ಇಂದಿನ ಇತಿಹಾಸ
ಏಪ್ರಿಲ್ 03
ಮೊಬೈಲ್ ತಯಾರಿಕೆಯ ಮೊಟೊರೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಸಂಜಾತ ಸಂಜಯ ಝಾ ಅವರು ಅಮೆರಿಕದಲ್ಲೆ ಗರಿಷ್ಠ ವೇತನ ಪಡೆಯುವ ಸಿಇಒ ಎನ್ನುವುದು ಬೆಳಕಿಗೆ ಬಂದಿತು. ಇದೇ ವೇಳೆಗೆ ಉತ್ತೇಜನ ಪ್ಯಾಕೇಜ್ ಪಡೆದುಕೊಂಡ ಬ್ಯಾಂಕ್‌ಗಳಲ್ಲೇ ಅತ್ಯಂತ ಗರಿಷ್ಠ ವೇತನ ಪಡೆಯುತ್ತಿರುವ ಸಿಇಒ ಎನ್ನುವ ಅಗ್ಗಳಿಕೆಗೆ ಸಿಟಿಗ್ರೂಪ್ ಸಿಇಒ ವಿಕ್ರಮ್ ಪಂಡಿತ್ ಪಾತ್ರರಾದರು
2009: ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಬಿಜೆಪಿ ನವದೆಹಲಿಯಲ್ಲಿ ಈದಿನ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಹಿಂದುತ್ವಕ್ಕೆ ಅಂಟಿಕೊಂಡ ದ್ವಂದ್ವ ನಿಲುವಿನೊಂದಿಗೆ ಯುವಕರು ಮತ್ತು ಮಧ್ಯಮ ವರ್ಗದವರನ್ನು ಓಲೈಸುವ ಯತ್ನವನ್ನು ಈ ಪ್ರಣಾಳಿಕೆ ಮಾಡಿತು. ಆದಾಯ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಕೆ, ಕಡು ಬಡವರಿಗೆ 2 ರೂಪಾಯಿಗೆ ಅಕ್ಕಿ -ಗೋಧಿ, ರಕ್ಷಣಾ ಸಿಬ್ಬಂದಿಗೆ ಆದಾಯ ತೆರಿಗೆಯಿಂದ ಮುಕ್ತಿ ಮಂತಾದ ಹಲವು ಜನಪ್ರಿಯ ಭರವಸೆಗಳನ್ನು ಪಕ್ಷ ನೀಡಿತು. ಇದೇ ವೇಳೆ ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯ ದುರ್ಗತಿ, ಭಯೋತ್ಪಾದನೆ ನಿಗ್ರಹಕ್ಕೆ 'ಪೋಟಾ'ದಂತಹ ಕಠಿಣ ಶಾಸನ ರಚನೆಯಂತಹ ತನ್ನ ಹಳೆಯ ವಿಷಯಗಳನ್ನೂ ಅದು ಸೇರಿಸಿಕೊಂಡಿತು. 11 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಬಿಜೆಪಿ ಎನ್‌ಡಿಎ ಪ್ರಣಾಳಿಕೆಯ ಬದಲಿಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು.. 1999 ಮತ್ತು 2004ರಲ್ಲಿ ಎನ್‌ಡಿಎ ಪ್ರಣಾಳಿಕೆಯ ಜತೆಯಲ್ಲೇ ಬಿಜೆಪಿ ಪ್ರಣಾಳಿಕೆಯೂ ಸೇರಿಕೊಂಡಿತ್ತು.
2009: ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಹುಲಿ ತಲೆಯ ರತ್ನಖಚಿತ ಶಿಖರಾಲಂಕಾರ ಲಂಡನ್ನಿನಲ್ಲಿ 3,89,600 ಪೌಂಡ್‌ಗೆ ಹರಾಜಾಯಿತು. 18ನೇ ಶತಮಾನದ ಅಮೂಲ್ಯವಾದ ಈ ಶಿಖರಾಲಂಕಾರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಖರೀದಿಸಿದರು.
