Thursday, April 23, 2020

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಬಿಜೆಪಿ ವಿರುದ್ಧ ಸೋನಿಯಾ ಪ್ರಹಾರ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ:  ಬಿಜೆಪಿ ವಿರುದ್ಧ ಸೋನಿಯಾ ಪ್ರಹಾರ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಅವಧಿ ಮೇ ೩ಕ್ಕೆ ನಿರೀಕ್ಷೆಯಂತೆ ಮುಗಿದ ಬಳಿಕದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಸ್ಪಷ್ಟ ಕಲ್ಪನೆ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಏಪ್ರಿಲ್ 23ರ ಗುರುವಾರ  ಇಲ್ಲಿ ಟೀಕಿಸಿದರು.

ಹಾಲಿ ಸ್ವರೂಪದ ದಿಗ್ಬಂಧನವನ್ನು ದಿನಾಂಕದ ಬಳಿಕವೂ ಮುಂದುವರೆಸುವುದು ಇನ್ನೂ ಹೆಚ್ಚು ವಿನಾಶಕಾರಿಯಾಗುತ್ತದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿ ನಡೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ ಸೋನಿಯಾ ಗಾಂಧಿ ಎಚ್ಚರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ ೨೫ರಿಂದ ಮೊದಲಿಗೆ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಪ್ರಕಟಿಸಿದ್ದರು. ಬಳಿಕ ಅದನ್ನು ಮೇ ೩ರ ವರೆಗೆ ವಿಸ್ತರಿಸಿದ್ದರು. ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ಏಪ್ರಿಲ್ ೧೭ರಂದು ವಿಡಿಯೋ ಸಂವಹನ ನಡೆಸಿದ ಬಳಿಕ ದಿಗ್ಬಂಧನ ತೆರವಿನ ಬಗ್ಗೆ ಪ್ರಧಾನಿಯವರು ನಿರ್ಧರಿಸುವ ಸಾಧ್ಯತೆ ಇದೆ.

ಕೋವಿಡ್-೧೯ರ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮತ್ತು ಸ್ಥಳೀಯ ಸರ್ಕಾರಗಳು ಮುಂಚೂಣಿಯಲಿವೆ. ಆದರೆ ಕೇಂದ್ರ ಸರ್ಕಾರದಿಂದ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕಾನೂನುಬದ್ಧವಾಗಿ ಬರಬೇಕಾದ ನಿಧಿಗಳು ಬರುತ್ತಿಲ್ಲ, ಅವುಗಳನ್ನು ತಡೆ ಹಿಡಿಯಲಾಗಿದೆ ಎಂದು ಸೋನಿಯಾ ನುಡಿದರು.

ಪ್ರತಿಯೊಬ್ಬ ಭಾರತೀಯನೂ ಚಿಂತಿಸಬೇಕಾದ ವಿಷಯವೊಂದನ್ನು ನಾನು ಹಂಚಿಕೊಳ್ಳಬೇಕಾಗಿದೆ. ಕೊರೋನಾವೈರಸ್ಸನ್ನು ಒಗ್ಗಟ್ಟಿನಿಂದ ನಾವು ನಿಭಾಯಿಸಬೇಕಾಗಿರುವ ಹೊತ್ತಿನಲ್ಲಿ ಬಿಜೆಪಿಯು ಕೋಮು ಪೂರ್ವಾಗ್ರಹ ಮತ್ತು ದ್ವೇಷದ ವೈರಸ್ಸನ್ನು ಹರಡುವ ಕೆಲಸದಲ್ಲಿ ಮಗ್ನವಾಗಿದೆ. ನಮ್ಮ ಸಾಮಾಜಿಕ ಸಾಮರಸ್ಯಕ್ಕೆ ಭಾರೀ ಹಾನಿ ತಟ್ಟುತ್ತಿದೆ. ಹಾನಿಯನ್ನು ಸರಿಪಡಿಸಲು ನಮ್ಮ ಪಕ್ಷವು ಕಠಿಣ ಶ್ರಮ ವಹಿಸಬೇಕಾಗಿದೆ ಎಂದು ಸೋನಿಯಾ ಹೇಳಿದರು.

