Saturday, February 29, 2020

ಹಿರಿಯ ಇತಿಹಾಸಕಾರ ಷ.ಶೆಟ್ಟರ್ ನಿಧನ

ಹಿರಿಯ ಇತಿಹಾಸಕಾರ ಷ.ಶೆಟ್ಟರ್ ನಿಧನ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಇತಿಹಾಸಕಾರ ಮತ್ತು ಸಂಶೋಧಕ ಷ.ಶೆಟ್ಟರ್ (೮೫) ಅವರು 2020 ಫೆಬ್ರುವರಿ 28ರ ಶುಕ್ರವಾರ ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ಕೆಲ ದಿನಗಳ ಹಿಂದೆಷ್ಟೇ ಷ.ಶೆಟ್ಟರ್ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈದಿನ ನಸುಕಿನ ೩.೧೫ರ ವೇಳೆ ಹೃದಯಘಾತದಿಂದ ನಿಧನರಾದರು.

ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದರು.
 
ಇತಿಹಾಸ ಸಂಶೋಧನೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಖ್ಯಾತಿ ಗಳಿಸಿದ್ದ  ಷ.ಶೆಟ್ಟರ್ ಅವರು ೧೯೩೫ರ ಡಿಸೆಂಬರ್ ೧೧ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಪೂರೈಸಿ ಆ ನಂತರ ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.

ಹಳೆಗನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿ ಹೊಂದಿದ್ದ ಅವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು. ಖ್ಯಾತ ವಿಶ್ವವಿದ್ಯಾಲಯಗಳಾದ ಕೇಂಬ್ರಿಜ್,  ಹಾರ್ವಡ್, ಹೈಡಲ್ಬರ್ಗ್, ಮಾಸ್ಕೋ ಯೂನಿವರ್ಸಿಟಿಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

೨೦೧೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶ್ರವಣ ಬೆಳಗೊಳದಲ್ಲಿ ಹಮ್ಮಿಕೊಂಡಿದ್ದ “ಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇತಿಹಾಸ ಹಾಗೂ ಪ್ರಾಚೀನ ಲಿಪಿಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದ ಅವರು “ಶ್ರವಣಬೆಳಗೊಳ, “ಸಾವಿಗೆ ಆಹ್ವಾನ,” ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ,”ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ,” ಸಾವನ್ನು ಅರಸಿ’, ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ,”ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ,” ಪ್ರಾಕೃತ ಜಗದ್ವಲಯ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು.. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಷ.ಶೆಟ್ಟರ್ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.

No comments:

Advertisement