Monday, April 5, 2010

ಇಂದಿನ ಇತಿಹಾಸ History Today ಏಪ್ರಿಲ್ 05

ಇಂದಿನ ಇತಿಹಾಸ

ಏಪ್ರಿಲ್ 05

ಮುಂಬೈದಾಳಿಗೆ ತುತ್ತಾದ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಟಿಎಸ್) ರೈಲ್ವೆ ನಿಲ್ದಾಣವನ್ನು ಫ್ರಾನ್ಸ್ ತಜ್ಞರಿಂದ ಮರುವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿತು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿಎಸ್ ಅನ್ನು ವಿಶ್ವದರ್ಜೆಯ ನಿಲ್ದಾಣವಾಗಿ ರೂಪಿಸುವ ಪ್ರಯತ್ನ ನಡೆದಿದ್ದು ಈ ಸಂಬಂಧ ಫ್ರಾನ್ಸ್ ರೈಲ್ವೆ ಇಲಾಖೆಯ ಅಂಗ ಸಂಸ್ಥೆ ಎಆರ್‌ಇಪಿ ಟರ್ಮಿನಸ್‌ನ ವಾಸ್ತು ವಿನ್ಯಾಸದ ಅಧ್ಯಯನ ನಡೆಸುವುದು ಎಂದು ರೈಲ್ವೇ ಮೂಲಗಳು ತಿಳಿಸಿದವು.

2009: ಎಲ್‌ಟಿಟಿಇಯನ್ನು ಸಂಪೂರ್ಣವಾಗಿ ಕೊನೆಗಾಣಿಸುವಲ್ಲಿ ಶ್ರೀಲಂಕಾ ಸೇನೆ ಬಹುತೇಕ ಯಶಸ್ವಿಯಾಯಿತು. ತಮಿಳು ಉಗ್ರರ ಕೊನೆಯ ನೆಲೆಯಾದ ಪುದುಕುಡಿಯುರಿಯಿರಿಪ್ಪುವನ್ನು ಅದು ವಶಪಡಿಸಿಕೊಂಡಿತು. ದ್ವೀಪದ ಉತ್ತರ ಭಾಗದಲ್ಲಿ ತಮಿಳು ಬಂಡುಕೋರರು ಹಾಗೂ ಶ್ರೀಲಂಕಾ ಸೈನಿಕರ ನಡುವೆ ನಡೆದ ಘೋರ ಸಂಘರ್ಷದಲ್ಲಿ 420 ಜನ ಉಗ್ರರು ಮೃತರಾದರು. ಜನ ವಸತಿ ಇರುವ 20 ಚದರ ಕಿ.ಮೀ. ಸುರಕ್ಷಿತ ವಲಯದಲ್ಲಿ ಅಳಿದುಳಿದ ಉಗ್ರರು ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಯಿತು. ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್, ಎರಡನೇ ನಾಯಕ ಪೊಟ್ಟು ಅಮ್ಮಾನ್ ಹಾಗೂ ಇತರ ಕಮಾಂಡರ್‌ಗಳು ಕೂಡ ಇಲ್ಲಿಯೆ ಅಡಗಿಕೊಂಡಿದ್ದಾರೆ ಎಂದು ನಂಬಲಾಯಿತು. ಥೀಪನ್, ರುಬೆನ್, ನಾಗೇಶ್, ಗಡಫೈ (ಪ್ರಭಾಕರನ್ ಮಾಜಿ ಅಂಗರಕ್ಷಕ), ವಿದುಷಾ (ಎಲ್‌ಟಿಟಿಇ ಮಹಿಳಾ ವಿಭಾಗದ ಮುಖ್ಯಸ್ಥೆ), ದುರ್ಗಾ, ಕಮಲಿನಿ ಹಾಗೂ ಇನ್ನಿತರ ಕಮಾಂಡರ್‌ಗಳು ಸೈನಿಕರ ಗುಂಡಿಗೆ ಬಲಿಯಾದರು ಎಂದು ಸೇನೆ ತಿಳಿಸಿತು.

2009: ಮುಂಬೈದಾಳಿಗೆ ತುತ್ತಾದ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಟಿಎಸ್) ರೈಲ್ವೆ ನಿಲ್ದಾಣವನ್ನು ಫ್ರಾನ್ಸ್ ತಜ್ಞರಿಂದ ಮರುವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿತು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿಎಸ್ ಅನ್ನು ವಿಶ್ವದರ್ಜೆಯ ನಿಲ್ದಾಣವಾಗಿ ರೂಪಿಸುವ ಪ್ರಯತ್ನ ನಡೆದಿದ್ದು ಈ ಸಂಬಂಧ ಫ್ರಾನ್ಸ್ ರೈಲ್ವೆ ಇಲಾಖೆಯ ಅಂಗ ಸಂಸ್ಥೆ ಎಆರ್‌ಇಪಿ ಟರ್ಮಿನಸ್‌ನ ವಾಸ್ತು ವಿನ್ಯಾಸದ ಅಧ್ಯಯನ ನಡೆಸುವುದು ಎಂದು ರೈಲ್ವೇ ಮೂಲಗಳು ತಿಳಿಸಿದವು.

