನ್ನಡಕ್ಕೆ ಅನುವಾದಗೊಂಡಿರುವ ಅಮೃತಾ ಪ್ರೀತಮ್ ಅವರ ಆತ್ಮಕಥೆ 'ರಸೀದಿ ಟಿಕೆಟು' ಎಂಬ ಕೃತಿಗಳಿಗೆ ಬಹುಮಾನ ಬಂದಿತು. 'ರಸೀದಿ ಟಿಕೆಟ್' ಅನ್ನು ಪಂಜಾಬಿಯಿಂದ ಕನ್ನಡಕ್ಕೆ ಹಸನ್ ನಯೀಮ್ ಸುರಕೊಡ ಹಾಗೂ 'ಸಂಸ್ಕಾರ'ವನ್ನು ಕನ್ನಡದಿಂದ ಮಣಿಪುರಿಗೆ ವೈ.ಇಬೊಂಚ ಸಿಂಗ್ ಅನುವಾದಿಸಿದ್ದರು. ಡಾ.ಸರಜೂ ಕಾಟ್ಕರ್, ಡಾ.ದಾಮೋದರ ಶೆಟ್ಟಿ, ಸ್ನೇಹಲತಾ ರೋಹಿಡೆಕರ್ ಅವರು ಕನ್ನಡ ತೀರ್ಪುಗಾರರ ಸಮಿತಿ ಸದಸ್ಯರಾಗಿದ್ದರು..
2008: ಆದಿಚುಂಚನಗಿರಿ ಕ್ಷೇತ್ರದಲ್ಲಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ಅಪೂರ್ವ ಕಾಲಭೈರವೇಶ್ವರ ಸ್ವಾಮಿಯ ಬೃಹತ್ ದೇವಾಲಯ ಲೋಕಾರ್ಪಣೆಗೊಂಡಿತು. ಕಾಲಭೈರವ ಸ್ವಾಮಿಯೊಂದಿಗೆ ಸ್ಥಂಭಾಂಬಿಕೆ, ವಿನಾಯಕ, ಸುಬ್ರಹ್ಮಣ್ಯ, ನಾಗಲಿಂಗೇಶ್ವರ ಸ್ವಾಮಿಯ ಪರಿವಾರ ಸಮೇತ ನೂತನ ವಿಮಾನ ಗೋಪುರ ಅಷ್ಟಬಂಧನ ಮಹಾ ಕುಂಭಾಭಿಷೇಕ ಮಾಡಲಾಯಿತು. ದೇವಾಲಯ ನಿರ್ಮಾಣದ ಮೂಲಕ ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಹು ವರ್ಷಗಳ ಕನಸು ನನಸಾಯಿತು. ಹದಿನಾಲ್ಕು ವರ್ಷಗಳ ಹಿಂದೆ ಆರಂಭವಾದ ದೇವಾಲಯ ನಿರ್ಮಾಣ ಕಾರ್ಯ ರೂ. 85 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿತು. ಆಧುನಿಕ ಕಾಲದಲ್ಲಿ ಐತಿಹಾಸಿಕ ದ್ರಾವಿಡ ಶೈಲಿಯಲ್ಲಿ ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ದೇವಾಲಯ ನಿರ್ಮಾಣದ ಸಾಧ್ಯತೆಗೆ ಈ ಭವ್ಯ ದೇಗುಲ ನಿದರ್ಶನ. ದಕ್ಷಿಣ ಭಾರತದಲ್ಲಿಯೇ ಭೈರವ ಪ್ರಧಾನವಾದ ಬೃಹತ್ ದೇವಾಲಯವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಪುರಾಣ ಪ್ರಸಿದ್ಧವೂ, ಅವೈದಿಕ ಪಂಥವಾದ ನಾಥ ಪರಂಪರೆಯ ಕೇಂದ್ರವೂ ಆದ ಆದಿಚುಂಚನಗಿರಿ ಕ್ಷೇತ್ರ ಇದರೊಂದಿಗೆ ಇನ್ನು ಮುಂದೆ ಶೈವ ಕ್ಷೇತ್ರವೂ ಆಗಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಮುತ್ತಯ್ಯ ಸ್ಥಪತಿ ಅವರ ವಿನ್ಯಾಸ, ನಿರ್ದೇಶನದಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ.
2008: ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಶ್ರೀಪತಿ ಪಾಡಿಗಾರ (78) ಅವರು ಹುಬ್ಬಳ್ಳಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಇವರು ತಮ್ಮ ಜೀವನನ್ನೇ ಸಂಗೀತಕ್ಕಾಗಿ ಮುಡುಪಾಗಿಟ್ಟಿದ್ದರು. ಹುಬ್ಬಳ್ಳಿಯಲ್ಲಿ ಜನಿಸಿದ್ದ ಶ್ರೀಪತಿ ಅವರು ದಿ.ವೆಂಕಟರಾವ್ ರಾಮದುರ್ಗ ಅವರಿಂದ ಆರಂಭಿಕ ಸಂಗೀತ ಶಿಕ್ಷಣ ಪಡೆದು, ಪಂ.ಭೀಮಸೇನ ಜೋಶಿ ಅವರ ಶಿಷ್ಯರಾಗಿ ಉನ್ನತ ಶಿಕ್ಷಣ ಪಡೆದರು. ಶಾಸ್ತ್ರೀಯ ಸಂಗೀತದೊಂದಿಗೆ ದಾಸವಾಣಿ, ಸಂತವಾಣಿಯನ್ನೂ ಕರಗತ ಮಾಡಿಕೊಂಡಿದ್ದರು. 1980ರಲ್ಲಿ ಮಣಿಪಾಲದ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆದ ವಾದಿರಾಜ ಕನಕದಾಸ ಮಹೋತ್ಸವದಲ್ಲಿ ಇವರಿಗೆ `ರಾಗರಾಗಿಣೀ ರಸಲೋಲ' ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ಶ್ರೀಪತಿಯವರು ಹುಬ್ಬಳ್ಳಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕಿರಾನಾ ಘರಾಣಾದ ಮೂಲಪುರುಷ ಅಬ್ದುಲ್ ಕರೀಮಖಾನರ ಪುಣ್ಯ ತಿಥಿಯನ್ನು ಸ್ವಂತ ಖರ್ಚಿನಿಂದಲೇ ಪ್ರತಿ ವರ್ಷ ನಡೆಸಿ ಸಂಗೀತ ದಿಗ್ಗಜರನ್ನು ಆಹ್ವಾನಿಸಿ ತಾವೂ ಅಹೋರಾತ್ರಿ ಸಂಗೀತ ಕಛೇರಿಯಲ್ಲಿ ಭಾಗವಹಿಸುತ್ತಿದ್ದರು. ಆಸಕ್ತರಿಗೆ ಉಚಿತ ಸಂಗೀತ ಶಿಕ್ಷಣ ನೀಡಿ ಹಿಂದೂಸ್ಥಾನಿ ಸಂಗೀತದ ಬೇರುಗಳು ಈ ಭಾಗದಲ್ಲಿ ಮತ್ತಷ್ಟು ಹಬ್ಬುವಂತೆ ಮಾಡಿದ್ದರು. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಇವರಿಗೆ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಹಾಗೂ ಉಡುಪಿ ಶ್ರೀಕೃಷ್ಣಮಠದವರು `ಆಸ್ಥಾನ ವಿದ್ವಾನ್' ಎಂದು ಘೋಷಿಸಿ `ಗಾನ ಗಂಧರ್ವ' ಬಿರುದು ನೀಡಿ ಗೌರವಿಸಿದ್ದರು.
