ದೆಹಲಿಯಿಂದ ಉತ್ತರಪ್ರದೇಶ ವಲಸೆ ಕಾರ್ಮಿಕರ ಗುಳೇ
ನೂರಾರು ಬಸ್ಸುಗಳಲ್ಲಿ ಹಳ್ಳಿಗಳತ್ತ, ಹಲವರಿಂದ ಪಾದಯಾತ್ರೆ
ನವದೆಹಲಿ: ಕೊರೋನಾವೈರಸ್ ಹರಡದಂತೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಬಳಿಕ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ಮಂದಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದಲ್ಲಿ ಅವರವರ ಸ್ಥಳಗಳಿಗೆ ತೆರಳಲು ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡಿದ್ದು, ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ದೆಹಲಿ ತ್ಯಜಿಸುತ್ತಿದ್ದಾರೆ ಎಂದು ವರದಿಗಳು 2020 ಮಾರ್ಚ್ 28ರ ಶನಿವಾರ ತಿಳಿಸಿದವು.
ದೆಹಲಿ-ಉತ್ತರಪ್ರದೇಶ ಗಡಿಯ ಮೂಲಕ 2020 ಮಾರ್ಚ್ 28ರ ಶನಿವಾರ ಬೆಳಗ್ಗೆಯಿಂದ ನೂರಾರು ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳಿದರು. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಯುಪಿಎಸ್ಆರ್ ಟಿಸಿ) ಅವರನ್ನು ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದ ವಿವಿಧ ಪ್ರದೇಶಗಳಿಂದ ತಮ್ಮ ಸ್ಥಳಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಿತು.
ಮನೆಗೆ ಹಿಂತಿರುಗಲು ಬಯಸುವ ಜನರ ವಿಪರೀತ ದಟಣೆಯ ಪರಿಣಾಮವಾಗಿ ಬಸ್ಸು ಟರ್ಮಿನಲ್ಗಳಲ್ಲಿ ಸಾಮಾಜಿಕ ಅಂತರ ಮೂಲೆಪಾಲಾಗುವಂತೆ ಮಾಡಿತು. ಭಾರೀ ಸಂಖ್ಯೆಯಲ್ಲಿ ಜನರು ಬಸ್ಸುಗಳನ್ನು ಏರುತ್ತಿದ್ದಂತೆಯೇ ಸ್ಥಳೀಯ ಆಡಳಿತವು ಶನಿವಾರ ಜನಸಂದಣಿಯು ಬಸ್ಸುಗಳನ್ನು ತುಂಬುತ್ತಿದ್ದಂತೆ, ಆಡಳಿತವು ಶನಿವಾರ ಐಎಸ್ಬಿಟಿ ಕೌಶಂಬಿಯಲ್ಲಿ ಪ್ರಯಾಣಿಕರ ಥರ್ಮಲ್ ತಪಾಸಣೆ (ಥರ್ಮಲ್ ಸ್ಕ್ರೀನಿಂಗ್) ಆರಂಭಿಸಿತು.
ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಾರ್ಚ್ ೨೭ರ ಶುಕ್ರವಾರ ಮಧ್ಯರಾತ್ತಿಯವರೆಗೆ ಸುಮಾರು ೮೭ ಬಸ್ಸುಗಳನ್ನು ಓಡಿಸುವ ಮೂಲಕ ವಲಸೆ ಕಾರ್ಮಿಕರಿಗೆ ತಮ್ಮ ಗಮ್ಯಸ್ಥಾನ ಸೇರಿಕೊಳ್ಳಲು ನೆರವಾಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
"ಶನಿವಾರ ಬೆಳಿಗ್ಗೆ ೧೧.೩೦ ರವರೆಗೆ ನಾವು ಸುಮಾರು ೭೯ ಬಸ್ಸುಗಳನ್ನು ಲಕ್ನೋ, ಎಟಾವಾ, ಬರೇಲಿ, ಎಟಾಹ್, ಅಲಿಗಢ, ಮತ್ತು ಗೋರಖ್ಪುರದಂತಹ ವಿವಿಧ ಸ್ಥಳಗಳಿಗೆ ಕಳುಹಿಸಿದ್ದೇವೆ. ಸಿಕ್ಕಿಬಿದ್ದ ಎಲ್ಲ ಕಾರ್ಮಿಕರನ್ನು ಅವರ ಸ್ಥಳಗಳಿಗೆ ಕಳುಹಿಸುವವರೆಗೆ ನಾವು ಬಸ್ಸುಗಳನ್ನು ಕಳುಹಿಸುವುದನ್ನು ಮುಂದುವರಿಸುತ್ತೇವೆ. ನಾವು ಈಗ ಐಎಸ್ಬಿಟಿ ಕೌಶಂಬಿಯಿಂದ ಬಸ್ಗಳನ್ನು ಪುನಾರಂಭಿಸಿದ್ದೇವೆ. ಅಲ್ಲಿಂದ ಈ ಎಲ್ಲಾ ಬಸ್ಗಳನ್ನು ಕಳುಹಿಸಲಾಗುತ್ತಿದೆ’ ಎಂದು ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಎ.ಕೆ.ಸಿಂಗ್ ಹೇಳಿದರು.
