ನಿರ್ಭಯಾ ಪ್ರಕರಣ:
ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್
ಗಲ್ಲು ಜಾರಿ
ತಡೆಗೆ ವ್ಯವಸ್ಥಿತ ಕುತಂತ್ರ: ಕೇಂದ್ರ ಆರೋಪ
ನವದೆಹಲಿ: ನಿರ್ಭಯಾ
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ತಡೆ ನೀಡಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ತೀರ್ಪನ್ನು ದೆಹಲಿ ಹೈಕೋರ್ಟ್ 2020 ಫೆಬ್ರುವರಿ 02ರ ಭಾನುವಾರ ಕಾಯ್ದಿರಿಸಿತು.
ಎಲ್ಲ ಕಕ್ಷಿದಾರರೂ
ತಮ್ಮ ವಾದಗಳನ್ನು ಪೂರ್ಣಗೊಳಿಸಿದ ಬಳಿಕ ತಾನು ಆದೇಶ ನೀಡುವುದಾಗಿ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ಹೇಳಿದರು.
ಇದಕ್ಕೆ ಮುನ್ನ
ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳು ತಮ್ಮ ಗಲ್ಲು ಜಾರಿಯನ್ನು ವಿಳಂಬಗೊಳಿಸುವ ಮೂಲಕ ’ಕಾನೂನಿನ ಆದೇಶವನ್ನು ವಿಫಲಗೊಳಿಸಲು ಉದ್ದೇಶಪೂರ್ವಕವಾದ, ಲೆಕ್ಕಾಚಾರದ ಮತ್ತು ಅತ್ಯಂತ ವ್ಯವಸ್ಥಿತ ಚಂತನೆಯ ಕುತಂತ್ರವನ್ನು ಹೆಣೆದಿದ್ದಾರೆ’ ಎಂದು
ಹೈಕೋರ್ಟಿಗೆ ತಿಳಿಸಿದರು.
ಕ್ಯುರೇಟಿವ್ ಅರ್ಜಿಯನ್ನು
ಅಥವಾ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸದೇ ಇರುವ ಶಿಕ್ಷಿತ ಅಪರಾಧಿ ಪವನ್ ಗುಪ್ತ ಕ್ರಮವು ಉದ್ದೇಶಪೂರ್ವಕವಾದ, ಲೆಕ್ಕಾಚಾರದ ನಿಷ್ಕ್ರಿಯತೆಯಾಗಿದೆ ಎಂದು ಮೆಹ್ತ ಅವರು ನ್ಯಾಯಮೂರ್ತಿ ಸುರೇಶ್ ಕೈಟ್ ಅವರಿಗೆ ವಿವರಿಸಿದರು.
ನಿರ್ಭಯಾ ಪ್ರಕರಣದ
ನಾಲ್ವರು ಶಿಕ್ಷಿತ ಅಪರಾಧಿಗಳು ನ್ಯಾಯಾಂಗ ವ್ಯವಸ್ಥೆಯ ಜೊತೆಗೆ ಆಟವಾಡುತ್ತಿದ್ದಾರೆ ಮತ್ತು ರಾಷ್ಟ್ರದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಮೆಹ್ತ ಹೇಳಿದರು.
‘ಇಲ್ಲಿ ಕಾನೂನಿನ
ಆದೇಶವನ್ನು ವಿಫಲಗೊಳಿಸಲು ಹೆಣೆಯಲಾಗಿರುವ ಉದ್ದೇಶಪೂರ್ವಕವಾದ ಮತ್ತು ವ್ಯವಸ್ಥಿತ ಚಿಂತನೆಯ ಕುಟಿಲತೆ ಇದೆ’ ಎಂದು ಮೆಹ್ತ ಹೈಕೋರ್ಟಿಗೆ ವಿವರಿಸಿದರು.
ನಿರ್ಭಯಾ ಸಾಮೂಹಿಕ
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ನೀಡಲಾಗಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಭಾನುವಾರ ನಡೆಸಿತ್ತು.
ಶಿಕ್ಷಿತ ಅಪರಾಧಿಗಳ
ಪೈಕಿ ಅಕ್ಷಯ್ ಸಿಂಗ್ (೩೧), ವಿನಯ್ ಶರ್ಮ (೨೬) ಮತ್ತು ಪವನ್ ಗುಪ್ತ (೨೫) ಅವರ ಪರವಾಗಿ ಹಾಜರಾದ ವಕೀಲ ಎಪಿ ಸಿಂಗ್ ಅವರು ನಾಲ್ವರು ಶಿಕ್ಷಿತ ಅಪರಾದಿಗಳ ಮರಣದಂಡನೆ ಜಾರಿಗೆ ನೀಡಿದ ತಡೆಯಾಜ್ಞೆಯನ್ನು ಪ್ರಶ್ನಿಸಿ, ಆ ಆದೇಶವನ್ನು ತಳ್ಳಿಹಾಕುವಂತೆ
ಕೋರಿದ ಕೇಂದ್ರದ ಅರ್ಜಿಯನ್ನು ವಿರೋಧಿಸಿದರು.
