Tuesday, March 24, 2020

೨೧ ದಿನ ಭಾರತದಾದ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್: ಪ್ರಧಾನಿ ಮೋದಿ ಘೋಷಣೆ

೨೧ ದಿನ ಭಾರತದಾದ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್
ದೇಶವ್ಯಾಪಿ ಪ್ರಸಾರದಲ್ಲಿ ಪ್ರಧಾನಿ ಮೋದಿ ಘೋಷಣೆ
ನವದೆಹಲಿ: ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾವೈರಸ್ ಸೊಂಕು ಹರಡುವಿಕೆಯನ್ನು ತಡೆಯಲು ದೇಶಾದ್ಯಂತ 2020 ಮಾರ್ಚ್ 24ರ  ಮಂಗಳವಾರ ರಾತ್ರಿ ೧೨ ಗಂಟೆಯಿಂದ ೨೧ ದಿನಗಳ ಕಾಲ ಶೇಕಡಾ ೧೦೦ರಷ್ಟು 'ಲಾಕ್ ಔಟ್ ನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಒಂದೇ ವಾರದಲ್ಲಿ ಎರಡನೇ ಬಾರಿಗೆ ಮಾರ್ಚ್ 24ರ ಮಂಗಳವಾರ ರಾತ್ರಿ ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಸಾರ ಭಾಷಣ ಮಾಡಿದ ಪ್ರಧಾನಿ, ಲಾಕ್ ಔಟ್ ಕರ್ಫ್ಯೂ ಮಾದರಿಯಲ್ಲೇ ಇರಲಿದ್ದು ದೇಶಾದ್ಯಂತ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ ಎಂದು ಹೇಳಿದರು.

ದೇಶ ಇಂದು ಮಹತ್ವಪೂರ್ಣ ನಿರ್ಧಾರ ಕೈಗೊಂಡಿದೆ. ಇಂದು ರಾತ್ರಿ ೧೨ ಗಂಟೆಯಿಂದ ದೇಶಾದ್ಯಂತ ಲಾಕ್ ಔಟ್ ಘೋಷಿಸುತ್ತಿದ್ದೇನೆ. ಕರ್ಫ್ಯೂ ಮಾದರಿಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನುಡಿದರು.

ಪ್ರತಿಯೊಬ್ಬ ಭಾರತೀಯನ ರಕ್ಷಣೆಗಾಗಿ ಕಟ್ಟುನಿಟ್ಟಿನ ಆದೇಶ ಜಾರಿಗೆ ತರಲಾಗುತ್ತಿದೆ.ದೇಶದಲ್ಲಿ ನೀವು ಎಲ್ಲಿ ಇದ್ದೀರೋ ಅಲ್ಲಿಯೇ ಇರಿ, ೨೧ ದಿನಗಳ ಕಾಲದ ಲಾಕ್ ಡೌನ್ ಅವಧಿಯಲ್ಲಿ ಹೊರಗೆ ಹೋಗುವುದನ್ನು ಮರೆತು ಬಿಡಿ, ಮನೆ ಬಿಟ್ಟು ಹೊರಕ್ಕೆ ಬರಬೇಡಿ ಎಂದು ಮೋದಿ ಹೇಳಿದರು.

ಮನೆ ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಅದನ್ನು ದಾಟಬೇಡಿ. ಕೊರೊನಾ ಸೋಂಕಿತ ವ್ಯಕ್ತಿ ಬೀದಿಗೆ ಬರಬಹುದು. ಆತ ಸೋಂಕಿತ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಕ್ಷೇಮವಾಗಿರಿ, ರಸ್ತೆಗಿಳಿಯಬೇಡಿ ಎಂದು ಸಲಹೆ ಮಾಡಿದ ಪ್ರಧಾನಿ ಕೊರೋನಾ ತಡೆಗೆ ಇರುವುದು ಒಂದೇ ಮಂತ್ರ ಎಂಬುದಾಗಿ ಹೇಳಿ ಬ್ಯಾನರ್ ಪ್ರದರ್ಶಿಸಿ ಕೊರೋನಾ ಎಂದರೆ ಯಾರೂ ರಸ್ತೆ ಮೇಲೆ ಬರುವಂತಿಲ್ಲ ಎಂದು ಅರ್ಥ ( (ಕೊರೊನಾ: ಕೋಯಿ ರೋಡ್ ಪರ್ ನಿಕಲೇ) ಎಂದು ಹೇಳಿದರು.

ಕೊರೋನಾವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಲಕ್ಷ ಮುಟ್ಟಲು ೬೬ ದಿನ ಬೇಕಾಯಿತು. ಇದಾದ ೧೧ ದಿನಗಳಲ್ಲಿ ಇನ್ನೂ ಲಕ್ಷ ಜನರಿಗೆ ಸೋಂಕು ತಗುಲಿತು. ದಿನಗಳಲ್ಲಿ ಲಕ್ಷ ಜನರಿಗೆ ಸೋಂಕು ಹರಡಿತು ಎಂದು ಪ್ರಧಾನಿ ಕೊರೋನಾ ಸೋಂಕು ಹರಡುತ್ತಿರುವ ವೇಗವನ್ನು ಅಂಕಿ ಸಂಖ್ಯೆ ಸಹಿತವಾಗಿ ವಿವರಿಸಿದರು.

 ಕೊರೊನಾ ವೈರಸ್ ಹರಡುವುದನ್ನು ತಡೆಯಲು ಒಂದೇ ದಾರಿಯಿದೆ. ಅದು ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್). ಅಂದರೆ ಒಬ್ಬರು ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳುವುದು. ಮನೆಯಲ್ಲಿಯೇ ಉಳಿದುಕೊಳ್ಳುವುದು. ಕೊರೊನಾದಿಂದ ಉಳಿದುಕೊಳ್ಳಲು ಇದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.

ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್) ಸೋಷಿಯಲ್ ಡಿಸ್ಟೆನ್ಸಿಂಗ್ ಕೇವಲ ಕಾಯಿಲೆಯಿರುವವರಿಗೆ ಬೇಕು ಎಂದು ಯೋಚಿಸುವುದು ತಪ್ಪು. ಸಾಮಾಜಿಕ ಅಂತರವನ್ನು ಎಲ್ಲ ನಾಗರಿಕರು ಪಾಲಿಸಬೇಕು. ಅದು ಪ್ರಧಾನಿಯೂ ಸೇರಿದಂತೆ ಎಲ್ಲ ದೇಶವಾಸಿಗಳಿಗೂ ಅನ್ವಯವಾಗುತ್ತದೆ ಎಂದು ಪ್ರಧಾನಿ ನುಡಿದರು.

ರಾತ್ರಿ ಗಂಟೆಗೆ ಸರಿಯಾಗಿ ತಮ್ಮ ಪ್ರಸಾರ ಭಾಷಣ ಆರಂಭಿಸಿದ ಪ್ರಧಾನಿ, ಹಿಂದೆ ಒಮ್ಮೆ ನಿಮ್ಮೆದುರು ನಾನು ಮಾತನಾಡಿದ್ದೆ. ನನ್ನ ಮಾತಿಗೆ ಬೆಲೆ ಕೊಟ್ಟು ಮಾರ್ಚ್ ೨೨ರಂದು ನೀವು ಸ್ವಯಂಪ್ರೇರಿತ ಕರ್ಫ್ಯೂ ಆಚರಿಸಿ ಸಹಕರಿಸಿದಿರಿ. ನಾವೆಲ್ಲರೂ ದೇಶಕ್ಕಾಗಿ ಒಂದಾಗಿದ್ದೇವೆ. ಜನತಾ ಕರ್ಫ್ಯೂ ಮೂಲಕ ದೇಶಕ್ಕೆ ಸಂಕಟ ಒದಗಿದಾಗ ನಾವೆಲ್ಲರೂ ಒಂದಾಗಿ ನಿಲ್ಲಬಲ್ಲೆವು ಎಂಬುದನ್ನು ಸಾಧಿಸಿ ತೋರಿಸಿದಿರಿ. ಜನರ ಸಹಕಾರಕ್ಕೆ ಶ್ಲಾಘಿಸುವೆ ಎಂದು ನುಡಿದರು.

