Thursday, April 2, 2020

ದಿಗ್ಬಂಧನ ಬಿಗಿ ನಿಧಾನ ಸಡಿಲಿಕೆ: ಪ್ರಧಾನಿ ಮೋದಿ ಒಲವು

ದಿಗ್ಬಂಧನ ಬಿಗಿ ನಿಧಾನ ಸಡಿಲಿಕೆ: ಪ್ರಧಾನಿ ಮೋದಿ ಒಲವು
ನವದೆಹಲಿ: ಮಾರಕ ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಬಿಗಿಯನ್ನು ದಿಗ್ಬಂಧನ ಅವಧಿ ಬಳಿಕ ನಂತರ ನಿಧಾನಗತಿಯಲ್ಲಿ ಸಡಿಲಿಸಲು ಒಲವು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ದಿಗ್ಬಂಧನ ನಿರ್ಗಮನ ತಂತ್ರವನ್ನು ರೂಪಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ 2020 ಏಪ್ರಿಲ್ 02ರ ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಮ್ಮೇಳನ ನಡೆಸಿದ ಪ್ರಧಾನಿ, ದಿಗ್ಬಂಧನದಿಂದ ಹೇಗೆ ನಿರ್ಗಮಿಸಬೇಕು ಎಂಬುದರ ಕುರಿತು ಸಲಹೆಗಳನ್ನು ಕಳುಹಿಸಿಕೊಡಿ ಎಂದು ಕೋರಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ ಅವರು, ಕೋವಿಡ್ -೧೯ ಹರಡುವಿಕೆಯನ್ನು ಸೀಮಿತಗೊಳಿಸುವಲ್ಲಿ ಭಾರತವು "ಸ್ವಲ್ಪ ಯಶಸ್ಸನ್ನು ಸಾಧಿಸಿದೆ" ಎಂದು ನುಡಿದರು.

ಕೊರೋನವೈರಸ್ ಕಾಯಿಲೆಯಿಂದ ಎದುರಾಗುವ ದೊಡ್ಡ ಸವಾಲನ್ನು ನಿಭಾಯಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಎರಡನೇ ವಿಡಿಯೋ ಕಾನ್ಫರೆನ್ಸ್ ಇದಾಗಿದೆ. ಮಾರ್ಚ್ ೨೦ರಂದು ಅವರು ಮೊದಲನೆಯ ವಿಡಿಯೋ ಸಮ್ಮೇಳನ  ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ್ದರು.

ಸುಮಾರು ೧೦ ದಿನಗಳ ಹಿಂದೆ ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕಾಗಿ ಮುಖ್ಯಮಂತ್ರಿಗಳ ವ್ಯಕ್ತ ಪಡಿಸಿದ ಶ್ಲಾಘನೆಯನ್ನು ಆಲಿಸಿದ ಪ್ರಧಾನಿ, ಕನಿಷ್ಠ ಜೀವ ಹಾನಿಯನ್ನು ಖಚಿತಪಡಿಸಿಕೊಳ್ಳುವುದು ದೇಶದ ಮುಖ್ಯಗುರಿ ಎಂದು ಹೇಳಿದರು.

"ಮುಂದಿನ ಕೆಲವು ವಾರಗಳಲ್ಲಿ, ಪರೀಕ್ಷೆ, ಪತ್ತೆಹಚ್ಚುವಿಕೆ, ಪ್ರತ್ಯೇಕಿಸುವಿಕೆ ಮತ್ತು ಸಂಪರ್ಕ ತಡೆ (ಐಸೋಲೇಷನ್ ಮತ್ತು ಕ್ವಾರಂಟೈನ್) ಇವುಗಳ ಬಗ್ಗೆ ನಾವು ಗಮನ ಕೇಂದ್ರೀಕರಿಸಬೇಕು ಎಂದು ಮೋದಿ ಹೇಳಿದರು.

ಅಗತ್ಯ ವೈದ್ಯಕೀಯ ಉತ್ಪನ್ನಗಳ ಪೂರೈಕೆಯನ್ನು ಕಾಯ್ದುಕೊಳ್ಳುವುದರ ಅವಶ್ಯಕತೆ, ಔಷಧಗಳ ತಯಾರಿಕೆಗೆ ಕಚ್ಚಾ ವಸ್ತುUಳು ಮತ್ತು ವೈದ್ಯಕೀಯ ಉಪಕರಣಗಳ ಲಭ್ಯತೆ ಬಗ್ಗೆ ಅವರು ಒತ್ತಿ ಹೇಳಿದರು.

ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಇತರ ಅಧಿಕಾರಿಗಳು ದಿಗ್ಬಂಧನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಬೇಕಾದ ಅಗತ್ಯಕ್ಕೆ ಒತ್ತು ನೀಡಿದರು, ಬಡವರಿಗೆ ಆಹಾರ ಒದಗಿಸುವ ಬಗ್ಗೆ ಮತು ಸೋಂಕಿಗೆ ತುತ್ತಾದವರು, ವಿಶೇಷವಾಗಿ ತಬ್ಲಿಘಿ ಜಮಾತ್ ಪ್ರತಿನಿಧಿಗಳ ಜೊತೆಗೆ ಸಂಪರ್ಕ ಹೊಂದಿದವರ ಪತ್ತೆ ವಿಚಾರದಲ್ಲಿ  ಹೆಚ್ಚಿನ ಗಮನ ಹರಿಸಲು ಅವರು ಸಲಹೆ ಮಾಡಿದರು.

ಕೆಲವು ರಾಜ್ಯಗಳಲ್ಲಿ ದಿಗ್ಬಂಧನವನ್ನು ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯತೆ ಮತ್ತು ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮಹತ್ವದ ಕುರಿತು ಗೃಹ ಸಚಿವ ಅಮಿತ್ ಶಾ ವಿವರಿಸಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಬಗ್ಗೆ  ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ನಿಜಾಮುದ್ದೀನ್ ಮರ್ಕಜ್ನಿಂದ ಹರಡಿದ ಪ್ರಕರಣಗಳು ಮತ್ತು ವೈರಸ್ ಹರಡುವುದರಿಂದ ಉಂಟಾಗುವ ಪ್ರಕರಣಗಳನ್ನು ನಿಭಾಯಿಸಲು ಕೇಂದ್ರವು ಮಾಡಿಕೊಂಡಿರುವ ಸಿದ್ಧತೆಗಳನ್ನು ಸುಡಾನ್ ವಿವರಿಸಿದರು. ಜಿಲ್ಲೆಗಳಲ್ಲಿ ಸೊಂಕು ಹೆಚ್ಚಿನ ಪ್ರಕರಣಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಸರಣ  ಸರಪಣಿಯನ್ನು ಮುರಿಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ವಿವರಣೆ: ಕೋವಿಡ್-೧೯ ವಿರುದ್ಧದ ಯುದ್ಧ ಸುದೀರ್ಘವಾದುದು. ದಿಗ್ಬಂಧನ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ದಿಗ್ಬಂಧನ ವಿಫಲವಾದರೆ ಅದಕ್ಕೆ ಮುಖ್ಯಮಂತ್ರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ  ಪ್ರಧಾನಿ ಮೋದಿ ಅವರ ವಿಡಿಯೋ ಸಮ್ಮೇಳನ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ವಿಡಿಯೋ ಸಮಾವೇಶದಲ್ಲಿ ದಿಗ್ಬಂಧನ ಅವಧಿಯಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ತಿಳಿಸಿದರು ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ಕೊರೊನಾ ವೈರಸ್ ಸೋಂಕಿತರ ಆರೈಕೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ವೇಳೆ ಪರಿಸ್ಥಿತಿ ವಿಷಮಿಸಿದರೆ ವೈದ್ಯರ ಕೊರತೆಯಾಗದಂತೆ ಎಚ್ಚರವಹಿಸಬೇಕು. ಆಸಕ್ತ ವೈದ್ಯರಿಗೆ ಆನ್ ಲೈನ್ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಪ್ರಧಾನಿ ಸೂಚಿಸಿದರು ಎಂದು ಮುಖ್ಯಮಂತ್ರಿ ಹೇಳಿದರು.

ಕೊರೊನಾ ವೈರಸ್ ವಿರುದ್ಧ ದೇಶ ಸುದೀರ್ಘ ಯುದ್ಧ ನಡೆಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಪ್ರಧಾನಿ ಹೇಳಿದರು ಎಂದೂ ಯಡಿಯೂರಪ್ಪ ನುಡಿದರು.

ಎಲ್ಲ ಧರ್ಮಗಳ ಸಹಕಾರ ಕೋರುತ್ತಿದ್ದೇನೆ. ಏಪ್ರಿಲ್ ೧೪ರ ಒಳಗೆ ಯಾವುದೇ ಅನಾಹುತವಾಗದಂತೆ ಕಟ್ಟೆಚ್ಚರ ವಹಿಸುತ್ತೇವೆ ಎಂದು ಯಡಿಯೂರಪ್ಪ ವಿಡಿಯೋ ಸಮ್ಮೇಳನದ  ಬಳಿಕ ತಿಳಿಸಿದರು.

No comments:

Advertisement