ರಾಷ್ಟ್ರಪತಿ ಭವನದ ಕಾರ್ಮಿಕ, ಕುಟುಂಬಕ್ಕೆ ಕ್ವಾರಂಟೈನ್
ಕೊರೋನಾ ಪ್ರಕರಣ ೧೪,೭೯೨, ಸಾವು ೪೮೮
ನವದೆಹಲಿ: ವಿಶ್ವವನ್ನು ನಡುಗಿಸುತ್ತಿರುವ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಭಾರತದಲ್ಲಿ ಶನಿವಾರ ೪೮೮ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ೧೪,೭೯೨ಕ್ಕೆ ಏರಿತು. ಈ ಮಧ್ಯೆ ರಾಷ್ಟ್ರಪತಿ ಭವನದ ಸ್ವಚ್ಛತಾ ಕಾರ್ಮಿಕನೊಬ್ಬನ ಬಂಧು ಮೃತನಾದುದನ್ನು ಅನುಸರಿಸಿ ಕಾರ್ಮಿಕ ಹಾಗೂ ಆತನ ಕುಟುಂಬ ಸದಸ್ಯರನ್ನು 2020 ಏಪ್ರಿಲ್ 18ರ ಶನಿವಾರ ಕ್ವಾರಂಟೈನ್ ಗೆ ಒಳಪಡಿಸಲಾಯಿತು. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ದೇಶೀಯ
ಮತ್ತು ಅಂತಾರಾಷ್ಟ್ರೀಯ ವಿಮಾನಯಾನಗಳಿಗೆ ಬುಕ್ಕಿಂಗ್ ಆರಂಭಿಸುವುದಾಗಿ ಹೇಳಿತು. ಆದರೆ ಕೇಂದ್ರ ಸರ್ಕಾರ
ಈ
ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿತು.
ರಾಷ್ಟ್ರಪತಿಗಳ ಎಸ್ಟೇಟಿನಲ್ಲಿನ ಸ್ವಚ್ಛತಾ ಕಾರ್ಮಿಕನ ಬಂಧುವೊಬ್ಬ ನಿಧನರಾದ ಬಳಿಕ ಎಸ್ಟೇಟಿನಲ್ಲಿರುವ ಆತನ ಮನೆಯಲ್ಲಿಯೇ ಸ್ವಚ್ಛತಾ ಕಾರ್ಮಿಕ ಮತ್ತು ಆತನ ಕುಟುಂಬ ಸದಸ್ಯರನ್ನು ಏಕಾಂಗಿವಾಸಕ್ಕೆ ಒಳಪಡಿಸಲಾಯಿತು.
ಈ ಆವರಣದಲ್ಲಿ ವಾಸವಾಗಿರುವ ೩೦ ಕುಟುಂಬಗಳು ಮತ್ತು ಅಧಿಕಾರಿಯೊಬ್ಬರಿಗೆ ಕೂಡಾ ಸ್ವಯಂ ಪ್ರತ್ಯೇಕವಾಸಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಏರ್ ಇಂಡಿಯಾ ಬುಕಿಂಗ್: ಈ ಮಧ್ಯೆ ದೇಶದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವಯ ಮೇ ೪ರಿಂದ ಆರಂಭಿಸಲಾಗುವ ದೇಶದ ಒಳಗಿನ ವಿಮಾನಯಾನಗಳಿಗಾಗಿ ಬುಕಿಂಗ್ ಆರಂಭಿಸುವುದಾಗಿ ಶನಿವಾರ ಪ್ರಕಟಿಸಿತು. ಜೂನ್ ೧ರಿಂದ ಆರಂಭವಾಗುವ ಅಂತಾರಾಷ್ಟ್ರೀಯ ವಿಮಾನಯಾನಗಳಿಗೂ ಬುಕಿಂಗ್ ಆರಂಭಿಸಲಾಗುವುದು ಎಂದೂ ಅದು ತಿಳಿಸಿತು. ಸಂಸ್ಥೆಯ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನಗಳು ರಾಷ್ಟ್ರವ್ಯಾಪಿ ಲಾಕ್ ಡೌನ್ ಪರಿಣಾಮವಾಗಿ ಸ್ಥಗಿತಗೊಂಡಿದೆ.
ಮುಂಬೈ, ದೆಹಲಿ, ಕೋಲ್ಕತ, ಚೆನ್ನೈ ಮತ್ತು ಬೆಂಗಳೂರಿನಂತಹ ಆಯ್ದ ಪ್ರಮುಖ ಮೆಟ್ರೋ ನಗರಗಳಿಗೆ ದೇಶೀಯ ವಿಮಾನಯಾನ ಆರಂಭವಾಗಲಿದೆ ಎಂದು ಸಂಸ್ಥೆ ಹೇಳಿತು.
ದೇಶಾದ್ಯಂತ ೯೫೭ ಹೊಸ ಪ್ರಕರಣ
ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊರೋನಾ ಸೋಂಕಿಗೆ ಹೊಸದಾಗಿ ೩೬ ಜನ ಸಾವನ್ನಪ್ಪಿದರು. ಇದರೊಂದಿಗೆ ಭಾರತದಲ್ಲಿ ಕೊರೋನಾಸೋಂಕಿಗೆ ಬಲಿಯಾದವರ ಸಂಖ್ಯೆ ೪೮೮ಕ್ಕೆ ಏರಿತು. ಈ ಪೈಕಿ ಮಹಾರಾಷ್ಟ್ರವೊಂದರಲ್ಲೇ ೨೦೦ ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ೯೫೭ ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೧೪,೭೯೨ಕ್ಕೆ ಏರಿದೆ. ಈ ಪೈಕಿ ೨೦೧೪ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದು, ಗುಣಮುಖರಾದವರ ಶೇಕಡಾವಾರು ಪ್ರಮಾಣ ೧೩.೮೫ ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.
