Saturday, February 12, 2011

ಬೆಳಗ್ಗೆ ಬೇಲಿ... ರಾತ್ರಿ ಖಾಲಿ, ಖಾಲಿ..!

ಬೆಳಗ್ಗೆ ಬೇಲಿ... ರಾತ್ರಿ ಖಾಲಿ, ಖಾಲಿ..!


ದಡ ದಡನೆ ಬಂದ ಟಿಪ್ಪರುಗಳು ರಸ್ತೆಯ ಮಧ್ಯದಲ್ಲಿ ಲೋಡುಗಟ್ಟಲೆ ಮಣ್ಣು ಸುರಿದವು. ಆಳುಕಾಳುಗಳೊಂದಿಗೆ ಬಂದ ನಾಲ್ಕೈದು ಮಂದಿ ತಾರು ರಸ್ತೆಯನ್ನು ಅಗೆದರು. ಕಲ್ಲು ನೆಟ್ಟು  ತಂತಿ ಬಿಗಿದು ಮರದ ಕೊಂಬೆಗಳನ್ನೂ ಕತ್ತರಿಸಿ ತಂದು ತಾರು ರಸ್ತೆಯ ಮಧ್ಯದಲ್ಲೇ 'ಮುಳ್ಳು ಬೇಲಿ' ನಿರ್ಮಿಸಿದರು.

ಆಸು  ಪಾಸಿನ ನಿವಾಸಿಗಳು ನೋಡ ನೋಡುತ್ತಿದ್ದಂತೆಯೇ ಜನ - ವಾಹನ ಸಂಚಾರಕ್ಕೆ ಮುಕ್ತವಾಗಿದ್ದ ರಸ್ತೆ ಬಂದ್ ಆಗಿ ಹೋಯಿತು. ದೊಡ್ಡ ವಾಹನಗಳು ಬಿಡಿ, ದ್ವಿಚಕ್ರ ವಾಹನಗಳೂ ಸಂಚರಿಸಲಾಗದಂತೆ ಆಗಿ ಬಿಟ್ಟಿತು.

ಅಕ್ಕ ಪಕ್ಕದ ಮನೆಯಲ್ಲಿದ್ದ ಮಂದಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ತತ್ ಕ್ಷಣಕ್ಕೆ ನೆನಪಿಗೆ ಬಂದದ್ದು ನ್ಯಾಯಪರ ಆಂದೋಲನ.

ಕೆಲವೇ ಸಮಯದ ಹಿಂದೆ ಇದೇ ಬಡಾವಣೆಯಲ್ಲಿ ಬಿಬಿಎಂಪಿ ಖಾತೆ ಪಡೆಯುವ ಸಲುವಾಗಿ ಹೋರಾಟ ನಡೆಸಿದ್ದ ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನದ ಕೆಲವು ಕಾರ್ಯಕರ್ತರ ಮನೆಗಳ ಫೋನ್ ಗಳು ರಿಂಗಣಿಸಿದವು. ಸಚ್ಚಿದಾನಂದ ನಗರದಲ್ಲಿ ಹಠಾತ್ತನೆ ಬೀದಿಯ ಮಧ್ಯೆ ಮಣ್ಣಿನ ರಾಶಿ, ಮುಳ್ಳುಬೇಲಿ ಸೃಷ್ಟಿಯಾದ ವಿಚಾರ ಆಂದೋಲನದ ಕಾರ್ಯಕರ್ತರ ದೂರವಾಣಿಗಳಲ್ಲಿ ವಿನಿಮಯಗೊಂಡಿತು.

ಆಂದೋಲನದ ಸಂಚಾಲಕರಲ್ಲಿ ಒಬ್ಬರಾದ ಶಂಕರ ಪ್ರಸಾದ್ ಅವರ ದೂರವಾಣಿ ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯನ್ನು  ಸಂಪರ್ಕಿಸಿತು. 'ಈ ರಸ್ತೆ ಬಂದ್' ವಿರುದ್ಧ ತತ್ ಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಕೆಯಾಯಿತು.


'ತತ್ ಕ್ಷಣವೇ ಸ್ಥಳಕ್ಕೆ ಪೊಲೀಸರನ್ನು ಕಳುಹಿಸುತ್ತೇವೆ' ಎಂಬ ಭರವಸೆ ಪೊಲೀಸರಿಂದ ಬಂತು. ಆದರೆ ಸಂಜೆ ಶಂಕರ ಪ್ರಸಾದ್, ಮುರಳಿಧರ ಮತ್ತಿತರ ಆಂದೋಲನದ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊಸಿಲು ತುಳಿಯುವವರೆಗೂ ಪೊಲೀಸರು  ಅತ್ತ ತಲೆ ಹಾಕಲಿಲ್ಲ!


ಠಾಣೆಯಲ್ಲಿ ಘಟನೆ ಬಗ್ಗೆ ವಿವರಿಸಿದರೂ ಪೊಲೀಸರಿಂದ ನೆರವು ದೊರೆಯುವ ಲಕ್ಷಣ ಕಾಣಲಿಲ್ಲ. 'ತೊಂದರೆಗೆ ಒಳಗಾದ ನಿವೇಶನದಾರರು ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಬಹುದು' ಎಂಬ ಪುಕ್ಕಟೆ ಸಲಹೆ ಪೊಲೀಸ್ ಅಧಿಕಾರಿಗಳಿಂದ.

ಸಾರ್ವಜನಿಕ ರಸ್ತೆಯಲ್ಲಿ ಈ  ಕೃತ್ಯ ನಡೆದಿದೆ ಸ್ವಾಮೀ. ಪೊಲೀಸರು ಸುದ್ದಿ ಬಂದಾಗ ತಾವಾಗಿಯೇ ಕ್ರಮ ಕೈಗೊಳ್ಳಬೇಕಲ್ಲವೇ ಎಂಬ ಪ್ರಶ್ನೆಗೆ 'ಬಿಬಿಎಂಪಿಯವರು ದೂರು ಕೊಟ್ಟು ರಕ್ಷಣೆ ಕೇಳಿದರೆ ಕ್ರಮ ಕೈಗೊಳ್ಳಬಹುದು' ಎಂಬ ಉತ್ತರ.

'ಸರಿ ಸ್ವಾಮಿ, ಹಾಗಾದರೆ ಪೊಲೀಸ್ ಕಮೀಷನರ್ ಅವರ ಬಳಿಗೇ ಹೋಗುತ್ತೇವೆ' ಎಂಬ ಮಾತು ಹೇಳಿ ಆಂದೋಲನದ ಕಾರ್ಯಕರ್ತರು ಅಲ್ಲಿಂದ ಹೊರಟದ್ದೇ ತಡ, ಪೊಲೀಸರು ಚುರುಕಾದರು.

ಸ್ವಲ್ಪವೇ ಹೊತ್ತಿನಲ್ಲಿ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಗೆ ಪೊಲೀಸ್ ಬುಲಾವ್ ಹೋಯಿತು. ನ್ಯಾಯಪರ ಆಂದೋಲನದ ಹೋರಾಟದ ಫಲವಾಗಿ ಬಡಾವಣೆಯ ನಿವಾಸಿಗಳಿಗೆ ಬಿಬಿಎಂಪಿ ಖಾತೆ ವಿತರಣೆ ಮಾಡುವ ವೇಳೆಯಲ್ಲಿ ಬಿಬಿಎಂಪಿ ಕಚೇರಿಯಲ್ಲಿ ದಾಂಧಲೆ ನಡೆಸಿ, ನಿವಾಸಿಗಳು ಮಧ್ಯರಾತ್ರಿಯವರೆಗೂ  ಕಾಯುವಂತಹ ಸನ್ನಿವೇಶ ಸೃಷ್ಟಿ ಮಾಡಿದ್ದ ಇದೇ ಮಂಜುನಾಥ್ ಅವರು ಬಡಾವಣೆಯಲ್ಲಿ ರಸ್ತೆ ಮಧ್ಯೆ ಬೇಲಿ ಹಾಕುತ್ತಿದ್ದಾಗಲೂ ಆ ಪ್ರದೇಶದಲ್ಲಿ  ಅಡ್ಡಾಡುತ್ತಿದ್ದುದು ನಿವಾಸಿಗಳ ಗಮನಕ್ಕೆ ಬಂದಿತ್ತು. ಈ ಘಟನೆಯ ಹಿಂದೆ ಅವರ ಕೈವಾಡ ಇರಬೇಕೆಂಬ ಗುಮಾನಿ ಅದಾಗಲೇ ಹಲವರನ್ನು ಕಾಡಿತ್ತು. ರಾತ್ರಿ ಅವರನ್ನು ಪೊಲೀಸರು ಕರೆಸಿಕೊಂಡು ಮಾತನಾಡಿದ ಬಳಿಕ  ಪೊಲೀಸ್ ವ್ಯಾನಿನೊಂದಿಗೆ ಭಾರೀ  ಸಂಖ್ಯೆಯ ಜನ 'ಬಂದ್' ಆಗಿದ್ದ ರಸ್ತೆಯ ಬಳಿಗೆ ಬಂದರು...!.