2009: ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರಪತಿ, ಪ್ರಧಾನಿಗಳ ಆರೋಗ್ಯ ಸ್ಥಿತಿ ಕುರಿತ ವಿವರಗಳನ್ನಾಗಲಿ ಅಥವಾ ಆಸ್ಪತ್ರೆ ಖರ್ಚು ವೆಚ್ಚಗಳನ್ನಾಗಲೀ ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತು. ಮಾಹಿತಿ ಹಕ್ಕು ಕಾಯ್ದೆಯಡಿ ಹಾಲಿ ಮತ್ತು ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳ ಮತ್ತು ರಾಷ್ಟ್ರಪತಿಗಳ ಆರೋಗ್ಯದ ವಿವರ ಮತ್ತು ಚಿಕಿತ್ಸೆಯ ಖರ್ಚುವೆಚ್ಚ ಕುರಿತು ವಿವರ ನೀಡಬೇಕೆಂದು ಅರ್ಜಿದಾರರೊಬ್ಬರು ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿದ್ದರು. ನಂತರ ಅರ್ಜಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇಲಾಖೆ ಪ್ರಧಾನಿಗಳಿಗೆ ಒದಗಿಸಲಾಗಿರುವ ಆರೋಗ್ಯ ಯೋಜನೆಯಡಿ ಈ ಮಾಹಿತಿಗಳು ವರ್ಗೀಕೃತ ದಾಖಲೆಗಳ ಪಟ್ಟಿಗೆ ಬರುತ್ತವೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿರುವಂತೆ ವರ್ಗೀಕೃತ ದಾಖಲೆಗಳನ್ನು ನೀಡಲು ಅವಕಾಶವಿಲ್ಲ ಎಂದು ತಿಳಿಸಿತು. ಹೀಗಿದ್ದರೂ ಇಲಾಖೆ ಅರ್ಜಿ ತಿರಸ್ಕಾರದ ವೇಳೆ ಮಾಹಿತಿ ಕಾಯ್ದೆಯ ಯಾವುದೇ ನಿಗದಿತ ಸೆಕ್ಷನ್ ಅನ್ನು ಉಲ್ಲೇಖಿಸಲಿಲ್ಲ. ಇದೇ ವೇಳೆ ರಾಷ್ಟ್ರಪತಿಗಳ ಕಾರ್ಯದರ್ಶಿ ಕೂಡ ದೇಶದ ಪ್ರಥಮ ಪ್ರಜೆಯ ಆರೋಗ್ಯ ವಿವರ ನೀಡಲು ನಿರಾಕರಿಸಿದರು.

2009: ದೇಶೀಯ ನಿರ್ಮಿತ ಎಂಜಿನ್ ಅಳವಡಿಸಿಕೊಂಡು ಪರೀಕ್ಷಾರ್ಥ ಹಾರಾಟ ಹಂತದಲ್ಲಿರುವ 'ನಿಶಾಂತ್' ಮಾನವ ರಹಿತ ವಿಚಕ್ಷಣಾ ವಿಮಾನಕ್ಕೆ ಬೆಂಗಳೂರಿನಲ್ಲಿ ನಡೆದ ಪ್ರಥಮ ಹಾರಾಟದಲ್ಲಿ ಯಶಸ್ಸು ದೊರಕಿತು. ಇದರೊಂದಿಗೆ ರಕ್ಷಣಾ ವ್ಯವಸ್ಥೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಯಿತು.. ಈ ವಿಮಾನಕ್ಕೆ ಈವರೆಗೂ ವಿದೇಶಿ ನಿರ್ಮಿತ ಎಂಜಿನ್ ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ (ಎನ್‌ಎಎಲ್), ಅಹಮದ್‌ನಗರದ ವೆಹಿಕಲ್ ರಿಸರ್ಚ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ವಿಆರ್‌ಡಿಇ) ಮತ್ತು ಬೆಂಗಳೂರಿನ ವೈಮಾಂತರಿಕ್ಷ ಅಭಿವೃದ್ಧಿ ಕೇಂದ್ರಗಳ (ಎಡಿಇ) ಸಹಯೋಗದಲ್ಲಿ ರೂಪಿಸಿದ ದೇಶೀಯ ಎಂಜಿನ್ ಬಳಸಲಾಯಿತು. ನೂತನ ಎಂಜಿನ್ ಅಳವಡಿಸಿದ ಬಳಿಕ 40 ನಿಮಿಷಗಳ ಕಾಲ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದ ವಿಮಾನ ನಿಗದಿತ ಸ್ಥಳದಲ್ಲಿ ಕೆಳಗಿಳಿಯಿತು.

