ಹಕ್ಕಿ
ಹಾರುತಿದೆ ನೋಡಿದಿರಾ..?
(ಇದು
ಸುವರ್ಣ ನೋಟ)
ಅಮೃತವನ್ನು ಪಡೆಯುವ ಸಲುವಾಗಿ ದೇವತೆಗಳು ಮತ್ತು ದಾನವರು ಸಮುದ್ರಮಥನ ಮಾಡಿದಾಗ ಮೊದಲು ಜನಿಸಿದ್ದು ಅಮೃತವಲ್ಲ, ಹಾಲಾಹಲ ವಿಷ. ಅದರ ಉಗ್ರ ಸ್ವರೂಪಕ್ಕೆ ಇಡೀ ಜಗತ್ತೇ ತಲ್ಲಣಿಸುವಾಗಿ ಶಿವ ಅದನ್ನು ಕುಡಿದು ಬಿಟ್ಟನಂತೆ. ಪರಿಣಾಮವಾಗಿ ಈಶ್ವರನ ಕೊರಳು (ಕಂಠ) ನೀಲಿ ಬಣ್ಣಕ್ಕೆ ತಿರುಗಿತು. ಅಂದಿನಿಂದ ಶಿವನಿಗೆ ‘ನೀಲಕಂಠ’ ಎಂಬ ಹೆಸರಾಯಿತು ಎಂಬುದು ಪುರಾಣಗಳಲ್ಲಿ ಲಭಿಸುವ ಕಥೆ.
ಆದರೆ, ಕರ್ನಾಟಕ ಸೇರಿದಂತೆ ಭಾರತದ ನಾಲ್ಕು ರಾಜ್ಯಗಳ ರಾಜ್ಯಪಕ್ಷಿಯ ಹೆಸರು ಕೂಡಾ ‘ನೀಲಕಂಠ’ ಎಂಬುದು ಬಹುಮಂದಿಗೆ ಗೊತ್ತಿಲ್ಲ. ಹೌದು, ಕರ್ನಾಟಕ, ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಶಾ ರಾಜ್ಯಗಳ ‘ರಾಜ್ಯಪಕ್ಷಿ’ ಎಂಬ ಹೆಗ್ಗಳಿಕೆ ಪ್ರಾಪ್ತವಾಗಿರುವುದು ಈ ‘ನೀಲಕಂಠ’ ಎಂಬ ಪಕ್ಷಿಗೆ. ಇದು ಕೊರಾಸಿಡೆ ಕುಟುಂಬದ ರೋಲರ್ ಜಾತಿಗೆ ಸೇರಿದ ಭಾರತೀಯ ರೋಲರ್ (ಇಂಡಿಯನ್ ರೋಲರ್) ಎಂಬುದಾಗಿ ಗುರುತಿಸಲಾಗಿರುವ ಹಕ್ಕಿ.
ದಕ್ಷಿಣ ಏಷಿಯಾ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ‘ನೀಲಕಂಠ’ ಪಕ್ಷಿ ಶಿವನ ಕಂಠದಂತಹ ನೀಲ ಬಣ್ಣವನ್ನು ಹೊಂದಿರುವುದರಿಂದ ‘ನೀಲಕಂಠ’ ಎಂಬ ಹೆಸರು ಬಳಕೆಯಲ್ಲಿದೆ. ಇದರ ಕಂಠ ನೀಲಿಯ ಲ್ಲವಾದರೂ, ಆ ಹೆಸರು ಅದರ ಮೈಯ ಬಣ್ಣದಿಂದ ಬಂದಂತೆ ತೋರುತ್ತದೆ. ಹಾಗೆ ಸೌಂದರ್ಯದ ಅಧಿಪತಿ ವಿಷ್ಣುವಿಗೂ ಪ್ರಿಯವಾದ ಪಕ್ಷಿ ಎಂಬ ನಂಬಿಕೆ ಕೂಡ ನಮ್ಮಲ್ಲಿ ಇದೆ.
ಪಾರಿವಾಳಕ್ಕಿಂತ ಚಿಕ್ಕದಾದ ಈ ಪಕ್ಷಿಯ ನೆತ್ತಿ, ರೆಕ್ಕೆ ತಿಳಿ ನೀಲಿಯಾಗಿದ್ದು, ಎದೆ, ಬೆನ್ನು ಕಂದು ಬಣ್ಣವಿದೆ. ಕತ್ತಿನ ಭಾಗ ತಿಳಿಕಂದು ಬಣ್ಣವಿದ್ದು, ಬಿಳಿಯ ಗೀರುಗಳು ಎದ್ದು ಕಾಣುತ್ತದೆ. ಕೊಕ್ಕು ಕಪ್ಪಗಿದೆ. ಹಾರುವಾಗ ಇದರ ರೆಕ್ಕೆಯ ನೀಲಿ ಬಣ್ಣ ಎದ್ದು ಕಾಣುವುದು. ದಾಸ ಮಗರೆ, ನೀಲಕಾಂತಿ, ಉರುಳಿಗ ಅನ್ನುವ ಹೆಸರು ಕೂಡ ಇದಕ್ಕಿದೆ. ಸುಮಾರು ೨೬ ರಿಂದ ೨೮ ಸೆಂಟಿಮೀಟರ್ ಉದ್ದವಿರುತ್ತದೆ.