ಕೆಲವೊಂದು ಯಶಸ್ಸಿನ ಕಥೆಗಳಿವೆ. ನಾವು ಅವುಗಳನ್ನು ಶ್ಲಾಘಿಸಬೇಕಾಗಿದೆ. ಸೂಕ್ತವಾದ ವೈಯಕ್ತಿಕ ರಕ್ಷಣಾ ಸಲಕರಣೆಗಳ (ಪಿಪಿಇ) ಕೊರತೆಯ ಮಧ್ಯೆಯೂ ಕೋವಿಡ್ -೧೯ರ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್‍ಯಕರ್ತರು, ಸ್ವಚ್ಛತಾ ಕಾರ್ಮಿಕರು ಮತ್ತು ಇತರ ಅಗತ್ಯ ಸೇವಾದಾರರು, ಎನ್‌ಜಿಒಗಳು, ಮತ್ತು ದೇಶಾದ್ಯಂತ ಅಗತ್ಯ ಉಳ್ಳವರಿಗೆ ಪರಿಹಾರ ಒದಗಿಸುತ್ತಿರುವ ಲಕಾಂತರ ನಾಗರಿಕರಿಗೆ ಪ್ರತಿಯೊಬ್ಬ ಭಾರತೀಯನೂ ನಮಸ್ಕರಿಸಬೇಕು. ಅವರ ಅರ್ಪಣಾ ಮನೋಭಾವ ಮತ್ತು ದೃಢ ನಿರ್ಧಾರ ನಿಜವಾಗಿಯೂ ನಮ್ಮೆಲರಿಗೂ ಸ್ಫೂರ್ತಿ ನೀಡಬೇಕು ಎಂದು ಸೋನಿಯಾಗಾಂಧಿ ಹೇಳಿದರು.

ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಧನಾತ್ಮಕ ಬೆಂಬಲ ನೀಡುವ ಪಕ್ಷದ ಬದ್ಧತೆಯನ್ನು ಸೋನಿಯಾ ಪುನರುಚ್ಚರಿಸಿದರುಆದರೆ ಕಳೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆ ನಡೆದ ಬಳಿಕದಿಂದ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ ಎಂದು ನುಡಿದರು.

ಮೂರು ವಾರಗಳ ಹಿಂದಿನ ನಮ್ಮ ಸಭೆಯ ಬಳಿಕ, ಸಾಂಕ್ರಾಮಿಕವು ವೇಗ ಮತ್ತು ಹರಡುವಿಕೆಯಲ್ಲಿ ಚಿಂತಾಜನಕ ರೀತಿಯಲ್ಲಿ ಹೆಚ್ಚಿದೆ. ಆರೋಗ್ಯ, ಆಹಾರ ಸುರಕ್ಷತೆ ಮತ್ತು ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಯಶಸ್ವಿಯಾಗಿ ತೊಡಗಿಸಿಕೊಳ್ಳುವಿಕೆಯತ್ತ ಬೆಳಕು ಚೆಲ್ಲಬೇಕಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಹೇಳಿದರು.

ಪರೀಕ್ಷೆ, ಪತ್ತೆ ಮತ್ತು ಕ್ವಾರಂಟೈನ್ ಕಾರ್‍ಯಕ್ರಮಗಳ ಹೊರತು  ಬೇರೆ ಪರ್‍ಯಾಯವಿಲ್ಲ ಎಂದು ನಾವು ಪ್ರಧಾನಿಯವರನ್ನು ಪದೇ ಪದೇ ಒತ್ತಾಯಿಸಿದ್ದೇವೆ. ದುರದೃಷ್ಟಕರವಾಗಿ ಪರೀಕ್ಷೆಯು ಈಗಲೂ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕಳಪೆ ಪರೀಕ್ಷಾ ಕಿಟ್‌ಗಳ ಜೊತೆಗೆ ದಕ್ಷ ಕಿಟ್‌ಗಳ ಸರಬರಾಜೂ ಸಮರ್ಪಕವಾಗಿಲ್ಲ. ನಮ್ಮ ವೈದ್ಯರು ಮತ್ತು ಆರೋಗ್ಯ ರಕ್ಷಣಾ ಕಾರ್‍ಯಕರ್ತರಿಗೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ) ಒದಗಿಸಲಾಗುತ್ತಿದೆ, ಆದರೆ ಅವುಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಎಂದು ಸೋನಿಯಾ ನುಡಿದರು.

ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಪ್ರಕಾರ ಗುರುವಾರ ಬೆಳಗ್ಗಿನ ವೇಳೆಗೆ ಭಾರತದಲ್ಲಿ ಸೋಂಕಿನ ಪ್ರಕರಣಗಳು ೨೧,೩೦೦ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ ೬೮೧ ಕ್ಕೆ ಏರಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದ ಇತರ ನಾಯಕರೂ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಆಗ್ರಹಿಸಿದರು. ಇದೊಂದೇ ಕೊರೋನಾವೈರಸ್ ವಿರುದ್ಧದ ದೊಡ್ಡ ಅಸ್ತ್ರ ಎಂದು ಅವರು ನುಡಿದರು.

ಪರೀಕ್ಷೆಗಳನ್ನು ಹೆಚ್ಚಿಸದೇ ಇದ್ದಲ್ಲಿ, ನಾವು ಮತ್ತೆ ಲಾಕ್ ಡೌನ್ ಮೊರೆಹೋಗಬೇಕಾದ ಸಂದರ್ಭ ಬರುತ್ತದೆ ಎಂದು ರಾಹುಲ್ ಗಆಂಧಿ ಕಳೆದ ವಾರವೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಏಪ್ರಿಲ್ ೨ರಂದು ನಡೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯು ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೃಢ ಬೆಂಬಲ ನೀಡುವುದನ್ನು ಮುಂದುವರೆಸುವ ನಿರ್ಧಾರ ಕೈಗೊಂಡಿತ್ತು. ಆದರೆ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯತ್ತ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿ ಬಿಕ್ಕಟ್ಟಿನ ಜೊತೆಗೆ ವ್ಯವಹರಿಸುವ ಮಾರ್ಗದ ಬಗ್ಗೆ ಸಲಹೆ ಮಾಡಲು ಜಾಗತಿಕ ಮಟ್ಟದ ಖ್ಯಾತ ಆರ್ಥಿಕ ತಜ್ಞರನ್ನು ಒಳಗೊಂಡ ಕಾರ್‍ಯಪಡೆ ರಚಿಸುವಂತೆ ಒತ್ತಾಯಿಸಿತ್ತು.

ಲಾಕ್ ಡೌನ್ ವಿಸ್ತರಣೆಯಿಂದಾಗಿ ಸಮಾಜದ ಎಲ್ಲ ವರ್ಗಗಳು ನಿರ್ದಿಷ್ಟವಾಗಿ ರೈತರು, ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ರಂಗದ ಕೆಲಸಗಾರರು ಅತೀವ ಕಷ್ಟ ಮತ್ತು ಸಂಕಷ್ಟ ಎದುರಿಸಬೇಕಾಗಿ ಬಂದಿದೆ ಎಂದು ಸೋನಿಯಾ ಹೇಳಿದರು.

ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳು ಸ್ಥಗಿತಗೊಂಡಿದ್ದು ಕೋಟ್ಯಂತರ ಬದುಕುಗಳು ಅಸ್ತವ್ಯಸ್ತವಾಗಿವೆ ಎಂದು ಕಾಂಗ್ರೆಸ್ ನಾಯಕು ನುಡಿದರು.

ಮಾರ್ಚ್ ೨೫ರಂದು ಲಾಕ್ ಡೌನ್ ಜಾರಿಗೆ ಬಂದ ಬಳಿಕ ತಾನು ಪ್ರಧಾನಿಯವರಿಗೆ ಹಲವಾರು ಪತ್ರಗಳನ್ನು ಬರೆದು ಧನಾತ್ಮಕ ಸಹಕಾರದ ಕೊಡುಗೆ ಮುಂದಿಟ್ಟದ್ದಲ್ಲದೆ ಗ್ರಾಮೀಣ ಮತ್ತು ನಗರ ಕುಟುಂಬಗಳ ಸಂಕಷ್ಟ ಕಡಿಮೆಗೊಳಿಸಲು ಹಲವಾರು ಸಲಹೆಗಳನ್ನು ನೀಡಿದ್ದುದಾಗಿ ಸೋನಿಯಾ ವಿವರಿಸಿದರು.