‘ಯಾವ ಪ್ರಕರಣದಲ್ಲಿ
ಇಲ್ಲದ ಅವಸರ ಈ ಪ್ರಕರಣದಲ್ಲಿ ಏಕೆ?’
ಎಂದು ಪ್ರಶ್ನಿಸಿದ ವಕೀಲ ಎಪಿ ಸಿಂಗ್, ’ಹರೀಡ್ ಜಸ್ಟೀಸ್ ಈಸ್ ಬರೀಡ್ ಜಸ್ಟೀಸ್’
(ನ್ಯಾಯದ ತರಾತುರಿ ಜಾರಿಯೆಂದರೆ ನ್ಯಾಯದ ಗೋರಿ’ ಎಂದು ಹೇಳಿದರು.
ನಾಲ್ಕನೇ ಶಿಕ್ಷಿತ
ಅಪರಧಿ ಮುಕೇಶ್ ಕುಮಾರ್ (೩೨) ಪರ ಹಾಜರಾದ ಹಿರಿಯ
ವಕೀಲರಾದ ರೆಬೆಕ್ಕಾ ಜಾನ್ ಅವರು ಮೊತ್ತ ಮೊದಲಿಗೆ ಕೇಂದ್ರ ಮನವಿಗೆ ಆಕ್ಷೇಪ ವ್ಯಕ್ತ ಪಡಿಸಿ ಅದು ವಿಚಾರಣಾರ್ಹ ಅಲ್ಲ ಎಂದು ವಾದಿಸಿದರು.
ಕೇಂದ್ರವು ವಿಚಾರಣಾ
ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಎಂದೂ ಕಕ್ಷಿದಾರನಾಗಿರಲೇ ಇಲ್ಲ ಎಂದು ವಾದಿಸಿದ ರೆಬೆಕ್ಕಾ, ವಿಳಂಬದ ಆಕ್ಷೇಪ ಮಾಡುತ್ತಿರುವ ಕೇಂದ್ರ ಕೇವಲ ಎರಡು ದಿನಗಳ ಹಿಂದಷ್ಟೇ ಎಚ್ಚರಗೊಂಡಿದೆ
ಎಂದು ಹೇಳಿದರು.
‘ವಿಚಾರಣಾ ನ್ಯಾಯಾಲಯದಲ್ಲಿ
ಶಿಕ್ಷಿತರ ವಿರುದ್ಧ ಡೆತ್ ವಾರಂಟ್ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದು ಸಂತಸ್ಥೆಯ ಹೆತ್ತವರು. ಯಾವುದೇ ಹಂತದಲ್ಲೂ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ತತ್ ಕ್ಷಣ ಮರಣದಂಡನೆ ಜಾರಿಗೊಳಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಬಂದಿಲ್ಲ’ ಎಂದು ಅವರು ವಾದಿಸಿದರು.
ಸಹ ಶಿಕ್ಷಿತರನ್ನು
ಪ್ರತ್ಯೇಕವಾಗಿ ಗಲ್ಲಿಗೇರಿಸಬಹುದೇ ಎಂಬುದಾಗಿ ಕೇಳಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಸುಪ್ರೀಂಕೋರ್ಟಿನಲ್ಲಿ
ಇತ್ಯರ್ಥಗೊಳ್ಳದೆ ಬಾಕಿ ಉಳಿದಿದೆ ಎಂದೂ ಜಾನ್ ಹೈಕೋರ್ಟಿಗೆ ತಿಳಿಸಿದರು.
’ನಿರ್ಭಯಾ’ ಎಂಬುದಾಗಿ
ಪರಿಚಯಿಸಲಾಗಿರುವ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ನಡುವಣ
ರಾತ್ರಿಯಲ್ಲಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಕ್ರೂರವಾಗಿ ಹಲ್ಲೆ ನಡೆಸಿದ್ದ ಆರು ಮಂದಿ ಬಳಿಕ ಆಕೆಯನ್ನು ರಸ್ತೆಗೆ ಎಸೆದಿದ್ದರು.
ಮಾರಣಾಂತಿಕವಾಗಿ ಗಾಯಗೊಂಡಿದ್ದ
ಆಕೆ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ೨೦೧೨ ಡಿಸೆಂಬರ್ ೨೯ರಂದು ಅಸು ನೀಗಿದ್ದರು.
ಆರು ಮಂದಿ
ಆರೋಪಿಗಳ ಪೈಕಿ ಒಬ್ಬನಾದ ರಾಮ್ ಸಿಂಗ್ ವಿಚಾರಣಾ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಲಾಗಿತ್ತು ಇನ್ನೊಬ್ಬ ಅಪರಾಧಿಯನ್ನು ಅಪ್ರಾಪ್ತ ವಯಸ್ಕ ಎಂಬ ನೆಲೆಯಲ್ಲಿ ಮೂರು ವರ್ಷಗಳ ಸುಧಾರಣಾ ಗೃಹ ವಾಸವನ್ನು ವಿಧಿಸಿ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.
ಸುಪ್ರೀಂಕೋರ್ಟ್ ತನ್ನ
೨೦೧೭ರ ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ನೀಡಿದ್ದ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು.
No comments:
Post a Comment