Saturday, November 30, 2019

‘ಮಹಾ’ ವಿಶ್ವಾಸಮತ ಗೆದ್ದ ಸಿಎಂ ಉದ್ಧವ್ ಠಾಕ್ರೆ, ಬಿಜೆಪಿ ಸದಸ್ಯರಿಂದ ಸಭಾತ್ಯಾಗ

ಮಹಾವಿಶ್ವಾಸಮತ ಗೆದ್ದ ಸಿಎಂ ಉದ್ಧವ್ ಠಾಕ್ರೆ,
ಬಿಜೆಪಿ ಸದಸ್ಯರಿಂದ ಸಭಾತ್ಯಾಗ
ಮುಂಬೈ: ಮಹಾರಾಷ್ಟ್ರದ ೧೮ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದ್ದು, ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.

ನಂತರ ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದರು. ವಿಶ್ವಾಸಮತದ ಪರ ಇರುವ ಶಾಸಕರ ತಲೆ ಎಣಿಕೆ ಮೊದಲಿಗೆ ಮಾಡಲಾಯಿತು.

ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ೧೬೯ ಶಾಸಕರ ಮತ ಸಿಕ್ಕಿದೆ. ೨೮೮ ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ೧೪೫ ಶಾಸಕರ ಬೆಂಬಲದ ಅಗತ್ಯವಿದೆ.

ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ ೧೫೪. ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ೧೦೫ ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದಿದ್ದರು.

 ಸಾಂವಿಧಾನಿಕ  ಮಿತಿಗಳನ್ನು ಉಲ್ಲಂಘಿಸಿ ಸದನದ ಕಲಾಪಗಳನ್ನು ನಡೆಸಲಾಗುತ್ತಿದ್ದೆ ಎಂದು ಆಕ್ರೋಶ ವ್ಯಕ್ತ ಪಡಿಸಿ ಕೋಲಾಹಲ ನಡೆಸಿ ಭಾರತೀಯ ಜನತಾ ಪಕ್ಷವು ಶನಿವಾರ ಮಹಾರಾಷ್ಟ್ರ ವಿಧಾನಸಭೆಯಿಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಬಲಾಬಲ ಪರೀಕ್ಷೆಗೆ ಮುನ್ನವೇ ಸಭಾತ್ಯಾಗ ಮಾಡಿತು.
ವಿಷಯವನ್ನು ರಾಜ್ಯಪಾಲರ ಬಳಿಗೆ ಒಯ್ಯುವುದಾಗಿ ವಿರೋಧ ಪಕ್ಷವು ಹೇಳಿತು.

ಹಂಗಾಮೀ ಸಭಾಧ್ಯಕ್ಷ ಕಾಳಿದಾಸ ಕೊಲಂಬ್ಕರ್ ಅವರ ಬದಲಿಗೆ ಎನ್ಸಿಪಿಯ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ಮಾಡಿದ ವಿಧಾನಕ್ಕೂ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿ, ಭಾರತದ ಇತಿಹಾಸದಲ್ಲೇ ಇಂತಹ ಘಟನೆ ನಡೆದದ್ದು ಇದೇ ಪ್ರಥಮ ಎಂದು ಹೇಳಿತು.

ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಕಾಯಂ ಸಭಾಧ್ಯಕ್ಷರ ಕೈಕೆಳಗೆ ಸದನ ಬಲಾಬಲ ಪರೀಕ್ಷೆ ನಡೆದರೆ ಫರಾಭವ ಹೊಂದಬಹುದೆಂಬ ಭೀತಿ ಇದೆ. ಹೀಗಾಗಿ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಹಂಗಾಮೀ ಸಭಾಧ್ಯಕ್ಷರನ್ನೇ ಬದಲಾಯಿತು ಎಂದು ಬಿಜೆಪಿ ಆಪಾದಿಸಿತು.

ಮುಂಬೈಯಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನ ಶನಿವಾರ ನಡೆಯಿತು. ವಿಶ್ವಾಸ ಮತ ನಿರ್ಣಯದ ಮೇಲೆ ಬಹುಮತದ ನಿರ್ಧಾರಕ್ಕಾಗಿ ತಲೆ ಎಣಿಕೆಗೆ ಹಂಗಾಮೀ ಸಭಾಧ್ಯಕ್ಷ ವಾಲ್ಸೆ ಪಾಟೀಲ್ ಅವರು ಆಜ್ಞಾಪಿಸಿದಾಗ ಸಂವಿಧಾನದ ವಿಧಾನಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆಪಾದಿಸಿ ಬಿಜೆಪಿ ಶಾಸಕರು ಸದನದಿಂದ ಹೊರನಡೆದರು.