2008: ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಅವರು ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದರು. ಒಂದೇ ದೇಶದ ಎದುರು 73 `ಬಲಿ' ಪಡೆಯುವ ಮೂಲಕ `ಗಿಲಿ' ಈ ವಿಶೇಷ ದಾಖಲೆಗೆ ಪಾತ್ರರಾದರು. ಭಾರತದ ಎದುರು ಅಡಿಲೇಡ್ ಓವಲ್ ಅಂಗಳದಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಅವರು ಐದು ಮಂದಿ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದರು. ಆ ಮೂಲಕ ಗಿಲಿ ಭಾರತದ ಎದುರು ಒಟ್ಟು 73 `ಬಲಿ' ಪಡೆದಂತಾಯಿತು. ಅವರು ಪಾಕಿಸ್ಥಾನದ ಮಾಜಿ ವಿಕೆಟ್ ಕೀಪರ್ ಮೋಯಿನ್ ಖಾನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಮೋಯಿನ್ ಖಾನ್ ಅವರು ಭಾರತದ ಎದುರು 71 `ಬಲಿ' ಪಡೆದಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಎದುರು ಸ್ಥಾಪಿಸಿದ್ದ ತಮ್ಮ ಹಳೆಯ ದಾಖಲೆಯನ್ನು ಗಿಲ್ ಕ್ರಿಸ್ಟ್ (69) ಅಳಿಸಿ ಹಾಕಿದರು. ಒಂದೇ ದೇಶದ ಎದುರು 70ಕ್ಕೂ ಅಧಿಕ ಬಾರಿ `ಬಲಿ' ಪಡೆದ ಗೌರವವನ್ನು ಮೋಯಿನ್ ಹಾಗೂ ಗಿಲ್ ಕ್ರಿಸ್ಟ್ ಹೊಂದಿದ್ದಾರೆ.
2008: ಒಲಿಂಪಿಕ್ ಚಾಂಪಿಯನ್ ರಷ್ಯಾದ ಎಲೆನಾ ಇಸಿನ್ ಬಯೇವಾ ಅವರು ಉಕ್ರೇನಿನ ಡಾನೆಸ್ಕ್ ಒಳಾಂಗಣ ಅಥ್ಲೆಟಿಕ್ ಕೂಟದ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ನೂತನ ವಿಶ್ವ ದಾಖಲೆ ಸ್ಥಾಪಿಸಿದರು. ಈದಿನ ನಡೆದ ಸ್ಪರ್ಧೆಯಲ್ಲಿ ಇಸಿನ್ ಬಯೇವಾ 4.95 ಮೀ. ಎತ್ತರ ಜಿಗಿದು ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. 2007ರಲ್ಲಿ ಡಾನೆಸ್ಕಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಅವರು 4.93 ಮೀ. ಎತ್ತರ ಹಾರಿದ್ದರು.
2008: ಪಾಕಿಸ್ಥಾನ ಪಂಜಾಬ್ ಪ್ರಾಂತ್ಯದ ಪಟ್ಟೋಕಿ ಎಂಬಲ್ಲಿ ಬಸ್ಸೊಂದು ಸೇತುವೆ ಮೇಲಿನಿಂದ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 40 ಮಂದಿ ಸತ್ತು, ಇತರ 20 ಮಂದಿ ಗಾಯಗೊಂಡರು. 60 ಪ್ರಯಾಣಿಕರನ್ನು ಹೊತ್ತಿದ್ದ ಬಸ್ಸು ಲಾಹೋರಿನಿಂದ ಮುಲ್ತಾನಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತು.
2008: ಒರಿಸ್ಸಾದ ನಯಾಗಡದಲ್ಲಿ ಪೊಲೀಸರಿಗೆ ಸೇರಿದ ಎರಡು ಶಸ್ತ್ರಕೋಠಿಗಳನ್ನು ದೋಚಿ, 14 ಮಂದಿ ಪೊಲೀಸರೂ ಸೇರಿದಂತೆ 15 ಮಂದಿಯನ್ನು ಕೊಂದು ಓಡಿಹೋಗಿದ್ದ ಮಾವೋವಾದಿ ನಕ್ಸಲೀಯರು ಗಂಜಾಮ್ ಮತ್ತು ಕಂದಮಾಳ್ ಗಡಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡರು. ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ಗುಂಡಿನ ಘರ್ಷಣೆ ನಡೆದು 20ಕ್ಕೂ ಹೆಚ್ಚು ನಕ್ಸಲೀಯರು ಹತರಾದರು ಎಂದು ಪೊಲೀಸ್ ಮೂಲಗಳು ತಿಳಿಸಿದವು.