2009: ರಾಜಧಾನಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಐತಿಹಾಸಿಕ 'ಕಾಫಿಹೌಸ್' ಸೇವೆಗೆ ಈದಿನ ಪೂರ್ಣವಿರಾಮ ಬಿದ್ದಿತು. ಇನ್ನು ಮುಂದೆ ಎಂ.ಜಿ.ರಸ್ತೆಯಲ್ಲಿ ಚಿಕೋರಿ ಇಲ್ಲದ ಫಿಲ್ಟರ್ ಕಾಫಿಯ ಘಮ ಘಮ ಪರಿಮಳ ನಿರೀಕ್ಷಿಸುವಂತಿಲ್ಲ. ಆತ್ಮೀಯರೊಂದಿಗೆ ಕಾಫಿ ಹೀರುತ್ತಾ ಹರಟೆ ಹೊಡೆಯುವುದೆಲ್ಲ ಕೇವಲ ನೆನಪಾಗಿ ಉಳಿಯಿತು. ಕಾಫಿಹೌಸ್ ಒಂದು ಹೋಟೆಲ್‌ನಂತಿರಲಿಲ್ಲ. ಬದಲಿಗೆ ಒಂದು ಭಾವನಾತ್ಮಕ ಸಂಬಂಧ ಬೆಸೆಯುವ ಆಕರ್ಷಕ ತಾಣ ಎನಿಸಿತ್ತು. ಇಲ್ಲಿನ ಕಾಫಿ ಸವಿಯದ ಹೊರತು ಎಂ.ಜಿ. ರಸ್ತೆಯ ಭೇಟಿ ಅಪೂರ್ಣವೆನಿಸುವಂತಾಗಿತ್ತು. ಈ ಎಲ್ಲ ಬಗೆಯ ಆಕರ್ಷಣೆ, ಸಂಬಂಧ, ಪ್ರತಿಷ್ಠೆ ಈದಿನ ಅಂತ್ಯ ಕಂಡಿತು. ಹತ್ತಾರು ವರ್ಷಗಳಿಂದ ಇಲ್ಲಿ ಕಾಫಿ ಸಿದ್ಧಪಡಿಸುತ್ತಿದ್ದ ಹನುಮಯ್ಯ ಅವರು ಹಾಕಿದ ಡಿಕಾಕ್ಷನ್, ಸಕ್ಕರೆ ಹಾಗೂ ಹಾಲಿನ ಮಿಶ್ರಣದ ರುಚಿ ಎಂದಿಗೂ ಕೆಟ್ಟದ್ದಲ್ಲ. 25 ವರ್ಷಗಳಿಂದ ಮಾಣಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೀಟರ್ ಜಾನ್ ಅವರು ಹಲವು ಗ್ರಾಹಕರಿಗೆ ಸ್ನೇಹಿತರಂತೆ ಇದ್ದರು.

2009: ಉದಯೋನ್ಮುಖ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರು ಮಿಯಾಮಿಯಲ್ಲಿ ಮುಕ್ತಾಯವಾದ ಮಿಯಾಮಿ ಡಬ್ಲೂಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಸದ್ಯ ಅರಿಜೋನಾದಲ್ಲಿ ನೆಲೆಸಿದ ಬೆಲಾರೂಸ್ ಮೂಲದ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರು 6-3, 6-1ರಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿದರು. ಎಪ್ಪತ್ತೆರಡು ನಿಮಿಷಗಳಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಬೆಲಾರೂಸ್ ಮೂಲದ ಆಟಗಾರ್ತಿ ಸೆರೆನಾ ಅವರಿಗೆ ಸತತ ಆರನೇ ಪ್ರಶಸ್ತಿ ಕಳೆದುಕೊಂಡರು. ಅದ್ಭುತ ಆಟದ ಪ್ರದರ್ಶನ ತೋರಿದ ಅಜರೆಂಕಾ ಅವರು ಮನಮೋಹಕ ಕ್ರಾಸ್ ಕೋರ್ಟ್ ಹೊಡೆತಗಳು ಹಾಗೂ ಚಾಣಾಕ್ಷ ಡ್ರಾಪ್‌ಗಳನ್ನು ಹಾಕುವ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

2008: ಕೆಲವು ಮೂಲ ಭಂಗಿಗಳು ಮತ್ತು ಪ್ರಾಣಾಯಾಮಾದಿಂದ ದೇಹದ ಮೇಲಿನ ನಿಯಂತ್ರಣ ಹಾಗೂ ಸ್ಥಿರತೆಯನ್ನು ವೃದ್ಧಿಸಿ ಕೊಳ್ಳಲು ಸಾಧ್ಯ ಎಂದು ಫಿಲಿಡೆಲ್ಫಿಯಾದ ಟೆಂಪಲ್ ಮೆಡಿಕಲ್ ಸ್ಕೂಲಿನ ಸಂಶೋಧನೆಯಿಂದ ದೃಢಪಟ್ಟಿತು. ಅಲ್ಪಮಟ್ಟದ ಯೋಗ ಮಾಡಿದರೂ ಸಾಕು. ವಯಸ್ಸಾದ ಮಹಿಳೆಯರು ಆಯ ತಪ್ಪಿ ಜಾರಿ ಬೀಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಂಶೋಧನೆ ಹೇಳಿತು. 65ಕ್ಕೂ ಹೆಚ್ಚು ವಯಸ್ಸಾದ ಮಹಿಳೆಯರ ಮೇಲೆ 2 ತಿಂಗಳ ಕಾಲ ಈ ಸಂಶೋಧನೆ ನಡೆಸಲಾಗಿತ್ತು. ಇವರೆಲ್ಲಾ ಯೋಗ ತರಬೇತಿ ಪಡೆದ ನಂತರ ತಮ್ಮ ದೈಹಿಕ ನಿಯಂತ್ರಣದ ಮೇಲೆ ಗಮನಾರ್ಹ ಹತೋಟಿ ಸಾಧಿಸಿದ್ದು ಕಂಡು ಬಂದಿತು ಎಂದು ಲಂಡನ್ನಿನ ಅಯ್ಯಂಗಾರ್ ಯೋಗ ತರಬೇತಿ ಮುಖ್ಯಸ್ಥ ಡಾ. ಜಿನ್ಸುಪ್ ಸಾಂಗ್ ತಿಳಿಸಿದರು. ನಿವೃತ್ತ ಮುದುಕ-ಮುದುಕಿಯರು ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಆಯತಪ್ಪಿ ಬೀಳುವ ಸಂಭವಗಳು ಹೆಚ್ಚಿರುತ್ತವೆ. ಇಂತಹವರು ನಿರಂತರ ಪ್ರಾಣಾಯಾಮ ಮತ್ತು ಕೆಲವು ನಾಜೂಕಾದ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಉತ್ತಮ ದೃಢತೆ ಸಾಧಿಸಬಹುದು ಎಂದು ಅಧ್ಯಯನ ಹೇಳಿತು.

