Thursday, December 12, 2019

ಹಿಂಸೆಗೆ ತಿರುಗಿದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ

ಹಿಂಸೆಗೆ ತಿರುಗಿದ ಪೌರತ್ವ ತಿದ್ದುಪಡಿ ಮಸೂದೆ
ವಿರೋಧಿ ಪ್ರತಿಭಟನೆ
ತ್ರಿಪುರಾ, ಅಸ್ಸಾಮಿನಲ್ಲಿ ಸೇನೆಗೆ ಬುಲಾವ್, ಕರ್ಫ್ಯೂ, ಇಂಟರ್ ನೆಟ್ ಸ್ಥಗಿತ
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಅಸ್ಸಾಮಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದನ್ನು ಅನುಸರಿಸಿ ನಾಗರಿಕ ಆಡಳಿತವು ಮೂರು ಸೇನಾ ಕಾಲಂಗಳನ್ನು ಕರೆಸಿಕೊಂಡಿದ್ದು, ಹಲವಡೆ ಕರ್ಫ್ಯೂ ಜಾರಿ ಮಾಡಿತು. ಅಸ್ಸಾಮಿನ ೧೦ ಜಿಲ್ಲೆಗಳಲ್ಲಿ 2019 ಡಿಸೆಂಬರ್ 11ರ ಬುಧವಾರ  ರಾತ್ರಿ ೭ ಗಂಟೆಯಿಂದ ೨೪ ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್ ಸ್ಥಗಿತಗೊಳಿಸಲಾಯಿತು.

ಸೇನೆಯ ಎರಡು ಕಾಲಂಗಳನ್ನು ತ್ರಿಪುರಾದ ಕಂಚನಪುರ ಮತ್ತು ಮನ ಸಾಮಾನ್ಯ  ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಮೂರನೇ ಕಾಲಂನ್ನು ಅಸ್ಸಾಮಿನ ಬೊಂಗಾಯಿಗಾಂವ್‌ನಲ್ಲಿ ನಿಯೋಜನೆಗಾಗಿ ಕಾಯ್ದಿರಿಸಿದೆ ಎಂದು ಸೇನೆ ತಿಳಿಸಿದೆ.

ಪೌರತ್ವ (ತಿದ್ದುಪಡಿ) ಮಸೂದೆಯು ೨೦೧೪ರ ಡಿಸೆಂಬರ್ ೩೧ಕ್ಕೆರಂದು ಅಥವಾ ಅದಕ್ನೆ ಮುನ್ನ ಭಾರತಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಉದ್ದೇಶಿಸಿದೆ.

ಅಸ್ಸಾಮಿನಲ್ಲಿ ಸಹಸ್ರಾರು ಪ್ರತಿಭಟನೆಕಾರರು ವಿವಿಧ ಸ್ಥಳಗಳಲ್ಲಿ ಬೀದಿಗಳಿಗೆ ಇಳಿದಿದ್ದು, ಪೊಲೀಸರ ಜೊತೆಗೆ ಘರ್ಷಣೆಗೆ ನಡೆಸಿದರು. ಅಸ್ಸಾಮ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮುಕ್ತಾಯಗೊಂಡಿದ್ದ ೬ ವರ್ಷಗಳ ವಿದ್ಯಾರ್ಥಿಗಳ ಅಕ್ರಮ ವಲಸೆ ವಿರೋಧಿ ಚಳವಳಿ ಕಾಲಕ್ಕಿಂತಲೂ ವ್ಯಾಪಕ ಸ್ವರೂಪವನ್ನು ಪ್ರತಿಭಟನೆ ಪಡೆದಿದ್ದು, ಪರಿಣಾಮವಾಗಿ ರಾಜ್ಯದಲ್ಲಿ ಒಂದು ರೀತಿಯ ಅರಾಜಕ ಸ್ಥಿತಿ ಉದ್ಭವಿಸಿತು.

ಯಾವುದೇ ಪಕ್ಷ ಅಥವಾ ವಿದ್ಯಾರ್ಥಿ ಸಂಘಟನೆ ಹರತಾಳಕ್ಕೆ ಕರೆ ನೀಡಿರದಿದ್ದರೂ, ಸಚಿವಾಲಯದ ಮುಂಭಾಗ ಸೇರಿದಂತೆ ರಾಜ್ಯಾದ್ಯಂತ  ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದರು. ಸಂಜೆಯ ವೇಳೆಗೆ ಸರ್ಕಾರವು ಲಖೀಂಪುರ, ಧೇಮಜಿ, ತೀನ್ ಸುಕಿಯಾ, ದೀಬ್ರುಗಢ, ಛರಾಯಿದೇವ್, ಶಿವನಗರ, ಜೊರ್‍ಹಾತ್, ಗೋಲಘಾಟ್, ಕಾಮರೂಪ್ (ಮೆಟ್ರೋ) ಮತ್ತು ಕಾಮರೂಪ್ ಜಿಲ್ಲೆಗಳಲ್ಲಿ ಗುರುವಾರ ೭ ಗಂಟೆಯವರೆಗೆ ೨೪ ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆ ಅಮಾನತುಗೊಳಿಸುತ್ತಿರುವುದಾಗಿ ಪ್ರಕಟಿಸಿತು.

ಗುವಾಹಟಿಯಲ್ಲಿ ಸಚಿವಾಲಯದ ಮುಂಭಾಗದಲ್ಲಿ ನಡೆದ ಪೊಲೀಸ್ ಕಾರ್‍ಯಾಚರಣೆಯಲ್ಲಿ ಹಲವಾರು ಪ್ರತಿಭಟನಕಾರರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಕಾರರು ಟಿವಿ ಚಾನೆಲ್ ಗಳಿಗೆ ತಿಳಿಸಿದರು. ಗುವಾಹಟಿ- ಶಿಲ್ಲಾಂಗ್ ರಸ್ತೆಯಲ್ಲಿ ಪೊಲೀಸರು ಇರಿಸಿದ್ದ ಅಡೆತಡೆಗಳನ್ನು ಪ್ರತಿಭಟನಕಾರರು ಕಿತ್ತು ಹಾಕಿದಾಗ ಪೊಲೀಸರು ಪ್ರತಿಭಟನಕಾರರ ಮೇಲೆ ಆಶ್ರುವಾಯು ಪ್ರಯೋಗದ ಜೊತೆಗೆ ಬೆತ್ತ ಪ್ರಹಾರವನ್ನೂ ನಡೆಸಿದರು.

2019 ಡಿಸೆಂಬರ್ 15ರ ಭಾನುವಾರ ಜಪಾನ್ ಪ್ರಧಾನಿ ಶಿಂಘೋ ಅಬೆ ಅವರ ಜೊತೆ ನಡೆಯಬೇಕಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಶೃಂಗಸಭೆಗಾಗಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯನ್ನೂ ಧ್ವಂಸಗೊಳಿಸಿದ ಪ್ರತಿಭಟನಕಾರರು, ಸಚಿವಾಲಯದ ಮುಂದೆ ಹಾಕಲಾಗಿದ್ದ ಸರ್ಕಾರದ ಕಲ್ಯಾಣ ಕಾರ್‍ಯಕ್ರಮಗಳಿಗೆ ಸಂಬಂಧಿಸಿದ ಬ್ಯಾನರ್ ಮತ್ತು ಭಿತ್ತಿ ಚಿತ್ರಗಳನ್ನು ಕಿತ್ತು ಹಾಕಿದರು.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಕಾರರು ದೀಬ್ರುಗಢದಲ್ಲಿ ಪೊಲೀಸರ ಜೊತೆ ಘರ್ಷಿಸಿದಾಗ ಪ್ರತಿಭಟನಕಾರರನ್ನು ಚದುರಿಸಲು ರಬ್ಬರ್ ಬುಲ್ಲೆಟ್ ಮತ್ತು ಅಶ್ರುವಾಯು ಶೆಲ್ ಪ್ರಯೋಗಿಸಲಾಯಿತು.

ಜೊರ್‍ಹಾತ್, ಗೋಲಘಾಟ್, ದೀಬ್ರುಗಢ, ತೀನ್ ಸುಕಿಯಾ, ಶಿವಸಾಗರ, ಬೊಂಗಾಯಿಗಾಂವ್, ನಾಗಾಂವ್, ಸೋನಿತಪುರ ಮತ್ತು ಇತರ ಹಲವಾರು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆಗಳು ನಡೆದವು.

ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರ ಪಟ್ಟಣವಾಧ ಛಬುವಾದಲ್ಲಿ ಮಸೂದೆ ವಿರುದ್ಧ ಮೋಟಾರ್ ಸೈಕಲ್ ರ್‍ಯಾಲಿ ಸಂಘಟಿಸಲಾಗಿತ್ತು. ಪ್ರತಿಭಟನೆಗಳ ಪರಿಣಾಮವಾಗಿ ಅಸ್ಸಾಂ ಮುಖ್ಯಮಂತ್ರಿ ಸೋನೋವಾಲ್ ಅವರು ಬುಧವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೂ ಘಟಿಸಿತು. ಆದಾಗ್ಯೂ ಸೋನೋವಾಲ್ ಅವರ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನು ’ಸಮರಾಂಗಣವಾಗಿ ಮಾರ್ಪಟ್ಟಿದ್ದ ನಗರದ ವಿವಿಧ ಭಾಗಗಳ ಮೂಲಕವಾಗಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಗುವಾಹಟಿ ವಿಶ್ವವಿದ್ಯಾಲಯ, ಕಾಟನ್ ವಿಶ್ವ ವಿದ್ಯಾಲಯ ಮತ್ತು ದೀಬ್ರುಗಢ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆಗಳ ಪರಿಣಾಮವಾಗಿ ಬುಧವಾರ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಯಿತು.

ವಲಸೆಗೆ ಧರ್ಮವನ್ನು ಮುಖ್ಯ ಆಧಾರವನ್ನಾಗಿಮಾಡಿದ್ದನ್ನು ’ಸಂವಿಧಾನಬಾಹಿರ ಎಂಬುದಾಗಿ ವಿರೋಧ ಪಕ್ಷಗಳು ಕರೆದಿದ್ದರೂ, ಅಸ್ಸಾಂ ಮತ್ತು ತ್ರಿಪುರಾದಂತಹ ರಾಜ್ಯಗಳ ಭಿನ್ನ ಜನಾಂಗೀಯರು ಬಾಂಗ್ಲಾದಿಂದ ಇತ್ತೀಚಿನ ದಶಕಗಳಲ್ಲಿ ಭಾರೀ ಪ್ರಮಾಣದಲ್ಲಿ ವಲಸೆ ಬಂದಿರುವ ಹಿಂದುಗಳಿಗೆ ಪೌರತ್ವ  ಲಭಿಸುತ್ತದೆ ಎಂಬ ಕಾರಣಕ್ಕಾಗಿ ಮಸೂದೆಯನ್ನು ವಿರೋಧಿಸಿದರು.

No comments:

Advertisement