ಕೋವಿಡ್-19: ಲಕ್ಷ ದಾಟಿದ್ದರೂ ಭಾರತವೇ ಉತ್ತಮ
ನವದೆಹಲಿ: ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೧,೦೦,೦೦೦ ದಾಟುವ ಮೂಲಕ ಕೊರೋನಾಸೋಂಕು ತಟ್ಟಿದ ವಿಶ್ವದ ಟಾಪ್ ೧೧ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿಯೇ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರ 2020 ಮೇ 19ರ ಮಂಗಳವಾರ ಇಲ್ಲಿ ಹೇಳಿತು.
ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ, ವಿಶ್ವ ಕಂಡ ಅತ್ಯಂತ ಕೆಟ್ಟ ಬಿಕ್ಕಟ್ಟಿನ ಮಧ್ಯೆ, ಭಾರತದಲ್ಲಿ ಸಾಂಕ್ರಾಮಿಕದಿಂದ ಗುಣಮುಖರಾಗಿ ಚೇತರಿಸುತ್ತಿರುವವರ ಸಂಖ್ಯೆ ಆರೋಗ್ಯಕರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಉಲ್ಲೇಖಿಸಿತು.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ೨,೩೫೦ ಮಂದಿ ಕೋವಿಡ್-೧೯ ರೋಗಿಗಳು ಗುಣಮುಖರಾಗಿದ್ದು ಚೇತರಿಸಿದವರ ಸಂಖ್ಯೆ ೪೦,೦೦೦ದ ಸಮೀಪಕ್ಕೆ ಬಂದಿದೆ ಎಂದು ಸಚಿವಾಲಯ ಹೇಳಿದೆ.
‘ಈವರೆಗೆ ೩೯,೧೭೪ ರೋಗಿಗಳು ಕೋವಿಡ್-೧೯ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಂದರೆ ಚೇತರಿಕೆ ಪ್ರಮಾಣ ಶೇಕಡಾ ೩೮.೭೩ಕ್ಕೆ ಏರಿದೆ. ಚೇತರಿಕೆ ಪ್ರಮಾಣವು ನಿರಂತವಾಗಿ ಹೆಚ್ಚುತ್ತಲೇ ಇದೆ’ ಎಂದು ಸಚಿವಾಲಯ ಹೇಳಿತು.
ದೇಶದಲ್ಲಿ ಪ್ರಸ್ತುತ ೫೮,೮೦೨ ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಈ ಎಲ್ಲ ಪ್ರಕರಣಗಳೂ ಸಕ್ರಿಯ ವೈದ್ಯಕೀಯ ನಿಗಾದಲ್ಲಿ ಇರುವ ಪ್ರಕರಣಗಳಾಗಿದ್ದು, ಈ ಪೈಕಿ ಶೇಕಡಾ ೨.೯ರಷ್ಟು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.
ಅತ್ಯಂತ ತೀವ್ರ ಸ್ವರೂಪದಲ್ಲಿ ರೋಗ ಬಾಧಿಸಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಕೂಡಾ ಕಡಿಮೆ ಎಂದು ಸಚಿವಾಲಯ ಹೇಳಿದೆ. ವಿಶ್ವದ ಇತರ ಕಡೆಗಳಲ್ಲಿ ಲಕ್ಷ ಜನರಿಗೆ ಶೇಕಡಾ ೪.೧ರಷ್ಟು ಸಾವುಗಳು ಸಂಭವಿಸುತ್ತಿದ್ದರೆ ಭಾರತದಲ್ಲಿ ಅದರ ಪ್ರಮಾಣ ಲಕ್ಷ ಜನಸಂಖ್ಯೆಗೆ ಶೇಕಡಾ ೦.೨ ಎಂದು ಸಚಿವಾಲಯ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಒದಗಿಸಿರುವ ಪರಿಸ್ಥಿಯ ಮಾಹಿತಿ ಪ್ರಕಾರ ಅಮೆರಿಕ, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಸ್ಪೇನ್, ಬ್ರೆಜಿಲ್, ಬೆಲ್ಜಿಯಂ, ಜರ್ಮನಿ, ಇರಾನ್, ಕೆನಡ, ನೆದರ್ ಲ್ಯಾಂಡ್ಸ್, ಮೆಕ್ಸಿಕೊ, ಚೀನಾ, ಟರ್ಕಿ ಮತ್ತು ಮತ್ತು ಸ್ವೀಡನ್ ದೇಶಗಳಲ್ಲಿ ಪ್ರಮಾಣ ದಶಲಕ್ಷ ಸಂಖ್ಯೆಗೆ ಹೋಲಿಸಿದರೆ ಹೆಚ್ಚಾಗಿದೆ.
‘ಕಡಿಮೆ ಸಾವಿನ ಸಂಖ್ಯೆಗೆ ಸಕಾಲಿಕವಾಗಿ ಪ್ರಕರಣ ಪತ್ತೆ ಮತ್ತು ಪ್ರಕರಣಗಳ ಸೂಕ್ತ ಕ್ಲಿನಿಕಲ್ ನಿರ್ವಹಣೆ ಕಾರಣ’ ಎಂದು ದೇಶದಲ್ಲಿ ಪರೀಕ್ಷಾ ಪ್ರಮಾಣ ನಿರಂತರ ಹೆಚ್ಚಳಗೊಂಡಿರುವುದನ್ನು ಉಲ್ಲೇಖಿಸುತ್ತಾ ಸಚಿವಾಲಯ ಹೇಳಿದೆ.