2009: ಮೊಬೈಲ್ ತಯಾರಿಕೆಯ ಮೊಟೊರೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಸಂಜಾತ ಸಂಜಯ ಝಾ ಅವರು ಅಮೆರಿಕದಲ್ಲೆ ಗರಿಷ್ಠ ವೇತನ ಪಡೆಯುವ ಸಿಇಒ ಎನ್ನುವುದು ಬೆಳಕಿಗೆ ಬಂದಿತು. ಇದೇ ವೇಳೆಗೆ ಉತ್ತೇಜನ ಪ್ಯಾಕೇಜ್ ಪಡೆದುಕೊಂಡ ಬ್ಯಾಂಕ್‌ಗಳಲ್ಲೇ ಅತ್ಯಂತ ಗರಿಷ್ಠ ವೇತನ ಪಡೆಯುತ್ತಿರುವ ಸಿಇಒ ಎನ್ನುವ ಅಗ್ಗಳಿಕೆಗೆ ಸಿಟಿಗ್ರೂಪ್ ಸಿಇಒ ವಿಕ್ರಮ್ ಪಂಡಿತ್ ಪಾತ್ರರಾದರು. ಪೆಪ್ಸಿಕೋ ಸಿಇಒ ಇಂದ್ರಾ ನೂಯಿ ಅವರು 13.98 ದಶಲಕ್ಷ ಡಾಲರ್ ಪ್ಯಾಕೇಜ್ ಪಡೆಯುವ ಮುಲಕ 36ನೇ ಸ್ಥಾನದಲ್ಲಿ ಗುರುತಿಸಿಕೊಂಡರು. 2008ನೇ ಸಾಲಿನಲ್ಲಿ ಒಟ್ಟಾರೆ ಸಿಇಒಗಳಿಗೆ 104 ದಶಲಕ್ಷ ಡಾಲರ್ ಪ್ಯಾಕೇಜ್ ನೀಡಲಾಯಿತು. ಅದರಲ್ಲಿ ಝಾ ಮಾತ್ರ ವಾರ್ಷಿಕ ಪರಿಹಾರ 100 ದಶಲಕ್ಷ ಡಾಲರ್ ಪಡೆಯುವವರೆನಿಸಿದರು. ಇವರ ನಂತರದ ಸ್ಥಾನದಲ್ಲಿ 49.9 ದಶಲಕ್ಷ ಡಾಲರ್ ಪಡೆಯುವ ಒಕ್ಸಿಡೆಂಟಲ್ಸ್ ಕಂಪೆನಿ ಸಿಇಒ ರೇ ಇರಾನಿ, ಮೂರನೇ ಸ್ಥಾನದಲ್ಲಿ ವಾಲ್ಟ್ ಡಿಸ್ನಿ ಕಂಪೆನಿಯ ರಾಬರ್ಟ್ ಐಗರ್ (49.7 ದಶಲಕ್ಷ ಡಾಲರ್) ಗುರುತಿಸಿಕೊಂಡರು.
2009: ಶತಮಾನಗಳಿಂದ ಬಂದಿದ್ದ ಶಿಷ್ಟಾಚಾರವನ್ನು ಬದಿಗೊತ್ತಿ ಬ್ರಿಟನ್ ರಾಣಿ ಎಲಿಜಬೆತ್ ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರನ್ನು ತಬ್ಬಿಕೊಳ್ಳಲು ಮುಂದಾದರು. ಇಂಗ್ಲೆಂಡಿಗೆ ಆಗಮಿಸಿದ ಒಬಾಮ ದಂಪತಿಗೆ ಲಂಡನ್ನಿನಲ್ಲಿ ನೀಡಲಾದ ಔಪಚಾರಿಕ ಸ್ವಾಗತದ ಸಂದರ್ಭದಲ್ಲಿ ಮಿಷೆಲ್ ಹಾಗೂ ರಾಣಿ ಪರಸ್ಪರ ತಬ್ಬಿಕೊಂಡಿರುವ ಚಿತ್ರಗಳು ಬ್ರಿಟನ್ ಪತ್ರಿಕೆಗಳಲ್ಲಿ ಭಾರಿ ಸುದ್ದಿ ಮಾಡಿದವು. ರಾಜಮನೆತನದ ಶಿಷ್ಟಾಚಾರದ ಪ್ರಕಾರ ರಾಣಿಯನ್ನು ಯಾರೂ ಮುಟ್ಟುವಂತಿಲ್ಲ. ಆದರೆ, ರಾಣಿಯೇ ಮೊದಲು ಮಿಷೆಲ್ ಸೊಂಟದ ಸುತ್ತ ಕೈಹಾಕಿ ತಬ್ಬಿಕೊಂಡರು. ಆನಂತರ ಮಿಷೆಲ್ ರಾಣಿಯನ್ನು ಅಪ್ಪಿಕೊಂಡರು. ಬಹಿರಂಗವಾಗಿ ಎಂದೂ ಭಾವನೆಗಳನ್ನು ಪ್ರದರ್ಶಿಸದ ಎಲಿಜಬೆತ್ ಕ್ರಮ ಚರ್ಚೆಗೆ ಕಾರಣವಾಯಿತು. ಈ ಹಿಂದೆ ರಾಣಿಯ ಕೈಕುಲುಕಿದ್ದ ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಮಾಧ್ಯಮಗಳ ಕೆಂಗಣ್ಣು ಎದುರಿಸಿದ್ದರು. 1992ರಲ್ಲಿ ರಾಣಿಯ ಸೊಂಟ ಬಳಸಿದ್ದ ಅಂದಿನ ಆಸ್ಟ್ರೇಲಿಯಾ ಪ್ರಧಾನಿ ಪಾಲ್ ಕೀಟಿಂಗ್ ಅವರನ್ನು ಯದ್ವಾತದ್ವಾ ಟೀಕಿಸಲಾಗಿತ್ತು.
2009: ಮಲೇಷ್ಯಾದ ಆರನೇ ಪ್ರಧಾನ ಮಂತ್ರಿಯಾಗಿ ನಜೀಬ್ ಅಬ್ದುಲ್ ರಜಾಕ್ ಕ್ವಾಲಾಲಂಪುರದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ರಾಯಲ್ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭಲ್ಲಿ ರಜಾಕ್ ಅವರು ದೊರೆ ತ್ವಾಂಕು ಮಿಜಾನ್ ಝೈನಾಲ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮನ ಪ್ರಧಾನಿ ಅಬ್ದುಲ್ಲಾ ಅಹಮದ್ ಬದಾವಿ ಹಾಗೂ ಮುಖ್ಯ ನ್ಯಾಯಾಧೀಶ ಝಕಿ ಅಜ್ಮಿ ಈ ಸಂದರ್ಭದಲ್ಲಿ ಹಾಜರಿದ್ದರು.
2008: ಶೀತಲೀಕರಿಸಿದ ಅಂಡಾಣುವನ್ನು ಬಳಸಿದ ಪ್ರನಾಳ ಶಿಶು ಬೆಂಗಳೂರಿನ ಅಡ್ವಾನಸ್ಡ್ ಫರ್ಟಿಲಿಟಿ ಸೆಂಟರಿನಲ್ಲಿ ಏಪ್ರಿಲ್ 1ರಂದು ಜನ್ಮ ತಾಳಿದ್ದು, ಇದು ನೂತನ ತಂತ್ರಜ್ಞಾನ ಬಳಸಿದ ರಾಜ್ಯದ ಮೊದಲ ಪ್ರನಾಳ ಶಿಶುವಾಗಿದೆ ಎಂದು ಸೆಂಟರಿನ ವೈದ್ಯಕೀಯ ನಿರ್ದೇಶಕ ಡಾ.ಆರ್. ನಿರ್ಮಲಾ ಪ್ರಕಟಿಸಿದರು. ಅಡ್ವಾನಸ್ಡ್ ಫರ್ಟಿಲಿಟಿ ಸೆಂಟರಿನ ಡಾ.ನಿರ್ಮಲಾ ಹಾಗೂ ವರ್ಷಾ ಸ್ಯಾಮಸನ್ ರಾಯ್ ಅವರು ಈ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾದರು. ಅಂಡಾಣುವಿನ ಉತ್ಪತ್ತಿ ಸರಿಯಾಗಿ ಆಗದ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದಿಲ್ಲ. ಅಂಡಾಣು ಉತ್ಪತ್ತಿಗೆ ಔಷದೋಪಚಾರ ನಡೆಸಿ, ಆರೋಗ್ಯಪೂರ್ಣ ಅಂಡಾಣುಗಳನ್ನು ಪಡೆದು ಶೀತಲೀಕರಿಸಲಾಗುತ್ತದೆ. ನಂತರ ವೀರ್ಯಾಣುವನ್ನು ಸೇರಿಸಿ ಭ್ರೂಣವನ್ನು ಮತ್ತೆ ಗರ್ಭಕೋಶಕ್ಕೆ ಸೇರ್ಪಡೆ ಮಾಡುವಂತಹ ತಂತ್ರಜ್ಞಾನ ಬಳಸಿ ಪ್ರನಾಳ ಶಿಶುವಿಗೆ ಜನ್ಮ ನೀಡುವಲ್ಲಿ ವೈದ್ಯರು ಯಶಸ್ವಿಯಾದರು. ಪ್ರಸಾದ್ ದಂಪತಿ ಈ ಮಗು ಪಡೆದವರು. ಪ್ರಥಮ ಬಾರಿಗೆ ವಿಶ್ವದಲ್ಲಿ 1978ರಲ್ಲಿ ಪ್ರನಾಳ ಶಿಶುವಿನ ಜನನವಾಗಿತ್ತು.
2008: ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ ಸಿಪಿಐ(ಎಂ)ನ ಹತ್ತೊಂಬತ್ತನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಕಾಶ್ ಕಾರಟ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಯಿತು. ಅಧಿವೇಶನದಲ್ಲಿ ಪಕ್ಷದ ಹಿರಿಯ ನಾಯಕರಾದ ಜ್ಯೋತಿ ಬಸು ಅವರನ್ನು ಪಾಲಿಟ್ ಬ್ಯೂರೋದ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಹರಿಕಿಶನ್ ಸಿಂಗ್ ಸುರ್ಜಿತ್ ಅವರನ್ನು ಕೇಂದ್ರ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಯಿತು. ಬಸು ಹಾಗೂ ಸುರ್ಜಿತ್ ಅವರು 1964ರಿಂದ (44 ವರ್ಷಗಳಿಂದ) ಪಕ್ಷದ ಪಾಲಿಟ್ ಬ್ಯೂರೋದ ಸದಸ್ಯರಾಗಿದ್ದರು.
2008: ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಎಂದು ಹೇಳಿದ ಕರ್ನಾಟಕ ಹೈಕೋರ್ಟ್, ಯೋಜನೆ ಮುಂದುವರಿಸದಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿತು.
2008: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಯಾಲ ಹಳ್ಳಿಯ ನಾನಾಗ್ರಾಮ್ (45) ಎಂಬಾತನನ್ನು ಕೊಲೆ ಮಾಡಿದ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜೈಪುರದ ತ್ವರಿತ ನ್ಯಾಯಾಲಯ ತೀರ್ಪು ನೀಡಿತು. 2007ರ ಏಪ್ರಿಲ್ 19 ರಂದು ಈ ಘಟನೆ ನಡೆದಿತ್ತು. ಅಪರಾಧಿಗಳು ನಾನಾಗ್ರಾಮನನ್ನು ಮನಬಂದಂತೆ ಥಳಿಸ್ದಿದರಿಂದ ಆತ ಮೃತಪಟ್ಟಿದ್ದ. ಪ್ರಮುಖ ಆರೋಪಿ ರಾಮಚಂದ್ರ ಸೇರಿದಂತೆ 11 ಮಂದಿಗೆ ನ್ಯಾಯಮೂರ್ತಿ ಮದನ್ ಲಾಲ್ ಭಾಟಿಯ ಜೀವಾವಧಿ ಶಿಕ್ಷೆ ವಿಧಿಸಿದರು.
2008: ವಿವಾದಿತ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಕನ್ನಡಪರ ಸಂಘಟನೆಗಳು ಏಪ್ರಿಲ್ 10ರಂದು ಕರ್ನಾಟಕ ಬಂದ್ ಆಚರಿಸಲು ಕರೆ ನೀಡಿದವು. ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಸಮತಾ ಸೈನಿಕ ದಳ ಮತ್ತಿತರ ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದವು.
2008: ಕಾಂಡ ಜೀವ ಕೋಶಗಳನ್ನು ದೇಹದೊಳಗೆ ಕಸಿ ಮಾಡುವುದರಿಂದ ವಾಸಿಯಾಗದ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದು ಎಂದು ಕಾಂಡ ಜೀವಕೋಶ ಕಸಿ ಮಾಡುವುದರಲ್ಲಿ ವಿಶ್ವದಲ್ಲೇ ಅಗ್ರಗಣ್ಯರಾದ ಅಮೆರಿಕದ ತಜ್ಞ ವೈದ್ಯ ಡಾ. ಮೈಕೇಲ್ ಮೊಲ್ನಾರ್ ಹೇಳಿದರು. ಏಷ್ಯ ಖಂಡದ ಜೀವಕೋಶ ಸಂಶೋಧನಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಪೊಲೀಸ್ ಜಿಮಖಾನಾದಲ್ಲಿ ಏರ್ಪಡಿಸಿದ್ದ 'ಕಾಂಡ ಜೀವಕೋಶ ಕಸಿ ಮಾಡುವಿಕೆ' ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ವೈದ್ಯಶಾಸ್ತ್ರದಲ್ಲಿ ಲಭ್ಯವಿರುವ ಯಾವುದೇ ಸೌಲಭ್ಯಗಳನ್ನು ಬಳಸಿದರೂ ಅನೇಕ ಕಾಯಿಲೆಗಳು ಇಂದಿಗೂ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿವೆ. ಮಾನವ ಅಥವಾ ಪ್ರಾಣಿಗಳ ಭ್ರೂಣದಲ್ಲಿ ಲಭ್ಯವಿರುವ ಜೀವಕೋಶಗಳನ್ನು ಸಂಸ್ಕರಿಸಿ, ವರ್ಧಿಸಿ ಮಾನವ ದೇಹದೊಳಗೆ ಕಸಿ ಮಾಡುವುದರಿಂದ ಅನೇಕ ಅಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು. ಸಕ್ಕರೆ ಕಾಯಿಲೆ ನಂತರ ಬರುವ ಮೂತ್ರಪಿಂಡದ ಸಮಸ್ಯೆ, ಕಣ್ಣಿನ ಸಮಸ್ಯೆ, ಹೃದಯ ಸ್ನಾಯು ಸಮಸ್ಯೆ, ನರಕೋಶ ಸಮಸ್ಯೆ, ಬಂಜೆತನ ಸಮಸ್ಯೆ, ವಾಸಿಯಾಗದ ಗಾಯಗಳು ಮುಂತಾದ ಸಮಸ್ಯೆಗಳಿಗೆ ಕಾಂಡ ಜೀವಕೋಶಗಳನ್ನು ಕಸಿಮಾಡುವುದರಿಂದ ಪರಿಹಾರ ಒದಗಿಸಬಹುದು. ನಿರ್ಜೀವ ದುರ್ಬಲ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸಬಹುದು. ಜಗತ್ತಿನಾದ್ಯಂತ ಈಗಾಗಲೇ ಸುಮಾರು 50 ಲಕ್ಷ ರೋಗಿಗಳು ಈ ರೀತಿಯ ಚಿಕಿತ್ಸೆಯ ಲಾಭ ಪಡೆದಿದ್ದಾರೆ ಎಂದು ಅವರು ವಿವರಿಸಿದರು.
2007: ಗಂಟೆಗೆ 574.8 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಪ್ರಾನ್ಸಿನ ಗ್ರಾಂಡೇ ವಿಟೆಸ್ಸೇ ರೈಲು ನೂತನ ದಾಖಲೆ ನಿರ್ಮಿಸಿತು. ಇದಕ್ಕಾಗಿಯೇ ನಿರ್ಮಿಸಲಾದ ಹಳಿಯ ಮೇಲೆ ರೈಲು ಪರೀಕ್ಷಾರ್ಥ ಪ್ರಯಾಣ ನಡೆಸಿತು. 1990ರಲ್ಲಿ ಫ್ರಾನ್ಸಿನ ರೈಲೊಂದು ಗಂಟೆಗೆ 515.3 ಕಿ.ಮೀ. ವೇಗದಲ್ಲಿ ಚಲಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು.
2007: ದಾವಣಗೆರೆ ನಗರ ಹೊರವಲಯ ಕರೂರು ಬಳಿ ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗಿನಲ್ಲಿ ಸ್ಕಾರ್ಪಿಯೋ ವಾಹನ ರೈಲಿಗೆ ಸಿಕ್ಕಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದಪುರಿ ಸ್ವಾಮೀಜಿ (36) ಸೇರಿದಂತೆ ಮೂವರು ಮೃತರಾದರು.
