'ಪಾಕಿಸ್ತಾನಿಗಳು
ಎಂಬ ಹಣೆಪಟ್ಟಿಯಿದ ಘಾಸಿಯಾಗಿದೆ’
ಸುಪ್ರೀಂಕೋರ್ಟಿಗೆ
ಶಾಹೀನ್ಬಾಗ್ ಪ್ರತಿಭಟನಕಾರರ ಅಳಲು
ನವದೆಹಲಿ:
ಪಾಕಿಸ್ತಾನಿಗಳು/ ರಾಷ್ಟ್ರ ವಿರೋಧಿಗಳು/ ಹೊರಗಿನವರು/ ದೇಶದ್ರೋಹಿಗಳು ಇತ್ಯಾದಿ ಹಣೆಪಟ್ಟಿಗಳನ್ನು ಅಂಟಿಸಿದ್ದರಿಂದ ತಮಗೆ ಘಾಸಿಯಾಗಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸಿ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ವಜಾಹತ್ ಹಬೀಬುಲ್ಲಾ ಅವರ ಮೂಲಕ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ (ಅಫಿದವಿತ್) ಸುಪ್ರೀಂಕೋರ್ಟಿಗೆ ತಿಳಿಸಿದರು.
‘ಕೇಂದ್ರ
ಸರ್ಕಾರವು ನಮ್ಮ ಕಳವಳವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಯಾವುದೇ ಮಾತುಕತೆಯನ್ನೂ ನಡೆಸಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ವಿವಾದಾತ್ಮಕ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಆದಷ್ಟೂ ಶೀಘ್ರ ಆಲಿಸಬೇಕು’
ಎಂದು ಶಾಹೀನ್ ಬಾಗ್ನ ಪ್ರತಿಭಟನಾ ನಿರತ
ಮಹಿಳೆಯರ ಪ್ರಮಾಣಪತ್ರ ಸುಪ್ರೀಂಕೋರ್ಟಿಗೆ ಮನವಿ ಮಾಡಿದೆ.
ಶಾಹೀನ್
ಬಾಗ್ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರಸ್ತೆ ತಡೆಯನ್ನು ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯವರ್ತಿಯಾಗಿರುವ ಹಬೀಬುಲ್ಲಾ ಅವರು ’ಪ್ರತಿಭಟನೆಯು ಬಹುತೇಕ ಶಾಂತಿಯುತವಾಗಿದ್ದು, ಪ್ರತಿಭಟನಾ ನಿರತ ಮಹಿಳೆಯರು ಅವರ ಅಭಿಪ್ರಾಯಗಳನ್ನು ಕೋರ್ಟಿನ ಮುಂದೆ ಸಲ್ಲಿಸುವಂತೆ ಕೋರಿದ್ದಾರೆ’ ಎಂದು
ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಪ್ರಮಾಣಪತ್ರವು
ಪ್ರತಿಭಟನಾ ನಿರತ ಮಹಿಳೆಯರ ಕಳವಳಗಳನ್ನು ಪಟ್ಟಿ ಮಾಡಿದೆ. ಪ್ರತಿಭಟನಾಕಾರರು ತಾವು ದೇಶದ ಹೆಮ್ಮೆಯ ಪೌರರು ಎಂಬುದಾಗಿ ಪುನರುಚ್ಚರಿಸಿದ್ದು ತಮ್ಮನ್ನು ರಾಷ್ಟ್ರವಿರೋಧಿಗಳು ಮತ್ತು ಪಾಕಿಸ್ತಾನೀಯರು ಎಂಬುದಾಗಿ ಬಣ್ಣಿಸಲಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
‘ನಾವು
ರಾಷ್ಟ್ರದ ಹೆಮ್ಮೆಯ ಪೌರರಾಗಿದ್ದೇವೆ. ಆದರೆ ವಿವಿಧ ರಾಜಕೀಯ ಭಾಷಣಗಳಲ್ಲಿ ಮತ್ತು ಒಂದು ವರ್ಗದ ಮಾಧ್ಯಮಗಳಲ್ಲಿ ನಮ್ಮನ್ನು ರಾಷ್ಟ್ರ ವಿರೋಧಿಗಳು/ ಹೊರಗಿನವರು/ದೇಶದ್ರೋಹಿಗಳು/ಪಾಕಿಸ್ತಾನಿಗಳಜು ಇತ್ಯಾದಿಯಾಗಿ ದೂಷಿಸುತ್ತಿರುವುದರಿಂದ ನಮಗೆ ಆಳವಾದ ಆಘಾತವಾಗಿದೆ’ ಎಂದು
ಪ್ರಮಾಣಪತ್ರ ತಿಳಿಸಿದೆ.