ಸಚಿವಾಲಯದ ಇತ್ತೀಚಿನ ಮಾಹಿತಿ ಪ್ರಕಾರ ದಾಖಲೆ ಸಂಖ್ಯೆಯ ೧,೦೮,೨೩೩ ಮಾದರಿಗಳನ್ನು ಮೇ ೧೮ರಂದು ಪರೀಕ್ಷಿಸಲಾಗಿದ್ದು, ಇದರೊಂದಿಗೆ ಮಾದರಿಗಳ ಒಟ್ಟು ಪರೀಕ್ಷಾ ಸಂಖ್ಯೆಯು ೨೪,೨೫,೭೪೨ಕ್ಕೇ ಏರಿದೆ.
‘ಜನವರಿಯಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಒಂದೇ ಒಂದು ಪ್ರಯೋಗಾಲಯವನ್ನು ಹೊಂದಿದ್ದ ಭಾರತ ಅತ್ಯಂತ ತ್ವರಿತವಾಗಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ದೇಶದಲ್ಲಿ ಈಗ ೩೮೫ ಸರ್ಕಾರಿ ಪ್ರಯೋಗಾಲಯಗಳು ಮತ್ತು ೧೫೮ ಖಾಸಗಿ ಪ್ರಯೋಗಾಲಯಗಳು ಇವೆ. ಕೇಂದ್ರ ಸರ್ಕಾರದ ಎಲ್ಲ ಪ್ರಯೋಗಾಲಯಗಳು, ರಾಜ್ಯ ವೈದ್ಯಕೀಯ ಕಾಲೇಜುಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ರಂಗದ ಸೂಕ್ತ ಪಾಲುದಾರಿಕೆ ಮೂಲಕ ಪರೀಕ್ಷಾ ಸಾಮರ್ಥ್ಯವನು ವಿಸ್ತರಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿತು.
ಟ್ರೂನಾಟ್ ಮತ್ತು ಸಿಬಿನಾಟ್ ನಂತಹ ಇತರ ಪರೀಕ್ಷಾ ಯಂತ್ರಗಳನ್ನು ಕೂಡಾ ಪರೀಕ್ಷಾ ಸಾಮರ್ಥ್ಯ ಹೆಚ್ಚಳಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
೨೪ ಗಂಟೆಗಳಲ್ಲಿ ಒಟ್ಟು ಪ್ರಕರಣ
ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪೯೭೦ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೊರೋನಾವೈರಸ್ ಸೊಂಕಿನ ಪ್ರಕರಣಗಳ ಸಂಖ್ಯೆ ಸೋಮವಾರದ ೯೬,೧೬೯ರಿಂದ ಮಂಗಳವಾರ ೧,೦೧,೧೩೯ಕ್ಕೆ ಏರಿದೆ. ಒಟ್ಟು ಸಾವಿನ ಸಂಖ್ಯೆ ೩,೧೬೩ಕ್ಕೆ ಏರಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೪೯,೨೮,೭೦೧, ಸಾವು ೩,೨೦,೯೬೪
ಚೇತರಿಸಿಕೊಂಡವರು- ೧೯,೨೯,೯೫೧
ಅಮೆರಿಕ ಸೋಂಕಿತರು ೧೫,೫೪,೯೫೧, ಸಾವು ೯೨,೧೮೮
ಸ್ಪೇನ್ ಸೋಂಕಿತರು ೨,೭೮,೧೮೮, ಸಾವು ೨೭,೭೦೯
ಇಟಲಿ ಸೋಂಕಿತರು ೨,೨೫,೮೮೬, ಸಾವು ೩೨,೦೦೭
ಜರ್ಮನಿ ಸೋಂಕಿತರು ೧,೭೭,೪೮೨, ಸಾವು ೮,೧೪೫
ಚೀನಾ ಸೋಂಕಿತರು ೮೨,೯೬೦, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೪೬,೪೦೬, ಸಾವು ೩೪,೭೯೬
ಅಮೆರಿಕದಲ್ಲಿ ೨೦೭, ಇರಾನಿನಲ್ಲಿ ೬೨, ಬೆಲ್ಜಿಯಂನಲ್ಲಿ ೨೮, ಇಂಡೋನೇಷ್ಯ ೩೦, ನೆದರ್ ಲ್ಯಾಂಡ್ಸ್‌ನಲ್ಲಿ ೨೧, ರಶ್ಯಾದಲ್ಲಿ ೧೧೫, ಸ್ವೀಡನ್‌ನಲ್ಲಿ ೪೫, ಮೆಕ್ಸಿಕೋದಲ್ಲಿ ೧೫೫, ಬ್ರೆಜಿಲ್ ೮೮ ಒಟ್ಟಾರೆ ವಿಶ್ವಾದ್ಯಂತ ೯೯೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment