Friday, March 6, 2020

ಯೆಸ್ ಬ್ಯಾಂಕ್ ಬಿಕ್ಕಟ್ಟು;ಪ್ರತಿಯೊಬ್ಬ ಠೇವಣಿದಾರನ ಹಣವೂ ಸುರಕ್ಷಿತ: ನಿರ್ಮಲಾ ಸೀತಾರಾಮನ್

ಯೆಸ್ ಬ್ಯಾಂಕ್ ಬಿಕ್ಕಟ್ಟುಠೇವಣಿದಾರನ ಹಣ ಸುರಕ್ಷಿತ
ಆರ್ಬಿಐ ಸುಪರ್ದಿಗೆ ಬ್ಯಾಂಕ್ ವಹಿವಾಟು: ನಿರ್ಮಲಾ 
ನವದೆಹಲಿ: ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್ ವಹಿವಾಟಿನ ಮೇಲೆ ಮಿತಿ ವಿಧಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಠೇವಣಿದಾರರು ಚಿಂತಿತರಾಗಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮಾರ್ಚ್  06ರ ಶುಕ್ರವಾರ  ಭರವಸೆ ನೀಡಿದ್ದಾರೆ.

ನಾವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಈಗ ಆರ್ಬಿಐ ಯೋಜನೆಯೊಂದನ್ನು ರೂಪಿಸಿದ್ದು, ಆದಷ್ಟೂ ಶೀಘ್ರದಲ್ಲೇ ಬಿಕ್ಕಟ್ಟು ಇತ್ಯರ್ಥವಾಗಲಿದೆ. ಆರ್ಬಿಐ ಮತ್ತು ಸರ್ಕಾರ ವಿಷಯದ ಬಗ್ಗೆ ನಿಗಾ ಇಟ್ಟಿವೆ, ಭೀತರಾಗುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ, ನಿಮ್ಮ ಹಣ ಸುಭದ್ರವಾಗಿದೆ ಎಂಬುದಾಗಿ ಠೇವಣಿದಾರರು ಮತ್ತು ಹೂಡಿಕೆದಾರರಿಗೆ ಭರವಸೆ ನೀಡಯಬಯಸುತ್ತೇನೆಎಂದು ಸೀತಾರಾಮನ್ ನುಡಿದರು.

ಪ್ರತಿಯೊಬ್ಬರ ಹಿತವನ್ನು ಗಮನಿಸಿ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಬಿಕ್ಕಟ್ಟಿಗೆ ಪರಿಹಾರ ಲಭಿಸಲಿದೆ ಎಂದು ಆರ್ಬಿಐ ಭರವಸೆ ಕೊಟ್ಟಿದೆ ಎಂದು ಸಚಿವರು ಹೇಳಿದರು.

೫೦,೦೦೦ ರೂಪಾಯಿಗಳ ಮಿತಿ ವಿಧಿಸಲಾಗಿದ್ದರೂ, ತುರ್ತು ಕಾರಣಕ್ಕಾಗಿ ಹೆಚ್ಚಿನ ಹಣದ ಅಗತ್ಯ ಇರುವವರು ಕೇಂದ್ರೀಯ ಬ್ಯಾಂಕ್ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸಬಹುದುಎಂದೂ ಸಚಿವರು ನುಡಿದರು.

೩೦ ದಿನಗಳ ಮಿತಿಯೊಳಗೆ ಯೆಸ್ ಬ್ಯಾಂಕ್ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇದಕ್ಕೆ ಮುನ್ನ ಹೇಳಿದ್ದರು.

೩೦ ದಿನಗಳ ಮಿತಿಯು ಗರಿಷ್ಠ ಮಿತಿಯಾಗಿದೆ. ಬ್ಯಾಂಕನ್ನು ಪುನರುಜ್ಜೀವನಗೊಳಿಸಲು ಆರ್ಬಿಐಯಿಂದ ಅತ್ಯಂತ ಕ್ಷಿಪ್ರ ಕ್ರಮದ ಯೋಜನೆಯನ್ನು ನೀವು ನೋಡಲಿದ್ದೀರಿ ಎಂದು ದಾಸ್ ಅವರು ತಿಳಿಸಿದ್ದರು.

ಗುರುವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ ಚಟುವಟಿಕೆಯನ್ನು ಸ್ಥಂಭನಗೊಳಿಸಿ, ಮುಂದಿನ ಆದೇಶದವರೆಗೆ ಹಣ ಹಿಂಪಡೆಯಲು ಖಾತೆಗೆ ತಲಾ ೫೦,೦೦೦ ರೂಪಾಯಿಗಳ ಮಿತಿ ವಿಧಿಸಿತ್ತು. ಭಾರತದ ಖಾಸಗಿ ರಂಗದ ೫ನೇ ದೊಡ್ಡ ಬ್ಯಾಂಕ್ ಆಗಿರುವ ಮುಂಬೈ ಮೂಲದ ಯೆಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ಬ್ಯಾಂಕಿನ ಹಣಕಾಸು ಗಂಭೀರ ಬಿಕ್ಕಟ್ಟಿಗೆ ಗುರಿಯಾದುದನ್ನು ಅನುಸರಿಸಿ ಆರ್ಬಿಐ ೩೦ ದಿನಗಳ ಅವಧಿಗಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