"ನಾವು ಲಾಲ್ ಕುವಾನ್ನಿಂದ ೯೬ ಬಸ್ಸುಗಳನ್ನು ಶುಕ್ರವಾರ ರಾತ್ರಿಯವರೆಗೆ ಕಳುಹಿಸಿದ್ದೇವೆ ಮತ್ತು ಇತರ ಡಿಪೋಗಳಿಂದ ಹೆಚ್ಚಿನ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ನಾವು ಶುಕ್ರವಾರ ೨೦೦ ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದೆವು. ಆದರೆ ಜನರು ತಾವಿರುವ ಸ್ಥಳಗಳಲ್ಲೇ ಇರಬೇಕು ಎಂಬುದಾಗಿ ಸರ್ಕಾರ ಹೊರಡಿಸಿರುವ ಆದೇಶದ ಕಾರಣ ಪೊಲೀಸರು ಕೆಲವು ಬಸ್ಗಳನ್ನು ತಡೆದು ನಿಲ್ಲಿಸಿದ್ದರು. ಆದರೆ ಶುಕ್ರವಾರ ತಡರಾತ್ರಿ ನಾವು ವಿವಿಧ ಸ್ಥಳಗಳಿಗೆ ಬಸ್ಸುಗಳನ್ನು ಕಳುಹಿಸಲು ಆದೇಶಗಳನ್ನು ಪಡೆದಿದ್ದೇವೆ’ ಎಂದು ಸಿಂಗ್ ನುಡಿದರು.
ಮಾರ್ಚ್ ೨೪ ರಂದು ಪ್ರಧಾನಿ ನರೇಂದ್ರ ಮೋದಿ ಅವರು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿದ ಬಳಿಕ ವಲಸೆ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ವಾಪಸ್ ತೆರಳಲು ಆರಂಭಿಸಿದರು.
"ನಾವು ಕಾರ್ಮಿಕರು ಉತ್ತರ ಪ್ರದೇಶ ಪ್ರವೇಶಿಸುವುದ ತಡೆಯಲಿಲ್ಲ. ಅವರನ್ನು ಮೊದಲು ತಡೆಯಲಾಯಿತು. ಆದರೆ ಅವರು ಕಾಲ್ನಡಿಗೆಯಲ್ಲಿ ತಮ್ಮ ಹುಟ್ಟೂರಿಗೆ ಹೋಗುವುದಾಗಿ ತಿಳಿಸಿದಾಗ ಅವರಿಗೆ ಅದಕ್ಕೆ ಅನುಮತಿ ನೀಡಲಾಯಿತು. ಈಗ ನಾವು ಐಬಿಎಸ್ ಟಿ ಕೌಶಂಬಿಯಿಂದ ಬಸ್ಸುಗಳನ್ನು ವ್ಯವಸ್ಥೆ ಮಾಡಿ, ಅವರ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತಿದ್ದೇವೆ ”ಎಂದು ಗಾಜಿಯಾಬಾದ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಮಿಶ್ರಾ ಹೇಳಿದರು.
ಕರೋಲ್ ಬಾಗಿನ ಟ್ಯಾಂಕ್ ರಸ್ತೆ ಗಾಜಿಯಾಬಾದ್ನ ಲಾಲ್ ಕುವಾನ್ಗೆ ಬಂದ ಮೊಹಮ್ಮದ್ ಫಕ್ರುದ್ದೀನ್ ಮತ್ತಿತರ ವಲಸೆ ಕಾರ್ಮಿಕರು ಬಸ್ಸುಗಳು ಬರುವವರೆಗೆ ಕಾಯುತ್ತಿದ್ದೇನೆ ಎಂದು ಹೇಳಿದರು.
“ನಾನು ನನ್ನ ಹುಟ್ಟೂರಾದ ಬಡೌನ್ಗೆ ಹೋಗಬೇಕು. ನನ್ನೊಂದಿಗೆ ಸುಮಾರು ೧೦ ಜನರಿದ್ದಾರೆ ಮತ್ತು ನಾನು ಡೆನಿಮ್ ಮಾಡುವ ಘಟಕದಲ್ಲಿ ಕೆಲಸ ಮಾಡುತ್ತೇನೆ. ದಿಗ್ಬಂಧನ ಕಾರಣ ನಮ್ಮ ಕೆಲಸ ನಿಂತುಹೋಗಿದೆ. ಮನೆ ಮಾಲೀಕರು ಬಾಡಿಗೆ ಕೇಳುತ್ತಿದ್ದಾರೆ. ಹಣ ಪಾವತಿಗೆ ನನ್ನ ಬಳಿ ಹಣವಿಲ್ಲ. ಹಾಗಾಗಿ ನನ್ನ ಕುಟುಂಬದೊಂದಿಗೆ ನಾನು ನಮ್ಮ ಹುಟ್ಟೂರಿಗೆ ಹೋಗಲು ನಿರ್ಧರಿಸಿದೆ. ನಾವು ಐಎಸ್ಬಿಟಿ ಕೌಶಂಬಿಯಿಂದ ಯುಪಿ ರಸ್ತೆಮಾರ್ಗದ ಬಸ್ನಲ್ಲಿ ಲಾಲ್ ಕುವಾನ್ಗೆ ಬಂದಿದ್ದೇವೆ ಮತ್ತು ಇಲ್ಲಿ ಇನ್ನೊಂದು ಬಸ್ಗಾಗಿ ಕಾಯುತ್ತಿದ್ದೇವೆ, ಅದು ನಮ್ಮನ್ನು ಬಡಾನ್ಗೆ ಕರೆದೊಯ್ಯುತ್ತದೆ, ”ಎಂದು ಅವರು ಹೇಳಿದರು.
ದೆಹಲಿ-ಯುಪಿ ಗಡಿ ಪ್ರದೇಶದಲ್ಲಿ ವಲಸೆ ಕಾರ್ಮಿಕರನ್ನು ತಡೆಯಲಾಗಿದೆಯೇ ಎಂಬುದಾಗಿ ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ಅವರನ್ನು ಪ್ರಶ್ನಿಸಿದಾಗ,
"ಗಡಿಯಲ್ಲಿ ಯಾವುದೇ ವಲಸೆ ಕಾರ್ಮಿಕರನ್ನು ತಡೆಯಲಾಗುವುದಿಲ್ಲ" ಎಂದು ಅವರು ಉತ್ತರಿಸಿದರು..
ಪೊಲೀಸರು ಕೂಡಾ ತಮ್ಮ ಗಮ್ಯಸ್ಥಾನವನ್ನು ತಲುಪಲು ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ.
ಇದು ಈ ಬಡ ಜನರಿಗೆ ಬಿಕ್ಕಟ್ಟಿನ ಸಮಯ. ಅವರು ಮತ್ತೆ ೨೫ ರಿಂದ ೩೦ ಗುಂಪುಗಳಲ್ಲಿ ಬರಲು ಪ್ರಾರಂಭಿಸಿದ್ದಾರೆ ಮತ್ತು ಹಾಪುರ್, ಮೊರಾದಾಬಾದ್ ಮುಂತಾದ ಪ್ರದೇಶಗಳತ್ತ ತಮ್ಮ ಪಾದಯಾತ್ರೆ ಮುಂದುವರೆಸುತ್ತಿದ್ದಾರೆ. ನಮ್ಮ ಕಡೆಯಿಂದ ನಾವು ಅವರಲ್ಲಿ ಹಲವರಿಗೆ ಖಾಲಿ ಟ್ರಕ್ ಮತ್ತು ಇತರ ವಾಣಿಜ್ಯ ವಾಹನಗಳನ್ನು ಏರಿಕೊಳ್ಳಲು ಸಹಾಯ ಮಾಡಿದ್ದೇವೆಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರಾದ ರಾಮ್ ಸುಂದರ್ ಮೌರ್ಯ ಅವರಂತಹವರು ಕಾರ್ಮಿಕರಿಗೆ ಸಹಾಯ ಹಸ್ತ ನೀಡಿ ರಾಷ್ಟ್ರೀಯ ಹೆದ್ದಾರಿ ೯ ರ ಮಸೂರಿ ಬಳಿ ಅವರಿಗೆ ಬೇಯಿಸಿದ ಆಹಾರವನ್ನು ವಿತರಿಸಿದರು.
"ಕಾರ್ಮಿಕರು ಮತ್ತೆ ಬರಲು ಪ್ರಾರಂಭಿಸಿದ್ದಾರೆ. ನಾವು ಸುಮಾರು ೩೦೦ ಪೆಟ್ಟಿಗೆಗಳ ಆಹಾರವನ್ನು ತಯಾರಿಸುತ್ತಿದ್ದೇವೆ. ಶುಕ್ರವಾರ ಸಂಜೆ ಬಸ್ಸುಗಳು ಬಂದಿದ್ದವು ಮತ್ತು ಸುಮಾರು ೨೫೦-೩೦೦ ಜನರಿಗೆ ಈ ಬಸ್ಸುಗಳನ್ನು ಹತ್ತಲು ಮತ್ತು ಅವರ ಸ್ಥಳಗಳನ್ನು ತಲುಪಲು ನಾವು ಸಹಾಯ ಮಾಡಿದ್ದೇವೆ’ ಎಂದು ಅವರು ಹೇಳಿದರು.
ಗೌತಮ್ ಬುದ್ಧ ನಗರದಂತಹ ಪ್ರದೇಶಗಳಲ್ಲಿ, ದೆಹಲಿ-ಯುಪಿ ಗಡಿಯಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಯುಪಿಎಸ್ಆರ್ಟಿಸಿ ಸುಮಾರು ೨೦೦ ಬಸ್ಸುಗಳನ್ನು ಒದಗಿಸಿದೆ. ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ ಇವೆರಡೂ ರಾಷ್ಟ್ರ ರಾಜಧಾನಿಯೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ.
ಬಸ್ಗಳು ಈಗಾಗಲೇ ನೋಯ್ಡಾದ ವಿವಿಧ ಗಡಿಭಾಗಗಳನ್ನು ತಲುಪಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
‘ಈ ಬಸ್ಸುಗಳು ಪ್ರತಿ ಎರಡು ಗಂಟೆಗಳ ನಂತರ ನಿರ್ಗಮಿಸುತ್ತಿವೆ. ಇಂದು ಬೆಳಿಗ್ಗೆ ೮ ಗಂಟೆಯಿಂದ ಈ ಪ್ರಯಾಣಿಕರನ್ನು ಕರೆದೊಯ್ಯುವುದು ಪ್ರಾರಂಭವಾಗಿದೆ ಮತ್ತು ಮುಂದಿನ ೪೮ ಗಂಟೆಗಳ ಕಾಲ ಮುಂದುವರಿಯುತ್ತದೆ ”ಎಂದು ಡಿಸಿಪಿ ಸಂಕಲ್ಪ ಶರ್ಮ ಹೇಳಿದರು.
ಇತರ ಜಿಲ್ಲೆಗಳ ವಿವಿಧ ತಪಾಸಣಾ ಸ್ಥಳಗಳಲ್ಲಿ ಈ ಬಸ್ಸುಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ವರದಿಗಳನ್ನು ಅರಿತುಕೊಂಡು ನೋಯ್ಡಾ ಪೊಲೀಸರು ಸಂಬಂಧಪಟ್ಟ ಜಿಲ್ಲೆಯ ಎಲ್ಲಾ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಆದ್ಯತೆಯ ಆಧಾರದಲ್ಲಿ ಅವರಿಗೆ ಪಯಣಿಸಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ ಎಂದು ಶರ್ಮ ನುಡಿದರು.
‘ಈ ಬಸ್ಗಳನ್ನು ಹತ್ತುವ ಪ್ರಯಾಣಿಕರಿಗೆ ಸರಿಯಾದ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ನಾವು ಅವರನ್ನು ಕೋರಿದ್ದೇವೆ. ಬಸ್ಸುಗಳು ಪ್ರಯಾಣಿಕರನ್ನು ಉತ್ತರ ಪ್ರದೇಶದ ವಿವಿಧ ಗಡಿಭಾಗಗಳಲ್ಲಿ ಇಳಿಸಲಿದ್ದು, ಅಲ್ಲಿಂದ ಆಯಾ ಸ್ಥಳೀಯ ರಾಜ್ಯಗಳ ರಾಜ್ಯ ಸರ್ಕಾರಗಳು ಒದಗಿಸುವ ಸಾರಿಗೆ ಸೌಲಭ್ಯಗಳನ್ನು ತೆಗೆದುಕೊಳ್ಳಬಹುದು’ ಎಂದು ಅವರು ಹೇಳಿದರು.
"ಎಲ್ಲಾ ಪ್ರಯಾಣಿಕರನ್ನು ತಮ್ಮ ಗಮ್ಯಸ್ಥಾನ ಸ್ಥಳಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಸಾಧ್ಯವಾಗುವಂತೆ ಅವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳು ಸೇರಿದಂತೆ ಅವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಈ ಪ್ರಯಾಣಿಕರ ಆರೋಗ್ಯದ ಮೇಲ್ವಿಚಾರಣೆ ಮಾಡಲು ಇದು ಸಹಾಯಕವಾಗುತ್ತದೆ’ ಎಂದು ಶರ್ಮ ನುಡಿದರು.
No comments:
Post a Comment