Wednesday, December 11, 2019

ಪೌರತ್ವ ತಿದ್ದುಪಡಿ ಮಸೂದೆ: ಅಮೆರಿಕಕ್ಕೆ ಭಾರತದ ಎದಿರೇಟು

ಪೌರತ್ವ ತಿದ್ದುಪಡಿ ಮಸೂದೆ: ಅಮೆರಿಕಕ್ಕೆ ಭಾರತದ ಎದಿರೇಟು
ನವದೆಹಲಿ: ಭಾರತದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ ನೀಡಿರುವ ಹೇಳಿಕೆ ಅಸಮರ್ಪಕ, ಅನಗತ್ಯ ಮತ್ತು ಅಧಿಕಾರ ವ್ಯಾಪ್ತಿ ಮೀರಿದ್ದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಡಿಸೆಂಬರ್ 10ರ ಮಂಗಳವಾರ ತಿರುಗೇಟು ನೀಡಿತು.

ಅಮೆರಿಕದ ಆಯೋಗವು ತನಗೆ ಅಧಿಕಾರ ವ್ಯಾಪ್ತಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಪಾತದ ಹೇಳಿಕೆ ನೀಡಿದೆ ಎಂದು ಭಾರತ ಹೇಳಿತು.

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಮಸೂದೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯು ಸಮರ್ಪಕವೂ ಅಲ್ಲ ಅಪೇಕ್ಷಿತವೂ ಅಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.

ಪೌರತ್ವ ತಿದ್ದುಪಡಿ ಮಸೂದೆಯಾಗಲೀ, ಇಲ್ಲವೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯಾಗಲೀ ಭಾರತದ ಯಾವುದೇ ಮತ ನಂಬಿಕೆಯ ಯಾರೇ ನಾಗರಿಕನನ್ನು ಪೌರತ್ವ ವಂಚಿತನನ್ನಾಗಿ ಮಾಡುವುದಿಲ್ಲಎಂದು ಅವರು ನುಡಿದರು.

ಯುಎಸ್ಸಿಐಆರ್ಎಫ್ ನಿಲುವು, ಅದರ ಹಿಂದಿನ ದಾಖಲೆಗಳನ್ನು ಅಧ್ಯಯನ ಮಾಡಿದರೆ ಅಚ್ಚರಿಯದೇನೂ ಅಲ್ಲ. ಆದಾಗ್ಯೂ, ಆಯೋಗವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪೂರ್ವಾಗ್ರಹಗಳಿಗೆ ಅನುಗುಣವಾಗಿ ಪಕ್ಷಪಾತದ ವರ್ತನೆ ತೋರಿರುವುದು ವಿಷಾದನೀಯ. ವಿಷಯಕ್ಕೆ ಸಂಬಂಧಿಸಿದಂತೆ ಅದಕ್ಕೆ ಅತ್ಯಲ್ಪ ಜ್ಞಾನ ಇದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಅದಕ್ಕೆ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಅಧಿಕಾರ ವ್ಯಾಪ್ತಿ ಕೂಡಾ ಇಲ್ಲಎಂದು ರವೀಶ್ ಕುಮಾರ್ ಹೇಳಿದರು.

ಲೋಕಸಭೆಯು 2019 ಡಿಸೆಂಬರ್ 09ರ ಸೋಮವಾರ ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಮುಸ್ಲಿಮೇತರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಮಸೂದೆಗೆ ತನ್ನ ಅಂಗೀಕಾರವನ್ನು ನೀಡಿತ್ತು.

ಏಳು  ತಾಸುಗಳ ಕಾವೇರಿದ ಚರ್ಚೆಯ ಬಳಿಕ ಮತಕ್ಕೆ ಹಾಕಿದಾಗ ಮಸೂದೆ ಪರವಾಗಿ ೩೧೧ ಹಾಗೂ ವಿರುದ್ಧ ೮೨ ಮತಗಳು ಬಂದಿದ್ದವು.

ಮಸೂದೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು. ಮಸೂದೆಯು ಸಂವಿಧಾನದ ೧೪ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಮತ್ತು ಅಸಂವಿಧಾನಾತ್ಮಕವೂ ಅಲ್ಲ. ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಮ್ಯಾನ್ಮಾರಿನಿಂದ ಬರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದ ಪೌರತ್ವವನ್ನು ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಲೋಕಸಭೆಯಲ್ಲಿ ಕೋಲಾಹಲಕಾರಿ ಚರ್ಚೆಯ ಬಳಿಕ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ ಅವರು, ಉದ್ದೇಶಿತ ಮಸೂದೆಯು ರಾಷ್ಟ್ರದಲ್ಲಿನ ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡುತ್ತದೆ ಎಂಬ ವಿರೋಧಪಕ್ಷಗಳ ಟೀಕೆಗಳನ್ನು ತಿರಸ್ಕರಿಸಿದ್ದರು.

ಯಾವುದೇ ಧರ್ಮದ ಯಾರೇ ವ್ಯಕ್ತಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಯ ಪಡುವ ಅಗತ್ಯ ಇಲ್ಲ. ಸರ್ಕಾರ ಎಲ್ಲ ಧರ್ಮೀಯರ ಹಿತವನ್ನು ಕಾಪಾಡಲು ಬದ್ಧವಾಗಿದೆ ಎಂದು  ಗೃಹಸಚಿವರು ಹೇಳಿದ್ದರು.

ನೆರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದ ಅಲ್ಲಿನ ಅಲ್ಪಸಂಖ್ಯಾತ ನಿರಾಶ್ರಿತರಿಗೆ  ಪೌರತ್ವ (ತಿದ್ದುಪಡಿ) ಮಸೂದೆ ಪರಿಹಾರ ಒದಗಿಸಲಿದೆ ಎಂದೂ ಅವರು ಪ್ರತಿಪಾದಿಸಿದ್ದರು.

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಖಂಡಿತವಾಗಿಯೂ ಜಾರಿಗೆ ತರಲಾಗುವುದು. ಇದರಿಂದ ದೇಶದಲ್ಲಿ ಒಬ್ಬ ಅಕ್ರಮ ವಲಸಿಗನೂ ಉಳಿಯುವುದಿಲ್ಲ’ ಎಂದೂ ಶಾ ಹೇಳಿದ್ದರು.

೧೯೪೭ರಲ್ಲಿ ಭಾರತ ಧರ್ಮದ ಆಧಾರದ ಮೇಲೆ ಇಬ್ಭಾಗವಾಗದಿದ್ದರೆ ಪೌರತ್ವ (ತಿದ್ದುಪಡಿ) ಮಸೂದೆಯ ಅಗತ್ಯ ಇರಲಿಲ್ಲ ಎಂದ ಅವರು ೧೯೫೧ ರಲ್ಲಿ ಭಾರತದಲ್ಲಿ  ಶೇ .೮ರಷ್ಟು ಇದ್ದ  ಮುಸ್ಲಿಮರ ಜನಸಂಖ್ಯೆ ೨೦೧೧ರ ವೇಳೆಗೆ ಶೇ ೧೪.೮ಕ್ಕೆ ಏರಿದೆ. ಆದರೆ ಇದೇ ಅವಧಿಯಲ್ಲಿ ಹಿಂದೂ ಸಮುದಾಯದ ಜನಸಂಖ್ಯೆ ಶೇ ೮೪ರಿಂದ ಶೇ ೭೯ಕ್ಕೆ ಕುಸಿದಿದೆ ಎಂದು ವಿವರಿಸಿದ್ದರು.

ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ವಿರೋಧಿಯಾಗಿದ್ದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡಿರುವುದಾಗಿ ವಿಪಕ್ಷಗಳು ಆರೋಪಿಸಿದ್ದವು.

ಅಮೆರಿಕ ಆಯೋಗದ ಹೇಳಿಕೆ: ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿರುವುದು ತೀವ್ರ ಸಮಸ್ಯೆಗೆ ಎಡೆ ಮಾಡಿಕೊಡಲಿದೆ ಎಂದು 2019 ಡಿಸೆಂಬರ್ 09ರ ಸೋಮವಾರ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಆಯೋಗ(ಯುಎಸ್ ಸಿಐಆರ್ ಎಫ್) ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

ಲೋಕಸಭೆಯ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಮುಖ್ಯ ನಾಯಕರ ವಿರುದ್ಧ ನಿರ್ಬಂಧ ವಿಧಿಸಬೇಕು ಎಂದು ಅಮೆರಿಕ ಸರ್ಕಾರಕ್ಕೆ ಆಯೋಗ ಮನವಿ ಮಾಡಿಕೊಂಡಿತ್ತು.

ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿರುವುದು ಕಳವಳ ಮೂಡಿಸಿದೆ. ಇದುತಪ್ಪು ದಿಕ್ಕಿನಲ್ಲಿ ಅಪಾಯಕಾರಿ ತಿರುವುಎಂದು ಆಯೋಗ ಬಣ್ಣಿಸಿತ್ತು. ಭಾರತೀಯ ಸಂವಿಧಾನದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವಕ್ಕೆ ಹಾಗೂ ಭಾರತದ ಭವ್ಯ ಇತಿಹಾಸಕ್ಕೆ ಮಸೂದೆಯು ವಿರುದ್ಧವಾಗಿದೆ ಎಂದು ಆಯೋಗದ ಹೇಳಿಕೆ ತಿಳಿಸಿತ್ತು.

ಬಾಂಗ್ಲಾದೇಶ, ಆಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಮಸೂದೆ ರಾಜ್ಯಸಭೆಯಲ್ಲಿ 2019 ಡಿಸೆಂಬರ್ 11ರ ಬುಧವಾರ ಮಂಡನೆಯಾಗಲಿದೆ.

ಏನಿದು ಪೌರತ್ವ (ತಿದ್ದುಪಡಿ) ಮಸೂದೆ?
ಬಾಂಗ್ಲಾದೇಶ, ಆಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಮಸೂದೆ. ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಈಗಿನ ಮಸೂದೆ ರೂಪಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ ೧೨ ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಪ್ರಕಾರ, ಇವರೆಲ್ಲರೂ  ಭಾರತದಲ್ಲಿ ವರ್ಷ ವಾಸವಿದ್ದರೆ ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇತರ ರಾಷ್ಟ್ರಗಳ ಮುಸ್ಲಿಮರಿಗೆ ಮಸೂದೆ ಅಡಿಯಲ್ಲಿ ಭಾರತ ಪೌರತ್ವ ನೀಡಲಾಗುವುದಿಲ್ಲ. ತಿದ್ದುಪಡಿ ಮಸೂದೆಯನ್ನು ಮೊದಲಿಗೆ ೨೦೧೬ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

No comments:

Advertisement