Monday, December 2, 2019

ಮಹಾ ಅಸೆಂಬ್ಲಿ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಆಯ್ಕೆ

ಮಹಾ ಅಸೆಂಬ್ಲಿ ಸ್ಪೀಕರ್ ಆಗಿ ಕಾಂಗ್ರೆಸ್ ಪಕ್ಷದ
ನಾನಾ ಪಟೋಲೆ ಆಯ್ಕೆ
ಮುಂಬೈ: ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷರಾಗಿ 2019 ಡಿಸೆಂಬರ್ 01ರ ಭಾನುವಾರ ಅವಿರೋಧವಾಗಿ ಆಯ್ಕೆಯಾದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕಿಸನ್ ಕಥೋರೆ ಅವರು ತಮ್ಮ ನಾಮಪತ್ರವನ್ನು ಕೊನೆಯ ಕ್ಷಣದಲ್ಲಿ ಹಿಂತೆಗೆದುಕೊಂಡರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಟೋಲೆ ಅವರನ್ನು ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದರು.

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಆಡಳಿತಾರೂಢ ಶಿವಸೇನಾ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಪಕ್ಷದ ಶಾಸಕ ಪಟೋಲೆ ಅವರ ಹೆಸರನ್ನು ಪ್ರಕಟಿಸಿತ್ತು. ಬಿಜೆಪಿಯು ಕಿಸನ್ ಕಥೋರೆ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು.

ನಾಮಪತ್ರ ವಾಪಸಿಗೆ ಭಾನುವಾರ ಬೆಳಗ್ಗೆ ೧೦ ಗಂಟೆಯ ಗಡುವನ್ನು ನೀಡಲಾಗಿತ್ತು.

ನಾನಾ ಪಟೋಲೆ ಅವರು ವಿದರ್ಭದ ಸಕೋಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕಥೋರೆ ಅವರು ಥಾಣೆ ಜಿಲ್ಲೆಯ ಮುರ್ಬದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಉಭಯರೂ ಇದು ನಾಲ್ಕನೇ ಬಾರಿಗೆ ಶಾಸಕರಾಗಿ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರವು ಶನಿವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಪಡಿಸಿತ್ತು.

೨೮೮ ಸದಸ್ಯಬಲದ ಸದನದಲ್ಲಿ ತಲೆ ಎಣಿಕೆ ಆರಂಭಕ್ಕೆ ಮುನ್ನ ೧೦೫ ಶಾಸಕರನ್ನು ಹೊಂದಿರುವ ಬಿಜೆಪಿ ಸಭಾತ್ಯಾಗ ಮಾಡಿದ ಬಳಿಕ ಒಟ್ಟು ೧೬೯ ಶಾಸಕರು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಡಿಸಿದ ವಿಶ್ವಾಸ ಮತದ ಪರವಾಗಿ ಮತದಾನ ಮಾಡಿದ್ದರು.

No comments:

Advertisement