ಸೋನಿಯಾಗಾಂಧಿಯವರು ಪ್ರಧಾನಿ ಮೋದಿ ಅವರಿಗೆ ಪತ್ರಗಳನ್ನು ಬರೆದು ಗ್ರಾಮೀಣ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸಮಸ್ಯೆಗಳನ್ನು ಪ್ರಸ್ತಾಪಿಸಿ ಅವರಿಗಾಗಿ ಹಣಕಾಸು ಕೊಡುಗೆ ಪ್ರಕಟಿಸುವಂತೆ ಆಗ್ರಹಿಸಿದ್ದರು. ೨೦,೦೦೦ ಕೋಟಿ ರೂಪಾಯಿ ವೆಚ್ಚದ ಕೇಂದ್ರೀಯ ಸೌಂದರ್‍ಯೀಕರಣ ಯೋಜನೆ ಅಮಾನುತುಗೊಳಿಸುವಂತೆ ಮತ್ತು ಪಿಎಂ ಕೇರ್‍ಸ್ ನಿಧಿಯ ಎಲ್ಲ ಹಣವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂ-ಎನ್ ಆರ್ ಎಫ್) ಕೋವಿಡ್ ವಿರುದ್ಧದ ಸಮರಕ್ಕಾಗಿ ವರ್ಗಾಯಿಸುವಂತೆ ಕೋರಿದ್ದರು.

ಕಾಂಗ್ರೆಸ್ ಮುಖ್ಯಮಂತ್ರಿಗಳೂ ಸೇರಿದಂತೆ ವಿವಿಧ ಮೂಲಗಳಿಂದ ಪಡೆದ ಹಿಮ್ಮಾಹಿತಿಯನ್ನು ಅನುಸರಿಸಿ ಸಲಹೆಗಳನ್ನು ನೀಡಲಾಗಿತ್ತು ಎಂದು ಸೋನಿಯಾ ಕಾರ್‍ಯಕಾರಿಣಿಗೆ ತಿಳಿಸಿದರು.
ದುರದೃಷ್ಟಕರವಾಗಿ ಅವರು ಅವುಗಳನ್ನು ಭಾಗಶಃ ಅನುಸರಿಸಿದರುಕೇಂದ್ರ ಸರ್ಕಾರದಿಂದ ವ್ಯಕ್ತವಾಗಬೇಕಾಗಿದ್ದ  ಹೃದಯ ವೈಶಾಲ್ಯ, ಆತ್ಮೀಯತೆಯ ಅಭಾವ ಎದ್ದು ಕಂಡಿತು ಎಂದು ಸೋನಿಯಾ ಹೇಳಿದರು.

ಆಹಾರ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಲಭಿಸಬೇಕಾಗಿದ್ದ ಆಹಾರ ಧಾನ್ಯ ಫಲಾನುಭವಿಗಳಿಗೆ ಇನ್ನೂ ಲಭಿಸಿಲ್ಲ. ಸಂಕಷ್ಟದ ಸಮಯದಲಿ ಪ್ರತಿ ತಿಂಗಳಿಗೆ ಪ್ರತಿಯೊಬ್ಬ ವ್ಯಕ್ತಿಗೆ ೧೦ ಕಿಗ್ರಾಂ ಆಹಾರ ಧಾನ್ಯ, ಕಿಗ್ರಾಂ ಬೇಳೆಕಾಳು ಮತ್ತು ಅರ್ಧ ಕಿಗ್ರಾಂ ಸಕ್ಕರೆಯನ್ನು ಒದಗಿಸುವುದು ನಮ್ಮ ಬದ್ಧತೆಯಾಗಬೇಕು. ೧೨ ಕೋಟಿ ಉದ್ಯೋಗಗಳು ನಷ್ಟವಾಗಿವೆ. ಹಾಲಿ ಆರ್ಥಿಕ ಸ್ಥಿತಿಯಲ್ಲಿ ಇನ್ನಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತದೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ಕನಿಷ್ಠ ೭೫೦೦ ರೂಪಾಯಿ ಒದಗಿಸುವ ಅಗತ್ಯವಿದೆ ಎಂದು ಸೋನಿಯಾ ಪ್ರತಿಪಾದಿಸಿದರು.

No comments:

Advertisement