೧೨೪ ವರ್ಷದ ಡಾ. ಪಂಡಿತ್ ಸುಧಾಕರ ಚತುರ್ವೇದಿ ವಿಧಿವಶ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರೂ, ವೇದ ವಿದ್ವಾಂಸರು, ಶತಾಯುಷಿಗಳೂ ಆದ ಸುಧಾಕರ ಚತುರ್ವೇದಿ (೧೨೪) 2020 ಫೆಬ್ರುವರಿ 27ರ ಗುರುವಾರ ನಸುಕಿನ ೩ ಗಂಟೆಗೆ ನಿಧನರಾದರು.
ಏಪ್ರಿಲ್ ೨೦, ೧೮೯೭ರಲ್ಲಿ ಜನಿಸಿದ್ದ ಸುಧಾಕರ ಅವರು ನಾಲ್ಕು ವೇದಗಳಿಗೂ ಭಾಷ್ಯ ಬರೆದು ‘ಚತುರ್ವೇದಿ’ ಎನಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಲಿದಾನ ಮಾಡಿದ ಸಾವಿರಾರು ಮಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಮೊಮ್ಮೊಕ್ಕಳ ಜೊತೆ ಜಯನಗರದಲ್ಲಿ ಸುಧಾಕರ ಅವರು ವಾಸವಿದ್ದರು. ರಾಜ್ಯ ವಿವಿಧೆಡೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆರ್ಯಮಿತ್ರ ಇವರ ದತ್ತು ಪುತ್ರ.
ಜಗತ್ತಿನ ಹಿರಿಯಜ್ಜ ಎಂದು ಕರೆಯಬಹುದಾದ ಕನ್ನಡಿಗ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀಜಿಯವರ ಆಪ್ತರಾಗಿದ್ದ, ನಾಲ್ಕು ವೇದಗಳ ಪಂಡಿತ, ಶತಾಯುಷಿ, ೧೨೪ ವರ್ಷ ವಯಸ್ಸಿನ ಸುಧಾಕರ ಚತುರ್ವೇದಿ.
ಮಹಾತ್ಮ ಗಾಂಧಿ ಅವರ ’ಪೋಸ್ಟ್ ಮನ್’ ಎಂದೇ ಹೆಸರಾಗಿದ್ದವರು ಸುಧಾಕರ ಚತುರ್ವೇದಿ. ಅವರ ಬದುಕನ್ನು ಹೋರಾಟ ಮತ್ತು ಅಲೆದಾಟಗಳ ಜೋಡಣೆ ಎನ್ನಬಹುದು. ೧೨೪ ವರ್ಷ ಬದುಕಿದ ಅವರ ನಿತ್ಯ ಚಟುವಟಿಕೆ ಮತ್ತು ಆಹಾರ ಪದ್ಧತಿ ಸೋಜಿಗ ಮೂಡಿಸುತ್ತದೆ. ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವಯೇ ಊಟ. ಅದುವೇ ದೀರ್ಘ ಆಯುಷ್ಯದ ಗುಟ್ಟು!
೧೯೧೫ರಲ್ಲಿ ಸುಧಾಕರ ಅವರು ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿ ಅವರೊಂದಿಗೆ ಭೇಟಿಯಾಗಿತ್ತು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡ ಗಾಂಧೀಜಿ ಚಕಿತರಾಗಿದ್ದರು. ಅಂದಿನಿಂದ ಬಾಪು ಜೊತೆಗಿನ ಸ್ನೇಹ ಶುರುವಾಯಿತು. ಕನ್ನಡದಲ್ಲಿ ಸಹಿ ಮಾಡಲು ಹಾಗೂ ಮಾತು ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧೀಜಿಗೆ ಕಲಿಸುವ ಪ್ರಯತ್ನ ಮಾಡಿದ್ದರಂತೆ.
ಮಹಾತ್ಮ ಗಾಂಧಿ ಅನೇಕ ಬಾರಿ ಪತ್ರ ಬರೆಯುವಾಗ ಸುಧಾಕರರನ್ನು ಜೊತೆಯಲ್ಲಿ ಇರಿಸಿಕೊಳ್ಳುತ್ತಿದ್ದರು. ಕೆಲವು ಸಹ ವೈಸ್ ರಾಯ್ ಗಳ ಜೊತೆ ನಡೆಸುವ ಪತ್ರ ವ್ಯವಹಾರಗಳ ಹೊಣೆಯನ್ನು ಸುಧಾಕರರಿಗೇ ವಹಿಸಿದ್ದರಂತೆ. ಗಾಂಧೀಜಿ ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಪತ್ರಿಕೆಗಳನ್ನು ಇಂಗ್ಲಿಷ್ ಭಾಷೆ ತರ್ಜುಮೆ ಮಾಡುತಿದ್ದರಂತೆ. ಹಾಗೂ ಕನ್ನಡದಲ್ಲಿ ಅಚ್ಚಾಗುತ್ತಿದ್ದ ‘ಹರಿಜನ’ ಪತ್ರಿಕೆಗೆ ಸುಧಾಕರ ಅವರ ಸಹೋದರ ಸಂಪಾದಕರಾಗಿದ್ದರೆಂದು ಹೇಳಿಕೊಂಡಿದ್ದರು.
ಸುಧಾಕರ ಅವರು ತಂದೆ ತುಮಕೂರು ಮೂಲದವರಾಗಿದ್ದರೂ, ಇವರು ಹುಟ್ಟಿಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ೧೯೧೫ರಲ್ಲಿ ಹರಿದ್ವಾರ ಗುರುಕುಲಕ್ಕೆ ಸೇರಿ, ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಇಲ್ಲಿ ಅವರಿಗೆ ಗಾಂಧಿಜಿಯ ಪರಿಚಯವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಇವರು ೧೨ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು.
ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಸುಮಾರು ೫೦ ಕೃತಿಗಳನ್ನು ಇವರು ರಚಿಸಿದ್ದರು. ಇವರ ೪ ವೇದಗಳ ಬೃಹತ್ ಸಂಪುಟ ೨೦ ಸಂಪುಟಗಳಲ್ಲಿ ಪ್ರಕಟಗೊಂಡಿತ್ತು.
ವೇದ ತರಂಗ ಮತ್ತು ವೇದ ಪ್ರಕಾಶ ಎಂಬ ಮಾಸ ಪತ್ರಿಕೆಗಳನ್ನು ಮುನ್ನಡೆಸಿದ್ದರು. ಕವಿ, ಉತ್ತಮ ಭಾಷಣಕಾರ ಎನಿಸಿಕೊಂಡಿದ್ದ ಸುಧಾಕರ ಅವರು ಉತ್ತಮ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದರು. ವೈಚಾರಿಕ ನೆಲೆಯಲ್ಲಿ ವೇದಗಳ ಅಧ್ಯಯನವನ್ನು ಇವರು ನಡೆಸಿದ್ದರು. ತಮ್ಮಲ್ಲಿನ ಪ್ರಗತಿಪರ ಚಿಂತನೆಗೆ ವೇದಗಳೇ ಪ್ರೇರಣೆ ಎಂದು ಅವರು ಹೇಳುತ್ತಿದ್ದರು.
ಜಯನಗರದ ಕೃಷ್ಣಸೇವಾಶ್ರಮದ ಎದುರಿಗೆ ಇವರ ಮನೆಯಿದ್ದು, ಅಲ್ಲಿ ಮಧ್ಯಾಹ್ನ ೩ರವರೆಗೆ ಸಾರ್ವಜನಿಕ ವೀಕ್ಷಣೆ ಬಳಿಕ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಿತು.
No comments:
Post a Comment