2008: ಹೊಗೇನಕಲ್ ಯೋಜನೆಯಿಂದ ತಲೆದೋರಿದ ಉದ್ವಿಗ್ನ ಸ್ಥಿತಿಯನ್ನು ಶಾಂತಗೊಳಿಸುವ ಯತ್ನವಾಗಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕಷ್ಣ ಅವರ ವಿನಂತಿಯನ್ನು ಮನ್ನಿಸಿ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಈ ಯೋಜನೆಯನ್ನು ಸ್ಥಗಿತಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು. ಇದೇ ವೇಳೆ ಡಿಎಂಕೆ ಸರ್ಕಾರ ಅಥವಾ ಕೇಂದ್ರದ ಯುಪಿಎ ಸರ್ಕಾರಗಳು ಆಘಾತಕ್ಕೊಳಗಾದರೂ ಈ ವಿಷಯವನ್ನು ಸುಪ್ರೀಂ ಕೋರ್ಟಿಗೆ ಕೊಂಡೊಯ್ಯುವುದಾಗಿ ಎಸ್. ಎಂ. ಕೃಷ್ಣ ಘೋಷಿಸಿದರು.

2008: ಕರ್ನಾಟಕ ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ವಿವಾದಿತ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಬಂದ್ ಕರೆಯನ್ನು ಕನ್ನಡಪರ ಸಂಘಟನೆಗಳು ಹಿಂದಕ್ಕೆ ಪಡೆದವು.

2008: ಮಧುರೆ ಬಳಿಯ ಒಂದು ಕುಟುಂಬದ ಸದಸ್ಯ ವೀರುಮಂಡಿ ಎಂಬ ವ್ಯಕ್ತಿಯ ಡಿ ಎನ್ ಎ ಪರೀಕ್ಷೆಯ ಫಲಿತಾಂಶ ಆದಿಮಾನವರ ವಂಶವಾಹಿಯನ್ನು ಹೋಲುತ್ತದೆ ಎಂಬ ಸಂಗತಿ ಪ್ರಕಟವಾಗುವುದರೊಂದಿಗೆ ಆದಿ ಮಾನವ ಸ್ಥಳದಿಂದ ಸ್ಥಳಕ್ಕೆ ವಾಸ ಬದಲಿಸುತ್ತಾ ಆಫ್ರಿಕಾದಿಂದ ತಮಿಳುನಾಡಿಗೂ ಬಂದಿದ್ದಿರಬೇಕು ಎಂಬುದು ಬೆಳಕಿಗೆ ಬಂತು. ಮಧುರೆ ವಿಶ್ವವಿದ್ಯಾಲಯದ ವಂಶವಾಹಿ ವಿಜ್ಞಾನ ವಿಭಾಗದ ತಜ್ಞರು ನಡೆಸಿದ ಸಂಶೋಧನಾತ್ಮಕ ಅಧ್ಯಯನಕ್ಕೆ ಪೂರಕವಾಗಿ ವೀರುಮಂಡಿಯ ಡಿ ಎನ್ ಎ ತಪಾಸಣೆ ನಡೆದಾಗ ಈ ಅಂಶ ಬೆಳಕಿಗೆ ಬಂದಿತು. ಮಾರ್ಕರ್- ಎಂ130: ಇದು, ಆದಿಮಾನವರ ವಂಶವಾಹಿ! ಮಧುರೆ ಬಳಿಯ ಜೋಧಿಮಣಿಕ್ಕನ್ ಎಂಬಲ್ಲಿ ವಾಸವಿರುವ `ಪೆರಿಮಲಿಕಲ್ಲಾರ್' ಸಮುದಾಯಕ್ಕೆ ಸೇರಿದ `ತೇವಾರ್' ಕುಟುಂಬದ ಸದಸ್ಯ ವೀರುಮಂಡಿ ಅವರಲ್ಲಿ ಪತ್ತೆಯಾಗಿರುವುದೂ ಇದೇ ವಂಶವಾಹಿ!! ಕುಟುಂಬದಲ್ಲಿ 13 ಮಂದಿ ಇದ್ದು, ರಕ್ತ ಸಂಬಂಧಿಗಳಾದ ಕಾರಣ ಅವರ ಡಿಎನ್ಎ ತಪಾಸಣೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

