ಟೆಡ್ರೋಸ್‌ಗೆ ಟ್ರಂಪ್ ಕಠಿಣ ಪತ್ರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆವ ಬೆದರಿಕೆ
ನವದೆಹಲಿ: ವಿಶ್ವಸಂಸ್ಥೆಯ ಅಧ್ಯಕ್ಷ ಟೆಡ್ರೋಸ್ ಆಧನೊಮ್ ಅವರು ಚೀನಾ ಹೇಳಿದಂತೆ ಕುಣಿಯುತ್ತಿದ್ದಾರೆ ಮತ್ತು ಕೋವಿಡ್ -೧೯ ಸಾಂಕ್ರಾಮಿಕದ ಆರಂಭದ ಹಂತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ದುರುಪಯೋಗ ಮಾಡಿದ್ದಾರೆ ಎಂದು ಆಪಾದಿಸಿ ಖಡಕ್ ಪತ್ರ ಬರೆದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಬೆದರಿಕೆ ಹಾಕಿದ್ದಾರೆ.
‘ಸಾಂಕ್ರಾಮಿಕಕ್ಕೆ ಸ್ಪಂದಿಸುವಲ್ಲಿನ ನಿಮ್ಮ ಮತ್ತು ನಿಮ್ಮ ಸಂಸ್ಥೆಯ ಪುರಾವರ್ತಿತ ತಪ್ಪು ಹೆಜ್ಜೆಗಳು ವಿಶ್ವಕ್ಕೆ ಅತ್ಯಂತ ತುಟ್ಟಿಯಾಗಿ ಪರಿಣಮಿಸಿವೆ. ಚೀನಾದಿಂದ ಮುಕ್ತಗೊಂಡು ಸ್ವಾತಂತ್ರ್ಯ ಪ್ರದರ್ಶನ ಮಾಡುವುದು ಮಾತ್ರವೇ ವಿಶ್ವ ಆರೋಗ್ಯ ಸಂಸ್ಥೆಯ ಮುಂದಿರುವ ಏಕೈಕ ದಾರಿ’ ಎಂದು ಟ್ರಂಪ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಡಿಸೆಂಬರಿನಿಂದ ಪ್ರತಿಯೊಂದು ಸಂದರ್ಭದಲ್ಲೂ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಬಳಿ ಇದ್ದ ಮಾಹಿತಿಗೆ ಅನುಗುಣವಾಗಿ ಕಾರ್‍ಯ ಎಸಗಿಲ್ಲ. ತಪ್ಪು ಪ್ರತಿಪಾದನೆಗಳನ್ನು ಮಾಡುತ್ತಾ ಅಥವಾ ವಿಶ್ವಕ್ಕೆ ಕೆಟ್ಟ ಸಲಹೆಗಳನ್ನೂ ನೀಡುತ್ತಾ ಕಾಲ ತಳ್ಳಿತು ಎಂದು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಟ್ರಂಪ್ ಆಪಾದಿಸಿದ್ದಾರೆ.
ಪ್ರಮುಖ ಪೂರಕ ಸುಧಾರಣೆಗಳಿಗೆ ಬದ್ಧವಾಗಲು ಟೆಡ್ರೋಸ್ ಅವರಿಗೆ ೩೦ ದಿನಗಳ ಗಡುವನ್ನು ನೀಡಿರುವ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಮಾಡದೇ ಇದ್ದಲ್ಲಿ, ’ನಾನು ತಾತ್ಕಾಲಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕವು ಹಣಕಾಸು ನೆರವು ಒದಗಿಸುವುದನ್ನು ಸ್ಥಗಿತಗೊಳಿಸಿ, ನಮ್ಮ ಸದಸ್ಯತ್ವ ಮುಂದುವರೆಸುವುದನ್ನು ಮತ್ತು ನೆರವು ನಿಧಿಯನ್ನು ಕಾಯಂ ಆಗಿ ನಿಲ್ಲಿಸುವ ಬಗ್ಗೆ ಪರಿಶೀಲನೆ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನೀತಿ ನಿರ್ಣಾಯಕ ಸಂಸ್ಥೆಯಾಗಿರುವ ಮಹಾ ಅಧಿವೇಶನವು ಸೋಮವಾರ ತನ್ನ ಸಭೆಯನ್ನು ಆರಂಭಿಸುವುದಕ್ಕೆ ಕೆಲವು ಗಂಟೆಗಳ ಮುನ್ನ ಟ್ರಂಪ್ ಅವರ ಪತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ. ವಿಶ್ವಾದ್ಯಂತ ೩.೨ ಲಕ್ಷ ಜನರನ್ನು ಬಲಿತೆಗೆದುಕೊಂಡಿರುವ ಹಾಗೂ ಲಕ್ಷಾಂತರ ಮಂದಿಯನ್ನು ಸೋಂಕಿರುವ ಕೊರೋನಾವೈರಸ್ಸಿನ ಮೂಲದ ಬಗ್ಗೆ ತನಿಖೆ ನಡೆಸುವುದನ್ನು ಚೀನಾವು ಈ ಸಮಾವೇಶದಲ್ಲಿ ವಿರೋಧಿಸಿತ್ತು.
