ಸಾರ್ಕ್ ಕೋವಿಡ್ ನಿಧಿಗೆ ಷರತ್ತು: ಪಾಕಿಸ್ತಾನಕ್ಕೆಭಾರತದ ಕಟು ಉತ್ತರ
ನವದೆಹಲಿ: ಕೋವಿಡ್-೧೯ ಸ್ಪಂದನಾ ನಿಧಿಗೆ ತಮ್ಮ ಬದ್ಧತೆಯ ನಿಧಿಯನ್ನು ಬಳಸುವ ಸಮಯ, ವಿಧಾನ ಮತ್ತು ಅನುಷ್ಠಾನವನ್ನು ಪ್ರತಿಯೊಂದು ಸಾರ್ಕ್ ಸದಸ್ಯ ರಾಷ್ಟ್ರ ಸ್ವತಃ ನಿರ್ಧರಿಸಬಹುದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ ಸ್ಪಂದನಾ ನಿಧಿಗೆ ಪಾಕಿಸ್ತಾನವು ಪ್ರಕಟಿಸಿದ ೩ ಮಿಲಿಯನ್ (೩೦ಲಕ್ಷ) ಡಾಲರುಗಳ ಷರತ್ತಿನ ಕೊಡುಗೆಗೆ ಭಾರತವು 2020 ಏಪ್ರಿಲ್ 10ರ ಶುಕ್ರವಾರ ಕಟು ಪ್ರತಿಕ್ರಿಯೆ ವ್ಯಕ್ತ ಪಡಿಸಿತು.
ನಿಧಿಯನ್ನು ಸಾರ್ಕ್ ಸಚಿವಾಲಯವೇ ನಿಭಾಯಿಸಬೇಕು ಮತ್ತು ಸದಸ್ಯ ರಾಷ್ಟ್ರಗಳ ಜೊತೆ ಸಮಾಲೋಚಿಸಿ ಬಳಸಬೇಕು ಎಂಬ ಷರತ್ತಿನೊಂದಿಗೆ ಸಾರ್ಕ್ ಕೋವಿಡ್-೧೯ ಸ್ಪಂದನಾ ನಿಧಿಗೆ ತನ್ನ ೩೦ ಲಕ್ಷ ಡಾಲರ್ ಕೊಡುಗೆಯ ಬದ್ಧತೆಯನ್ನು ಪಾಕಿಸ್ತಾನ ವ್ಯಕ್ತ ಪಡಿಸಿತ್ತು.
’ತಮ್ಮ ಸಾರ್ಕ್ ಕೋವಿಡ್-೧೯ ತುರ್ತು ಸ್ಪಂದನಾ ನಿಧಿಯ ಬದ್ಧತೆಗಳ ಬಳಕೆಯ ಸಮಯ, ವಿಧಾನ ಮತ್ತು ಅನುಷ್ಠಾನವನ್ನು ನಿರ್ಧರಿಸುವುದು ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೆ ಬಿಟ್ಟ ವಿಷಯ.ಭಾರತಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಪ್ರಕಟಿಸಿದ ಬದ್ಧತೆಯು ಈಗ ಅನುಷ್ಠಾನದ ಹಂತದಲ್ಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಹೇಳಿದರು.
’ವಸ್ತು ಮತ್ತು ಸೇವಾ ನೆರವನ್ನು ಈಗಾಗಲೇ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ವಿಸ್ತರಿಸಲಾಗಿದೆ. ಈ ಸಾರ್ಕ್ ರಾಷ್ಟ್ರಗಳು ಈ ಮುನ್ನವೇ ನಿಧಿಗೆ ತಮ್ಮ ಬದ್ಧತೆಗಳನ್ನು ವ್ಯಕ್ತ ಪಡಿಸಿವೆ. ಪ್ರತಿಯೊಂದು ರಾಷ್ಟ್ರದ ಗಂಭೀರತೆಯ ಮಟ್ಟವನ್ನು ಅವುಗಳ ವರ್ತನೆಯಿಂದ ಅಂದಾಜು ಮಾಡಬಹುದು’ ಎಂದು ಶ್ರೀವಾಸ್ತವ ನುಡಿದರು.