ಬೆಳಗ್ಗೆ ಸೂರ್ಯ ಉದಯಿಸಿದ ಬಳಿಕ ಎಷ್ಟು  ತರಾತುರಿಯಲ್ಲಿ ರಸ್ತೆಯನ್ನು ಬಂದ್ ಮಾಡಲಾಯಿತೋ ಅದಕ್ಕಿಂತಲೂ ಹೆಚ್ಚಿನ ತರಾತುರಿಯಲ್ಲಿ ಸೂರ್ಯ ಮುಳುಗಿದ ಬೆನ್ನಲ್ಲೇ ಕತ್ತಲೆಯಲ್ಲೇ 'ರಸ್ತೆ ತೆರವು' ಕಾರ್ಯಾಚರಣೆ ನಡೆದೇ ಬಿಟ್ಟಿತು. ರಾತ್ರಿ 9 ಗಂಟೆ ಆಗುವ ಹೊತ್ತಿಗೆ ರಸ್ತೆಯ ಮೇಲೆ ಹಾಕಿದ್ದ ಲೋಡುಗಟ್ಟಲೆ ಮಣ್ಣು, ಮುಳ್ಳುಬೇಲಿ ಮಂಗ ಮಾಯ.!

ಇದೆಂತಹ ಮ್ಯಾಜಿಕ್..! ಹೀಗೂ ಉಂಟಾ ಎಂದು ಯೋಚಿಸುತ್ತಿದ್ದೀರಾ?

ಯೋಚನೆ ಬೇಕಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಸಚ್ಚಿದಾನಂದ ನಗರದ ವಿಶ್ವಭಾರತಿ ಎಚ್.ಬಿ.ಸಿ.ಎಸ್. ಬಡಾವಣೆಯಲ್ಲಿ 2011 ಫೆಬ್ರುವರಿ 10ರ ಗುರುವಾರ ನಡೆದ ನಿಜ ಘಟನೆ ಇದು.

ಈ ಬಡಾವಣೆ ನ್ಯಾಯಬದ್ಧವಾಗಿದೆ ಎಂಬುದಾಗಿ ನ್ಯಾಯಾಲಯಗಳು  ಸಾರಿ ಹೇಳಿದ್ದರೂ, ಅದನ್ನು ನಿರ್ಲಕ್ಷಿಸಿ ಬಿಬಿಎಂಪಿ ಅಧಿಕಾರಿಗಳು, ಜನ ಪ್ರತಿನಿಧಿಗಳು, ರೆವೆನ್ಯೂ ಅಧಿಕಾರಿಗಳು, ಭೂ ಮಾಫಿಯಾಗಳು ಒಂದಾಗಿ ಇಲ್ಲಿನ ಜಾಗ ಕಬಳಿಸಲು ನಡೆಸಿದ ಯತ್ನದ ಪರಿಣಾಮ ಈ ಘಟನೆ.

ನಾಗರಿಕರು ಎಚ್ಚೆತ್ತಿದ್ದರೆ ಇಂತಹುದೆಲ್ಲ ನಡೆಯುವುದಿಲ್ಲ ಎಂಬುದಕ್ಕೆ ಈ ಘಟನೆ ಉದಾಹರಣೆಯೂ ಹೌದು. ಈ ಬಡಾವಣೆಯ ಎಚ್ಚೆತ್ತ ನಿವೇಶನದಾರರು ಲಂಚ ಕೊಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದು ಕೈಗೊಂಡ ಹೋರಾಟದ ಪರಿಣಾಮವಾಗಿ ರಾಜರಾಜೇಶ್ವರಿ ನಗರ ಬಿಬಿಎಂಪಿ ಕಚೇರಿ 2010 ನವೆಂಬರ್ 15ರಂದು ನಡುರಾತ್ರಿಯವರೆಗೂ ಕೆಲಸ ಮಾಡಿ ಖಾತೆಗಳನ್ನು ವಿತರಿಸಿದ 'ಐತಿಹಾಸಿಕ' ಘಟನೆಯೂ ನಡೆದಿತ್ತು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.

ಇಷ್ಟಾದ ಬಳಿಕ ಆಂದೋಲನದ ಸದಸ್ಯರು ಸುಮ್ಮಗೇನೂ ಕುಳಿತುಕೊಳ್ಳಲಿಲ್ಲ. ಮರುದಿನ ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಿ ನಡೆದ ಘಟನೆಗಳನ್ನು ಗಮನಕ್ಕೆ ತಂದು, ದೂರು ನೀಡಿದರು. ದೂರು  ಸ್ವೀಕರಿಸಿದ ಪೊಲೀಸ್ ಕಮೀಷನರ್ ಶಂಕರ ಬಿದರಿ ಸೂಕ್ತ ಕ್ರಮದ ಭರವಸೆ ನೀಡಿದರು.


 ಇದರ ಜೊತೆಗೆ ಇರುವ ಚಿತ್ರಗಳು ಫೆಬ್ರುವರಿ 10ರಂದು ನಡೆದ ಘಟನೆಯನ್ನು  ನಿಮ್ಮ ಕಣ್ಮುಂದೆ ತೆರೆಯುತ್ತವೆ. ರಸ್ತೆ ಬಂದ್ ಮಾಡುತ್ತಿರುವ ದೃಶ್ಯ, ನಂತರ ರಸ್ತೆಯನ್ನು ತೆರವುಗೊಳಿಸಿದ ದೃಶ್ಯ ಹಾಗೂ  ಪಕ್ಕದ ನಿವೇಶನದಲ್ಲಿ ಈಗಲೂ ಮಣ್ಣು- ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿರುವ ದೃಶ್ವಗಳನ್ನು ಚಿತ್ರಗಳನ್ನು ಕ್ಲಿಕ್ಕಿಸಿ, ದೊಡ್ಡ ಚಿತ್ರಗಳನ್ನೂ ನೋಡಬಹುದು. ಇಲ್ಲಿರುವ ಮೊದಲ ಚಿತ್ರ 10ರಂದು ಮಧ್ಯಾಹ್ನ ಕ್ಲಿಕ್ಕಿಸಿದ್ದು, ಉಳಿದ ಎರಡು ಚಿತ್ರಗಳು ಮರುದಿನ ಬೆಳಗ್ಗೆ ಕ್ಲಿಕ್ಕಿಸಿದ್ದು.

ಹಾಗೆಯೇ ನವೆಂಬರ್ 15ರ 'ನಡುರಾತ್ರಿ ಖಾತೆ' ವಿತರಣೆ ನಡೆದ ಘಟನೆಯ ವಿಡಿಯೋಗಳನ್ನೂ  ಕೆಳಗೆ  ವೀಕ್ಷಿಸಬಹುದು.





ಫೆಬ್ರುವರಿ 16 ಬುಧವಾರದ ಬೆಳವಣಿಗೆ..!