ಸಂವಿಧಾನದ ನಿಯಮಾವಳಿಗಳನ್ನು ಉಲ್ಲಂಘಿಸಿ ಸದನದ ಕಲಾಪಗಳನ್ನು ನಡೆಸಲಾಗುತ್ತಿದೆ. ಅಧಿವೇಶನವೇ ನಿಯಮಾವಳಿಗಳ ಪ್ರಕಾರ ನಡೆದಿಲ್ಲ. ಕಳೆದ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಹಾಡಿದ ಕಾರಣ ಅದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತುಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದರು.

ನೂತನ ಅಧಿವೇಶನವನ್ನು ಸಮಾವೇಶಗೊಳಿಸಲು ರಾಜ್ಯಪಾಲರ ಮೂಲಕ ಸಮನ್ಸ್ ಜಾರಿ ಮಾಡಬೇಕಾಗಿತ್ತು. ಆದರೆ ಇದನ್ನು ಮಾಡಿಯೇ ಇಲ್ಲಎಂದು ಅವರು ಆಪಾದಿಸಿದರು.

ಉದ್ಧವ್ ಠಾಕ್ರೆ ಮತ್ತು ಇತರ ಆರು ಸಚಿವರ ಪ್ರಮಾಣವಚನ ಸಮಾರಂಭ ಕೂಡಾ ನಿಯಮಾವಳಿಗೆ ಅನುಗುಣವಾಗಿ ನಡೆದಿಲ್ಲಎಂದೂ ಫಡ್ನವಿಸ್ ಆರೋಪ ಮಾಡಿದರು.

ಕೆಲವರು ಬಾಳಾಸಾಹೇಬ್ ಠಾಕ್ರೆ ಹೆಸರಿನಲ್ಲಿ, ಕೆಲವರು (ಕಾಂಗ್ರೆಸ್ ಮುಖ್ಯಸ್ಥೆ) ಸೋನಿಯಾ (ಗಾಂಧಿ) ಜಿ ಮತ್ತು (ಎನ್ಸಿಪಿ ಅಧ್ಯಕ್ಷ ಶರದ್) ಪವಾರ ಸಾಹೇಬರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನವನ್ನು ನಿಗದಿತ ಮಾದರಿಯಲ್ಲಿಯೇ ತೆಗೆದುಕೊಳ್ಳಬೇಕುಎಂದು ಅವರು ನುಡಿದರು.

ಹಂಗಾಮೀ ಸಭಾಧ್ಯಕ್ಷರ ಕೈಕೆಳಗೆ ಸದನ ಪರೀಕ್ಷೆ ನಡೆದ ಬಗ್ಗೆ ಪ್ರಸ್ತಾಪಿಸಿದ ಫಡ್ನವಿಸ್ಕಾಯಂ ಸಭಾಧ್ಯಕ್ಷರ ಕೈಕೆಳಗೆ ವಿಶ್ವಾಸ ಮತ ಯಾಚನೆ ನಡೆದರೆ ಸರ್ಕಾರಕ್ಕೆ ಸೋಲುವ ಭಯವಿತ್ತುಎಂದು ಫಡ್ನವಿಸ್ ಹೇಳಿದರು.