2008: ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ವೈದ್ಯಕೀಯ ವೆಚ್ಚವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪ್ರಸಂಗ ನಡೆಯಿತು. ಅಧಿಕಾರಿ ಅರ್. ವಿವೇಕಾನಂದ ಸ್ವಾಮಿ ಅವರಿಗೆ 2000ನೇ ಇಸವಿಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗಾಗಿ 1,50,600 ರೂಪಾಯಿ ವೆಚ್ಚವಾಗಿತ್ತು. ಆದರೆ ಅವರು ಖಾಸಗಿ ಆಸ್ಪತ್ರೆಯಲ್ಲಿ (ವೊಕಾರ್ಟ್, ಬೆಂಗಳೂರು) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ನೆಲೆಯಲ್ಲಿ ರಾಜ್ಯ ಸರ್ಕಾರ ಕೇವಲ 39,207 ರೂಪಾಯಿ ಮಾತ್ರ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿಗಳಾದ ಎಸ್. ಬಿ. ಸಿನ್ಹಾ ಮತ್ತು ವಿ. ಎಸ್. ಸಿರ್ಪೂರ್ಕರ್ ಅವರು ಈ ಆದೇಶ ನೀಡಿದರು. ಸರ್ಕಾರಿ ನೌಕರರಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧದ ನಿಯಮದಂತೆ `ಅಧಿಕೃತ ಆಸ್ಪತ್ರೆ'ಗಳು ಮತ್ತು `ವೈದ್ಯಕೀಯ ಸಂಸ್ಥೆ'ಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಅದರ ವೆಚ್ಚವನ್ನು ಸರ್ಕಾರ ನೀಡಬೇಕು, ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದಾದರೆ ಅದನ್ನು ಉಚಿತವಾಗಿ ನೀಡಬೇಕು ಎಂದು ಇದೆ. ಹೀಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ವೆಚ್ಚದ ಹಣ ನೀಡಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿತು.

2008: ಮುಂಬೈಯ ಸಿಮ್ರಾನ್ ಕೌರ್ ಅವರು 2008ನೆ ಸಾಲಿನ ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ ಭಾರತದ ಭುವನ ಸುಂದರಿಯಾಗಿ ಆಯ್ಕೆಯಾದರು. ಮುಂಬೈಯಲ್ಲಿ ನಡೆದ ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ (ಎಡದಿಂದ) ಹರ್ಷಿತಾ ಸಕ್ಸೇನಾ, ಪಾರ್ವತಿ ಮತ್ತು ಸಿಮ್ರಾನ್ ಕೌರ್ ಹೆಮ್ಮೆಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

2008: ಏಡ್ಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ ಎಂಬುದನ್ನು ಅರಿತಿದ್ದೂ ಈ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸದೆ ಬೇರೆಯವರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ನ್ಯಾಯಾಲಯವು ಕೆನಡಾದ ಕಾರ್ಲ್ ಲಿಯೋನ್ ಎಂಬ ವ್ಯಕ್ತಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿತು. ಈತನಿಗೆ ಎಚ್ ಐ ವಿ ಸೋಂಕು ತಗುಲಿದ್ದು 1997ರಲ್ಲಿಯೇ ಪತ್ತೆಯಾಗಿತ್ತು. ವಿಷಯ ಗೊತ್ತಿದ್ದರೂ 32 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಅವರಲ್ಲಿ 15 ಮಂದಿಗೆ ಏಡ್ಸ್ ಸೋಂಕು ತಗುಲಿದ್ದು ಪತ್ತೆಯಾಯಿತು. ಲೈಂಗಿಕ ಕ್ರಿಯೆ ನಡೆಸುವ ಮುನ್ನ ಈತ ಅವರಾರಿಗೂ ತನ್ನ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ. ಇದೇ ಆರೋಪದ ಹಿನ್ನೆಲೆಯಲ್ಲಿ ಇವನನ್ನು 2004ರ ಜೂನ್ 6 ರಂದು ಬಂಧಿಸಲಾಗಿತ್ತು.

2008: ಭಾರತೀಯ ನೆಲದಲ್ಲಿ ನಿರ್ಮಾಣಗೊಂಡ ಧಾರಾವಾಹಿಗಳು ಮುಸ್ಲಿಮೇತರ ಎಂಬ ಕಾರಣಕ್ಕೆ ಆಫ್ಘಾನಿಸ್ಥಾನ ಸರ್ಕಾರ ಅವುಗಳ ಪ್ರಸಾರವನ್ನು ನಿಲ್ಲಿಸಲು ಕ್ರಮ ಕೈಗೊಂಡವು. ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ಬಗ್ಗೆ ಸಂಸದರ ಸಭೆಯಲ್ಲಿಯೂ ಚರ್ಚಿಸಲಾಗಿದೆ ಎಂದು ಆಫ್ಘಾನಿಸ್ಥಾನದ ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯದ ವಕ್ತಾರರು ತಿಳಿಸಿದರು. ಇಸ್ಲಾಮಾಬಾದಿನ ಖಾಸಗಿ ಟಿವಿ ವಾಹಿನಿಗಳು ಭಾರತದ 6 ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಇವು ಮುಸ್ಲಿಮರ ಮನಸ್ಸಿಗೆ ಘಾಸಿ ಮಾಡುತ್ತಿವೆ ಎಂದು ಅವರು ತಿಳಿಸಿದರು.

