Thursday, April 16, 2020

ಪಿಜ್ಜಾ ಆಸೆ: ದಕ್ಷಿಣ ದೆಹಲಿಯ ೭೨ ಕುಟುಂಬಗಳಿಗೆ ಕ್ವಾರಂಟೈನ್

ಪಿಜ್ಜಾ ಆಸೆ: ದಕ್ಷಿಣ ದೆಹಲಿಯ ೭೨ ಕುಟುಂಬಗಳಿಗೆ ಕ್ವಾರಂಟೈನ್
ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ ವೇಳೆಯಲ್ಲಿ ಮನೆಯ ಒಳಗಿದ್ದುಕೊಂಡು ಸಾಮಾಜಿಕ ಅಂತರ ಪಾಲನೆ ಮಾಡಿದ ವ್ಯಕ್ತಿಗಳೂ ಪಿಜ್ಜಾ ವಿತರಕ ಹುಡುಗನ ಕಾರಣದಿಂದಾಗಿ ಏಕಾಂತವಾಸಕ್ಕೆ (ಕ್ವಾರಂಟೈನ್) ಒಳಪಡುವಂತಾದ ಘಟನೆ ದೆಹಲಿಯಲ್ಲಿ ಘಟಿಸಿತು.
ಖ್ಯಾತ ಪಿಜ್ಞಾ ಮಾರಾಟ ಸರಪಣಿಯೊಂದಕ್ಕೆ ಸೇರಿದ ಪಿಜ್ಜಾ ವಿತರಕ ಹುಡುಗನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟ ಬೆನ್ನಲ್ಲೇ ದಕಿಷಣ ದೆಹಲಿಯ ಬಡಾವಣೆಯೊಂದರ ೭೨ ಕುಟುಂಬಗಳಿಗೆ ಕ್ವಾರಂಟೈನ್ಗೆ ಒಳಪಡುವಂತೆ ಸೂಚಿಸಲಾಗಿದೆ ಎಂದು ದಕ್ಷಿಣ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು  2020 ಏಪ್ರಿಲ್ 16ರ ಗುರುವಾರ ತಿಳಿಸಿದರು.
ದಕ್ಷಿಣ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಎಂ ಮಿಶ್ರ ಅವರ ಪ್ರಕಾರ ದೆಹಲಿಯ ಮಾವೀಯ ನಗರದಲ್ಲಿ ಖ್ಯಾತ ಪಿಜ್ಜಾ ಸರಪಣಿಯೊಂದರ ವಿತರಕ ಹುಡುಗನಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಮಂಗಳವಾರ ಖಚಿತಪಟ್ಟಿದೆ. ಇದನ್ನು ಅನುಸರಿಸಿ ಅಧಿಕಾರಿಗಳು ತತ್ ಕ್ಷಣವೇ ಪಿಜ್ಜಾ ವಿತರಣಾ ಸಂಸ್ಥೆಯಲ್ಲಿನ ಆತನ ೧೬ ಮಂದಿ ಸಹೋದ್ಯೋಗಿಗಳನ್ನೂ ಕ್ವಾರಂಟೈನ್ಗೆ ಒಳಪಡಿಸಲು ನಿರ್ಧರಿಸಿದರು. ಬಳಿಕ ಸೋಂಕು ತಗುಲಿದ ಪಿಜ್ಜಾ ವಿತರಕ ಹುಡುಗನು ಪಿಜ್ಜಾ ಸರಬರಾಜು ಮಾಡಿದ್ದ ಪ್ರತಿಯೊಂದು ಮನೆಯನ್ನೂ ಗುರುತಿಸಲು ಕ್ರಮ ಕೈಗೊಳ್ಳಲಾಯಿತು.

ನಮಗೆ ೭೨ ಮನೆಗಳು ಆತನ ಮೂಲಕ ಪಿಜ್ಜಾ ಪಡೆದಿವೆ ಎಂಬ ಮಾಹಿತಿ ಲಭಿಸಿತು. ಕೂಡಲೇ ಮನೆಗಳ ಪ್ರತಿಯೊಬ್ಬರಿಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಮತ್ತು ಸ್ವಯಂ ಏಕಾಂತ ವಾಸಕ್ಕೆ ಒಳಪಡುವಂತೆಯೂ ಸೂಚಿಸಲಾಯಿತು ಎಂದು ಮಿಶ್ರ ನುಡಿದರು.

