Wednesday, May 13, 2020

ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಈ ’ಮಹಾ ಕೊಡುಗೆ: ನಿರ್ಮಲಾ ಸೀತಾರಾಮನ್

ಅಭಿವೃದ್ಧಿಯ  ಪ್ರೋತ್ಸಾಹಕ್ಕಾಗಿ   'ಮಹಾ ಕೊಡುಗೆ': ನಿರ್ಮಲಾ ಸೀತಾರಾಮನ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಕೊಡುಗೆಯ ವಿವರಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮೇ 13ರ ಬುಧವಾರ  ಬಹಿರಂಗಗೊಳಿಸಿದರು.

"ಮೂಲಭೂತವಾಗಿ, ಇದು ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು. ಅದಕ್ಕಾಗಿಯೇ ಇದನ್ನುಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನ ಎಂಬುದಾಗಿ ಕರೆಯಲಾಗುತ್ತಿದೆ ಎಂದು ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

" ಕೊಡುಗೆಯು ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಚಾಲಿತ ವ್ಯವಸ್ಥೆಗಳು, ಜನಸಂಖ್ಯೆ ಮತ್ತು ಬೇಡಿಕೆ ಐದು ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ. ಹಾಗೆಯೇ ಉತ್ಪಾದನೆ, ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನು ಎಂದು ಗುರುತಿಸಬಹುದಾದ ಅಂಶಗಳತ್ತ ಗಮನ ಹರಿಸಿದೆ ಎಂದು ಸಚಿವೆ ನುಡಿದರು.

ತಾವು ಮಾಡುತ್ತಿರುವ ಪ್ರಕಟಣೆಗಳು ಪ್ರಧಾನಿ ಮೋದಿಯವರ ದೃಷ್ಟಿಗೆ ಅನುಗುಣವಾಗಿದೆ ಎಂದು ಹಣಕಾಸು ಸಚಿವೆ ಹೇಳಿದರು.

ಪ್ರಧಾನ ಮಂತ್ರಿಯವರು ಭಾರತವನ್ನು ಪ್ರತ್ಯೇಕಿತ ಭಾರತ ಎಂಬುದಾಗಿ ಆರ್ಥೈಸಿಲ್ಲ, ಆತ್ಮ ವಿಶ್ವಾಸದ ಭಾರತ ಎಂಬುದಾಗಿ ಹೇಳಿದ್ದಾರೆ ಎಂದ ಸೀತಾರಾಮನ್ ನುಡಿದರು.

ಮಂಗಳವಾರ ಹಣಕಾಸು ಸಚಿವರು ಟ್ವಿಟ್ಟರಿನಲ್ಲಿ "ಇದು ಕೇವಲ ಹಣಕಾಸಿನ ಕೊಡುಗೆ ಅಲ್ಲ, ಸುಧಾರಣೆಗೆ ಪ್ರಚೋದನೆ, ಮನಸ್ಥಿತಿಯ ಕೂಲಂಕಷ ಪರೀಕ್ಷೆ ಮತ್ತು ಆಡಳಿತದಲ್ಲಿ ಹೆಚ್ಚಿನ ಒತ್ತು" ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ೨೦ ಲಕ್ಷ ಕೋಟಿ ರೂಪಾಯಿಗಳ ಉತ್ತೇಜಕ ಕೊಡುಗೆಯನ್ನು ಪ್ರಕಟಿಸಿ ಇದು ಆರ್ಥಿಕತೆಗೆ ಚೈತನ್ಯ ತುಂಬುತ್ತದೆ ಮತ್ತು ವಲಸೆ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಸಮಾಜದ ಎಲ್ಲಾ ವರ್ಗದವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದರು.

ಕೊಡುಗೆಯ ವಿವರಗಳನ್ನು ಹಣಕಾಸು ಸಚಿವರು ಬಹಿರಂಗಪಡಿಸುತ್ತಾರೆ ಎಂದು ಅವರು ತಿಳಿಸಿದ್ದರು.

ಪ್ರಧಾನಿಯವರು ಇದನ್ನು "ವಿಶೇಷ ಆರ್ಥಿಕ ಪ್ಯಾಕೇಜ್" ಎಂಬುದಾಗಿ ವಿವರಿಸಿದ್ದು, ಇದು "ಸ್ವಾವಲಂಬಿ ಭಾರತ ಅಭಿಯಾನಕ್ಕೆ (ಆತ್ಮ ನಿರ್ಭರ ಭಾರತ) ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಕೊಡುಗೆಯು  ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸರಿಸುಮಾರು ಶೇಕಡಾ ೧೦ರಷ್ಟು ಆಗುತ್ತದೆ ಎಂದು ಹೇಳಿದ್ದರು.

No comments:

Advertisement