ಕಾಯಂ ಸಭಾಧ್ಯಕ್ಷರು ಇದ್ದರೆ, ತಮ್ಮ ಸರ್ಕಾರವು ಪತನಗೊಳ್ಳಬಹುದು ಎಂಬ ಹೆದರಿಕೆ ಅವರಿಗೆ ಇತ್ತು.. ಕಾರಣಕ್ಕಾಗಿಯೇ ನಾವು ಸಭಾತ್ಯಾಗ ಮಾಡಿದ್ದೇವೆ. ನಾವು ರಾಜ್ಯಪಾಲರ ಬಳಿಗೆ ಹೋಗುತ್ತೇವೆ ಮತ್ತು ಸದನ ಕಲಾಪವು ಸಂವಿಧಾನದ ನಿಯಮಾವಳಿಗಳಿಗೆ ಅನುಗುಣವಾಗಿ ನಡೆದಿಲ್ಲ ಎಂದು ದೂರು ಕೊಡುತ್ತೇವೆಎಂದು ಬಿಜೆಪಿ ನಾಯಕ ನುಡಿದರು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಗಾಡಿ ಮೈತ್ರಿಕೂಟವು ವಿಶ್ವಾಸ ಮತ ಪಡೆಯುವುದಕ್ಕೆ ಮುನ್ನ, ಸದನವ ಕಲಾಪ ಆರಂಭಿಸುವಾಗಲೇ ನಾಟಕೀಯ ಹಸ್ತಕ್ಷೇಪ ಮಾಡಿ, ನೂತನ ಸರ್ಕಾರವು  ಸಂವಿಧಾನದ ವಿಧಿಗಳನ್ನು ಗಾಳಿಗೆ ತೂರಿದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿತು.

ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶ್ವಾಸ ಮತಯಾಚನೆಯ ಸಂದರ್ಭಗಳಿಗೆ ಸಂಬಂಧಿಸಿದಂತೆ  ಕ್ರಿಯಾಲೋಪ ಎತ್ತಿ ಮೂರು ಆಕ್ಷೇಪಗಳನ್ನು ಪ್ರಸ್ತಾಪ ಮಾಡುವುದರೊಂದಿಗೆ ಸದನದ ಕಲಾಪ ಆರಂಭವಾಯಿತು. ಮುಂದಿನ ಕಲಾಪಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಮುನ್ನ ಹಂಗಾಮೀ ಸಭಾಧ್ಯಕ್ಷರು ತಪ್ಪುಗಳನ್ನು ಸರಿ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಮೊತ್ತ ಮೊದಲನೆಯದಾಗಿ ವಿಶ್ವಾಸ ಮತ ಯಾಚನೆ ಸಲುವಾಗಿ ಅಧಿವೇಶನ ಕರೆಯುವ ಹಕ್ಕು ರಾಜ್ಯಪಾಲರಿಗೆ ಮಾತ್ರವೇ ಇದೆ. ರಾಜಭವನದಿಂದ ಇಂತಹ ಆದೇಶ ನೀಡಿಲ್ಲವಾದ ಕಾರಣ ಇಡೀ ಅಧಿವೇಶನದ ಸಿಂಧುತ್ವವೇ ಸಂಶಯಾಸ್ಪದವಾಗಿದೆ ಎಂದು ಫಡ್ನವಿಸ್ ಹೇಳಿದರು.. ನಮಗೆ ಮಧ್ಯರಾತ್ರಿಯಲ್ಲಿ ಅಧಿವೇಶನದ ಬಗ್ಗೆ ಮಾಹಿತಿ ನೀಡಲಾಯಿತು. ಸರ್ಕಾರವು ನಮ್ಮ ಸದಸ್ಯರನ್ನು ಸದನ ಕಲಾಪದಿಂದಲೇ ದೂರ ಇಡಲು ಬಯಸಿತ್ತುಎಂದು ಫಡ್ನವಿಸ್ ಒಂದು ಹಂತದಲ್ಲಿ ಹೇಳಿದರು.

ಎರಡನೆಯದಾಗಿ ಸದನಕಲಾಪ ಸಮರ್ಪಕ ಎನಿಸಿಕೊಳ್ಳಲು ವಿಶ್ವಾಸ ಮತ ಕಲಾಪವು ಕಾಯಂ ಸಭಾಧ್ಯಕ್ಷರ ಕೈಕೆಳಗೆ ನಡೆಯಬೇಕು. ಹಂಗಾಮೀ ಸಭಾಧ್ಯಕ್ಷರ ಕೈಕೆಳಗೆ ಅಲ್ಲ. ಆದ್ದರಿಂದ ಕಾಯಂ ಸಭಾಧ್ಯಕ್ಷರ ಆಯ್ಕೆ ಮೊದಲು ನಡೆಯಬೇಕು ಎಂದು ಫಡ್ನವಿಸ್ ನುಡಿದರು. ಹಂಗಾಮೀ ಸಭಾಧ್ಯಕ್ಷರನ್ನು ಬದಲಾಯಿಸಿಲು ಆಡಳಿತಾರೂಢ ಮೈತ್ರಿಕೂಟವು ಕೈಗೊಂಡಿರುವ ನಿರ್ಧಾರವು ಹಿಂದೆಂದೂ ನಡೆಯದಂತಹ ಘಟನೆಯಷ್ಟೇ ಅಲ್ಲ ಅಕ್ರಮ ಕೂಡಾ ಎಂದು ಫಡ್ನವಿಸ್ ಹೇಳಿದರು.