ಮಹಾರಾಷ್ಟ್ರದಲ್ಲಿ ೨೦೧, ಮಧ್ಯಪ್ರದೇಶದಲ್ಲಿ ೫೭, ಗುಜರಾತ್ ಮತ್ತು ದೆಹಲಿಯಲ್ಲಿ ೩೮ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಹೆಚ್ಚು ಕೊರೋನಾ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ದೆಹಲಿ ಈ ನಾಲ್ಕು ರಾಜ್ಯಗಳು ಇವೆ.
ತಮಿಳುನಾಡಿನಲ್ಲಿ ೧೫, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ೧೪, ಪಂಜಾಬ್ ಮತ್ತು ಕರ್ನಾಟಕದಲ್ಲಿ ೧೪, ರಾಜಸ್ಥಾನದಲ್ಲಿ ೧೧, ಪಶ್ಚಿಮ ಬಂಗಾಳದಲ್ಲಿ ೧೦ ಜನರು ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಶನಿವಾರ ಒಂದೇ ದಿನ ೨೫ ಹೊಸ ಕೋವಿಡ್-೧೯ ಪಾಸಿಟಿವ್ ಪ್ರಕರಗಳು ಪತ್ತೆಯಾದವು. ಜತೆಗೆ ೪೨ ವರ್ಷದ ವ್ಯಕ್ತಿಯೋರ್ವ ಕೊರೋನಾಗೆ ಬಲಿಯಾದ ಪರಿಣಾಮ ಸಾವಿನ ಸಂಖ್ಯೆ ೧೪ಕ್ಕೆ ಏರಿತು. ಇದುವರೆಗೂ ರಾಜ್ಯಾದ್ಯಂತ ೩೮೪ ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ರಾಜ್ಯ ಸರ್ಕಾರದ ಪ್ರಕಟಣೆ ಪ್ರಕಾರ ಬೆಂಗಳೂರು ನಗರ- ೮೯, ಮೈಸೂರು- ೮೦, ಬೆಳಗಾವಿ- ೪೨, ಬಾಗಲಕೋಟೆ- ೨೧, ಬಳ್ಳಾರಿ- ೧೩, ಬೆಂಗಳೂರು ಗ್ರಾಮಾಂತರ- ೧೨, ಬೀದರ್- ೧೪, ಚಿಕ್ಕಬಳ್ಳಾಪುರ- ೧೬, ದಕ್ಷಿಣ ಕನ್ನಡ- ೧೨, ಚಿತ್ರದುರ್ಗ- ೧, ದಾವಣಗೆರೆ- ೨, ಧಾರವಾಡ- ೭, ಗದಗ- ೨, ಕಲಬುರ್ಗಿ- ೨೨, ಕೊಡಗು- ೧, ಮಂಡ್ಯ- ೧೨, ತುಮಕೂರು- ೨, ಉಡುಪಿ- ೩, ಉತ್ತರ ಕನ್ನಡ- ೧೧, ವಿಜಯಪುರ ೨೧ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ೧೦೪ ಮಂದಿ ಸಂಪೂರ್ಣ ಗುಣಮುಖರಾಗಿದ್ದು, ೨೬೬ ಸಕ್ರಿಯ ಪ್ರಕರಣಗಳಾಗಿವೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೨೨,೭೭,೨೮೩, ಸಾವು ೧,೫೬,೧೮೨
ಚೇತರಿಸಿಕೊಂಡವರು- ೫,೮೨,೬೬೬
ಅಮೆರಿಕ ಸೋಂಕಿತರು ೭,೧೧,೦೦೮, ಸಾವು ೩೭,೨೧೬
ಸ್ಪೇನ್ ಸೋಂಕಿತರು ೧,೯೧,೭೨೬, ಸಾವು ೨೦,೦೪೩
ಇಟಲಿ ಸೋಂಕಿತರು ೧,೭೨,೪೩೪, ಸಾವು ೨೨,೭೪೫
ಜರ್ಮನಿ ಸೋಂಕಿತರು ೧,೪೨,೨೮೩, ಸಾವು ೪,೪೦೩
ಚೀನಾ ಸೋಂಕಿತರು ೮೨,೭೧೯, ಸಾವು ೪,೬೩೨
ಇಂಗ್ಲೆಂಡ್ ಸೋಂಕಿತರು ೧,೧೪,೨೦೭, ಸಾವು ೧೫,೪೬೪
ನೆದರ್ಲ್ಯಾಂಡ್ಸ್ನಲ್ಲಿ ೧೬೨, ಬೆಲ್ಜಿಯಂನಲ್ಲಿ ೨೯೦, ಇಂಗ್ಲೆಂಡಿನಲ್ಲಿ ೮೮೮, ಒಟ್ಟಾರೆ ವಿಶ್ವಾದ್ಯಂತ ೨,೦೩೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment