Sunday, March 1, 2020

ಮಮತಾ ರಾಜ್ಯಭಾರದಲ್ಲಿ ’ಸೋನಾರ್ ಬಾಂಗ್ಲಾ’ ಅಸಾಧ್ಯ: ಅಮಿತ್ ಶಾ

ಮಮತಾ ರಾಜ್ಯಭಾರದಲ್ಲಿ ಸೋನಾರ್ ಬಾಂಗ್ಲಾ ಅಸಾಧ್ಯ
ನಿರಾಶ್ರಿತರಿಗೆ ಪೌರತ್ವ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ 
ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸೋನಾರ್ ಬಾಂಗ್ಲಾ (ಸುವರ್ಣ ಬಂಗಾಳ) ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ 2020 ಮಾರ್ಚ್  01ರ ಭಾನುವಾರ ಇಲ್ಲಿ ಹೇಳಿದರು.

ಬಿಜೆಪಿ ಹಮ್ಮಿಕೊಂಡಿರುವ ಅರ್ ನೊಯ್ ಅನ್ನೇ (ಅನ್ಯಾಯ ಇನ್ನಿಲ್ಲ) ಅಭಿಯಾನವನ್ನು ಉದ್ಘಾಟಿಸುವ ಸಲುವಾಗಿ ಕೋಲ್ಕತಕ್ಕೆ ಬಂದ ಶಾ, ಮಮತಾ ಬ್ಯಾನರ್ಜಿ ನಾಯಕತ್ವದಡಿಯಲ್ಲಿ ಬಂಗಾಳವು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಸೋನಾರ್ ಬಾಂಗ್ಲಾ (ಸುವರ್ಣ ಬಂಗಾಳ) ಸಾಧ್ಯವಿಲ್ಲ ಎಂದು ಚುಚ್ಚಿದರು.

ಅಮಿತ್ ಶಾ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ನೂರಾರು ಮಂದಿ ಎಡ ಪಕ್ಷ ಮತ್ತು ಕಾಂಗ್ರೆಸ್ ಪ್ರತಿಭಟನಕಾರರು ಕರಿಪತಾಕೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧೀ ಭಿತ್ತಿಚಿತ್ರಗಳನ್ನು ಹಿಡಿದುಕೊಂಡು ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟಿಸಿದರು ಮತ್ತು ಗೃಹ ಸಚಿವರ ವಿರುದ್ಧ ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಮಧ್ಯೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಗೃಹ ಸಚಿವರು ವಿರೋಧ ಪಕ್ಷಗಳು ಕಾಯ್ದೆಯ ಬಗ್ಗೆ ನಕಾರಾತ್ಮಕ ಕಲ್ಪನೆಯನ್ನು ಬೆಳೆಸುತ್ತಿವೆ ಎಂದು ಆಪಾದಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಯಾರ ಪೌರತ್ವವನ್ನೂ ಕಿತ್ತು ಕೊಳ್ಳುವುದಿಲ್ಲ, ವಿರೋಧ ಪಕ್ಷಗಳು ಸಿಎಎ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ ನಿರಾಶ್ರಿತರಲ್ಲಿ ಭಯವನ್ನು ಹುಟ್ಟಿಸುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನಿರಾಶ್ರಿತರಿಗೆ ಪೌರತ್ವ ನೀಡದಂತೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆಕೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದರು ಮತ್ತು ಪಶ್ಚಿಮ ಬಂಗಾಳದಲ್ಲಿ ದಂಗೆಗಳು ನಡೆಯುವಂತೆ ಮಾಡಿದರು ಎಂದು ಶಾ ಹೇಳಿದರು.

ಕೆಲವೇ ತಿಂಗಳಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳಲಿದೆ ಎಂದೂ ಅವರು ನುಡಿದರು.

No comments:

Advertisement