Sunday, December 1, 2019

ತಮಿಳುನಾಡು: ಭಾರೀ ಮಳೆಗೆ ೫ ಬಲಿ; ಕಟ್ಟೆಚ್ಚರ ನೀಡಿದ ಹವಾಮಾನ ಕಚೇರಿ

ತಮಿಳುನಾಡು: ಭಾರೀ ಮಳೆಗೆ ಬಲಿ; ಕಟ್ಟೆಚ್ಚರ ನೀಡಿದ ಹವಾಮಾನ ಕಚೇರಿ
ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯು ಐದು ಜೀವಗಳನ್ನು ಬಲಿ ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಇನ್ನಷ್ಟು ಮಳೆ ಸುರಿಯಲಿದೆ ಎಂದು ಚೆನ್ನೈಯ ಪ್ರಾದೇಶಿಕ ಹವಾಮಾನ ಕಚೇರಿ  2019 ಡಿಸೆಂಬರ್ 01ರ ಭಾನುವಾರ ಮುನ್ನೆಚ್ಚರಿಕೆ ನೀಡಿತು.

ತಮಿಳುನಾಡಿದ ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತುಕುಡಿ, ರಾಮನಾಥ ಪುರಂ, ತಿರುನಲ್ವೇಲಿ ಜಿಲ್ಲೆಗಳಲ್ಲಿ ಮುಂದಿನ ೨೪ ಗಂಟೆಗಳಲ್ಲಿ ೨೦ ಸೆಂಮೀಗೂ ಹೆಚ್ಚಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಚೆನ್ನೈ ಪ್ರಾದೇಶಿಕ ಕೇಂದ್ರ ಎಚ್ಚರಿಕೆ ನೀಡಿತು.

ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಪುವಿಯರಸನ್ ಪ್ರಕಾರ ತಮಿಳುನಾಡಿನಾದ್ಯಂತ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಕಳೆದ ೨೪ ಗಂಟೆಗಳಲ್ಲಿ ತೂತುಕುಡಿಯ ಸಾತಂಕುಲಂ ಪಟ್ಟಣದಲ್ಲಿ ೧೯ ಸೆಂಮೀ ಮಳೆ ಸುರಿದಿದೆ. ಕಡಲೂರಿನಲ್ಲಿ ೧೭ ಸೆಂಮೀ ಮಳೆಯಾಗಿದೆ ಮತ್ತು ತಿರುನಲ್ವೇಲಿ ಜಿಲ್ಲೆಯಲ್ಲಿ ೧೬ ಸೆಂಮೀ ಮಳೆ ಬಿದ್ದಿದೆ. ಲಕ್ಷದ್ವೀಪ ಮತ್ತು ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದ ಕಾರಣ ಭಾರೀ ಬಿರುಗಾಳಿ ಏಳುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಮುಂದಿನ ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯುವುದು ಬೇಡ ಎಂದು ಕೇಂದ್ರದ ನಿರ್ದೇಶಕರು ತಿಳಿಸಿದರು.

ಅಕ್ಟೋಬರ್ ೧ರಿಂದ ತಮಿಳುನಾಡಿನಲ್ಲಿ ೩೯ ಸೆಂಮೀ ಮಳೆಯಾಗಿದೆ ಎಂದು ಅವರು ಹೇಳಿದರು.

No comments:

Advertisement