ಎಫ್‌ಡಿಐ ನಿಯಮ ಬಿಗಿ, ದೇಶೀ ಸಂಸ್ಥೆಗಳ ರಕ್ಷಣೆಗೆ ಕೇಂದ್ರ ಕ್ರಮ
ಸರ್ಕಾರಕ್ಕೆ ರಾಹುಲ್ ಗಾಂಧಿ ಥ್ಯಾಂಕ್ಸ್
ನವದೆಹಲಿ: ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಯಾವುದೇ ರಾಷ್ಟ್ರದ ಯಾವುದೇ ಕಂಪೆನಿ ಅಥವಾ ವ್ಯಕ್ತಿ ಯಾವುದೇ ರಂಗದಲ್ಲಿ ಹಣ ಹೂಡಿಕೆ ಮಾಡಬೇಕಿದ್ದರೆ ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ವಾಣಿಜ್ಯ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪರ ಅಭಿವೃದ್ಧಿ ಇಲಾಖೆಯು (ಡಿಪಿಐಐಟಿ) ದೇಶೀ ಸಂಸ್ಥೆಗಳ ರಕ್ಷಣೆಗಾಗಿ ಆದೇಶ ಹೊರಡಿಸಿತು.
ವಿದೇಶೀ ನೇರ ಹೂಡಿಕೆ (ಎಫ್ಡಿಐ) ನೀತಿಯನ್ನು ಸರ್ಕಾರವು ಪುನರ್ ಪರಿಶೀಲನೆ ಮಾಡಿದ್ದು, ಹಾಲಿ ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳನ್ನು ಅವಕಾಶವಾದಿಗಳು ವಶಕ್ಕೆ ಪಡೆದುಕೊಳ್ಳುವುದನ್ನು ದಮನಿಸಲು ಈ ಕ್ರಮ ಕೈಗೊಂಡಿದೆ ಎಂದು ಇಲಾಖೆ ಹೇಳಿತು.
ಕೇಂದ್ರ ಸರ್ಕಾರದಿಂದ ಈ ಪ್ರಕಟಣೆ ಹೊರಬಿದ್ದ ತತ್ ಕ್ಷಣವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿಯಮಗಳನ್ನು ಬಿಗಿಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದರು. ಹಾಲಿ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯ ದುರ್ಲಾಭ ಪಡೆದು ಭಾರತೀಯ ಕಾರ್ಪೋರೇಟ್ ಕಂಪೆನಿಗಳನ್ನು ವಿದೇಶೀಯರು ಗುಳುಂಕರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಗಾಂಧಿಯವರು ಕಳೆದ ವಾರ ಸರ್ಕಾರವನ್ನು ಆಗ್ರಹಿಸಿದ್ದರು.
ಕೇಂದ್ರದ ನಿರ್ಧಾರವು ವಿದೇಶೀ ಹೂಡಿಕೆಗಳ ಮೇಲೆ, ನಿರ್ದಿಷ್ಟವಾಗಿ ೨೦೦೦ ಏಪ್ರಿಲ್ನಿಂದ ೨೦೧೯ ಡಿಸೆಂಬರ್ವರೆಗಿನ ಅವಧಿಯಲ್ಲಿ ಭಾರತದಲ್ಲಿ ೨.೩೪ ಬಿಲಿಯನ್ (೨೩೪ ಕೋಟಿ) ಡಾಲರ್ ಹೂಡಿಕೆ ಮಾಡಿರುವ ಚೀನಾದ ನೇರ ಹೂಡಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚೀನೀ ಕಂಪೆನಿಗಳು ಭಾರತದ ನಷ್ಟದಲ್ಲಿರುವ ಕಂಪೆನಿಗಳನ್ನು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಗಳು ಇರುವ ಬಗ್ಗೆ ಭಾರತೀಯ ಕಾರ್ಪೋರೇಟ್ಗಳು ಆತಂಕ ವ್ಯಕ್ತ ಪಡಿಸಿದ್ದವು ಎಂದು ಅಧಿಕಾರಿಯೊಬ್ಬರು ಹೇಳಿದರು.
ಭಾರತದ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ಎಲ್ಲ ರಾಷ್ಟ್ರಗಳ ವ್ಯಕ್ತಿಗಳು ಮತು ಕಂಪೆನಿಗಳಿಗೆ ಅನ್ವಯಿಸುವಂತೆ ನಿಯಮಗಳನ್ನು ಬಿಗಿಗೊಳಿಸಿದ ಡಿಪಿಐಐಟಿಯು ನೂತನ ಶಿಷ್ಟಾಚಾರದ ವ್ಯಾಪ್ತಿಗೆ ಚೀನೀ ವ್ಯಕ್ತಿಗಳು ಮತ್ತು ಕಂಪೆನಿಗಳನ್ನು ತಂದಿತು.
