ದೆಹಲಿಯಲ್ಲಿ ಗಂಭೀರ ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ
ಭಾರತ ಸೋಂಕಿತರ ಸಂಖ್ಯೆ ೧೨,೭೫೯, ಸಾವು ೪೦೨ಕ್ಕೆ ಏರಿಕೆ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020
ಏಪ್ರಿಲ್ 16ರ ಗುರುವಾರ ೧೨,೭೫೯ಕ್ಕೆ ಏರಿದ್ದು, ಸಾವಿನ ಸಂಖ್ಯೆ ೪೨೦ಕ್ಕೆ ತಲುಪಿತು.. ಇದೇ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯು ತೀವ್ರವಾಗಿ ಅಸ್ವಸ್ಥರಾದ ಕೋವಿಡ್-೧೯ ರೋಗಿಗಳಿಗೆ ಪ್ಲಾಸ್ಮಾ ಥೆರೆಪಿಯನ್ನು ಆರಂಭಿಸಲಿದೆ ಎಂದು ಪ್ರಕಟಿಸಿದರು.
ಪ್ಲಾಸ್ಮಾ ಒದಗಿಸುವ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಬಳಿಕ ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಲಾಗುವುದು. ಈ ಥೆರೆಪಿಯಲ್ಲಿ ಗುಣಮುಖರಾದ ರೋಗಿಗಳ ಪ್ಲಾಸ್ಮಾವನ್ನು ಪಡೆದು ತೀವ್ರವಾಗಿ ಅಸ್ವಸ್ಥರಾದ ಕೊರೋನಾ ರೋಗಿಗಳಿಗೆ ವರ್ಗಾವಣೆ (ಟ್ರಾನ್ಸಫ್ಯೂಷನ್) ಮಾಡಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.
ಪ್ಲಾಸ್ಮಾ ಟ್ರಾನ್ಸಫ್ಯೂಷನ್ ಮಾಡುವ ತಂತ್ರಜ್ಞಾನವು ಪ್ರಾಯೋಗಿಕ ಚಿಕಿತ್ಸೆಯಾಗಿದ್ದು ಇದೊಂದು ಆಶಾಕಿರಣವಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಚೀನಾದ ಕಳಪೆ ಪಿಪಿಇ ಕಿಟ್ಗೆ
ತಿರಸ್ಕಾರ
ಈ ಮಧ್ಯೆ, ಚೀನಾವು ಕಳುಹಿಸಿರುವ ಕಳಪೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ ಕಿಟ್) ಭಾರತವು ತಿರಸ್ಕರಿಸಲಿದೆ,. ಚೀನವು ದಾನವಾಗಿ ಕಳುಹಿಸಿರುವ ಈ ಪಿಪಿಇ ಕಿಟ್ಗಳು
ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಸರ್ಕಾರಿ ಮೂಲಗಳು ಹೇಳಿದವು.
ಇದೇ ವೇಳೆಗೆ ದೊಡ್ಡ ಪ್ರಮಾಣದ ಪಿಪಿಇ ಉಪಕರಣಗಳ ಭಾರೀ ಸರಕು ಶೀಘ್ರವೇ ಕೊರಿಯದಿಂದ ಭಾರತಕ್ಕೆ ಬರಲಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಭಾರತದ ಒಟ್ಟು ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಗುರುವಾರ ೧೨,೭೫೯ಕ್ಕೆ ಏರಿದೆ. ಇದರಲ್ಲಿ ೧೦,೮೨೪ ಸಕ್ರಿಯ ಪ್ರಕರಣಗಳಾಗಿದ್ದು, ೧೫೧೪ ಪ್ರಕರಣಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ ೪೨೦ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರವು ಬುಧವಾರ ೧೭೦ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇವುಗಳಲ್ಲಿ ೬ ಮೆಟ್ರೋಗಳು ಮತು ದೊಡ್ಡ ನಗರಗಳು ಸೇರಿವೆ. ಕೊರೋನಾವೈರಸ್ ವಿಶ್ವಾದ್ಯಂತ ೨೦ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೋಂಕಿದ್ದು, ೧,೩೬,೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೨,೦೦೦ ಮೀರಿದ್ದು, ಕಳೆದ ೨೪ ಗಂಟೆಗಳಲ್ಲಿ ೯೪೧ ಹೊಸ ಸೋಂಕಿನ ಪ್ರಕರಣಗಳು ಮತ್ತು ೩೭ ಸಾವುಗಳು ವರದಿಯಾಗಿವೆ. ಆದರೂ ದೇಶದಲ್ಲಿ ೩೨೫ ಜಿಲ್ಲೆUಳಲ್ಲಿ ಇದುವರೆಗೂ ಒಂದೇ ಒಂದು ಕೋವಿಡ್-೧೯ ಪ್ರಕರಣ ಕೂಡಾ ದಾಖಲಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪೊಲಿಯೋ ಪತ್ತೆ ಜಾಲವನ್ನು ಹೇಗೆ ಕೊರೋನಾವೈರಸ್ ಸಲುವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಕಾರ್ಯಯೋಜನೆಯನ್ನು
ರೂಪಿಸಲಾಗಿದೆ. ಈವರೆಗೆ ೨,೯೦,೪೦೧ ಜನರನ್ನು ಪರೀಕ್ಷಿಸಲಾಗಿದೆ, ೩೦,೦೦೦ಕ್ಕೂ ಹೆಚ್ಚು ಪರೀಕ್ಷೆಗಳನ್ನು ಬುಧವಾರ ಒಂದೇ ದಿನ ನಡೆಸಲಾಗಿತ್ತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ತಿಳಿಸಿದೆ.
ಭಾರತದಲ್ಲಿ ಸಾವಿನ ಪ್ರಮಾಣ ಶೇಕಡಾ ೩.೩ರಷ್ಟಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೧೨.೦೨ರಷ್ಟಿದೆ. ಭಾರತೀಯ ರೈಲ್ವೇಯಲ್ಲಿ ೧೦,೫೦೦ ಐಸೋಲೇಷನ್ ಬೆಡ್ಗಳನ್ನು
ಸಿದ್ಧ ಪಡಿಸಿ ಇಟ್ಟುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ವಿದೇಶಗಳಲ್ಲಿ ೩೦೦೦ ಭಾರತೀಯರಿಗೆ ಸೋಂಕು
ಭಾರತವನ್ನು ಹೊರತುಪಡಿಸಿ ವಿಶ್ವದ ೫೩ ರಾಷ್ಟ್ರಗಳಲ್ಲಿ ಒಟ್ಟು ೩,೦೩೬ ಮಂದಿ ಭಾರತೀಯರಿಗೆ ಕೋವಿಡ್-೧೯ ಸೋಂಕು ಬಾಧಿಸಿದೆ. ವಿದೇಶಗಳಲ್ಲಿ ೨೫ ಮಂದಿ ಭಾರತೀಯರು ಅಸು ನೀಗಿದ್ದಾರೆ.
ಜಪಾನಿನಲ್ಲಿ ತುರ್ತುಸ್ಥಿತಿ
ಕೋವಿಡ್-೧೯ ಹಿನ್ನೆಲೆಯಲ್ಲಿ ಜಪಾನ್ ತುರ್ತು ಸ್ಥಿತಿಯನ್ನು ಇಡೀ ದೇಶಕ್ಕೆ ವಿಸ್ತರಿಸಿದೆ. ಇದಕ್ಕೆ ಮುನ್ನ ಪ್ರಧಾನಿ ಶಿಂಝೋ ಅಬೆ ಅವರು ಟೋಕಿಯೋ ಸೇರಿದಂತೆ ೭ ಪ್ರದೇಶಗಳಲ್ಲಿ ತುರ್ತು ಸ್ಥಿತಿ ಘೋಷಿಸಿದ್ದರು.
ಅಮೆರಿಕದಲ್ಲಿ ಒಂದೇ ದಿನ ೨೬೦೦ ಸಾವು
ಅಮೆರಿಕದಲ್ಲಿ ಕಳೆದ ೨೪ ಗಂಟೆಗಳಲ್ಲಿ ಸುಮಾರು ೨,೬೦೦ ಮಂದಿ ಕೋರೋನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ದೇಶದ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದ್ದು ಆರ್ಥಿಕ ಪುನಶ್ಚೇತನಕ್ಕಾಗಿ ಗುರುವಾರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದರು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೨೧,೦೯,೭೦೯, ಸಾವು ೧,೩೭,೦೬೬
ಚೇತರಿಸಿಕೊಂಡವರು- ೫,೨೬,೭೮೬
ಅಮೆರಿಕ ಸೋಂಕಿತರು ೬,೪೬,೩೦೦, ಸಾವು ೨೮,೬೪೦
ಸ್ಪೇನ್ ಸೋಂಕಿತರು ೧,೮೨,೮೧೬, ಸಾವು ೧೯,೧೩೦
ಇಟಲಿ ಸೋಂಕಿತರು ೧,೬೫,೧೫೫ ಸಾವು ೨೧,೬೪೫
ಜರ್ಮನಿ ಸೋಂಕಿತರು ೧,೩೫,೫೪೯, ಸಾವು ೩,೮೫೦
ಚೀನಾ ಸೋಂಕಿತರು ೮೨,೩೪೧, ಸಾವು ೩,೩೪೨
ಇಂಗ್ಲೆಂಡ್ ಸೋಂಕಿತರು ೧,೦೩,೦೯೩, ಸಾವು ೧೩,೭೨೯
ಸ್ಪೇನಿನಲ್ಲಿ ೩೧೮, ಬೆಲ್ಜಿಯಂನಲ್ಲಿ ೪೧೭, ಇಂಗ್ಲೆಂಡಿನಲ್ಲಿ ೮೬೧, ಒಟ್ಟಾರೆ ವಿಶ್ವಾದ್ಯಂತ ೨,೫೦೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment