ಭಾರತಕ್ಕೆ ಹಸ್ತಾಂತರ: ವಿಜಯ್ ಮಲ್ಯಗೆ ಹಿನ್ನಡೆ, ಮೇಲ್ಮನವಿ ವಜಾ
ನವದೆಹಲಿ: ಬ್ಯಾಂಕುಗಳಿಗೆ ೯,೦೦೦ ಕೋಟಿ ರೂಪಾಯಿ ಮೊತ್ತದ ಹಣ ವಂಚನೆ ಮತ್ತು ವರ್ಗಾವಣೆ ಅರೋಪಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಮದ್ಯ ದೊರೆ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ 2020 ಏಪ್ರಿಲ್ 20ರ ಸೋಮವಾರ ವಜಾಗೊಳಿಸಿತು.
೬೪ರ ಹರೆಯದ ಕಿಂಗ್ ಫಿಷರ್ ಏರ್ ಲೈನ್ಸಿನ ಮಾಜಿ ಮುಖ್ಯಸ್ಥ ಮಲ್ಯ ಅವರು ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಈ ವರ್ಷ ಫೆಬ್ರುವರಿಯಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಮಲ್ಯ ಇಂಗ್ಲೆಂಡಿನಿಂದ ಭಾರತಕ್ಕೆ ತಮ್ಮನ್ನು ಹಸ್ತಾಂತರಿಸಲು ನೀಡಲಾದ ಅನುಮತಿಯನ್ನು ಇಂಗ್ಲೆಂಡ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಲಂಡನ್ನಿನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್‌ನ ಲಾರ್ಡ್ ಜಸ್ಟೀಸ್ ಸ್ಟೆಫನ್ ಇರ್ವಿನ್ ಮತ್ತು ಜಸ್ಟೀಸ್ ಎಲಿಸಾಬೆತ್ ಲಾಯಿಂಗ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಮಲ್ಯ ಮೇಲ್ಮನವಿಯನ್ನು ವಜಾಗೊಳಿಸಿತು. ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಡಿಯೋ ಮೂಲಕದ ಪೀಠವು ತನ್ನ ತೀರ್ಪನ್ನು ಪ್ರಕಟಿಸಿತು.
ಹಿರಿಯ ಜಿಲ್ಲಾ ನ್ಯಾಯಾಧೀರು (ಎಸ್ಡಿಜೆ) ಮೇಲ್ನೋಟಕ್ಕೆ ಆರೋಪ ರುಜುವಾತಾಗಿದೆ ಎಂಬುದಾಗಿ ಹೇಳಿ ನೀಡಿದ ತೀರ್ಪನ್ನು ನಾವು ಪರಿಶೀಲಿಸಿದ್ದೇವೆ. ಕೆಲವು ಅಂಶಗಳಲ್ಲಿ ತೀರ್ಪಿನ ವ್ಯಾಪ್ತಿ ಭಾರತದಲ್ಲಿನ ಪ್ರತಿವಾದಿಯು (ಕೇಂದ್ರೀಯ ತನಿಖಾದಳ -ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ)) ಮಾಡಿದ ಆರೋಪಗಳಿಗಿಂತ ವಿಸ್ತೃತವಾಗಿದೆ. ಮೇಲ್ನೋಟಕ್ಕೆ ಅಪರಾಧವನ್ನು ಸಾಬೀತುಪಡಿಸುವ ಪ್ರಮುಖವಾದ ಏಳು ಅಂಶಗಳು ಭಾರತದಲ್ಲಿನ ಆಪಾದನೆಗಳ ಜೊತೆ ತಾಳೆಯಾಗುತ್ತವೆ ಎಂದು ಪೀಠ ತೀರ್ಪು ನೀಡಿತು.
ಭಾರತಕ್ಕೆ ತಮ್ಮನ್ನು ಹಸ್ತಾಂತರಿಸುವ ಬಗ್ಗೆ ಕೆಳ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರಿಗೆ ಲಂಡನ್ನಿನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ಇದಕ್ಕೂ ಮುನ್ನ ಅನುಮತಿ ನೀಡಿತ್ತು.
ವಿಜಯ್ ಮಲ್ಯ ಅವರು ತಮ್ಮನ್ನು ೯೦೦೦ ಕೋಟಿ ರೂಪಾಯಿ ಮೊತ್ತದ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುವ ಸಲುವಾಗಿ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡುವ ಆದೇಶಕ್ಕೆ ಇಂಗ್ಲೆಂಡಿನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಸಹಿ ಮಾಡಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್‌ನ ಆಡಳಿತಾತ್ಮಕ ನ್ಯಾಯಾಲಯ ವಿಭಾಗದ ದ್ವಿಸದಸ್ಯ ಪೀಠವು ಏಪ್ರಿಲ್ ತಿಂಗಳಲ್ಲಿ ಮಲ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.
ಲಂಡನ್ನಿನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದ ಒಂದು ವರ್ಷ ಕಾಲದ ವಿಚಾರಣೆಯ ಬಳಿಕ ಕಳೆದ ಡಿಸೆಂಬರಿನಲ್ಲಿ ಹಸ್ತಾಂತರಕ್ಕೆ ಒಪ್ಪಿಗೆ ನೀಡಿ ತೀರ್ಪು ನೀಡಿತ್ತು. ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುತ್ನಾಟ್ ಅವರು ವಿಜಯ್ ಮಲ್ಯ ವಿರುದ್ಧದ ಸಾಲದ ಹಣ ದುರುಪಯೋಗ ಪ್ರಕರಣವು ಮೇಲ್ನೋಟಕ್ಕೆ ವಂಚನೆ ಮತ್ತು ಹಣವರ್ಗಾವಣೆ ಸಂಚು ಎಂಬುದು ಮೇಲ್ನೋಟಕ್ಕೆ ದೃಢ ಪಡುತ್ತದೆ ಎಂದು ಒಪ್ಪಿ ಹಸ್ತಾಂತರಕ್ಕೆ ಅನುಮತಿ ನೀಡಿದ್ದರು.
No comments:
Post a Comment