‘ಭಾರತದ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ಯಾವುದೇ ರಾಷ್ಟ್ರ ಅಥವಾ ಭಾರತದಲ್ಲಿ ಹೂಡಿಕೆಯ ಫಲಾನುಭವಿ ಮಾಲೀಕ ಅಥವಾ ಅಂತಹ ಯಾವುದೇ ರಾಷ್ಟ್ರದ ನಾಗರಿಕ ಸರ್ಕಾರದ ಮೂಲಕ ಮಾತ್ರವೇ ಹೂಡಿಕೆ ಮಾಡಬಹುದು. ಅಲ್ಲದೆ, ಪಾಕಿಸ್ತಾನದ ನಾಗರಿಕ ಅಥವಾ ಸಂಪೂರ್ಣ ಪಾಕಿಸ್ತಾನದ ಕಂಪೆನಿಯು ರಕ್ಷಣೆ, ಬಾಹ್ಯಾಕಾಶ, ಪರಮಾಣು ಇಂಧನ ಕ್ಷೇತ್ರಗಳು ಮತ್ತು ವಿದೇಶೀ ಹೂಡಿಕೆಯನ್ನು ನಿಷೇಧಿಸಿದ ವಲಯಗಳು/ ಚಟುವಟಿಕೆಗಳನ್ನು ಹೊರತು ಪಡಿಸಿ, ಯಾವುದೇ ರಂಗಗಳಲ್ಲಿ/ ಚಟುವಟಿಕೆಗಳಲ್ಲಿ ಸರ್ಕಾರಿ ಮಾರ್ಗದ ಮೂಲಕ ಮಾತ್ರವೇ ಹಣ ಹೂಡಿಕೆ ಮಾಡಬಹುದು’ ಎಂದು ಡಿಪಿಐಐಟಿ ಪತ್ರಿಕಾ ಹೇಳಿಕೆ ತಿಳಿಸಿದೆ.
ಭಾರತವು ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಭೂತಾನ್, ನೇಪಾಳ ಮತ್ತು ಪಾಕಿಸ್ತಾನ ಈ ಆರು ರಾಷ್ಟ್ರಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ.
ನಿಷೇಧಿತ ವಲಯಗಳು ಮತ್ತು ಚಟುವಟಿಕೆಗಳನ್ನು ಬಿಟ್ಟು ಬೇರೆ ರಂಗಗಳಲ್ಲಿ ಎಫ್ ಡಿಐ ನೀತಿಗೆ ಒಳಪಟ್ಟು ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ಕಂಪೆನಿಗೆ/ ವ್ಯಕ್ತಿಗೆ ಅವಕಾಶ ಇದೆ.
ಇಲ್ಲಿಯವರೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹೂಡಿಕೆಗಳಿಗೆ ಮಾತ್ರ ಸರ್ಕಾರದ ಅನುಮತಿ ಕಡ್ಡಾಯವಾಗಿತ್ತು.
ಹಾಲಿ ಅಥವಾ ಭವಿಷ್ಯದ ಯಾವುದೇ ಎಫ್ ಡಿಐಗೆ ಸಂಬಂಧಿಸಿದಂತೆ ಮಾಲೀಕತ್ವದ ವರ್ಗಾವಣೆಯನ್ನು ಕೂಡಾ ಮಿತಿಗೆ ಒಳಪಡಿಸಿದ ಡಿಪಿಐಐಟಿ ’ಮಾಲೀಕತ್ವದ ಯಾವುದೇ ಬದಲಾವಣೆಗೆ ಕೂಡಾ ಸರ್ಕಾರದ ಅನುಮತಿ ಕಡ್ಡಾಯ’ ಎಂದು ಹೇಳಿದೆ.
ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಲಿ ಆರ್ಥಿಕ ಹಿನ್ನಡೆಯ ಮಧ್ಯೆ ಭಾರತೀಯ ಕಾರ್ಪೋರೇಟ್ಗಳನ್ನು ವಿದೇಶಗಳಿಗೆ ವಶಕ್ಕೆ ತೆಗೆದುಕೊಂಡು ನುಂಗಲು ಸಾಧ್ಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ವ್ಯಾಪಕ ಆರ್ಥಿಕ ಹಿನ್ನಡೆಯು ಹಲವಾರು ಭಾರತೀಯ ಕಾರ್ಪೋರೇಟ್ಗಳನ್ನು ದುರ್ಬಲಗೊಳಿಸಿದ್ದು ಅವುಗಳು ವಶಪಡಿಸಿಕೊಳ್ಳುವವರಿಗೆ ಆಕರ್ಷಕ ಗುರಿಗಳಾಗಿವೆ. ಈ ರಾಷ್ಟ್ರೀಯ ಬಿಕ್ಕಟ್ಟಿನ ವೇಳೆಯಲ್ಲಿ ಭಾರತೀಯ ಕಾರ್ಪೋರೇಟ್ಗಳನ್ನು ವಿದೇಶೀ ಹಿತಾಸಕ್ತಿಗಳು ಕೈವಶ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಬಾರದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
No comments:
Post a Comment