ಇದು ಮುಖ್ಯವಾಗಿ ಪರ್ಣಪಾತಿ ಕಾಡಿನ ಅಂಚು, ಕೃಷಿಭೂಮಿ, ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರಸ್ತೆ ಬದಿಯ ಎತ್ತರದ ತಂತಿಗಳ ಮೇಲೆ, ಮರ, ಬಂಡೆ ಹಾಗೂ ಕಂಬಗಳಲ್ಲಿ ಹೊಲಗಳಿರುವ ಕಡೆ ಒಬ್ಬಂಟಿಯಾಗಿ ಆಹಾರಕ್ಕಾಗಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯ. ಕೀಟಗಳನ್ನು ಹಿಡಿದು ತಿನ್ನುವುದರಿಂದ ಮನುಷ್ಯನಿಗೆ ಉಪಕಾರಿಯೂ ಆಗಿವೆ. ಇವು ಆಹಾರ ಸಿಕ್ಕಾಗ ಅವುಗಳ ಮೇಲೆ ರಪ್ಪನೆ ಎಗರುವುದಿಲ್ಲ, ನಿಧಾನವಾಗಿ ರೆಕ್ಕೆ ಬಡಿಯುತ್ತಾ ಹಾರುತ್ತವೆ.
ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡುಕಟ್ಟಿ,೪ ಅಥವಾ ೫ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೧೭ ದಿನಗಳವರೆಗೆ ಕಾವು ಕೊಟ್ಟು ಮರಿಮಾಡುತ್ತದೆ. ಮಾರ್ಚಿಯಿಂದ ಜುಲೈ ಸಂತಾನೋತ್ಪತ್ತಿಯ ಕಾಲ. ಹೆಣ್ಣುಗಳನ್ನು ಆಕರ್ಷಿಸಲು ಗಂಡು ಹಕ್ಕಿ ಆಗಸದಲ್ಲಿ ಗಿರಕಿ ಹೊಡೆಯುತ್ತದೆ.
ಕರ್ನಾಟಕದ ಸುಂದರ ಪಕ್ಷಿಗಳಲ್ಲಿ ಆಕರ್ಷಕ. ಆದರೆ ಕೋಗಿಲೆ, ಪಾರಿವಾಳ ಮುಂತಾದ ಪಕ್ಷಿಗಳಷ್ಟು ಚಿರಪರಿಚಿತವಲ್ಲ. ನೋಡಲು ಸುಂದರವಾದ ಈ ಪಕ್ಷಿಯ ಕೂಗು ಮಾತ್ರ ಕೀರಲು ಧ್ವನಿಯದ್ದು. ಅದರ ಬಣ್ಣಕ್ಕೂ ಕೂಗಿಗೂ ತಾಳೆಯಾಗುವುದಿಲ್ಲ.
ಕೊರೋನಾವೈರಸ್ಸಿನ ಪರಿಣಾಮವಾಗಿ ಮನುಷ್ಯರು ಗೂಡು ಸೇರಿರುವ ಈ ಹೊತ್ತಿನಲ್ಲಿ ಪಕ್ಷಿಗಳು, ಪ್ರಾಣಿಗಳು ರಾಜಾರೋಷವಾಗಿ ಅಡ್ಡಾಡುತ್ತಿವೆ. ಬೇಟೆಯ ಹೆದರಿಕೆ ಇಲ್ಲದೆ ಪಕ್ಷಿಗಳು ರಾಜಗಾಂಭೀರ್ಯದೊಂದಿಗೆ ಹಾರುತ್ತಿವೆ.
ಕರ್ನಾಕದ ರಾಜ್ಯಪಕ್ಷಿಯ ಬೆನ್ನು ಹತ್ತಿದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರ ಕ್ಯಾಮರಾಕ್ಕೆ ಹಬ್ಬವೇ ಹಬ್ಬ. ಹಬ್ಬದ ಗಮ್ಮತ್ತು ಇಲ್ಲುಂಟು ನೋಡಿ.
ಸಮೀಪ
ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.
3 comments:
Thank you Uday and Vishwanath for these beautiful pictures. Please keep them coming, as often as you can! Great photography and great write up.
Thanks.
ಒಳ್ಳೆಯ ಗುಣಮಟ್ಟದ ಅಪರೂಪದ ಚಿತ್ರಗಳು...
Post a Comment