ಇಂದಿನ ಇತಿಹಾಸ
ಮೇ 25
ಅಪಾ ಶೆರ್ಪಾ (49) ಅವರು ಹತ್ತೊಂಬತ್ತು ಬಾರಿ ಮೌಂಟ್ ಎವೆರೆಸ್ಟ್‌ನ್ನು ಏರಿ ದಾಖಲೆ ನಿರ್ಮಿಸಿ ಸಂಭ್ರಮಿಸಿದರು.
2009: ಪಶ್ಚಿಮ ಬಂಗಾಳದ ಐದು ಜಿಲ್ಲೆಗಳು ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸಿದ 'ಐಲಾ' ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿತು. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾದರು. ಕೋಲ್ಕತ್ತ ನಗರಕ್ಕೆ ಅಪ್ಪಳಿಸಿದ ಚಂಡಮಾರುತ ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.. ಬಸ್, ರೈಲು ಹಾಗೂ ವಿಮಾನ ಸಂಚಾರದಲ್ಲಿ ಏರುಪೇರಾಯಿತು.
2009: ಸತ್ಯಂ ಕಂಪ್ಯೂಟರ್ ಕಂಪೆನಿಯ ಹೊರ ಗುತ್ತಿಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಉನ್ನತ ಮಟ್ಟದ ಅಧಿಕಾರಿಗಳು ರಾಜೀನಾಮೆ ನೀಡಿದರು. ಈ ಮೂಲಕ ಕಂಪೆನಿಯ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡುವ ಪ್ರಕ್ರಿಯೆ ಆರಂಭವಾಯಿತೇ ಎಂಬ ಶಂಕೆ ಹುಟ್ಟುಕೊಂಡಿತು. ಆದರೆ ಕಂಪೆನಿ ಈ ಶಂಕೆಯನ್ನು ತಳ್ಳಿಹಾಕಿತು. 'ಈ ಅಧಿಕಾರಿಗಳು ರಾಜೀನಾಮೆ ಪತ್ರವನ್ನು ಒಂದೆರಡು ತಿಂಗಳು ಹಿಂದೆಯೇ ನೀಡಿದ್ದರು' ಎಂದು ಕಂಪೆನಿ ಹೇಳಿತು. ಬಿಪಿಒ ವಿಭಾಗದ ಗ್ಲೋಬಲ್ ಮುಖ್ಯಸ್ಥ (ಎಚ್‌ಆರ್) ನರೇಶ್ ಜಂಗಿನಿ, ಕಾರ್ಪೋರೇಟ್ ಸೇವಾ ವಿಭಾಗದ ವಿ. ಸತ್ಯಾನಂದಮ್ ಹಾಗೂ ಏಷ್ಯಾ-ಪೆಸಿಫಿಕ್ ಮಾರ್ಕೆಟಿಂಗ್ ವಿಭಾಗದ ಕುಲವಿಂದರ್ ಸಿಂಗ್ ರಾಜೀನಾಮೆ ನೀಡಿದವರು.
2009: ಕಮ್ಯುನಿಸ್ಟ್ ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವರಲ್ಲಿ ನಂಬಿಕೆ ಇಲ್ಲದಿದ್ದರೂ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ನೇಪಾಳಿ ವೇಷಭೂಷಣದಲ್ಲಿ ಗಮನ ಸೆಳೆದರು. 56 ವರ್ಷದ ನೇಪಾಳ್ ಮೊದಲು ಬ್ಯಾಂಕ್ ಒಂದರಲ್ಲಿ ಕ್ಯಾಷಿಯರ್ ಆಗಿದ್ದರು. ಇದೀಗ ಗಣರಾಜ್ಯ ನೇಪಾಳದ ಎರಡನೇ ಪ್ರಧಾನಿಯಾದರು.
2009: ಎರಡು ವರ್ಷಗಳಿಂದ ಛತ್ತೀಸ್‌ಗಢ ಕಾರಾಗೃಹದಲ್ಲಿದ್ದ ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ವಿನಾಯಕ ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತು. ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ದೀಪಕ್ ವರ್ಮಾ ಅವರನ್ನು ಒಳಗೊಂಡ ನ್ಯಾಯಪೀಠವು, ಸ್ಥಳೀಯ ವಿಚಾರಣಾ ನ್ಯಾಯಾಲಯದ ಇಚ್ಛೆಯನ್ವಯ ವೈಯಕ್ತಿಕ ಬಾಂಡ್ ಪಡೆದು ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಸೂಚಿಸಿತು.
2009: ಜಾಗತಿಕ ಸಮುದಾಯದ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ಯಶಸ್ವಿಯಾಗಿ 2ನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಬಾರಿಯ ಸ್ಫೋಟ ಮೊದಲಿಗಿಂತಲೂ ಪ್ರಬಲವಾಗಿತ್ತು. ಸ್ವರಕ್ಷಣಾ ಯೋಜನೆಯ ಭಾಗವಾಗಿ ಭೂಗತವಾಗಿ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿದೆ ಎಂದು ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿತು.
2008: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಭಾರತೀಯ ಜನತಾ ಪಕ್ಷದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು. ಆದರೆ ಸರ್ಕಾರ ರಚಿಸಲು ಮೂರು ಸ್ಥಾನಗಳ ಕೊರತೆ ಬಿಜೆಪಿಯನ್ನು ಕಾಡಿತು. ಮೂರು ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಪ್ರಕಟಗೊಂಡು, ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 110, ಕಾಂಗ್ರೆಸ್ 80 ಮತ್ತು ಜನತಾದಳ (ಎಸ್) 28 ಸ್ಥಾನಗಳಲ್ಲಿ ಜಯಗಳಿಸಿದವು. ಕಾಂಗ್ರೆಸ್ಸಿನಿಂದ ಬಂಡೆದ್ದು ಸ್ಪರ್ಧಿಸಿದ್ದ ನಾಲ್ವರು ಹಾಗೂ ಬಿಜೆಪಿ ಮತ್ತು ಜೆಡಿಎಸ್ನ ತಲಾ ಒಬ್ಬೊಬ್ಬರು ಬಂಡಾಯ ಅಭ್ಯರ್ಥಿಗಳು ಗೆದ್ದರು. ಒಟ್ಟಾರೆ ಮೂವರು ಮಹಿಳೆಯರಿಗೆ ಮಾತ್ರ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಯಿತು. ಅತಂತ್ರ ವಿಧಾನಸಭೆಯಿಂದಾಗಿ ಕಳೆದ ನಾಲ್ಕು ವರ್ಷಗಳ ರಾಜಕೀಯ ಪ್ರಹಸನಗಳಿಂದ ರೋಸಿಹೋದಂತೆ ಕಂಡು ಬಂದ ರಾಜ್ಯದ ಮತದಾರರು ಹೆಚ್ಚು ಕಡಿಮೆ ಒಂದು ಪಕ್ಷಕ್ಕೆ ಬಹುಮತ ನೀಡುವ ಇಂಗಿತ ವ್ಯಕ್ತಪಡಿಸಿದರು.
2008: ಚಿತ್ತಾಪುರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಸತತ 9ನೇ ಸಲ ವಿಧಾನಸಭೆ ಪ್ರವೇಶಿಸಿ ವಿಶ್ವದಾಖಲೆ ಮಾಡಿದರು. ಜೇವರ್ಗಿಯಲ್ಲಿ ಸೋಲುವ ಮೂಲಕ ಧರ್ಮಸಿಂಗ್ ಅವರು ಸತತ 9ನೇ ಬಾರಿ ಆಯ್ಕೆಯಾಗಿ ವಿಶ್ವ ದಾಖಲೆ ಮಾಡುವ ಅವಕಾಶದಿಂದ ವಂಚಿತರಾದರು.
2008: ಚೀನಾದಲ್ಲಿ ಭೂಕಂಪದ ಅವಶೇಷಗಳಡಿ ಹೂತುಹೋಗಿದ್ದ 80 ವರ್ಷದ ಕ್ಷತಾ ಝೀಹು ಎಂಬ ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು 11 ದಿನಗಳ ಬಳಿಕ ಜೀವಂತವಾಗಿಯೇ ಹೊರ ತೆಗೆಯಲಾಯಿತು ಎಂದು ಸರ್ಕಾರಿ ಸುದ್ದಿ ವಾಹಿನಿ ಪ್ರಸಾರ ಮಾಡಿತು. ಈತ ಭೂಕಂಪದಲ್ಲಿ ಕುಸಿದುಬಿದ್ದ ತನ್ನ ಮನೆಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡಿದ್ದ.
2008: ನ್ಯೂಯಾರ್ಕಿನ `ಫೋಬ್ಸರ್್' ಪತ್ರಿಕೆ ಪ್ರಕಟಿಸಿದ ಮಲೇಷ್ಯಾದ 40 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಆನಂದ ಕೃಷ್ಣನ್ ಮತ್ತು ವಿನೋದ್ ಶೇಖರ್ ಸ್ಥಾನ ಪಡೆದರು. ಆನಂದ ಕೃಷ್ಣನ್ ಅವರು 7.2 ಶತಕೋಟಿ ಡಾಲರ್ ವಹಿವಾಟು ಹೊಂದಿದ್ದು ಟೆಲಿಕಾಂ ವಾಣಿಜ್ಯ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. 320 ದಶಲಕ್ಷ ಡಾಲರ್ ಮೌಲ್ಯದ ಆಸ್ತಿ ಹೊಂದಿದ ವಿನೋದ್ ಶೇಖರ್ (40) ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದರು. ಇವರು ತಮ್ಮ ಮಗಳ ಹೆಸರಿನಲ್ಲಿ `ಪೆಟ್ರಾ ಸಮೂಹ'ವನ್ನು ಸ್ಥಾಪಿಸಿದ್ದು, ಅದು ಪುನರ್ ಬಳಕೆ ಮಾಡಬಹುದಾದ ಹಸಿರು ರಬ್ಬರನ್ನು ಉತ್ಪಾದಿಸುತ್ತದೆ.
2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಮುನ್ನ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಸಾಗಿಸಿದ 8 ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದರಿಂದ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಿತು.
2007: ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಅತಿ ಹೆಚ್ಚು ಶತಕಗಳ ಜೊತೆಯಾಟ (65ನೇ ಪಂದ್ಯದಲ್ಲಿ) ನಿಭಾಯಿಸಿದ ಹೊಸ ದಾಖಲೆ ಸ್ಥಾಪಿಸಿದರು. ಬಾಂಗ್ಲಾದೇಶದ ಢಾಕಾದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ವಾಸಿಂ ಜಾಫರ್ ಜೊತೆಗೆ 106 ರನ್ನುಗಳ ಜೊತೆಯಾಟ ನಿಭಾಯಿಸುವ ಮೂಲಕ ದ್ರಾವಿಡ್ ಈ ಗೌರವ ಪಡೆದರು. ಆಸ್ಟ್ರೇಲಿಯಾದ ಸ್ಟೀವ್ ವಾ ಅವರ ಹೆಸರಿನಲ್ಲಿ (64 ಪಂದ್ಯಗಳು) ಈ ದಾಖಲೆ ಇತ್ತು.
2007: ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ವಾರದ ಹಿಂದೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಜಲ್ಸಾ ಪಟ್ಟಣದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದರು.
2006: ಕನ್ನಡ ಭಾಷೆ 2300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಎಂಬುದನ್ನು ವಿವರಿಸುವ ದಾಖಲೆಗಳನ್ನು ಒಳಗೊಂಡ ವರದಿಯನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಗೌರವ ನೀಡಬೇಕೆಂಬ ಮನವಿಗೆ ಪೂರಕವಾಗಿ ಸಂಶೋಧಕ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ನೇತೃತ್ವದ ಸಮಿತಿಯು ಸಿದ್ಧಪಡಿಸಿದ ಈ ವರದಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರಿಗೆ ಸಲ್ಲಿಸಿದರು.
2001: ಕನೆಕ್ಟಿಕಟ್ಟಿನ ಸರ್ಜನ್ ಅರುವತ್ತನಾಲ್ಕು ವರ್ಷದ ಶೆರ್ಮನ್ ಬುಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡರು.
1982: ಮರುಸೃಷ್ಟಿಯಾದ ವೆನಿಸ್ ಸಿಂಪ್ಲೊನ್ ಓರಿಯಂಟ್ ಎಕ್ಸ್ ಪ್ರೆಸ್ ಮೊತ್ತ ಮೊದಲ ಬಾರಿಗೆ ಲಂಡನ್ನಿನಿಂದ ಪ್ರಯಾಣ ಹೊರಟಿತು. ಶಿಪ್ಪಿಂಗ್ ಉದ್ಯಮಿ ಜೇಮ್ಸ್ ಶೆರ್ ವುಡ್ ಅವರು ಹಳೆ ಓರಿಯಂಟ್ ಎಕ್ಸ್ ಪ್ರೆಸ್ಸಿನ ಬೋಗಿಗಳನ್ನು ಸೋದ್ ಬಿಯ ಹರಾಜಿನಲ್ಲಿ ಖರೀದಿಸಿ ತಂದು ಹೊಸ ವೆನಿಸ್ ಸಿಂಪ್ಲೋನ್ ಓರಿಯಂಟ್ ಎಕ್ಸ್ ಪ್ರೆಸ್ಸಿಗಾಗಿ ಬಳಸಿಕೊಂಡರು. ಈ ರೈಲುಗಾಡಿ ಲಂಡನ್ನಿನ ವಿಕ್ಟೋರಿಯಾ ಟರ್ಮಿನಸ್ ಮತ್ತು ವೆನಿಸ್ ಮಧ್ಯೆ ಓಡಾಡುತ್ತದೆ.