ಟ್ರಂಪ್ ಪತ್ರವು ವಿಶ್ವ ಆರೋಗ್ಯ ಸಂಸ್ಥೆಯು ಕೈಗೊಳ್ಳಬೇಕಾದ ಸುಧರಣೆಗಳು ಯಾವುದು ಎಂಬುದಾಗಿ ಹೇಳಿಲ್ಲ. ’ನನ್ನ ಆಡಳಿತವು ಈಗಾಗಲೇ ನಿಮ್ಮ ಜೊತೆಗೆ ಸಂಸ್ಥೆಯ ಸುಧಾರಣೆ ಬಗ್ಗೆ ಮಾತುಕತೆ ಆರಂಭಿಸಿದೆ’ ಎಂದು ಟ್ರಂಪ್ ಪತ್ರದಲ್ಲಿ ಟೆಡ್ರೋಸ್ ಅವರಿಗೆ ತಿಳಿಸಿದ್ದಾರೆ.
ವಿಶ್ವ ಸಂಸ್ಥೆ ಮುಖ್ಯಸ್ಥರಿಗೆ ಟ್ರಂಪ್ ಅವರು ಬರೆದಿರುವ ಪತ್ರವು ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸಲು ಅಮೆರಿಕದ ಭೂಮಿಕೆಯಾಗಿದೆ ಎಂದು ವಾಷಿಂಗ್ಟನ್ ಮತು ಜಿನೇವಾದಲ್ಲಿನ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ತರಾತುರಿಯಲ್ಲಿ ಯಾವುದೇ ಸುಧಾರಣೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ೧೯೪ ಸದಸ್ಯ ರಾಷ್ಟ್ರಗಳ ಪ್ರತಿನಿಧಿಯಾಗಿರುವ ವಿಶ್ವ ಆರೋಗ್ಯ ಸಂಸ್ಥೆಯು ಪ್ರಸ್ತುತ ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನ ಮಹಾಅಧಿವೇಶನವನ್ನು ನಡೆಸುತ್ತಿದೆ.
ಅಮೆರಿಕದ ಅಧ್ಯಕ್ಷ ಟೊನಾಲ್ಡ್ ಟ್ರಂಪ್ ಅವರು ನಿರೀಕ್ಷಿಸುತ್ತಿರುವ ಯಾವುದೇ ಮಹತ್ವದ ಸುಧಾರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಹಾಅಧಿವೇಶನದ ಅನುಮೋದನೆಯೊಂದಿಗೆ ಮಾತ್ರವೇ ಮಾಡಲು ಸಾಧ್ಯ’ ಎಂದು ರಾಜತಾಂತ್ರಿಕರು ನುಡಿದರು.
ಟ್ರಂಪ್ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವ ಮಾತನ್ನು ಆಡುತ್ತಿರುವುದು ಇದೇ ಮೊದಲಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವುದು ಬೆದರಿಕೆಯನ್ನು ಔಪಚಾರಿಕವನ್ನಾಗಿ ಮಾಡಿದೆ.
ತಮ್ಮ ಮಾರ್ಗವನ್ನು ಅನುಸರಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಮತ್ತು ಸಂಘಟನೆಗಳಿಂದ ಡೊನಾಲ್ಡ್ ಟ್ರಂಪ್ ಅವರು ಹೊರ ದಾಖಲೆಗಳು ಬೇಕಾದಷ್ಟಿವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ೨೦೧೫ರ ಪ್ಯಾರಿಸ್ ಒಪ್ಪಂz, ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿ ಸಂಘ, ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಟ್ರಂಪ್ ಅವರು ಕಳೆದ ವರ್ಷ ಹೊರನಡೆದಿದ್ದರು ಮತ್ತು ವಿಶ್ವ ಅಂಚೆ ಯೂನಿಯನ್‌ನಿಂದಲೂ ಹೊರಬರಲು ಅವರು ಸಜ್ಜಾಗಿದ್ದರು.
ಟ್ರಂಪ್ ಹೊರನಡೆದ ಪ್ರಸಂಗಗಳು..
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಯು (ಯುನೆಸ್ಕೊ) ಇಸ್ರೇಲ್ ವಿರುದ್ಧ ಪೂರ್ವಾಗ್ರಹ ಭಾವನೆ ಹೊಂದಿದೆ ಎಂಬ ಕಾರಣಕ್ಕಾಗಿ ಅಮೆರಿಕವು ಅದರಿಂದ ಹೊರನಡೆದಿತ್ತು.
ಇಸ್ರೇಲ್ ವಿರುದ್ಧ ಪೂರ್ವಾಗ್ರಹದ ಹೊರತಾಗಿ ಕಪಟತನ ಮತ್ತು ಸ್ವಾರ್ಥ ಸಾಧನೆಯ ಬುದ್ದಿ ಪ್ರದರ್ಶಿಸುತ್ತಿದೆ ಎಂದು ಆಪಾದಿಸಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ೨೦೧೮ರ ಜೂನ್ ತಿಂಗಳಲ್ಲಿ ಟ್ರಂಪ್ ಆಡಳಿತವು ಅಮೆರಿಕವನ್ನು ಹೊರಕ್ಕೆ ಎಳೆದಿತ್ತು.
ಪ್ಯಾರಿಸ್ ಹವಾಮಾನ ಒಪ್ಪಂದವು ಅಮೆರಿಕದ ಆರ್ಥಿಕ ಸ್ಪರ್ಧಾತ್ಮಕತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂಬ ನೆಲೆಯಲ್ಲಿ ೨೦೧೫ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬರುವ ಪ್ರಕ್ರಿಯೆಗೆ ಅಮೆರಿಕ ಚಾಲನೆ ನೀಡಿತ್ತು. ಒಪ್ಪಂದದಿಂದ ನಿರ್ಗಮಿಸುವ ತಮ್ಮ ಇರಾದೆಯನ್ನು ಟ್ರಂಪ್ ೨೦೧೭ರಲ್ಲಿ ಪ್ರಕಟಿಸಿದರು.
ಅಂಚೆ ದರಗಳಿಗೆ ಸಂಬಂಧಿಸಿದಂತೆ ಜಾಗತಿಕ ಅಂಚೆ ಯೂನಿಯನ್‌ನಿಂದ ಹೊರಬರಲು ೨೦೧೯ರ ಅಕ್ಟೋಬರ್ ತಿಂಗಳ ಗಡುವನ್ನು ಡೊನಾಲ್ಡ್ ಟ್ರಂಪ್ ನಿಗದಿ ಪಡಿಸಿದ್ದರು. ಆದರೆ ಸಂಸ್ಥೆಯು ಕಳೆದ ವರ್ಷ ಕೊನೆ ಕ್ಷಣದಲ್ಲಿ ರಾಜಿಹೊಂದಾಣಿಕೆಗೆ ಬಂದುದನ್ನು ಅನುಸರಿಸಿ ಸಂಸ್ಥೆಯಿಂದ ಹೊರನಡೆಯುವ ನಿರ್ಣಯವನ್ನು ಟ್ರಂಪ್ ತಡೆಹಿಡಿದಿದ್ದರು.
No comments:
Post a Comment