Tuesday, April 28, 2020

ಉತ್ತರಪ್ರದೇಶ; ದೇವಾಲಯದಲ್ಲಿ ಸಾಧುಗಳಿಬ್ಬರ ಹತ್ಯೆ

ಉತ್ತರಪ್ರದೇಶ; ದೇವಾಲಯದಲ್ಲಿ ಸಾಧುಗಳಿಬ್ಬರ ಹತ್ಯೆ
ಲಕ್ನೋ: ಕೋವಿಡ್ ೧೯ ದಿಗ್ಬಂಧನ (ಲಾಕ್ಡೌನ್) ಜಾರಿಯಲ್ಲಿರುವಾಗಲೇ ಉತ್ತರಪ್ರದೇಶದ ಬುಲಂದ್ ಶಹರದ ದೇವಾಲಯ ಒಂದರಲ್ಲಿ ಇಬ್ಬರು ಸಾಧುಗಳನ್ನು ಹತ್ಯೆಗೈದಿರುವ ಘಟನೆ 2020 ಏಪ್ರಿಲ್ 28ರ ಮಂಗಳವಾರ ನಸುಕಿನಲ್ಲಿ ಘಟಿಸಿದೆ ನಡೆದಿದೆ ಎಂದು ವರದಿಯೊಂದು ತಿಳಿಸಿತು.

ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದ ಇಬ್ಬರು ಸಾಧುಗಳ ಹತ್ಯೆ ಘಟನೆಯ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದ ಬುಲಂದಶಹರದ ಪಗೋಣ ಗ್ರಾಮದಲ್ಲಿ ಘಟನೆ ಘಟಿಸಿತು.

೫೫ವರ್ಷದ ಜಗನ್ ದಾಸ್ ಹಾಗೂ ೩೫ ವರ್ಷದ ಸೇವಾದಾಸ್ ಎಂಬ ಸಾಧುವನ್ನು ತಲವಾರಿನಿಂದ ಕಡಿದು ಹತ್ಯೆಗೈಯಲಾಗಿದೆ. ಇಬ್ಬರು ಸಾಧುಗಳು ಸಣ್ಣ ದೇವಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸ್ತವ್ಯ ಹೂಡಿದ್ದರು. ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ತನಿಖೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಕ್ತಸಿಕ್ತ ದೇಹಗಳನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಹತ್ಯೆ ಘಟನೆ ಬೆಳಕಿಗೆ ಬಂದಿದೆ. ಅರ್ಚಕರಿಂದ ಕಳ್ಳತನದ ಆರೋಪಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನನ್ನು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದರು.

ಅನೂಪಶೆಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಗೋಣ ಗ್ರಾಮದಲ್ಲಿ ಹತ್ಯೆ ಘಟನೆ ಘಟಿಸಿದೆತು. ದೇವಾಲಯದಲ್ಲೇ ವಾಸವಾಗಿದ್ದ ಇಬ್ಬರು ಅರ್ಚಕರು ಮುರಾರಿ ಯಾನೆ ರಾಜು ಎಂಬ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕೆಲವು ದಿನಗಳ ಹಿಂದೆ ಚಿಮಟ (ಇಕ್ಕುಳ) ಕದ್ದಿರುವುದಾಗಿ ಆಪಾದಿಸಿ ಬೈದಿದ್ದರು ಎಂದು ಬುಲಂದಶಹರದ ಎಸ್ ಎಸ್ ಪಿ ಸಂತೋಷ ಕುಮಾರ್ ಹೇಳಿದರು.

ಸದರಿ ಮುರಾರಿ ಮಂಗಳವಾರ ನಸುಕಿನಲ್ಲಿ ದೇವಾಲಯಕ್ಕೆ ಬಂದು ಸಾಧುಗಳಿಬ್ಬರನ್ನೂ ಖಡ್ಗದಿಂದ ಕೊಲೆ ಮಾಡಿದ್ದಾನೆ ಎಂದು ಕುಮಾರ್ ಹೇಳಿದರು.