2008: ಬಹು ವರ್ಷಗಳ ಬಳಿಕ ವಿಲೀನಗೊಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬಣ ಮತ್ತು ಕೆ.ಎಸ್. ಪುಟ್ಟಣ್ಣಯ್ಯ ಬಣ ರೈತ ಸಂಘಕ್ಕೆ ಸೈದ್ಧಾಂತಿಕ ನೆಲೆಗಟ್ಟಿನೊಂದಿಗೆ ಸಾಂಸ್ಕೃತಿಕ ಆಯಾಮ ಒದಗಿಸಲು ಮುಂದಾದವು. ಕೇವಲ ರೈತಪರ ಹೋರಾಟಗಳಿಗೆ ಸೀಮಿತವಾಗದೇ ಈ ಮಣ್ಣಿನ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸತ್ವ ಒದಗಿಸುವ ಉದ್ದೇಶದಿಂದ ಪುಸ್ತಕ ಪ್ರಕಾಶನಕ್ಕೆ ಚಿಂತಿಸಿರುವುದಾಗಿ ರೈತ ಸಂಘದ ಸ್ಥಾಪಕರಲ್ಲೊಬ್ಬರಾದ ಕಡಿದಾಳು ಶಾಮಣ್ಣ ಮಂಗಳೂರಿನಲ್ಲಿ ಹೇಳಿದರು. ರೈತ ಚಳವಳಿ ಬೆಳೆದುಬಂದ ಹಾದಿ, ರೈತಪರ ಹೋರಾಟಗಳು, ರೈತರ ಆತ್ಮಹತ್ಯೆ, ಗೋಲಿಬಾರ್, ಹುತಾತ್ಮ ರೈತ ನಾಯಕರ ಪರಿಚಯ, ರೈತ ಸಂಘ ನಡೆಸಿದ ಅಂದೋಲನ, ಪಾದಯಾತ್ರೆ, ನೈಸರ್ಗಿಕ ಕೃಷಿ ಇನ್ನಿತರೆ ರೈತ ಸಾಹಿತ್ಯವನ್ನು ಚಿತ್ರ ಸಮೇತ ಮುದ್ರಿಸಿ 'ಪುಸ್ತಕ ಪ್ರಕಾಶನ' ಆರಂಭಿಸುವುದಾಗಿ ಅವರು ಪ್ರಕಟಿಸಿದರು.
2008: `ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು' ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಬೆಂಗಳೂರಿನಲ್ಲಿ ಆಗ್ರಹಿಸಿದರು. ಬೆಂಗಳೂರು ದಿಣ್ಣೆಪಾಳ್ಯ ಕಗ್ಗಲಿಪುರ ಗೋಲೋಕದ ವಾತ್ಸಲ್ಯ ವೇದಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠ ಹಾಗೂ ಗೋಲೋಕ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರೈತಸಮಾವೇಶ ಮತ್ತು ಸಮರ್ಪಣ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ಗೋ ಆಧಾರಿತ ಕೃಷಿ ಪದ್ಧತಿಯನ್ನು ಬಿಟ್ಟು ರಾಸಾಯನಿಕ ಗೊಬ್ಬರವನ್ನು ಆಧರಿಸಿದ ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿದ್ದೇ ಈಗಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಭಾರತೀಯ ನಾಟಿ ಹಸುವಿನ ಕರುಳು ಸೂಕ್ಷ್ಮ ಜೀವಿಗಳ ಸಾಗರ. ಅದರ ಒಂದು ಗ್ರಾಂ ಸೆಗಣಿಯಲ್ಲಿ 300ರಿಂದ 500 ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಒಂದು ಗ್ರಾಂನಷ್ಟು ಮಣ್ಣಿನಲ್ಲಿ ನೂರು ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಸುಭಾಶ್ ಪಾಳೇಕರ್ ಅವರ ಕೃಷಿ ಪದ್ಧತಿಯಲ್ಲಿ ಇವೆರಡು ಮಿಶ್ರಗೊಳ್ಳುವುದರಿಂದ ಭೂಮಿಯಲ್ಲಿ ಸೂಕ್ಷ್ಮ ಜೀವಿಗಳು ಕೋಟಿಗಟ್ಟಲೆ ಸಂಖ್ಯೆಯಲ್ಲಿ ವೃದ್ಧಿಯಾಗಿ ಭೂಮಿ ಹೆಚ್ಚು ಫಲವತ್ತಾಗುತ್ತದೆ ಎಂದು ರಮೇಶರಾಜು ವಿವರಿಸಿದರು. ಗೋ ಆಧಾರಿತ ಕೃಷಿ, ಗೊಬ್ಬರ, ಬೀಜತಯಾರಿಯನ್ನು ಕೈಬಿಟ್ಟ ರೈತರು, ಆಧುನಿಕ ಕೃಷಿ ಪದ್ಧತಿಯಲ್ಲಿ ಉಳುಮೆಗೆ ದುಬಾರಿ ಟ್ರ್ಯಾಕ್ಟರ್, ಹೈಬ್ರಿಡ್ ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸಿದ್ದರಿಂದ ಸಾಲಕೂಪದಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದರು ಎಂದು ಅವರು ವಿಶ್ಲೇಷಿಸಿದರು. ಮಾಜಿ ಸಚಿವ ಆರ್. ಅಶೋಕ 'ಹಿಂದೆ ಗೋವುಗಳ ಸಂಖ್ಯೆ ಆಧಾರದಲ್ಲಿ ಸಂಪತ್ತು ಮತ್ತು ಪ್ರತಿಷ್ಠೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ಆದರೆ ಇಂದು ಗೋವು ಇದ್ದರೆ ಹುಡುಗಿ ಕೊಡುವುದಿಲ್ಲ ಎಂಬ ಮಟ್ಟಕ್ಕೆ ಬಂದಿದ್ದೇವೆ ಎಂದು ವಿಷಾದಿಸಿದರು. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಗೋಲೋಕ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುತ್ತಾ ಬಂದ ಕೋಲ್ಕತ್ತಾದ ಉದ್ಯಮಿಗಳಾದ ಉಷಾ ಅಗರ್ ವಾಲ್, ನಾಥೂರ ಖೇತಾನಿ, ಅಜಿತ್ ಖೇತಾನಿ, ಪವನ್ ಅಗರ್ ವಾಲ್, ಗೋಯೆಂಕಾ, ಮಹಾವೀರ ಪ್ರಸಾದ ಸೋನಿಕಾ, ಸ್ಥಳೀಯ ಮುಖಂಡ ಶಿವಕುಮಾರ, ವೆಂಕಟೇಶ ಚೀನಿಯ, ಕಿಸಾನ್ ಸಂಘದ ಪುಟ್ಟಸ್ವಾಮಿ, ಗೋಲೋಕದ ಸ್ಥಳದಾನಿ ಬಿ.ಜೆ.ಶರ್ಮಾ ಮತ್ತಿತರರು ಹಾಜರಿದ್ದರು.
2008: ಕೇವಲ 195 ದಿನಗಳಲ್ಲಿ ಸೈಕಲ್ ಮೂಲಕ ವಿಶ್ವಪರ್ಯಟನೆ ಮಾಡಿದ ಸ್ಕಾಟ್ ಲ್ಯಾಂಡ್ ಯುವಕ ಮಾರ್ಕ್ ಬಿಮೌಂಟ್ (25) ಅವರ ಸಾಹಸ ಯಾತ್ರೆ ಪ್ಯಾರಿಸ್ಸಿನಲ್ಲಿ ಕೊನೆಗೊಂಡಿತು. ಮಾರ್ಕ್ ಬಿಮೌಂಟ್ ಅವರು ಸರಿಸುಮಾರು 7 ತಿಂಗಳ ಕಾಲ ಪಾಕಿಸ್ಥಾನ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳಿಗೆ ಸೈಕಲ್ಲಿನಲ್ಲಿ ಪ್ರವಾಸ ಮಾಡಿ ಹಳೆಯ ದಾಖಲೆ (276 ದಿನಗಳು) ಮುರಿದರು.
2008: ನವದೆಹಲಿಯ ಪ್ರಗತಿ ಮೈದಾನದ ಸಮೀಪದಲ್ಲಿದ್ದ `ಅಪ್ಪು ಘರ್' ಮನರಂಜನಾ ಪಾರ್ಕನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಶಾಶ್ವತವಾಗಿ ಮುಚ್ಚಲಾಯಿತು. 1984ರಲ್ಲಿ ಆರಂಭವಾದ ದೇಶದ ಮೊದಲ ಈ ಮನರಂಜನಾ ಪಾರ್ಕಿನ ಭೋಗ್ಯದ ಅವಧಿ ಮುಗಿದಿದ್ದು ಈ ಪ್ರದೇಶದಲ್ಲಿ ಸುಪ್ರೀಂ ಕೋರ್ಟಿನ ಕೋಣೆಗಳು ಮತ್ತು ಗ್ರಂಥಾಲಯ ಬರುವುದು.
2007: ಚಲನಚಿತ್ರ ನಿರ್ಮಾಪಕ, ಕಲಾವಿದ, ನಿರ್ದೇಶಕ, ಬರಹಗಾರ ಮತ್ತು ಕವಿಯಾಗಿ ಖ್ಯಾತರಾದ ಎಂ.ಎಸ್. ರೆಡ್ಡಿ ಅವರು 2007ರ ಸಾಲಿನ ವೆಂಕಯ್ಯ ಪ್ರಶಸ್ತಿಗೆ ಆಯ್ಕೆಯಾದರು. 2005ರಲ್ಲಿ ತೆಲುಗು ಸಿನೆಮಾ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕಾಣಿಕೆಗಾಗಿ ಅವರನ್ನು ವೆಂಕಯ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ನೀರನ್ನು ಡೀಸೆಲ್ ಜೊತೆಗೆ ಇಂಧನವಾಗಿ ಬಳಸುವ ಕ್ರಾಂತಿಕಾರಿ ಪ್ರಯೋಗದಲ್ಲಿ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಯಶಸ್ವಿಯಾಗಿದ್ದು, ಹತ್ತು ಬಸ್ಸುಗಳು ಈ `ವಿನೂತನ ಪ್ರಯೋಗ' ಸೂತ್ರ ಅಳವಡಿಸಿಕೊಂಡು ಯಶಸ್ವೀ ಸಂಚಾರ ನಡೆಸುತ್ತಿವೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಚಿವ ಚಲುವರಾಯಸ್ವಾಮಿ ಪ್ರಕಟಿಸಿದರು. ಜಲಶಕ್ತಿ ಹೆಸರಿನ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಯೋಗ ನಡೆಸಲಾಗಿತ್ತು.
2007: ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿಯನ್ನು ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.
2007: ಭಾರತ- ಪಾಕಿಸ್ಥಾನ ವಿಭಜನೆಯ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಪಾಕಿಸ್ಥಾನದ ಕೇಂದ್ರ ಪಂಜಾಬ್ ಪ್ರಾಂತ್ಯದ ಚಕ್ವಾಲ್ ಬಳಿಯ ಚಾರಿತ್ರಿಕ ಕಟಾಸ್ ರಾಜ್ ದೇವಸ್ಥಾನಗಳ ಸಂಕೀರ್ಣದಲ್ಲಿ ಇರುವ ಶಿವಮಂದಿರದಲ್ಲಿ ಭಾರತದ ವಿವಿಧ ಕಡೆಗಳಿಂದ ಬಂದಿದ್ದ 176 ಮಂದಿ ಹಿಂದೂ ಯಾತ್ರಿಗಳು ಶಿವಪೂಜೆ ನೆರವೇರಿಸಿದರು. ಸಂಸ್ಕೃತ ಶಬ್ಧ ಕಟಾಸ್ನ ಅರ್ಥ ಕಣ್ಣೀರು ಎಂದು. ಶಿವರಾತ್ರಿ ಅಂಗವಾಗಿ ಫೆಬ್ರುವರಿ 16ರಿಂದಲೇ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
2007: ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಹಿರಿಯ ನ್ಯಾಯಾಧೀಶರು ಸೇರಿ 13 ಜನ ಮೃತರಾದರು.
2007: ಇರಾಕಿಗೆ 20ಸಾವಿರ ಸೈನಿಕರನ್ನು ಕಳುಹಿಸುವ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರ ನಿರ್ಧಾರವನ್ನು ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿ ಇರುವ ಜನಪ್ರತಿನಿಧಿಗಳ ಸಭೆ ತಿರಸ್ಕರಿಸಿತು.