ಮನೆಯಿಂದ ಒಂದು ಹೆಜ್ಜೆ ಹೊರಬರುವುದು ಎಂದರೆ ನಿಮ್ಮ ಮನೆಗೆ ಕೋರೋನಾ ಆಗಮನಕ್ಕೆ ದಾರಿ ಮಾಡಿಕೊಡುವುದು ಎಂದೇ ಅರ್ಥ. ಕೈ ಮುಗಿದು ಜನರಿಗೆ ಮನವಿ ಮಾಡುತ್ತೇನೆ- ನಿಮ್ಮ ನಿಮ್ಮ ಮನೆಗಳಿಂದ ಹೊರಕ್ಕೆ ಬರಬೇಡಿ. ನಾವು ೨೧ ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಅನುಸರಿಸದೇ ಇದ್ದಲ್ಲಿ ದೇಶವನ್ನು ನಾವು ೨೧ ವರ್ಷಗಳ ಕಾಲ ಹಿಂದಕ್ಕೆ ತಳ್ಳಲಿದ್ದೇವೆ ಎಂದು ಪ್ರಧಾನಿ ಹೇಳಿದರು.

ಭಾರತವು ಇಂದು ನಾವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾದ  ಹಂತಕ್ಕೆ  ಬಂದು ನಿಂತಿದೆ, ನಾವು ಏನು ನಿರ್ಧರಿಸುತ್ತೇವೆ ಮತ್ತು ವಿಪತ್ತಿನ ಪರಿಣಾಮವನ್ನು ಕಡಿಮೆಗೊಳಿಸಲು ಎಷ್ಟರ ಮಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂಬುದನ್ನು ನಿರ್ಧರಿಸುವ ಕಾಲದಲ್ಲಿ ಇದ್ದೇವೆ. ಇದು ನಮ್ಮನ್ನು ನಾವೇ ಬಲಪಡಿಸಿಕೊಳ್ಳಲು ಮತ್ತೆ ಮತ್ತೆ ನಿರ್ಧಾರ ಕೈಗೊಳ್ಳಬೇಕಾದ ಸಮಯ ಎಂದು ಪ್ರಧಾನಿ ನುಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಸರಬರಾಜಿನ ಖಾತರಿಗೆ ಎಲ್ಲ ಕ್ರಮಗಳನ್ನೂ ಕೈಗೊಂಡಿವೆ. ಕೊರೋನಾವೈರಸ್ಸನ್ನು ನಿಭಾಯಿಸಲು ಆರೋಗ್ಯ ಮೂಲಸವಲತ್ತು ಬಲಪಡಿಸಲು ೧೫,೦೦೦ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಹಂಚಿಕೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಮೊದಲ ಪ್ರಾಶಸ್ತ್ಯವಾಗಬೇಕು ಎಂದು ನಾನು ಎಲ್ಲ ರಾಜ್ಯಗಳಿಗೂ ಮನವಿ ಮಾಡಿದ್ದೇನೆ. ಯಾವುದೇ ವದಂತಿಗಳು ಮತ್ತು ಮೂಢ ನಂಬಿಕೆಗಳನ್ನು ನಂಬಬೇಡಿ. ಯಾವುದೇ ಔಷಧವನ್ನು ವೈದ್ಯರ ಜೊತೆ ಸಮಾಲೋಚಿಸದೆ ತೆಗೆದುಕೊಳ್ಳಬೇಡಿ. ಸವಾಲನ್ನು ಎದುರಿಸಿ ವಿಜಯಶಾಲಿಗಳಾಗಿ ಹೊರಬರುತ್ತೇವೆ ಎಂದು ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದು ನುಡಿದ ಪ್ರಧಾನಿ ಜನರು ಸ್ವತಃ ತಮ್ಮ ಮತ್ತು ತಮ್ಮ ಕುಟುಂಬಗಳ ಕಾಳಜಿ ವಹಿಸಬೇಕು ಎಂದು ಮರು ಮನವಿ ಮಾಡಿದರು.

No comments:

Advertisement