ಪ್ರತಿಭಟನಕಾರ
ಮಹಿಳೆಯರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣ (ಎನ್ ಆರ್ ಸಿ) ತಮ್ಮ ಅಸ್ತಿತ್ವಕ್ಕೇ ಮಾರಣಾಂತಿಕ ಹೊಡೆತವಾಗಿರುವುದರಿಂದ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರಮಾಣಪತ್ರ ಹೇಳಿದೆ.
ತಾವು
ನಿರ್ದಿಷ್ಟವಾದ ಸ್ಥಳವನ್ನು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿರುವುದು ಏಕೆಂದರೆ ಅದು ಉಭಯ ಕಡೆಗಳಲ್ಲೂ ಶಾಹೀನ್ ಬಾಗ್ ಕಾಲೋನಿಯಿಂದ ಆವೃತವಾಗಿರುವುದರಿಂದ ಅದು ಅಗತ್ಯವಾದ ರಕ್ಷಣೆಯನ್ನು ತಮಗೆ ಒದಗಿಸುತ್ತದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ’ಇದರಿಂದ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ನಡೆಯಬಹುದಾದ ಸಂಭವನೀಯ ದಾಳಿಯಿಂದ ನಮಗೆ ರಕ್ಷಣೆ ಸಿಗುತ್ತದೆ’
ಎಂದು ಪ್ರತಿಭಟನಕಾರ ಮಹಿಳೆಯರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳೆಯರು
ಪ್ರಮಾಣಪತ್ರದಲ್ಲಿ ವ್ಯಕ್ತ ಪಡಿಸಿದ ಕಳವಳದ ಹೊರತಾಗಿ, ಹಬೀಬುಲ್ಲಾ ಅವರು, ತಮ್ಮ ವೈಯಕ್ತಿಕ ಪರಿಶೀಲನೆಯ ಬಳಿಕ ಪೊಲೀಸರು ಅನಗತ್ಯವಾಗಿ ಪ್ರತಿಭಟನೆಗೆ ಸಂಬಂಧವಿಲ್ಲದ ಕಡೆಗಳಲ್ಲಿ ರಸ್ತೆಗಳಿಗೆ ಅಡ್ಡಗಟ್ಟೆ ನಿರ್ಮಿಸಿ ಪ್ರತಿಭಟನಕಾರರ ಮೇಲೆ ದೂಷಣೆ ಬರುವಂತೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದೂ ತಿಳಿಸಿದ್ದಾರೆ.
‘ಸಂಬಂಧವೇ
ಇಲ್ಲದ ರಸ್ತೆಗಳಲ್ಲಿ ಅಡ್ಡಗಟ್ಟೆ ಹಾಕುವ ಮೂಲಕ ಅರಾಜಕ ಸ್ಥಿತಿ ನಿಮಾಣವಾಗಿದೆ’ ಎಂದು
ಹಬೀಬುಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಕೀಲ
ಅಮಿತ್ ಸಾಹ್ನಿ ಮತ್ತು ಬಿಜೆಪಿ ನಾಯಕ ನಂದ ಕಿಶೋರ್ ಗಾರ್ಗ್ ಅವರು ಶಾಹೀನ್ ಬಾಗ್- ಕಾಲಿಂಡಿ ಕುಂಜ್ ಭಾಗದ ರಸ್ತೆ ತಡೆ ತೆರವು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
೨೦೧೯ರ
ಡಿಸೆಂಬರ್ ೧೨ರಂದು ಅಂಗೀಕರಿಸಲಾಗಿರುವ ಪೌರತ್ವ ತಿದುಪಡಿ ಕಾಯ್ದೆಯು ೧೯೫೫ರ ಪೌರತ್ವ ಕಾಯ್ದೆಯ ಸೆಕ್ಷನ್ ೨ಕ್ಕೆ ತಿದ್ದುಪಡಿ ಮಾಡಿದೆ. ’ಅಕ್ರಮ ವಲಸಿಗರು’ ಪದವನ್ನು ವಿವರಿಸುವ ಈ ಸೆಕ್ಷನ್ಗೆ
ಸೆಕ್ಷನ್ ೨(೧)(ಬಿ)
ಸೆಕ್ಷನ್ ಸೇರ್ಪಡೆ ಮಾಡಲಾಗಿದೆ. ಈ ನೂತನ ಸೆಕ್ಷನ್
ಪ್ರಕಾರ ಮುಸ್ಲಿಮ್ ಬಾಹುಳ್ಯದ ಅಫ್ಘಾನಿಸ್ಥಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಧಾಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರೈಸ್ತ ಸಮುದಾಯಗಳು ೧೯೨೦ರ ಪಾಸ್ ಪೋರ್ಟ್ ಕಾಯ್ದೆ ಅಥವಾ ೧೯೪೬ರ ವಿದೇಶೀಯರ ಕಾಯ್ದೆಯಿಂದ ವಿನಾಯ್ತಿ ಪಡೆಯುತ್ತಾರೆ ಮತ್ತು ’ಅಕ್ರಮ ವಲಸಿಗರು’ ಎಂಬುದಾಗಿ ಪರಿಗಣಿತರಾಗುವುದಿಲ್ಲ. ಪರಿಣಾಮವಾಗಿ ಇಂತಹ ವ್ಯಕ್ತಿಗಳು ೧೯೯೫ರ ಪೌರತ್ವ ಕಾಯ್ದೆಯ ಸೆಕ್ಷನ್ ೬ರ ಅಡಿಯಲಿ ಭಾರತದ
ಸಹಜ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
ಮುಸ್ಲಿಮ್
ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಈ ಅವಕಾಶವನ್ನು ನೀಡದೇ
ಇರುವುದರಿಂದ ಮುಸ್ಲಿಮ್ ಸಮುದಾಯವು ಇತರ ಆರು ಸಮುದಾಯಗಳಿಗೆ ನೀಡಲಾಗಿರುವ ಸವಲತ್ತಿನಿಂದ ವಂಚಿತವಾಗಿದೆ ಎಂಬುದು ಕಾಯ್ದೆ ವಿರೋಧಿಗಳ ಆರೋಪವಾಗಿದೆ.
