Monday, March 9, 2020

ಕೊರೋನಾವೈರಸ್: ಚೀನಾದಲ್ಲಿ ಇಳಿಮುಖ, ತಾತ್ಕಾಲಿಕ ಆಸ್ಪತ್ರೆ ಬಂದ್

ಕೊರೋನಾ: ಚೀನಾದಲ್ಲಿ ಇಳಿಮುಖ, ತಾತ್ಕಾಲಿಕ ಆಸ್ಪತ್ರೆ ಬಂದ್
ಭಾರತ: ಸೋಂಕಿತರ ಸಂಖ್ಯೆ ೪೩ಕ್ಕೆ, ಇರಾನಿಗೆ ಐಎಎಫ್ ವಿಮಾನ
ನವದೆಹಲಿ: ಚೀನಾದಲ್ಲಿ ಮಾರಕ ಕೊರೋನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಭಾರತವೂ ಸೇರಿದಂತೆ ವಿಶ್ವದ ಇತರ ಕಡೆಗಳಲ್ಲಿ ಹೆಚ್ಚುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಅನುಸರಿಸಿ ಚೀನಾವು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿದೆ. ಭಾರತವು ಇರಾನಿನಿಂದ ತನ್ನ ಪ್ರಜೆಗಳನ್ನು ಕರೆತರಲು ಭಾರತೀಯ ವಾಯುಪಡೆ ವಿಮಾನವನ್ನು 2020 ಮಾರ್ಚ್ 09ರ ಸೋಮವಾರ ರಾತ್ರಿ ಕಳುಹಿಸಿತು.

ವಿಶ್ವಾದ್ಯಂತ ೧೦೦ ರಾಷ್ಟ್ರಗಳಿಗೆ ಹರಡಿರುವ ಕೊರೋನಾವೈರಸ್ ೩೮೦೦ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದು, ಸೋಂಕಿತರ ಸಂಖ್ಯೆ ,೧೦,೦೦೦ಕ್ಕೆ ತಲುಪಿತು.

ಭಾರತದಲ್ಲಿ ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಜಮ್ಮುವಿನಲ್ಲಿ ತಲಾ ಒಂದು ಕೊರೋನಾವೈರಸ್ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 45ಕ್ಕೆ ಏರಿದೆ.

ಕೊರೋನಾವೈರಸ್ ಪ್ರಕರಣಗಳ ಏರುಗತಿಯು ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದ್ದು, ಷೇರು ಸಂವೇದಿ ಸೂಚ್ಯಂಕಗಳು ಕುಸಿದು ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರ ಹೊರತಾಗಿಯೂ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಅನಾರೋಗ್ಯಕ್ಕೆ ಒಳಗಾದವರು ಮಾತ್ರವೇ ಮುಖಕ್ಕೆ ಮುಸುಕು (ಮಾಸ್ಕ್) ಧರಿಸಿದರೆ ಸಾಕು ಎಂದು ಪುನರುಚ್ಚರಿಸಿದರು. ದೇಶದಲ್ಲಿ ಕೊರೋನಾವೈರಸ್ ಹರಡದಂತೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಅವರು ವಿವರಿಸಿದರು.

ಇರಾನಿನಲ್ಲಿ ಕೊರೋನಾವೈರಸ್ಗೆ ಇನ್ನೂ ೪೩ ಮಂದಿ ಸೋಮವಾರ ಬಲಿಯಾಗಿದ್ದು, ಸಾವಿನ ಸಂಖ್ಯೆ ೨೩೭ಕ್ಕೆ ಏರಿದೆ. ೭೧೬೧ ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ಇರಾನಿನಲ್ಲಿ ಕೊರೋನಾವೈರಸ್ ತೀವ್ರವಾಗಿ ಹಬ್ಬುತ್ತಿರುವುದನ್ನು ಅನುಸರಿಸಿ ಅಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಭಾರತವು ಸೋಮವಾರ ರಾತ್ರಿ ತನ್ನ ವಾಯುಪಡೆ ವಿಮಾನವನ್ನು ಕಳುಹಿಸಲು ತೀರ್ಮಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಿ-೧೭ ಗ್ಲೋಬ್ ಮಾಸ್ಟರ್ ಸೇನಾ ವಿಮಾನವು ಹಿಂಡನ್ ವಾಯುನೆಲೆಯಿಂದ ರಾತ್ರಿ ಗಂಟೆಗೆ ಇರಾನಿನತ್ತ ಹೊರಡಲಿದೆ ಎಂದು ಮೂಲಗಳು ತಿಳಿಸಿದವು.

ಕೊರೋನಾವೈರಸ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖತಾರ್ ಪ್ರವಾಸ ನಿಷೇಧ ವಿಧಿಸಿದ್ದನ್ನು ಅನುಸರಿಸಿ ಇಂಡಿಗೋ ಸಂಸ್ಥೆಯು ಮಾರ್ಚ್ ೧೭ರವರೆಗೆ ದೋಹಾಕ್ಕೆ ತನ್ನ ವಿಮಾನ ಹಾರಾಟವನ್ನು ರದ್ದು ಪಡಿಸಿದೆ.

ಒಲಿಂಪಿಕ್ ಜ್ಯೋತಿ ಬೆಳಗುವ ಸಮಾರಂಭಕ್ಕೆ ವೀಕ್ಷಕರಿಲ್ಲ: ಮಧ್ಯೆ ೨೦೨೦ರ ಒಲಿಂಪಿಕ್ ಕ್ರೀಡೆಗಳಿಗಾಗಿ ಪುರಾತನ ಒಲಿಂಪಿಯಾದಲ್ಲಿ ೩೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವೀಕ್ಷಕ ರಹಿತವಾಗಿ ಜ್ಯೋತಿ ಬೆಳಗುವ ಸಮಾರಂಭ ನಡೆಸಲು ಟೋಕಿಯೋದಲ್ಲಿ ಸೋಮವಾರ ತೀರ್ಮಾನಿಸಲಾಗಿದೆ.

ಕೊರೋನಾವೈರಸ್ ವ್ಯಾಧಿ ಹರಡದಂತೆ ತಡೆಯುವ ಸಲುವಾಗಿ ಸಂಘಟಕರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಒಲಿಂಪಿಕ್ ಜ್ಯೋತಿ ಬೆಳಗುವ ಸಮಾರಂಭವನ್ನು ವೀಕ್ಷಕರಹಿತವಾಗಿ ನಡೆಸಲು ತೀರ್ಮಾನಿಸಿದ್ದಾರೆ. ೧೦೦ ಮಂದಿ ಮಾನ್ಯತೆ ಹೊಂದಿರುವ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಸಾಮಾನ್ಯವಾಗಿ ಒಲಿಂಪಿಕ್ ಜ್ಯೋತಿ ಬೆಳಗುವ ಸಮಾರಂಭದಲ್ಲಿ ಸಹಸ್ರಾರು ಮಂದಿ ಗ್ರೀಕ್ ಪ್ರಜೆಗಳು ಮತ್ತು ವಿದೇಶೀಯರು ಪಾಲ್ಗೊಳ್ಳುತ್ತಾರೆ.

ವೀಕ್ಷಕರು ಬುಧವಾರ ಪುರಾತನ ಸ್ಥಳದಲ್ಲಿ ನಡೆಯುವ ಡ್ರೆಸ್ ರಿಹರ್ಸಲ್ನಲ್ಲಿ ಕೂಡಾ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದ್ದು, ಗುರುವಾರ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು.

ಹಿಂದೆ ೧೯೮೪ರ ಲಾಸ್ ಏಂಜೆಲಿಸ್ ಒಲಿಂಪಿಕ್ ವೇಳೆಯಲ್ಲಿ ಕೂಡಾ ಪುಟ್ಟ ಪೆಲೊಪೊನೆಸಿಯನ್ ಕುಗ್ರಾಮದ ಪುರಾತನ ಕ್ರೀಡಾಂಗಣದ ಹುಲ್ಲಿನ ಇಳಿಜಾರಿನಲ್ಲಿ ವೀಕ್ಷಕರಹಿತವಾಗಿ ಒಲಿಂಪಿಕ್ ಜ್ಯೋತಿ ಬೆಳಗುವ ಕಾರ್ಯಕ್ರಮ ನಡೆದಿತ್ತು.

ಚೀನಾದ ತಾತ್ಕಾಲಿಕ ಆಸ್ಪತ್ರೆಗಳು ಬಂದ್:
ಮಾರಕ ಕೊರೋನಾವೈರಸ್ ಕೇಂದ್ರವಾದ ವುಹಾನ್ ನಗರದಲ್ಲಿ ಹೊಸ ಕೊರೋನಾವೈರಸ್ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವುದನ್ನು ಅನುಸರಿಸಿ ಚೀನಾವು ನಗರದ ೧೬ ತಾತ್ಕಾಲಿಕ ಆಸ್ಪತ್ರೆಗಳ ಪೈಕಿ ೧೪ ಆಸ್ಪತ್ರೆಗಳನ್ನು ಮುಚ್ಚಿದೆ ಎಂದು ರಾಷ್ಟ್ರೀಯ ಆರೋಗ್ಯ ಕಮಿಷನ್ (ಎನ್ ಎಚ್ ಸಿ) ಸೋಮವಾರ ತಿಳಿಸಿತು.

ಹೊಸ ಪ್ರಕರಣಗಳ ಸಂಖ್ಯೆ ಸೋಮವಾರ ಕೇವಲ ೪೦ ಆಗಿದ್ದು, ಇದು ಅತ್ಯಂತ ಕಡಿಮೆ ಎಂದು ಕಮೀಷನ್ ಹೇಳಿತು. ಜನವರಿ ಮೂರನೇ ವಾರದಿಂದ ಕಮಿಷನ್ ಕೊರೋನಾವೈರಸ್ ಪ್ರಕರಣಗಳ ಬಗ್ಗೆ ಮಾಹಿತಿ ಪ್ರಕಟಿಸುತ್ತಿದೆ. ಹೊಸದಾಗಿ ಸೋಂಕಿಗೆ ಬಲಿಯಾದವರ ಸಂಖ್ಯೆ ೨೨ ಆಗಿದ್ದು, ಒಬ್ಬನನ್ನು ಹೊರತು ಪಡಿಸಿ ಇತರರೆಲ್ಲರೂ ಹುಬೇ ಪ್ರಾಂತದವರು. ಇದರೊಂದಿಗೆ ಮೃತರ ಸಂಖ್ಯೆ ,೧೧೯ಕ್ಕೆ ಏರಿದೆ. ಚೀನಾದ ಹೃದಯಭಾಗದಲ್ಲಿ ೮೦,೭೦೦ಕ್ಕೂ ಹೆಚ್ಚು ಮಂದಿ ಈಗ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಕೊರೋನಾವೈರಸ್ ಲಕ್ಷಣಗಳು ಕಂಡು ಬಂದವರ ಚಿಕಿತ್ಸೆಗಾಗಿ ವುಹಾನ್ ನಗರದಲ್ಲಿ ಎಕ್ಸಿಬಿಷನ್ ಕೇಂದ್ರಗಳು ಮತ್ತು ಜಿಮ್ನಾಷಿಯಂಗಳಂತಹ  ಸಾರ್ವಜನಿಕ ಸ್ಥಳಗಳಲ್ಲಿ ೧೬ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿತ್ತು.

No comments:

Advertisement