ಇತಿಹಾಸದಲ್ಲಿ ಇಂತಹ ಘಟನೆ ಘಟಿಸಿಯೇ ಇಲ್ಲಎಂದು ಅವರು ಹೇಳಿದರು.

ವಿಶ್ವಾಸ ಮತ ಯಾಚನೆಗೆ ಮುನ್ನ ಆಡಳಿತಾರೂಢ ಮೈತ್ರಿಕೂಟವು ಬಿಜೆಪಿಯ ಕಾಳಿದಾಸ ಕೊಲಂಬ್ಕರ್ ಅವರನ್ನು ಬದಲಾಯಿಸಿ ಎನ್ಸಿಪಿಯ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಹಂಗಾಮೀ ಸಭಾಧ್ಯಕ್ಷರನ್ನಾಗಿ ಮಾಡಿತ್ತು.

ಮೂರನೇ ಮಹತ್ವದ ಅಂಶದಲ್ಲಿ sಡ್ನವಿಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಸಂಪುಟದ ಆರು ಸಚಿವರು ನವೆಂಬರ್ ೨೭ರಂದು ತೆಗೆದುಕೊಂಡ ಪ್ರಮಾಣವಚನದ ಸಿಂಧುತ್ವವನ್ನೇ ಫಡ್ನವಿಸ್ ಪ್ರಶ್ನಿಸಿದರು. ಸಂವಿಧಾನದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಪ್ರಮಾಣ ವಚನಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಆಪಾದಿಸಿದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಸಚಿವರು ಪಕ್ಷ ನಾಯಕರು, ಸ್ವಾತಂತ್ರ್ಯ ಯೋಧರು, ಮರಾಠಾ ದೊರಡ ಶಿವಾಜಿ ಇತ್ಯಾದಿ ಹೆಸರುಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಸಂವಿಧಾನದ ನಿಯಮಾವಳಿಗಳಿಗೆ ವಿರುದ್ಧ. ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದು ಬಿಜೆಪಿ ಇದಕ್ಕೆ ಮುನ್ನವೇ ಪ್ರಕಟಿಸಿತ್ತು.

ಪರಂಪರೆಗೆ ಅನುಗುಣವಾಗಿ ಸದನದ ಕಲಾಪ ಆರಂಭದಲ್ಲಿ ವಂದೇ ಮಾತರಂನ್ನು ಏಕೆ ನುಡಿಸಲಿಲ್ಲ ಎಂದೂ ಬಿಜೆಪಿ ಪ್ರಶ್ನಿಸಿತು.

ಪ್ರಮಾಣವಚನವು ಸದನದಲ್ಲಿ ನಡೆದಿಲ್ಲವಾದ್ದರಿಂದ ಅದರ ಮೇಲಿನ ಆಕ್ಷೇಪಗಳನ್ನು ಸದನದಲ್ಲಿ ಪರಿಶೀಲಿಸಲಾಗದು ಎಂದು ಹಂಗಾಮೀ ಸಭಾಧ್ಯಕ್ಷರು ಹೇಳಿದರು. ಹಂಗಾಮೀ ಸಭಾಧ್ಯಕ್ಷರ ಕೈಕೆಳಗೆ ವಿಶ್ವಾಸ ಮತ ಯಾಚನೆಯು ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ಇದೆ ಎಂದು ಅವರು ನುಡಿದರು.

ಬಿಜೆಪಿಯು ತತ್ ಕ್ಷಣವೇ ಸಭಾತ್ಯಾಗ ಮಾಡಿತು. ಬಳಿಕ ವಿಶ್ವಾಸ ಮತ ನಿರ್ಣಯವನ್ನು ಯಾವುದೇ ಅಡೆತಡೆಯೂ ಇಲ್ಲದೇ ಅಂಗೀಕರಿಸಲಾಯಿತು.