2008: ಪ್ರಸಕ್ತ ಸಾಲಿನ ಎಸ್. ವಿ. ನಾರಾಯಣ ಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪಿಟೀಲು ವಿದ್ವಾಂಸ ಟಿ.ಎನ್. ಕೃಷ್ಣನ್ ಅವರು ಆಯ್ಕೆಯಾದರು. ಬೆಂಗಳೂರು ನಗರದ ಚಾಮರಾಜಪೇಟೆಯ ರಾಮಸೇವಾ ಮಂಡಲಿಯ ಸಂಸ್ಥಾಪಕ ಎಸ್.ವಿ. ನಾರಾಯಣ ಸ್ವಾಮಿರಾವ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಎಂಟು ವರ್ಷಗಳಿಂದ ನೀಡಲಾಗುತ್ತಿತ್ತು.

2007: ತಮ್ಮ ವಿಶಿಷ್ಟ ಕಥೆ, ಕಾದಂಬರಿ ಹಾಗೂ ವೈಜ್ಞಾನಿಕ ಬರಹಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಚಲನೆ ಮೂಡಿಸಿದ್ದ, ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಬಹುಮುಖ ಪ್ರತಿಭೆ, ಬಹುಮುಖ ವ್ಯಕ್ತಿತ್ವದ ಸಾಹಿತಿ, ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (69) ಅವರು ಈದಿನ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆ ನಿಂಬೆಮೂಲೆಯಲ್ಲಿನ ತಮ್ಮ ಸ್ವಗೃಹ `ನಿರುತ್ತರ'ದಲ್ಲಿ ಹೃದಯಾಘಾತದಿಂದ ನಿಧನರಾದರು. 1938ರ ಸೆಪ್ಟೆಂಬರ್ 28ರಂದು ಹಿರಿಯ ಸಾಹಿತಿ ಕುವೆಂಪು ಅವರ ಪುತ್ರನಾಗಿ ಜನಿಸಿದ ತೇಜಸ್ವಿ ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದವರು. ಕರ್ವಾಲೋ, ಚಿದಂಬರ ರಹಸ್ಯ, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್ ಅವರು ಪ್ರಮುಖ ಕೃತಿಗಳಲ್ಲಿ ಕೆಲವು. ಅವರ ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ ಕೃತಿಗಳು ಚಲನಚಿತ್ರಗಳಾಗಿದ್ದವು. ಪತ್ನಿ ರಾಜೇಶ್ವರಿ ಜೊತೆ 1978ರಿಂದ ಅವರು `ನಿರುತ್ತರ'ದಲ್ಲಿ ವಾಸವಾಗಿದ್ದರು.

2007: ವಿಶೇಷ ಆರ್ಥಿಕ ವಲಯ (ಎಸ್ ಇ ಜೆಡ್) ರಚನೆಗೆ ರಾಜ್ಯ ಸರ್ಕಾರಗಳು ಭೂಸ್ವಾಧೀನ ಪಡಿಸಿಕೊಳ್ಳುವಂತಿಲ್ಲ ಹಾಗೂ ಈ ವಲಯವು ಐದು ಸಾವಿರ ಹೆಕ್ಟೇರ್ ಪ್ರದೇಶ ಮೀರುವಂತಿಲ್ಲ ಎಂದು ಕೇಂದ್ರ ಸರ್ಕಾರವು ನಿರ್ಬಂಧ ಹೇರಿತು. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಉನ್ನತಾಧಿಕಾರ ಸಚಿವರ ತಂಡವು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

2007: ಒಂದು ಕಡತ ವಿಲೇವಾರಿ ಮಾಡಲು ಪ್ರತಿದಿನ ಸಾಮಾನ್ಯ ನಾಗರಿಕರಿಂದ ಲಂಚ ಕೇಳುವ ಸರ್ಕಾರದ ಭ್ರಷ್ಟ ಸಿಬ್ಬಂದಿಯನ್ನು `ಶೂನ್ಯ ನೋಟು' ನೀಡಿ ಬೆಚ್ಚಿ ಬೀಳಿಸಲು ತಮಿಳುನಾಡಿನ ಚೆನ್ನೈಯ ನಾಗರಿಕರ ಹಕ್ಕುಗಳಿಗಾಗಿ ಹೋರಾಡುವ `ಫಿಪ್ತ ಪಿಲ್ಲರ್' ಎಂಬ ಸಂಘಟನೆ ಸಲಹೆ ಮಾಡಿತು. `ಅಸಹಕಾರ ಚಳವಳಿ' ಕಾದಂಬರಿ ಬಿಡುಗಡೆ ಮಾಡಿದ ಈ ಸಂಘಟನೆ ಗಾಂಧಿ ಚಿತ್ರವುಳ್ಳ 50 ರೂಪಾಯಿ ನೋಟಿನ ಮಾದರಿಯ `ಶೂನ್ಯ ನೋಟು' ಹೊರತಂದಿದ್ದು, ಅದರ ಒಂದು ಬದಿಯಲ್ಲಿ ಚಳವಳಿಯ ಸೂಚನೆ, ಸಲಹೆಗಳನ್ನು ಹಾಗೂ `ಲಂಚ ನೀಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ' ಎಂಬ ಬರಹವನ್ನು ಇನ್ನೊಂದು ಬದಿಯಲ್ಲೂ ಬರೆದು ಅಲ್ಲಿ ಆರ್ ಬಿ ಐ ಗವರ್ನರ್ ಸಹಿ ಇರುವಂತೆ ಮುದ್ರಿಸಿತು.