2007: ವಿಶಾಖಪಟ್ಟಣದಲ್ಲಿ ನಡೆದ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ಟುಗಳಿಂದ ಮಣಿಸಿದ ಭಾರತ, ನಾಲ್ಕು ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು `ಹೀರೋ ಹೊಂಡಾ ಕಪ್' ಗೆದ್ದುಕೊಂಡಿತು.
2007: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಉಸ್ತಾದ್ ಬಿಸ್ಮಿಲ್ಲಾ ಖಾನ್ ಸ್ಮರಣಾರ್ಥವಾಗಿ ಪ್ರಸ್ತುತ ವರ್ಷದಿಂದಲೇ ಪ್ರಾರಂಭಿಸಿದ `ಉಸ್ತಾದ್ ಬಿಸ್ಮಿಲ್ಲಾ ಖಾನ್ ಅಖಿಲ ಭಾರತ ಪುರಸ್ಕಾರ-2006' ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಕರ್ನಾಟಕದ ಯುವ ರಂಗನಿರ್ದೇಶಕ ಮಾಲತೇಶ ಬಡಿಗೇರ ಆಯ್ಕೆಯಾದರು.
2006: ಫಿಲಿಪ್ಪೀನ್ಸಿನಲ್ಲಿ ಬಿರುಗಾಳಿ ಮಳೆಯ ಪರಿಣಾಮವಾಗಿ ಸಂಭವಿಸಿದ ಭೂಕುಸಿತದಿಂದ ಕನಿಷ್ಠ 1800ಕ್ಕೂ ಹೆಚ್ಚು ಜನರು ಮೃತರಾಗಿ ಹಲವರು ಕಾಣೆಯಾದರು. ಭೂಕುಸಿತದಿಂದ ಲೀಟೆ ದ್ವೀಪದ ಸೇಂಟ್ ಬರ್ನಾರ್ಡ್ ಪಟ್ಟಣದ ಗುಯಿನ್ಸಾಂಗೊ ಹಳ್ಳಿಯು ಸಂಪೂರ್ಣ ಸಮಾಧಿಯಾಯಿತು. ಫಿಲಿಪ್ಪೀನ್ಸ್ ವರ್ಷವೊಂದಕ್ಕೆ ಸರಾಸರಿ 20 ಬಾರಿ ಬಿರುಗಾಳಿ, ಮಳೆಯನ್ನು ಎದುರಿಸುತ್ತದೆ. 1999ರಲ್ಲಿ ಚಂಡಮಾರುತದಿಂದ ಉಂಟಾದ ಭಾರಿ ಮಳೆ, ಪ್ರವಾಹಕ್ಕೆ ಸಿಕ್ಕು 5000ಕ್ಕೂ ಹೆಚ್ಚು ಜನರು ಮೃತರಾದರೆ, 2001ರಲ್ಲಿ ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು.
2006: ಅಳಿವಿನ ಅಂಚಿನಲ್ಲಿರುವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ನಟ ಸಲ್ಮಾನ್ ಖಾನ್ ಗೆ ರಾಜಸ್ಥಾನದ ಜೋಧಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಂದು ವರ್ಷದ ಸೆರೆಮನೆವಾಸ ಮತ್ತು 5 ಸಾವಿರ ರೂಪಾಯಿಗಳ ದಂಡ ವಿಧಿಸಿತು. ಹಾಸ್ಯನಟ ಸತೀಶ ಶಾ ಸೇರಿದಂತೆ 7 ಮಂದಿ ಇತರ ಆರೋಪಿಗಳನ್ನು ಖುಲಾಸೆಗೊಳಿಸಿತು.
2006: ಶಕೀರಾ ಕೊಲೆ ಪ್ರಕರಣದ ಮುಖ್ಯ ಆರೋಪಿ ಸ್ವಾಮಿ ಶ್ರದ್ಧಾನಂದನ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಬೆಂಗಳೂರಿನ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿತ್ತು.
2006: ಭಾರತದ ಪಶ್ಚಿಮ ರಾಜಸ್ಥಾನದ ಮುನಬಾವೋಗೆ ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಖೊಖ್ರಪಾರದಿಂದ 40 ವರ್ಷಗಳ ಬಳಿಕ ರೈಲು ಪಯಣ ಪುನರಾರಂಭಗೊಂಡಿತು.