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ೮ ಸದಸ್ಯರ ಪೈಕಿ ನಿಧಿಗೆ ತನ್ನ ಕಾಣಿಕೆಯನ್ನು ಕೊಟ್ಟ ಕಟ್ಟ ಕಡೆಯ ಸದಸ್ಯ ರಾಷ್ಟ್ರ ಪಾಕಿಸ್ತಾನವಾಗಿದೆ. ಮಾರ್ಚ್ ೧೫ರಂದು ಸಾರ್ಕ್ ಸಮೂಹದ ನಾಯಕರ ವಿಡಿಯೋ ಸಂವಹನದ ಬಳಿಕ ಈ ನಿಧಿಯನ್ನು ಭಾರತದ ೧೦ ಮಿಲಿಯನ್ (೧೦೦) ಲಕ್ಷ ಡಾಲರ್ ಪ್ರಾಥಮಿಕ ದೇಣಿಗೆಯೊಂದಿಗೆ ರಚಿಸಲಾಗಿತ್ತು.
ಸಾರ್ಕ್ ಸಚಿವಾಲಯಕ್ಕೆ ತನ್ನ ಬದ್ಧತೆಯನ್ನು ತಿಳಿಸುವ ವೇಳೆಯಲ್ಲಿ ಪಾಕಿಸ್ತಾನವು ನಿಧಿಗೆ ಬರುವ ಎಲ್ಲ ಹಣವನ್ನು ಸಾರ್ಕ್ ಸಚಿವಾಲಯವೇ ನಿವಹಿಸಬೇಕು ಮತ್ತು ನಿಧಿ ಬಳಕೆಯ ವಿಧಿ ವಿಧಾನವನ್ನು ಸಾರ್ಕ್ ಚಾರ್ಟರ್ ಪ್ರಕಾರ ಸದಸ್ಯ ರಾಷ್ಟ್ರಗಳ ಜೊತೆಗೆ ಸಮಾಲೋಚಿಸುವ ಮೂಲಕವೇ ಅಂತಿಮಗೊಳಿಸಬೇಕು ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಈ ವಿಚಾರವನ್ನು ತಿಳಿಸಿ ಹೇಳಿಕೆ ಪ್ರಕಟಿಸಿತ್ತು.
’ಈ ನಿಟ್ಟಿನಲ್ಲಿ ಪಾಕಿಸ್ತಾನದ ದೃಷ್ಟಿಕೋನವನ್ನು ವಿದೇಶಾಂಗ ಕಾರ್‍ಯದರ್ಶಿ ಸೊಹೈಲ್ ಮಹಮೂದ್ ಮತ್ತು ಸಾರ್ಕ್ ಪ್ರಧಾನ ಕಾರ್‍ಯದರ್ಶಿ ಎಸಾಲ ರುವಾನ್ ವೀರಕೂನ್ ನಡುವಣ ದೂರವಾಣಿ ಸಂಭಾಷಣೆ ಕಾಲದಲ್ಲಿ ಈದಿನ ತಿಳಿಸಲಾಗಿದೆ’ ಎಂದೂ ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿತ್ತು.
ಪಾಕಿಸ್ತಾನವು ದಕ್ಷಿಣ ಏಷ್ಯಾ ಪಾದೇಶಿಕ ಸಹಕಾರ ಸಂಘದ (ಸಾರ್ಕ್) ಹಿರಿಯ ವಾಣಿಜ್ಯ ಅಧಿಕಾರಿಗಳ ವಿಡಿಯೊ ಕಾನ್ಫರೆನ್ಸಿಗೆ ಬುಧವಾರ ಗೈರು ಹಾಜರಾಗಿತ್ತು. ಇದನ್ನು ಸಂಘಟಿಸುವಲ್ಲಿ ಸಾರ್ಕ್ ಸಚಿವಾಲಯ ಯಾವುದೇ ಪಾತ್ರ ವಹಿಸದೇ ಇರುವುದರಿಂದ ಅದರಲ್ಲಿ ಪಾಲ್ಗೊಳ್ಳದೇ ಇರಲು ತಾನು ನಿರ್ಧರಿಸಿದುದಾಗಿ ಪಾಕಿಸ್ತಾನ ಹೇಳಿತ್ತು.
No comments:
Post a Comment