ಕಾಂಗ್ರೆಸ್ ನಾಯಕ ಅಶೋಕ ಚವಾಣ್ ನಿರ್ಣಯವನ್ನು ಮಂಡಿಸಿದರು. ಎನ್ಸಿಪಿಯ ನವಾಬ್ ಮಲಿಕ್ ಮತ್ತು ಜಯಂತ್ ಪಾಟೀಲ್ ಹಾಗೂ ಶಿವಸೇನೆಯ ಏಕನಾಥ್ ಶಿಂಧೆ ಅನುಮೋದಿಸಿದರು.

ಬಿಜೆಪಿ ಆಕ್ಷೇಪಕ್ಕೆ ಉದ್ಧವ್ ನಕಾರಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ದಿವಂಗತ ಹೆತ್ತವರು ಮತ್ತು ಛತ್ರಪತಿ ಶಿವಾಜಿ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಬಿಜೆಪಿ ಮಾಡಿದ ಆಕ್ಷೇಪವನ್ನು ವಿಶ್ವಾಸ ಮತ ಗೆದ್ದ ಬಳಿಕ ವಿಧಾನಸಭೆಯಲ್ಲಿ ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಉದ್ಧವ್ ತಳ್ಳಿ ಹಾಕಿದರು.
ಛತ್ರಪತಿ ಶಿವಾಜಿ ಹೆಸರನ್ನು ನಾವು ಉಲ್ಲೇಖಿಸಿದ್ದರಿಂದ ನಿಮಗೆ ಚುಚ್ಚಿದ ಅನುಭವವಾಗಿದೆ. ಅವರ ಹೆಸರನ್ನು ನಾನು ಮತ್ತೆ ಮತ್ತೆ ಉಲ್ಲೇಖಿಸುತ್ತೇನೆ. ಹೆತ್ತವರ ಹೆಸರನ್ನು ಉಲ್ಲೇಖಿಸದವರಿಗೆ ಬದುಕುವ ಹಕ್ಕಿಲ್ಲ. ಛತ್ರಪತಿ ಶಿವಾಜಿ ಮತ್ತು ಒಬ್ಬರ ಹೆತ್ತವರ ಹೆಸರನ್ನು ಉಲ್ಲೇಖಿಸುವುದು ಅಪರಾಧ ಎಂಬುದಾಗಿ ಭಾವಿಸುವುದು ಮಹಾರಾಷ್ಟ್ರದ ಸಂಸ್ಕೃತಿಗೆ ವಿರುದ್ಧವಾಗುತ್ತದೆಎಂದು ಬಿಜೆಪಿ ಆಕ್ಷೇಪವನ್ನು  ತಳ್ಳಿಹಾಕುತ್ತಾ ಠಾಕ್ರೆ ಹೇಳಿದರು.

ಠಾಕ್ರೆ ಅವರ ಪೂರ್ವಾಧಿಕಾರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಸಂವಿಧಾನದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂಬುದಾಗಿ ಆಪಾದಿಸಿ ಸಭಾತ್ಯಾಗ ಮಾಡುವ ಮುನ್ನ ಠಾಕ್ರೆ ಮತ್ತು ಇತರ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ಹೆತ್ತವರು, ಶಿವಾಜಿ ಮತ್ತು ಪಕ್ಷ ನಾಯಕರ ಹೆಸರುಗಳನ್ನು ಉಲ್ಲೇಖಿಸಿದ್ದನ್ನು ಟೀಕಿಸಿದ್ದರು.

ತಮಗೆ ರಾಜ್ಯವನ್ನು ಮುನ್ನಡೆಸಲು ಅವಕಾಶ ನೀಡಿದ್ದಕ್ಕಾಗಿ ಮೈತ್ರಿಕೂಟದ ಶಾಸಕರು ಮತ್ತು ಮಹಾರಾಷ್ಟ್ರದ ಜನತೆಗೆ ತಮ್ಮ ಕೃತಜ್ಞತೆಯನ್ನೂ ಉದ್ದವ್ ವ್ಯಕ್ತ ಪಡಿಸಿದರು.

No comments:

Advertisement