ಆರೋಪಿಯು ಮಾದಕ ದ್ರವ್ಯದ ಮತ್ತಿನಲ್ಲಿದ್ದಾನೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ಸಂತೋಷ ಕುಮಾರ್ ನುಡಿದರು.

ಬುಲಂದಶಹರದ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಅವರು ಆರೋಪಿಯನ್ನು ಬಂಧಿಸಲಾಗಿದೆ. ಗ್ರಾಮದ ಸ್ಥಳೀಯರು ವ್ಯಕ್ತಿಯನ್ನು ಬಂಧಿಸುವಲ್ಲಿ ಅಧಿಕಾರಿಗಳಿಗೆ ನೆರವಾದರು ಎಂದು ಅವರು ಹೇಳಿದರು.

ಆರೋಪಿಯು ಇದು ದೇವರ ಇಚ್ಛೆಯಾಗಿತ್ತು ಎಂದು ಪ್ರತಿಪಾದಿಸಿದ್ದಾನೆ. ಯಾವುದೇ ಖಡ್ಗವನ್ನು ತಾನು ಬಳಸಿಲ್ಲ, ದೇವಾಲಯದಲ್ಲಿ ಬಿದ್ದಿದ್ದ ಬಡಿಗೆಯನ್ನು ಬಳಸಿ ಅರ್ಚಕರನ್ನು ಕೊಂದಿದ್ದೇನೆ ಎಂಬುದಾಗಿ ಆತ ಹೇಳಿದ್ದಾನೆ ಎಂದು ಜಿಲ್ಲಾದಿಕಾರಿ ನುಡಿದರು.

ಮಧ್ಯೆ, ದೇವಾಲಯದಲ್ಲಿ ಸಾಧುಗಳಿಬ್ಬರನ್ನು ಕೊಲೆಗೈದ ಮುರಾರಿ ಯಾನೆ ರಾಜು ಹಾಗೂ ಮೃತ ಸಾಧುಗಳ ಮಧ್ಯೆ ಯಾವುದೇ ವೈಯಕ್ತಿಕ ವೈರತ್ವ ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

 ಕೊಂದದ್ದು ಹೇಗೆ ಎಂಬ ಪ್ರಶ್ನೆಗೆ, ಆತ ಮೊದಲು ಭಂಗಿ ಸೇವಿಸಿದೆ. ಬಳಿಕ ದೇವಾಲಯಕ್ಕೆ ಬಂದು ಸಾಧುಗಳ ಮೇಲೆ ಅಲ್ಲೇ ಬಿದ್ದಿದ್ದ ಬಡಿಗೆಯಿಂದ ಹೊಡೆದೆ ಎಂದು ಹೇಳಿದ್ದಾನೆ ಎಂದು ಅಧಿಕಾರಿ ನುಡಿದರು.

ರಾಜು ಖಡ್ಗ ಹಿಡಿದುಕೊಂಡು ಹೋಗುತ್ತಿದ್ದುದನ್ನು ತಾವು ನೋಡಿದ್ದುದಾಗಿ ಗ್ರಾಮಸ್ಥರು ಹೇಳಿದರು. ಅದನ್ನು ಅನುಸರಿಸಿ ಶೋಧನೆ ಮುಂದುವರೆಸಲಾಗಿತ್ತು. ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ಅರೆ ನಗ್ನಾವಸ್ಥೆಯಲ್ಲಿ ಅಮಲು ಪದಾರ್ಥದ ನಶೆಯಲ್ಲಿದ್ದ ಆತ ಪತ್ತೆಯಾದ ಎಂದು ಅಧಿಕಾರಿ ವಿವರಿಸಿದರು.