ನಿರ್ಧಾರವನ್ನು ವೈಯಕ್ತಿಕ ಹಂತದಲ್ಲಿ ತೆಗೆದುಕೊಂಡಿರುವುದಲ್ಲ, ಹಿರಿಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ. ಸುರಕ್ಷಿತ ವಿತ್ತ ವ್ಯವಸ್ಥೆಗೆ ಖಾತರಿ ನೀಡುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದೂ ಆರ್ಬಿಐ ಗವರ್ನರ್ ಹೇಳಿದ್ದರು.

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಬಿಐ ಕ್ರಮಗಳನ್ನು ಕೈಗೊಳ್ಳುತ್ತಿದ್ದಂತೆಯೇ ಯೆಸ್ ಬ್ಯಾಂಕ್ ಷೇರುಗಳು ಶೇಕಡಾ ೬೦ರಷ್ಟು ಕುಸಿದಿವೆ.

ಭಾರತದ ೫ನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ್ದ ಯೆಸ್ ಬ್ಯಾಂಕಿನ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅದರ ವಹಿವಾಟಿನ ಮೇಲೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಿದೆ. ಬ್ಯಾಂಕ್ ಉಳಿಸಲು ಇರುವ ಸಾಧ್ಯತೆಗಳನ್ನು ಇದೀಗ ಆರ್ಬಿಐ ಪರಿಶೀಲಿಸುತ್ತಿದೆ.

ಬಂಡವಾಳ ಸಂಚಯಿಸುವಲ್ಲಿನ ವೈಫಲ್ಯವೇ ಯೆಸ್ ಬ್ಯಾಂಕಿನ ಸ್ಥಿತಿ ಬಿಗಡಾಯಿಸಲು ಮುಖ್ಯ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.  ಇತ್ತೀಚಿನ ಕೆಲ ವರ್ಷಗಳಲ್ಲಿ ಯೆಸ್ ಬ್ಯಾಂಕಿನಲ್ಲಿ ಹಲವು ಗಂಭೀರ ಆಡಳಿತಾತ್ಮಕ ಲೋಪಗಳು ವರದಿಯಾಗಿದ್ದವು. ಬ್ಯಾಂಕ್ ಈಗ ತಲುಪಿರುವ ಸ್ಥಿತಿಗೆ ಇವೆಲ್ಲವೂ ಕಾರಣ ಎಂದು ಹೇಳಲಾಗುತ್ತಿದೆ.

ಸಾಲ ಮರುಪಾವತಿ ಸಮಸ್ಯೆಯಿಂದ ಕಂಗಾಲಾಗಿದ್ದ ಯೆಸ್ ಬ್ಯಾಂಕ್ ಮೇಲೆ ಹೂಡಿಕೆದಾರರ ವಿಶ್ವಾಸವೂ ಕಡಿಮೆಯಾಗಿತ್ತು. ಒಂದೆಡೆ ಸಕಾಲಕ್ಕೆ ಸಾಲ ಮರುಪಾವತಿಯಾಗಲಿಲ್ಲ, ಇನ್ನೊಂದೆಡೆ ಹೂಡಿಕೆದಾರರಿಂದಲೂ ಹೊಸ ಬಂಡವಾಳ ಹರಿದುಬರಲಿಲ್ಲ. ಎರಡು ಶತಕೋಟಿ ಡಾಲರ್ ಹೊಸ ಬಂಡವಾಳ ಸಂಚಯಿಸಲು ಯೆಸ್ ಬ್ಯಾಂಕ್ ಒಂದು ವರ್ಷದಿಂದ ಪ್ರಯತ್ನಪಟ್ಟಿತ್ತು. ಸಂಕಷ್ಟ ಸ್ಥಿತಿಯ ಕಾರಣಕ್ಕೇ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಘೋಷಣೆಯನ್ನು ಫೆಬ್ರುವರಿಯಲ್ಲಿ ತಡ ಮಾಡಿತ್ತು.

ಯೆಸ್ ಬ್ಯಾಂಕಿನ ಶೇ ೧೧.೫ರಷ್ಟು ಸಾಲಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಶಾಡೊ ಲೆಂಡರ್ಸ್ (ಬ್ಯಾಂಕೇತರ ಹಣಕಾಸು ವಹಿವಾಟು) ಪಡೆದಿದ್ದಾರೆ ಎಂದು ಸೆಪ್ಟೆಂಬರ್ ೨೦೧೮ರಲ್ಲಿ ಜಾಲತಾಣವೊಂದು ವರದಿ ಮಾಡಿತ್ತು.

ಯೆಸ್ ಬ್ಯಾಂಕಿನಿಂದ ಹಣ ಪಡೆದು ಚಿಲ್ಲರೆ ಸಾಲವಾಗಿ ನೀಡಿದ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಸೂಲಾತಿ ಸಮಸ್ಯೆ ಎದುರಾದ ನಂತರ ಯೆಸ್ ಬ್ಯಾಂಕಿನ ಆರ್ಥಿಕ ಸ್ಥಿರತೆಗೆ ಆತಂಕ ಕಾಡಿತು. ಸೆಪ್ಟೆಂಬರ್ ೨೦೧೮ರ ನಂತರ ಐಎಲ್ಎಫ್ಎಸ್ ಗೆ (ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್) ಪಾವತಿಸಬೇಕಾದ ಹಣವನ್ನು ಸಕಾಲದಲ್ಲಿ ಪಾವತಿ ಮಾಡಲು ಸಾಧ್ಯವಾಗಲಿಲ್ಲ.

ಯೆಸ್ ಬ್ಯಾಂಕಿಗೆ ಮರುಜೀವ, ಹೊಸ ಬಂಡವಾಳ ತುಂಬಲು ರಿಸರ್ವ್ ಬ್ಯಾಂಕ್ ಕೆಲ ದಿನಗಳಿಂದೀಚೆಗೆ ಪ್ರಯತ್ನಗಳನ್ನು ಆರಂಭಿಸಿತ್ತು. ಬ್ಯಾಂಕಿನ ಆಡಳಿತ ಮಂಡಳಿ ಜೊತೆಗೆ ನಿಯಮಿತ ಸಂಪರ್ಕದಲ್ಲಿತ್ತು. ಕೆಲ ಖಾಸಗಿ ಹೂಡಿಕೆದಾರರನ್ನೂ ಆರ್ ಬಿಐ ಅಧಿಕಾರಿಗಳು ಸಂಪರ್ಕಿಸಿ, ಬ್ಯಾಂಕಿಗೆ ಬಂಡವಾಳ ಮರುಪೂರಣದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದರು. ಪರಿಸ್ಥಿತಿ ಕೈಮೀರುತ್ತಿದೆ ಎಂದು ಮನವರಿಕೆಯಾದ ಬಳಿಕ ಬ್ಯಾಂಕಿನ ಆಡಳಿತವನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಯೆಸ್ ಬ್ಯಾಂಕ್ ಪುನರುಜ್ಜೀವನದ ಹೊಣೆಯನ್ನು ಆರ್ಬಿಐ ಇದೀಗ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನೇತೃತ್ವದ ಬ್ಯಾಂಕರುಗಳ ಒಕ್ಕೂಟಕ್ಕೆ ವಹಿಸಿಕೊಟ್ಟಿದೆ. ಒಕ್ಕೂಟದಲ್ಲಿ ಯಾರೆಲ್ಲಾ ಇರಬಹುದು ಎನ್ನುವುದನ್ನು ಆಯ್ಕೆ  ಮಾಡಿಕೊಳ್ಳುವುದನ್ನು ಎಸ್ಬಿಐ ವಿವೇಚನೆಗೆ ಬಿಡಲಾಗಿದೆ ಎಂದು ಜಾಲತಾಣವೊಂದು ವರದಿ ಮಾಡಿದೆ.

ಯೆಸ್ ಬ್ಯಾಂಕಿನ ಸದ್ಯದ ಸ್ಥಿತಿಗತಿ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಲು ಗುರುವಾರ ಎಸ್ಬಿಐ ಒಪ್ಪಿಕೊಂಡಿತ್ತು. ಯೆಸ್ ಬ್ಯಾಂಕಿನ  ಸಿಇಒ ರಣವೀತ್ ಗಿಲ್ ಸಹಿತ ಇತರ ಆಡಳಿತ ಮಂಡಳಿ ಸದಸ್ಯರನ್ನು ಬದಲಿಸುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆರು ತಿಂಗಳ ಹಿಂದಷ್ಟೇ ಹಗರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ವಿರುದ್ಧ ಆರ್ಬಿಐ ಇಂಥದ್ದೇ ಕ್ರಮಗಳನ್ನು ಜರುಗಿಸಿತ್ತು. ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ವಿರುದ್ಧವೂ ಕಳೆದ ವರ್ಷ ಆರ್ಬಿಐ ಶಿಸ್ತುಕ್ರಮ ಜರುಗಿಸಿ, ದಿವಾಳಿ ಘೋಷಣೆಗೆ ಕ್ರಮಗಳನ್ನು ಆರಂಭಿಸಿತ್ತು.

ಕಾರ್ಪೊರೇಟ್ ಆಡಳಿತದ ನಿಯಮಗಳನ್ನು ಉಲ್ಲಂಘಿಸಿದ ಬ್ಯಾಂಕ್ ಆಫ್ ರಾಜಸ್ಥಾನ್ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದ ಆರ್ ಬಿಐ, ಅದನ್ನು ಐಸಿಐಸಿಐ ಬ್ಯಾಂಕ್ ಜೊತೆಗೆ ವಿಲೀನಗೊಳಿಸಲು ೨೦೧೦ರಲ್ಲಿ ಕ್ರಮ ತೆಗೆದುಕೊಂಡಿತ್ತು.

No comments:

Advertisement