ಪೌರತ್ವ
ತಿದ್ದುಪಡಿ ಕಾಯ್ದೆಯಿಂದ (ಸಿಎಎ) ಮುಸ್ಲಿಮರನ್ನು ಹೊರತುಪಡಿಸುವ ಮೂಲಕ ಪೌರತ್ವಕ್ಕೆ ಧಾರ್ಮಿಕ ತಳಹದಿ ಕಲ್ಪಿಸಿದ್ದು ದೇಶಾದ್ಯಂತ
ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಸಿಎಎ ಜೊತೆಗೇ ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಜಾರಿಗೊಳಿಸಿದರೆ ಭಾರೀ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ ಎಂಬ ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ.
ರಾಜಧಾನಿಯಲ್ಲಿ
ಇಂತಹ ಪ್ರತಿಭಟನೆಗಳಿಗೆ ಶಾಹೀನ್ ಬಾಗ್ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದೆ.
ಶಾಹೀನ್
ಬಾಗ್ ನಲ್ಲಿ ರಸ್ತೆಯನ್ನು ಅಡ್ಡಗಟ್ಟಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ವಕೀಲ ಅಮಿತ್ ಸಾಹ್ನಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ವಾಹನಗಳು ಬೇರೆ ಸುತ್ತು ಬಳಸು ಮಾರ್ಗದಲ್ಲಿ ಸಾಗಬೇಕಾದ್ದರಿಂದ ಸಮಯ ಹಾಳಾಗುವುದರ ಜೊತೆಗೆ ಇಂಧನ ಅಪವ್ಯಯವೂ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜನರಿಗೆ
ಪ್ರತಿಭಟನೆಯ ಹಕ್ಕು ಇರುವುದಾದರೂ, ಅದು ನ್ಯಾಯೋಚಿತ ನಿರ್ಬಂಧಗಳಿಗೆ ಒಳಪಟ್ಟಿರಬೇಕು. ಪ್ರತಿಭಟನಕಾರರು ಸಾರ್ವಜನಿಕ ರಸ್ತೆಗಳನ್ನು ಅನಿರ್ದಿಷ್ಟ ಕಾಲ ಅತಿಕ್ರಮಿಸಿಕೊಳ್ಳುವಂತಿಲ್ಲ ಎಂದು ಸಾಹ್ನಿ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಕಳೆದ
ಸೋಮವಾರ ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಮತ್ತು ವಕೀಲರಾದ ಸಾಧನಾ ರಾಮಚಂದ್ರನ್ ಅವರಿಗೆ ಪ್ರತಿಭಟನಕಾರರ ಜೊತೆಗೆ ಮಾತುಕತೆ ನಡೆಸಿ ವಿಷಯಕ್ಕೆ ಪರಿಹಾರ ಹುಡುಕುವಂತೆ ಸೂಚಿಸಿತ್ತು.
ಪ್ರತಿಭಟನೆಯ
ಹಕ್ಕು ಮೂಲಭೂತ ಹಕ್ಕು ಎಂದು ಹೇಳಿದ ಸುಪ್ರೀಂಕೋರ್ಟ್, ಆದರೆ ಇಂತಹ ಪ್ರದರ್ಶನ ಮತ್ತು ಪ್ರತಿಭಟನೆಗಳು ಸಾರ್ವಜನಿಕ ರಸ್ತೆಗಳಲ್ಲಿ ಅನಿರ್ದಿಷ್ಟ ಕಾಲ ನಡೆಯುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿತ್ತು.
No comments:
Post a Comment