ತನಿಖೆಗೆ ಯೋಗಿ ಆದೇಶ:
ಪ್ರಕರಣದ ಬಗ್ಗೆ ವಿವರಣೆ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ಕುರಿತ ಮಾಹಿತಿಯನ್ನು ತಮಗೆ ನೀಡುವಂತೆ ಸೂಚಿಸಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಯೋಗಿ ಆದಿತ್ಯ ನಾಥ್ ಅವರಿಗೆ ದೂರವಾಣಿ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಇಂತಹ ಕ್ರೂರ ಅಪರಾಧಗಳ ಸಂದರ್ಭಗಳನ್ನು ನಾವು ರಾಜಕೀಯಗೊಳಿಸಬಾರದು. ನಾವು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಠಾಕ್ರೆ ನುಡಿದರು.

ಮಧ್ಯೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕಾನೂನು ಸುವ್ಯವಸ್ಥೆ ನಶಿಸುತ್ತಿರುವುದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿದರು. ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ನಶಿಸುತ್ತಿರುವುದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜೀನಾಮೆ ಸಲ್ಲಿಸಲು ಇದು ಸಕಾಲವಾಗಿದೆ ಎಂದು  ಜಿತಿನ್ ಪ್ರಸಾದ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿ ಕೊಲೆಗಳನ್ನು ಮಾಡಲಾಗುತ್ತಿದೆ. ಮತ್ತು ಸರ್ಕಾರವು ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದೆ ಎಂದು ಉತ್ತರ ಪ್ರದೇಶದ ಬ್ರಾಹ್ಮಣ ನಾಯಕರೊಬ್ಬರು ಆಪಾದಿಸಿದ್ದರು. ಏಪ್ರಿಲ್ ತಿಂಗಳ ಮೊದಲ ೧೫ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ೧೦೦ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ಮೂರು ದಿನಗಳ ಹಿಂದೆ ಪಚೌರಿ ಕುಟುಂಬದ ಐವರು ಸದಸ್ಯರು ನಿಗೂಢವಾಗಿ ಎಟಾವಾ ಜಿಲ್ಲೆಯಲ್ಲಿ ಹತರಾಗಿದ್ದಾರೆ, ಅವರಿಗೆ ಆದದ್ದಾದರೂ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಈದಿನ ಇಬ್ಬರು ಅರ್ಚಕರನ್ನು ಬುಲಂದಶಹರದಲ್ಲಿ ಕ್ರೂರವಾಗಿ ಕೊಲ್ಲಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಇಂತಹ ಹೀನ ಅಪರಾಧಗಳ ಬಗ್ಗೆ ವ್ಯಾಪಕ ತನಿಖೆ ನಡೆಯಬೇಕು. ಯಾರು ಕೂಡಾ ವಿಷಯದಲ್ಲ್ಲಿ ರಾಜಕೀಯ ಬೆರೆಸಬಾರದು. ಸರ್ಕಾರವು ಪ್ರಕರಣದ ಬಗ್ಗೆ ನಿಷ್ಪಕ್ಷಪಾತದ ಖಾತರಿ ನೀಡಬೇಕು ಎಂದು ಪ್ರಿಯಾಂಕಾ ನುಡಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೂಡಾ ಹತ್ಯೆಗಳನ್ನು ಖಂಡಿಸಿ ವಿಸ್ತೃತ ತನಿಖೆಗೆ ಆಗ್ರಹಿಸಿದರು.

ಬುಲಂದಶಹರದಲ್ಲಿ ಇಬ್ಬರು ಸಾಧುಗಳ ಕೊಲೆಯು ಅತ್ಯಂತ ಬೇಸರದ ಖಂಡನಾರ್ಹ ಘಟನೆ. ಇದನ್ನು ರಾಜಕೀಯಗೊಳಿಸದೆ ಅಪರಾಧ ಮನೋಭಾವ ಹಾಗೂ ಹಿಂಸಾತ್ಮಕ ವರ್ತನೆಯನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಯಬೇಕು. ತನಿಖೆಯನ್ನು ಆಧರಿಸಿ ಸಕಾಲಿಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲೇಶ್ ನುಡಿದರು.

No comments:

Advertisement