2007: ಲಂಡನ್ನಿನ ವಿಶ್ವವಿಖ್ಯಾತ ಮೇಣದ ಪ್ರತಿಮೆಗಳ ಮೇಡಂ ಟುಸಾಡ್ ಸಂಗ್ರಹಾಲಯಕ್ಕೆ ಬಾಲಿವುಡ್ ಚಿತ್ರನಟ ಶಾರುಖ್ ಖಾನ್ ಪ್ರತಿಮೆ ಸೇರ್ಪಡೆಯಾಯಿತು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಚಿತ್ರನಟಿ ಐಶ್ವರ್ಯ ರೈ, ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವಗಾಂಧಿ ಅವರ ಮೇಣದ ಪ್ರತಿಮೆಗಳು ಈಗಾಗಲೇ ಸಂಗ್ರಹಾಲಯದಲ್ಲಿದ್ದು, ಅವುಗಳ ಸಾಲಿಗೆ ಶಾರುಖ್ ಖಾನ್ ಪ್ರತಿಮೆಯೂ ಸೇರಿಕೊಂಡಿತು.
2007: ಬೆಂಗಳೂರಿನಲ್ಲಿ ರಾಜಭವನದಲ್ಲೇ ನಡೆದ ಸಮಾರಂಭ ಒಂದರಲ್ಲಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಕಲಾವಿದರಾದ ನೂರ್ ಸಲ್ಮಾ ಭಾನು, ರಾಜೇಶ್ ಎಂ. ಪತ್ತಾರ ಮತ್ತು ಎನ್. ದಕ್ಷಿಣಾಮೂರ್ತಿ ಅವರಿಗೆ `ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ' ಪ್ರಶಸ್ತಿ ಪ್ರದಾನ ಮಾಡಿದರು.
2007: ಉಕ್ರೇನಿನ ಅಧ್ಯಕ್ಷ ವಿಕ್ಟೊರ್ ಯಶ್ ಚೆಂಕೊ ಅವರು ಸಂಸತ್ತನ್ನು ವಿಸರ್ಜಿಸಿ ಮೇ 27ರಂದು ಚುನಾವಣೆ ನಡೆಸಲು ಕರೆ ನೀಡಿದರು.
2006: ನೇಪಾಳದ ಕಠ್ಮಂಡುವಿನಲ್ಲಿ ಮಾಂಸಕ್ಕಾಗಿ ಹಸುವನ್ನು ಕೊಂದ ಕೃಪಾ ಬೋಟಿನಿ (50) ಎಂಬ ಮಹಿಳೆಗೆ ಜಿಲ್ಲಾ ನ್ಯಾಯಾಲಯವು 12 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.
2006: ಜಾಗತಿಕ ಇತಿಹಾಸದಲ್ಲಿಯೇ ಅತಿ ದೊಡ್ಡ ಹಬ್ಬ ಎಂದು ಹೇಳಲಾದ ರಾಮಾಯಣ ಮಹಾಸತ್ರದ ಮಾರ್ಗದರ್ಶಕರಾದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಪುರ ಪ್ರವೇಶ ಮತ್ತು ವಾಲ್ಮೀಕಿ ರಾಮಾಯಣ ಗ್ರಂಥದ ಮೆರವಣಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸನಗರದಲ್ಲಿ ವಿಜೃಂಭಣೆಯಿಂದ ನಡೆಯಿತು.
2006: ಹೈಕೋರ್ಟ್ ಸಂಚಾರಿ ಪೀಠವನ್ನು ಹುಬ್ಬಳ್ಳಿ ಧಾರವಾಡ ನಗರಗಳ ಮಧ್ಯಭಾಗದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ವಕೀಲರು ಕೋರ್ಟ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು.
1984: ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮ ಭಾರತದ ಮೊತ್ತ ಮೊದಲ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ದಿನ ಅವರು ರಷ್ಯದ ಸೋಯುಜ್ ಟಿ-11 ಗಗನನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಏರಿದರು. ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಪ್ರಶ್ನಿಸಿದಾಗ `ಸಾರೇ ಜಹಾಂಸೆ ಅಚ್ಛಾ' ಎಂದು ಶರ್ಮ ಉತ್ತರಿಸಿದರು.