ರಸ್ತೆ ತಡೆ ಘಟನೆ ನಡೆದ ಒಂದು ವಾರದ ಒಳಗಾಗಿ, ಫೆಬ್ರುವರಿ 16ರ ಬುಧವಾರ ಸಚ್ಚಿದಾನಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಅವರಿಂದ ಹಲವಾರು ನಿವೇಶನದಾರರಿಗೆ ಎಸ್ಎಂಎಸ್ ಸಂದೇಶ ರವಾನೆಯಾಗಿದೆ.


 'ನಿಮ್ಮ ನಿವೇಶನ ಅಪಾಯದಲ್ಲಿದೆ. ತತ್ ಕ್ಷಣ ಸಂಪರ್ಕಿಸಿ' ಎಂಬುದು ಈ  ಸಂದೇಶದ ಸೂಚನೆ.


ಸಂದೇಶವನ್ನು ಅನುಸರಿಸಿ ಸಂಪರ್ಕಿಸಿದವರಿಗೆ ಬರುತ್ತಿರುವ  ಉತ್ತರ: 'ಭೂಮಾಲೀಕರು 10ರಂದು ರಸ್ತೆ ತಡೆದು ತೊಂದರೆ ಉಂಟು ಮಾಡಲು ಯತ್ನಿಸಿದ್ದರು. ನಾನು ಗದರಿಸಿ ಅದನ್ನು ತೆರವು ಮಾಡಿಸಿದ್ದೇನೆ. ನಿವೇಶನದಾರರೆಲ್ಲ ತತ್ ಕ್ಷಣ ಸಂಘದ ವಕೀಲರನ್ನು ಸಂಪರ್ಕಿಸಿ. ನ್ಯಾಯಾಲಯದಿಂದ ತಡೆಯಾಜ್ಞೆ ತರಬೇಕಾಗಿದೆ...' ಇತ್ಯಾದಿ.

ಕೆಲ ಸಮಯದ ಹಿಂದೆ ಇಡೀ ಬಡಾವಣೆಯೇ ಅಕ್ರಮವಾಗಿದೆ ಎಂದು ಹೇಳಿದ್ದ ಇದೇ ಮಂಜುನಾಥ್ ಅವರು ಬಡಾವಣೆ 'ಸಕ್ರಮಗೊಳಿಸಲು' ನಿವೇಶನದಾರರಿಂದ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದ್ದು, ಹೀಗೆ ಮಾಡುವ ಕೆಲವೇ ದಿನಗಳ ಮುನ್ನ ಬಿಬಿಎಂಪಿಯ ಬುಲ್ ಡೋಜರುಗಳು  ಮನೆಗಳನ್ನು ಒಡೆದುಹಾಕಲು ಬಂದದ್ದು ನಿವೇಶನದಾರರಿಗೆ ಇನ್ನೂ  ನೆನಪಿರಬಹುದು.

ಇತಿಹಾಸದ ಪುನರಾರ್ತನೆಗೆ ಸಿದ್ಧತೆಗಳು ಜೋರಾಗಿ ನಡೆದಿವೆ. ಇಂತಹವರ ಜೊತೆಗೆ ಭೂಮಾಲೀಕರೆಂದು ಹೇಳಿಕೊಂಡು  ತಿರುಗಾಡುತ್ತಿರುವವರು ಹಾಗೂ ವಿಎಚ್ ಬಿಸಿ ಸೊಸೈಟಿಯ ಹೊಸ ಆಡಳಿತ ಮಂಡಳಿಯ ಕೆಲ ಸದಸ್ಯರೂ ಸೇರಿಕೊಂಡಿರುವ ಬಗ್ಗೆ ವರದಿಗಳಿವೆ. ಈಗ ಎಚ್ಚರಗೊಳ್ಳಬೇಕಾದುದು ತುರ್ತು ಅಗತ್ಯ.


-ನೆತ್ರಕೆರೆ ಉದಯಶಂಕರ  

No comments:

Advertisement