2007: ಉತ್ತರ ಪ್ರದೇಶದ ಮುಸ್ಲಿಮರನ್ನು ಇನ್ನು ಮುಂದೆ ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತಿಲ್ಲ. ಉತ್ತರ ಪ್ರದೇಶದ ಜನಸಂಖ್ಯೆಯ ಶೇಕಡಾ 18.5ರಷ್ಟು ಇರುವ ಕಾರಣ ಅವರು ಅಲ್ಪಸಂಖ್ಯಾತರಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಗಾಜಿಪುರದ ಅಂಜುಮನ್ ಮದ್ರಸಾ ನೂರುಲ್ ಇಸ್ಲಾಮ್ ದೆಹ್ರಾ ಕಲನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಎನ್. ಶ್ರೀವಾಸ್ತವ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿತು.

2007: ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿರುವ ವಿವಾದಾತ್ಮಕ ಸಿ.ಡಿ.ಯು ಬಿಜೆಪಿಗೆ `ಭೂತ'ದಂತೆ ಕಾಡತೊಡಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಲಾಲ್ ಜಿ ಟಂಡನ್ ಮತ್ತು ಇತರರ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯ 125ನೇ ಕಲಂ ಅಡಿ ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಪ್ರಥಮ ಮಾಹಿತಿ ವರದಿ ಸಲ್ಲಿಸಲಾಯಿತು. ಜೊತೆಗೆ 1968ರ ಚುನಾವಣಾ ಲಾಂಛನಗಳು (ಮೀಸಲು ಮತ್ತು ಮಂಜೂರಾತಿ) ಕಾಯ್ದೆಯ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚುನಾವಣಾ ಆಯೋಗವು ಬಿಜೆಪಿಗೆ ನೋಟಿಸ್ ಕೂಡಾ ಜಾರಿ ಮಾಡಿತು. ಮುಸ್ಲಿಮರ ವಿರುದ್ಧ ಮಾಡಿರುವ ಕಟು ಟೀಕೆ, ಬಾಬರಿ ಮಸೀದಿ ಮತ್ತು ಗೋಧ್ರಾ ರೈಲು ದುರಂತದ ಪ್ರಸ್ತಾಪ ಮಾಡಿದ್ದಕ್ಕಾಗಿ ಪಕ್ಷಕ್ಕೆ ನೀಡಲಾಗಿರುವ ಮಾನ್ಯತೆ ರದ್ದು ಪಡಿಸಬೇಕು ಎಂಬುದಾಗಿ ಕೇಳಿಬಂದ ತೀವ್ರ ಆಗ್ರಹದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿತು.

2006: ಲಾಭದ ಹುದ್ದೆ ವಿವಾದದ ಪರಿಣಾಮವಾಗಿ ರಾಷ್ಟ್ರೀಯ ಸಲಹಾ ಸಮಿತಿ ಹಾಗೂ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಷ್ಠಿತ ಜಲಿಯನ್ ವಾಲಾಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು.

2006: ಮಾನವನಿಗೆ ಬೇಕಾದ ಕೃತಕ ಅಂಗಾಂಶಗಳನ್ನು ಆತನ ಜೀವಕೋಶಗಳಿಂದಲೇ ಸೃಷ್ಟಿಸಿ ಜೋಡಿಸುವಲ್ಲಿಅಮೆರಿಕದ ಬೋಸ್ಟನ್ನಿನ ಮಕ್ಕಳ ಆಸ್ಪತ್ರೆಯ ವಿಜ್ಞಾನಿಗಳು ಯಶಸ್ವಿಯಾದರು. ರೋಗಕ್ಕೆ ತುತ್ತಾದ ಮೂತ್ರಕೋಶದ ಚೀಲವನ್ನು ತೆಗೆದುಹಾಕಿ ಅಲ್ಲಿ ರೋಗಿಯ ಅಂಗಾಂಶದಿಂದಲೇ ಸೃಷ್ಟಿಸಿದ ಮೂತ್ರಕೋಶ ಚೀಲವನ್ನು ಅಳವಡಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಈ ಪ್ರಯೋಗವು ಭವಿಷ್ಯದಲ್ಲಿ ರೋಗಿಗೆ ಕಿಡ್ನಿ, ರಕ್ತನಾಳ, ಹೃದಯ ಮುಂತಾದ ಅಂಗಾಂಶಗಳನ್ನು ಸೃಷ್ಟಿಸಿ ಅಳವಡಿಸಲು ಅನುಕೂಲವಾಗುವುದು. ಇದರಿಂದಾಗಿ ಬೇರೆಯವರಿಂದ ಪಡೆದ ಅಂಗಾಂಗಗಳನ್ನು ಅಳವಡಿಸುವಾಗ ಅದು ರೋಗಿಯ ಹೊಂದಾಣಿಕೆಯಾಗದೇ ಉಂಟಾಗುತ್ತಿದ್ದ ಸಮಸ್ಯೆ ನಿವಾರಣೆ ಆಗುವುದು.

2006: ವಿರೋಧ ಪಕ್ಷಗಳ ಸಭಾತ್ಯಾಗ, ಪ್ರತಿಭಟನೆಯ ಮಧ್ಯೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಶೇಕಡಾ 50 ಮೀಸಲಾತಿ ಕಲ್ಪಿಸುವ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತು.