1933: ಮೌಂಟ್ ಎವರೆಸ್ಟ್ ಶಿಖರದ ಮೇಲಿನಿಂದ ಪ್ರಪ್ರಥಮ ಬಾರಿಗೆ ಹಾರುವ ಮೂಲಕ ಎರಡು ಬ್ರಿಟಿಷ್ ವಿಮಾನಗಳು ಇತಿಹಾಸ ನಿರ್ಮಿಸಿದವು.
1930: ಹೆಲ್ಮಟ್ ಕೊಹ್ಲ್ ಹುಟ್ಟಿದ ದಿನ. ಈತ ಏಕೀಕೃತ ಜರ್ಮನಿಯ ಮೊತ್ತ ಮೊದಲ ಚಾನ್ಸಲರ್.
1914: ಭಾರತದ ಮೊತ್ತ ಮೊದಲ ಫೀಲ್ಡ್ ಮಾರ್ಷಲ್ ಎಸ್. ಎಚ್. ಎಫ್. ಮಾಣಿಕ್ ಶಾ ಜನ್ಮದಿನ.
1904: ರಾಮನಾಥ್ ಗೋಯೆಂಕಾ (1904-1991) ಹುಟ್ಟಿದ ದಿನ. ಇವರು ಭಾರತದ `ಇಂಡಿಯನ್ ಎಕ್ಸ್ ಪ್ರೆಸ್' ಪತ್ರಿಕಾ ಸಮೂಹವನ್ನು ಕಟ್ಟಿದರು.
1898: ಹೆನ್ರಿ ರಾಬಿನ್ ಸನ್ ಲ್ಯೂಸ್ (1898-1967) ಹುಟ್ಟಿದ ದಿನ. ಅಮೆರಿಕಾದ ಮ್ಯಾಗಜಿನ್ ಪ್ರಕಾಶಕನಾದ ಈತ `ಟೈಮ್', `ಫಾರ್ಚೂನ್' `ಲೈಫ್' ಮ್ಯಾಗಜಿನ್ ಗಳ ಸಾಮ್ರಾಜ್ಯ ಕಟ್ಟಿದ. ಅಮೆರಿಕದ ಪತ್ರಿಕೋದ್ಯಮದಲ್ಲಿ ಈ ನಿಯತಕಾಲಿಗಳು ಪ್ರಮುಖ ಮೈಲುಗಲ್ಲುಗಳೆನಿಸಿದವು.
1888: ವೃತ್ತಿ ರಂಗಭೂಮಿಯ ಖ್ಯಾತ ಕಲಾವಿದ ಎಂ.ಎನ್. ಗಂಗಾಧರರಾಯ (3-4-1888ರಿಂದ 12-3-1961) ನರಸಿಂಹಯ್ಯ- ಸಾಕಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು.
1876: ಬಹುಭಾಷಾ ಕೋವಿದ ಸಾಹಿತಿ ಬೆನಗಲ್ ರಾಮರಾವ್ (1876-1943) ಅವರು ಈದಿನ ಮಂಗಳೂರಿನಲ್ಲಿ ಮಂಜುನಾಥಯ್ಯ ಅವರ ಪುತ್ರನಾಗಿ ಜನಿಸಿದರು. ಪತ್ರಕರ್ತ ಹಾಗೂ ಸಾಹಿತಿಯಾಗಿದ್ದ ಅವರನ್ನು ಕನ್ನಡದ ಜನತೆ 1925ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿತ್ತು. 1943ರ ಮೇ 8ರಂದು ಅವರು ನಿಧನರಾದರು.
1885: ಹ್ಯಾರಿ ಕಾನ್ ವೇ `ಬಡ್' ಫಿಶರ್ (1885-1954) ಹುಟ್ಟಿದ ದಿನ. ಅಮೆರಿಕಾದ ವ್ಯಂಗ್ಯಚಿತ್ರಕಾರನಾದ ಈತ `ಮಟ್ ಅಂಡ್ ಜೆಫ್' ಕಾಮಿಕ್ ಸ್ಟ್ರಿಪ್ ನ ಸೃಷ್ಟಿಕರ್ತ.
1680: ಭಾರತದಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ತನ್ನ 50ನೇ ವಯಸ್ಸಿನಲ್ಲಿ ರಾಯಘಡದಲ್ಲಿ ಮೃತನಾದ.
No comments:
Post a Comment