Tuesday, January 28, 2020

ಮೇಲ್ಮನೆ ರದ್ದು: ಆಂಧ್ರ ಅಸೆಂಬ್ಲಿ ನಿರ್ಣಯ

ಮೇಲ್ಮನೆ ರದ್ದು: ಆಂಧ್ರ ಅಸೆಂಬ್ಲಿ  ನಿರ್ಣಯ
ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇರುವ ವಿಧಾನಪರಿಷತ್ತನ್ನು (ಮೇಲ್ಮನೆ) ರದ್ದು ಪಡಿಸುವ ನಿರ್ಣಯವನ್ನು ಆಂಧ್ರ ವಿಧಾನಸಭೆ  2020 ಜನವರಿ 27ರ ಸೋಮವಾರ ಅವಿರೋಧವಾಗಿ ಅಂಗೀಕರಿಸಿತು. ಇದರೊಂದಿಗೆ ಆಂಧ್ರಪ್ರದೇಶದಲ್ಲಿ ಮೇಲ್ಮನೆಯು ಎರಡನೇ ಬಾರಿಗೆ ರದ್ದಾಗುತ್ತಿದೆ.

ಸೋಮವಾರ ಬೆಳಗ್ಗೆಯಷ್ಟೇ ೧೩ ವರ್ಷಗಳ ಹಿಂದೆ ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನ ಪರಿಷತ್ತನ್ನು ರದ್ದು ಪಡಿಸುವ ನಿರ್ಧಾರಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಬಳಿಕ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು.

ನಿರ್ಣಯದ ಪರವಾಗಿ ೧೩೩ ಮತಗಳು ಬಿದ್ದಿದ್ದು, ನಿರ್ಣಯದ ವಿರುದ್ಧ ಯಾವುದೇ ಮತ ಚಲಾವಣೆಯಾಗಿಲ್ಲ. ಈ ಮೂಲಕ ಆಂಧ್ರಪ್ರದೇಶದಲ್ಲಿ ಎರಡನೇ ಬಾರಿಗೆ ವಿಧಾನಪರಿಷತ್ತನ್ನು ವಿಸರ್ಜಿಸಲಾಯಿತು.

ವಿಧಾನ ಪರಿಷತ್ ರದ್ದುಪಡಿಸಲು ಒಪ್ಪಿಗೆ ಕೋರಿ ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಲಾಗುತ್ತದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಕೆಲವೇ ದಿನಗಳ ಹಿಂದೆ ಮೇಲ್ಮನೆಯಲ್ಲಿ ಜಗನ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಿತ್ತು. ಸಿಎಂ ಜಗನ್ ಮೋಹನ್ ರೆಡ್ಡಿ ಮಹತ್ವಾಕಾಂಕ್ಷೆಯ ಮೂರು ರಾಜಧಾನಿ ರೂಪಿಸುವ ಮತ್ತು ಸಿಆರ್‌ಡಿಎ ರದ್ದುಗೊಳಿಸುವ ಮಸೂದೆಯನ್ನು ವಿಧಾನ ಪರಿಷತ್ ಅನುಮೋದಿಸದೆ ಆಯ್ಕೆ ಸಮಿತಿಗೆ ಕಳುಹಿಸಿತ್ತು. ಹೀಗಾಗಿ ಪರಿಷತ್ತನ್ನೇ ರದ್ದುಪಡಿಸಲು ಜಗನ್ ನಿರ್ಧರಿಸಿದ್ದರು.

೧೯೮೫ರ ಮೇ ೩೧ರಂದು ತೆಲುಗು ದೇಶಂ ಸಂಸ್ಥಾಪಕ ಎನ್.ಟಿ. ರಾಮರಾವ್ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ತನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದ್ದರು. ೨೨ ವರ್ಷಗಳ ಬಳಿಕ ಅಂದರೆ ೨೦೧೭ರಲ್ಲಿ ರಾಜಶೇಖರ ರೆಡ್ಡಿಯವರು ಮೇಲ್ಮನೆಯನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು.

ಇದೀಗ ರಾಜಶೇಖರ ರೆಡ್ಡಿ ಅವರ ಪುತ್ರ ಮೇಲ್ಮನೆಯನ್ನು ರದ್ದುಗೊಳಿಸಿದ್ದಾರೆ. ಇದಕ್ಕೆ ತೆಲುಗು ದೇಶಂ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಾನು ಅಧಿಕಾರಕ್ಕೆ ಬಂದರೆ ಪರಿಷತ್ತನ್ನು ಮತ್ತೆ ಅಸ್ತಿತ್ವಕ್ಕೆ ತರುವುದಾಗಿ ತೆಲುಗುದೇಶಂ ಘೋಷಿಸಿದೆ.

ಸದ್ಯ ದೇಶದಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಅಸ್ತಿತ್ವದಲ್ಲಿದೆ. ಇದರಲ್ಲಿ ಕರ್ನಾಟಕವೂ ಒಂದು. ಇನ್ನುಳಿದ ರಾಜ್ಯಗಳು ಈಗಾಗಲೇ ಮೇಲ್ಮನೆಯನ್ನು ರದ್ದುಪಡಿಸಿವೆ.

No comments:

Advertisement