1975: ಚೀನೀ ಧುರೀಣ ಚಿಯಾಂಗ್ ಕೈ-ಷೇಕ್ 87ನೇ ವಯಸ್ಸಿನಲ್ಲಿ ಮೃತರಾದರು.

1958: ಕಲಾವಿದ ಶಿವಾನಂದಯ್ಯ ಸಿ. ಜನನ.

1957: ಭಾರತದ ಪ್ರಪ್ರಥಮ ಕಮ್ಯೂನಿಸ್ಟ್ ಪ್ರಾಂತೀಯ ಸರ್ಕಾರವು ಕೇರಳದ ತಿರುವನಂತಪುರದಲ್ಲಿ ಈದಿನ ಮಧ್ಯಾಹ್ನ 12.30ಕ್ಕೆ ಅಧಿಕಾರಕ್ಕೆ ಏರಿತು. ಮುಖ್ಯಮಂತ್ರಿ ಇ.ಎಂ. ಶಂಕರನ್ ನಂಬೂದಿರಿಪಾಡ್ ಮತ್ತು ನೂತನ ಸಂಪುಟದ ಇತರ ಸಚಿವರು ರಾಜ್ಯಪಾಲ ಡಾ. ಬಿ. ರಾಮಕೃಷ್ಣ ರಾಯರ ಸಮ್ಮುಖದಲ್ಲಿ ಅಧಿಕಾರ ಪಾಲನೆಯ ಪ್ರಮಾಣ ವಚನ ಸ್ವೀಕರಿಸಿದರು.

1949: ಬಾಲಕರ ಸ್ಕೌಟ್ಸ್ ಮತ್ತು ಬಾಲಕಿಯರ ಗೈಡ್ಸ್ ಗಳನ್ನು ಒಂದುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಲಾಯಿತು.

1940: ಕಲಾವಿದ ಹನುಮಯ್ಯ ದೊ.ತಿ. ಜನನ.

1938: ಕಲಾವಿದ ತುಕಾರಾಂ ಸಾ ವಿಠಲ್ ಸಾ ಕಬಾಡಿ ಜನನ.

1919: ಸಿಂಧಿಯಾ ಸ್ಟೀಮ್ ನೆವಿಗೇಷನ್ ಕಂಪೆನಿಯ `ಲಿಬರ್ಟಿ' ನೌಕೆ ತನ್ನ ಚೊಚ್ಚಲ ಯಾನ ಆರಂಭಿಸುವುದರೊಂದಿಗೆ ಭಾರತದ ಆಧುನಿಕ ನೌಕಾಯಾನ ಆರಂಭಗೊಂಡಿತು. 1964ರಿಂದ ಈ ದಿನವನ್ನು `ರಾಷ್ಟ್ರೀಯ ನೌಕಾಯಾನ ದಿನ'ವಾಗಿ ಆಚರಿಸಲಾಗುತ್ತಿದೆ.

1917: ರಂಗಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು `ರೇಡಿಯೋಕಾರ' ಎಂದೇ ಖ್ಯಾತರಾದ ಜಿ.ವಿ. ಹಿರೇಮಠ ಅವರು ಗದಗ ತಾಲ್ಲೂಕಿನ ಡಂಬಳದಲ್ಲಿ ಜನಿಸಿದರು.

1908: ಬಾಬು ಜಗಜೀವನರಾಮ್ (1908-1986) ಹುಟ್ಟಿದ ದಿನ. ಇವರು ಉಪಪ್ರಧಾನಿ ಸ್ಥಾನವೂ ಸೇರಿದಂತೆ ಭಾರತದ ರಾಜಕೀಯದಲ್ಲಿ ದೀರ್ಘ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಪರಿಶಿಷ್ಟ ನಾಯಕ.

1827: ಬ್ರಿಟಿಷ್ ಸರ್ಜನ್ ಹಾಗೂ ವೈದ್ಯಕೀಯ ವಿಜ್ಞಾನಿ ಸರ್ ಜೋಸೆಫ್ ಲಿಸ್ಟರ್ (1827-1912) ಜನ್ಮದಿನ. ಈತ ನಂಜು ನಿರೋಧಕ (ಆಂಟಿಸೆಪ್ಟಿಕ್) ಔಷಧಿಯನ್ನು ಕಂಡು ಹಿಡಿದ.

1649: ಎಲಿಹು ಯಾಲೆ (1649-1721) ಹುಟ್ಟಿದ ದಿನ. ಇಂಗ್ಲಿಷ್ ವರ್ತಕ ಹಾಗೂ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಯಾಗಿದ್ದ ಈತ ಮದ್ರಾಸಿನಲ್ಲಿ ಫೋರ್ಟ್ ಸೇಂಟ್ ಜಾರ್ಜಿನ (ಈಗಿನ ಚೆನ್ನೈ) ಗವರ್ನರ್ ಆಗಿದ್ದ. ಈತನ ನೆರವಿನಿಂದ ಯಾಲೆ ಕಾಲೇಜು ನಿರ್ಮಾಣಗೊಂಡಿತು. ಮುಂದೆ ಈ ಕಾಲೇಜು ಯಾಲೆ ವಿಶ್ವವಿದ್ಯಾಲಯವಾಯಿತು.

No comments:

Advertisement