ಭಯ ಪಡುವ ಅಗತ್ಯವಿಲ್ಲ, ವಿತರಣೆಯ ವೇಳೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಮತ್ತು ಎಲ್ಲ ವಿತರಕ ಹುಡುಗರಿಗೂ ಮುಖಗವಸು, ಕೈಗವಸುಗಳನ್ನು ಬಳಸುವಂತೆ ನಾವು ಸೂಚಿಸಿದ್ದೇವೆ. ಆದರೆ ವೈರಸ್ ಸೋಂಕಿತ ಹುಡುಗನ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳನ್ನೂ ಕ್ವಾರಂಟೈನ್ಗೆ ಒಳಪಡಿಸುವ ನಿರ್ಧಾರವು ಮುಂಜಾಗರೂಕತಾ ಕ್ರಮವಾಗಿ ಅನಿವಾರ್ ಎಂದು ಅವರು ಹೇಳಿದರು.

ಸದರಿ ವಿತರಣಾ ಹುಡುಗ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಆತನ ಸಂಪರ್ಕಕ್ಕೆ ಬಂದ ಇತರ ಎಲ್ಲರ ಮೇಲೂ ಪ್ರತಿದಿನವೂ ನಿಗಾ ಇಡಲಾಗಿದೆ ಎಂದು ಅವರು ನುಡಿದರು.

ವ್ಯಾಪಾರ ಮಳಿಗೆಯಿಂದ ಕೆಲವು ಆರ್ಡರುಗಳನ್ನು ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೋ ಮೂಲಕವೂ ವಿತರಿಸಲಾಗಿತ್ತು. ವಿತರಕ ಹುಡುಗನ ಎಲ್ಲ ಸಹೋದ್ಯೋಗಿಗಳಿಗೂ ಪರೀಕ್ಷೆಯಿಂದ ಕೊರೋನಾವೈರಸ್ ಇಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಮುಂಜಾಗರೂಕತಾ ಕ್ರಮವಾಗಿ ರೆಸ್ಟೋರೆಂಟ್ ಸದ್ಯಕ್ಕೆ ತನ್ನ ಎಲ್ಲ ಚಟುವಟಿಕೆಗಳನ್ನು ಅಮನತುಗೊಳಿಸಿದೆ ಎಂದು ಝೊಮ್ಯಾಟೋ ತಿಳಿಸಿದೆ.

ಎಲ್ಲ ಸಹ ಕೆಲಸಗಾರರನ್ನೂ ಮುಂಜಾಗರೂಕತಾ ಕ್ರಮವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಮತ್ತು ಸದರಿ ವಿತರಣಾ ಹುಡುಗ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಕೂಡಾ ತನ್ನ ವ್ಯಾಪಾರ ಚಟುವಟಿಕೆಯನ್ನು ಸದ್ಯಕ್ಕೆ ಅಮಾನತುಗೊಳಿಸಿದೆ ಎಂದು ಝೊಮ್ಯಾಟೋ ಹೇಳಿಕೆ ತಿಳಿಸಿತು.

ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅರು, ವಿತರಣಾ ಏಜೆಂಟರು, ಪಡಿತರ ಅಂಗಡಿಗಳಲ್ಲಿ (ರೇಷನ್) ಕೆಲಸ ಮಾಡುತ್ತಿರುವವರು ಮತ್ತು  ಕೆಮಿಸ್ಟ್ ಗಳು ಸೇರಿದಂತೆ ರಾಜಧಾನಿಯ ಎಲ್ಲ ಸೇವಾದಾರರನ್ನೂ ಪರೀಕ್ಷಿಸಲಾಗುವುದು ಎಂದು ಹೇಳಿದರು. 

No comments:

Advertisement