1986: ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ತಮ್ಮ 90ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಓಜೈನಲ್ಲಿ ನಿಧನರಾದರು.
1968: ಸಾರಂಗಿವಾಹನ, ತಬಲಾ ಮತ್ತು ಗಾಯನ ಕಲೆ ಈ ಮೂರೂ ಪ್ರಕಾರಗಳಲ್ಲಿಪ್ರಭುತ್ವ ಹೊಂದಿದ ಫಯಾಜ್ ಖಾನ್ ಅವರು ಉಸ್ತಾದ್ ಅಬ್ದುಲ್ ಖಾದರ್ ಖಾನ್- ಜೈತುನ್ ಬಿ ದಂಪತಿಯ ಮಗನಾಗಿ ಧಾರವಾಡದದಲ್ಲಿ ಜನಿಸಿದರು.
1947: ಕಲಾವಿದ ಸುಬ್ರಾಯ ಜೆ.ಸಿ. ಜನನ.
1936: ವೃತ್ತಪತ್ರಿಕೆಯ ಕಾಮಿಕ್ ಪುಟದಲ್ಲಿ ಲೀಫಾಕ್ ಅವರ `ಫ್ಯಾಂಟಮ್' ಮೊದಲ ಬಾರಿಗೆ ಪ್ರಕಟಗೊಂಡಿತು. (ಮಾಂಡ್ರೇಕ್ ಪ್ರಕಟಗೊಂಡದ್ದು 1934ರಲ್ಲಿ).
1933: ಮೊತ್ತ ಮೊದಲ ಬಾರಿಗೆ `ನ್ಯೂಸ್ ವೀಕ್' ಪ್ರಕಟಗೊಂಡಿತು.
1874: ಥಾಮಸ್ ಜೆ. ವಾಟ್ಸನ್ ಸೀನಿಯರ್ (1874-1956) ಹುಟ್ಟಿದ ದಿನ. ಅಮೆರಿಕನ್ ಕೈಗಾರಿಕೋದ್ಯಮಿಯಾದ ಈತ ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್(ಐಬಿಎಂ) ಸಂಸ್ಥೆಯನ್ನು ಜಗತ್ತಿನಲ್ಲೇ ಎಲೆಕ್ಟ್ರಿಕ್ ಟೈಪ್ ರೈಟರ್ ಮತ್ತು ಮಾಹಿತಿ ತಂತ್ರಾಂಶ ಉಪಕರಣ ತಯಾರಿಸುವ ಅತಿದೊಡ್ಡ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದರು.
1673: ಮೊಲೀರ್ ಎಂದೇ ಖ್ಯಾತನಾಗಿದ್ದ ಹಾಸ್ಯನಟ ಜೀನ್ ಬಾಪ್ಟಿಸ್ಟ್ ಪೊಖ್ವಿಲಿನ್ ತನ್ನ 51ನೇ ವಯಸ್ಸಿನಲ್ಲಿ ಮೃತನಾದ. ತನ್ನ ಕೊನೆಯ ನಾಟಕ `ದಿ ಇಮಾಜಿನರಿ ಇನ್ ವ್ಯಾಲಿಡ್'ನ ನಾಲ್ಕನೇ ಪ್ರದರ್ಶನಕಾಲದಲ್ಲಿ ಆತ ವೇದಿಕೆಯಲ್ಲೇ ಕುಸಿದು ಬಿದ್ದು ನಂತರ ಮನೆಯಲ್ಲಿ ಮೃತನಾದ. ತನ್ನ ನಟನಾ ವೃತ್ತಿಗೆ ವಿದಾಯ ಹೇಳಲು ಅವಕಾಶವೇ ಸಿಗದೇ ಹೋದುದರಿಂದ ಆತನ ಅಂತ್ಯಕ್ರಿಯೆಯನ್ನು ಫೆಬ್ರುವರಿ 21ರಂದು ಸೂರ್ಯಾಸ್ತದ ಬಳಿಕ ಸರಳವಾಗಿ ನೆರವೇರಿಸಲಾಯಿತು.
No comments:
Post a Comment