1950: ಖ್ಯಾತ ಸುಗಮ ಸಂಗೀತಗಾರ ಯಶವಂತ ಹಳಿಬಂಡಿ ಅವರು ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದ ಹನುಮಂತಪ್ಪ- ಬಸವೇಶ್ವರಿ ದಂಪತಿಯ ಮಗನಾಗಿ ಉತ್ತರ ಕರ್ನಾಟಕದ ತೇರಗಾಂವದಲ್ಲಿ ಜನಿಸಿದರು.
1948: ಕಲಾವಿದ ಸುರೇಶ ವೆಂಕಟೇಶ ಕುಲಕರ್ಣಿ ಜನನ.
1940: ಆಕ್ಸಫರ್ಡ್ ವಿಶ್ವವಿದ್ಯಾಲಯದ ಪೆಥಾಲಜಿ ವಿಭಾಗದಲ್ಲಿ ಅರ್ನೆಸ್ಟ್ ಚೈನ್ ಮತ್ತು ನಾರ್ಮನ್ ಜಿ. ಹೀಟ್ಲೆ ಅವರು ಎಂಟು ಇಲಿಗಳಿಗೆ ಸ್ಟ್ರೆಪ್ಟೋಕೋಕ್ಸಿಯನ್ನು ನೀಡಿದರು. ಅವುಗಳಲ್ಲಿ ನಾಲ್ಕು ಇಲಿಗಳಿಗೆ ನಂತರ ಪೆನಿಸಿಲಿನ್ ನೀಡಲಾಯಿತು. ಮರುದಿನ ಮುಂಜಾನೆ ವೇಳೆಗೆ ಪೆನಿಸಿಲಿನ್ ನೀಡಲಾಗಿದ್ದ ಇಲಿಗಳು ಜೀವಂತವಾಗಿದ್ದರೆ, ಉಳಿದ ನಾಲ್ಕು ಇಲಿಗಳು ಸತ್ತು ಬಿದ್ದಿದ್ದವು. ಸೋಂಕಿಗೆ ಚಿಕಿತ್ಸೆ ನೀಡಲು ಪೆನಿಸಿಲಿನ್ ಬಳಸುವ ಸಾಧ್ಯತೆ ಈ ಮೂಲಕ ಮೊತ್ತ ಮೊದಲ ಬಾರಿಗೆ ಪತ್ತೆಯಾಯಿತು.
1935: ಕಲಾವಿದ ನೀಲಾರಾಮ್ ಗೋಪಾಲ್ ಜನನ.
1908: ಸಾಹಿತಿ ವಾಸಂತಿ ದೇವಿ (25-5-1908ರಿಂದ 1-4-1995) ಅವರು ಅಣ್ಣಾಜಿರಾವ್- ರಾಧಾಬಾಯಿ ದಂಪತಿಯ ಮಗಳಾಗಿ ಬರ್ಮಾ ದೇಶದ (ಈಗಿನ ಮ್ಯಾನ್ಮಾರ್) ಮಿಥಿಲದಲ್ಲಿ ಹುಟ್ಟಿದರು. ಚಿತ್ರರಂಗ, ಸಾಹಿತ್ಯ, ರಂಗಭೂಮಿ, ಚಿತ್ರಕಲೆಗಳಿಗೆ ಕಾಣಿಕೆ ನೀಡಿರುವ ವಾಸಂತಿ ದೇವಿ ಅವರ ಪ್ರಮುಖ ಕೃತಿಗಳಲ್ಲಿ ಒಂದು `ನನ್ನ ಮಗ ಗುರುದತ್ತ'.
1889: ಸಿಕೊರಸ್ಕಿ (1889-1972) ಜನ್ಮದಿನ. ರಷ್ಯ ಮೂಲದ ಈ ಅಮೆರಿಕನ್ ವಿಮಾನ ವಿನ್ಯಾಸಗಾರ ಹೆಲಿಕಾಪ್ಟರನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ ವ್ಯಕ್ತಿ.
1886: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್ (1886-1945) ಜನ್ಮದಿನ.
No comments:
Post a Comment