ಭಾರತದಲ್ಲಿ ಲಾಕ್ ಡೌನ್ ೬೦ನೇ ದಿನ: ೧.೨೫ ಲಕ್ಷಕ್ಕೆ ಏರಿದ ಕೊರೋನಾ
ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಅತ್ಯಂತ ಹೆಚ್ಚು ಅಂದರೆ ೬,೬೫೪ ಹೊಸ ಪ್ರಕರಣಗಳೊಂದಿಗೆ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್‌ಡೌನ್) ೬೦ನೇ ದಿನವಾದ 2020 ಮೇ 23ರ ಶನಿವಾರ ಮಾರಕ ಕೊರೊನಾವೈರಸ್ ಸೋಂಕು ೧,೨೫,೧೦೧ಕ್ಕೆ ತಲುಪಿತು. ೧೩೭ ಮಂದಿ ಸಾವನ್ನಪ್ಪುವುದರೊಂದಿಗೆ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ೩,೭೨೦ಕ್ಕೆ ಏರಿತು.
ಒಂದು ವಾರದ ಅವಧಿಯಲ್ಲಿ ಸೋಂಕು ದಾಖಲೆ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದು ಶನಿವಾರ ೫ನೇ ದಿನವಾಗಿದ್ದು, ಈ ೫ ದಿನಗಳ ಅವಧಿಯಲ್ಲಿ ಸುಮಾರು ೩೫,೦೦೦ ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ವೈರಸ್ ಪ್ರಸರಣ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರನೆ ಹೆಚ್ಚಳವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳಲ್ಲಿ ಕಳವಳ ಉಂಟು ಮಾಡಿದೆತು.
ಮೇ ೧೭ರಂದು ಒಂದೇ ದಿನ ೪,೯೮೭ ಪ್ರಕರಣಗಳು ಹೊಸದಾಗಿ ದಾಖಲಾಗುವುದರೊಂದಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕು ಪ್ರಕರಣ ಮೊತ್ತ ಮೊದಲಿಗೆ ದಾಖಲೆ ನಿರ್ಮಿಸಿತು. ಮೇ ೧೮ರಂದು ದೈನಂದಿನ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿ ೫,೨೪೨ಕ್ಕೆ ತಲುಪಿತು. ಮೇ ೨೦ರಂದು ೫,೬೧೧ ಪ್ರಕರಣಗಳು ದಾಖಲಾದವು. ಮೇ ೨೨ರಂದು (೬,೦೮೮) ಪ್ರಕರಣಗಳು, ಮೇ ೨೩ರಂದು ೬,೬೫೪ ಪ್ರಕರಣಗಳು ದಾಖಲಾದವು. ಮೇ ೧೯ ಮತ್ತು ಮೇ ೨೧ರಂದು ಮಾತ್ರ ಹಿಂದಿನ ದಿನಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದವು. ಈ ದಿನಗಳಲ್ಲಿ ಕ್ರಮವಾಗಿ ೪,೯೭೦ ಮತ್ತು ೫,೬೦೯ ಪ್ರಕರಣಗಳು ವರದಿಯಾಗಿದ್ದವು.
ಶನಿವಾರ ಹೊಸದಾಗಿ ದಾಖಲಾದ ೬,೬೫೪ ಪ್ರಕರಣಗಳಿಗೆ ಪುನಃ ಮಹಾರಾಷ್ಟ್ರದಿಂದಲೇ ದೊಡ್ಡ ಕಾಣಿಕೆ ಸಲ್ಲಿಕೆಯಾಗಿದೆ. ರಾಜ್ಯದಲ್ಲಿ ೨,೯೪೦ ಹೊಸ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ೧,೭೫೧ ಪ್ರಕರಣಗಳು ಮುಂಬೈ ನಗರ ಒಂದರಲ್ಲೇ ದಾಖಲಾಗಿವೆ.
ಪ್ರಕರಣಗಳ ಸಂಖ್ಯೆ ಏರಿಕೆಯು ಕಳೆದ ಐದು ದಿನಗಳಲ್ಲಿ ಗಂಟಲ ಮಾದರಿ ಪರೀಕ್ಷೆಯನ್ನು ಹೆಚ್ಚಿಸಿದ್ದಕ್ಕೆ ಅನುಗುಣವಾಗಿದೆ, ಈ ದಿನಗಳಲ್ಲಿ ಪ್ರತಿದಿನ ೧ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಸೋಂಕಿತರ ಪೈಕಿ ೫೧,೭೮೪ ಮಂದಿ ಗುಣಮುಖರಾಗುವುದರೊಂದಿಗೆ ಕೊರೋನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ ೬೯,೫೯೭ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ತಿಳಿಸಿದೆ.
ಆದರೆ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಾವಿನ ಸಂಖ್ಯೆ ಕಡಿಮೆ ಇರುವುದು ಹಲವರ ಹುಬ್ಬೇರಿಸಿದೆ. ಕಳೆದ ಕೆಲವು ದಿನಗಳಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳು ಹೊಸದಾಗಿ ದಾಖಲಾಗಿದ್ದರೂ, ಸಾವಿನ ಸಂಖ್ಯೆ ಒಮ್ಮೆ ಕೂಡಾ ೧೫೦ನ್ನು ಮೀರಿಲ್ಲ.
ಶನಿವಾರ ದೃಢಪಟ್ಟ ೧೩೭ ಸಾವುಗಳಲ್ಲಿ, ೬೩ ಸಾವುಗಳು ಮಹಾರಾಷ್ಟ್ರದಲ್ಲಿ, ೨೯ ಗುಜರಾತಿನಲ್ಲಿ, ತಲಾ ೧೪ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ, ೬ ಪಶ್ಚಿಮ ಬಂಗಾಳದಲ್ಲಿ, ೪ ತಮಿಳುನಾಡಿನಲ್ಲಿ ಮತ್ತು ತಲಾ ಎರಡು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಮತ್ತು ಒಂದು ಹರಿಯಾಣದಲ್ಲಿ ಸಂಭವಿಸಿವೆ.
ಈ ಮಧ್ಯೆ ದಿಗ್ಬಂಧನ ೧ ಮತ್ತು ದಿಗ್ಬಂಧನ ೨ ಕ್ರಮಗಳ ಪರಿಣಾಮವಾಗಿ ೧.೪ ರಿಂದ ೨.೯ ದಶಲಕ್ಷ (೧೪ರಿಂದ ೨೯ ಲಕ್ಷ) ಸೋಂಕು ಪ್ರಕರಣಗಳು ಮತ್ತು ೫೪,೦೦೦ ಸಾವು ನಿವಾರಣೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ ಪೌಲ್ ಅವರು ಶುಕ್ರವಾರ ಬಿಡುಗಡೆ ಮಾಡಿದ ಸರ್ಕಾರಿ ಮಾಹಿತಿ ತಿಳಿಸಿದೆ. ೧.೪ರಿಂದ ೨.೯ ಮಿಲಿಯನ್ (ದಶಲಕ್ಷ) ಪ್ರಕರಣಗಳು ಮತ್ತು ೩೭,೦೦೦ ದಿಂದ ೭೮,೦೦೦ ದಷ್ಟು ಸಾವುಗಳು ನಿವಾರಣೆಯಾಗಿವೆ ಎಂದು ಮಾಹಿತಿ ವಿಶ್ಲೇಷಣೆಯಲ್ಲಿ ನಿರತವಾಗಿರುವ ಕನಿಷ್ಠ ೫ ವಿವಿಧ ಸಂಸ್ಥೆಗಳು ಕೂಡಾ ಹೇಳಿವೆ.
ಸೋಂಕು ಹರಡುವಿಕೆಯು ಬಹುತೇಕ ಸೀಮಿತ ಪ್ರದೇಶದಲ್ಲಿ ಮಾತ್ರವೇ ಕಂಡು ಬಂದಿದೆ ಎಂದೂ ವಿಶ್ಲೇಷಣೆಗಳು ಹೇಳಿವೆ.
ಮೇ ೨೧ರ ವೇಳೆಗೆ ಶೇಕಡಾ ೮೦ರಷ್ಟು ಕೋವಿಡ್-೧೯ ಪ್ರಕರಣಗಳು ಕೇವಲ ೫ ರಾಜ್ಯಗಳಿಗೆ ಸೀಮಿತವಾಗಿದ್ದವು. ಶೇಕಡಾ ೯೦ರಷ್ಟು ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಕರ್ನಾಟಕ ಈ ೧೦ ರಾಜ್ಯಗಳಲ್ಲಿ ಕಂಡು ಬಂದಿದ್ದವು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೫೩,೩೯,೦೯೩, ಸಾವು ೩,೪೦,೬೯೫
ಚೇತರಿಸಿಕೊಂಡವರು- ೨೧,೭೮,೮೫೦
ಅಮೆರಿಕ ಸೋಂಕಿತರು ೧೬,೪೭,೨೧೨, ಸಾವು ೯೭,೬೯೬
ಸ್ಪೇನ್ ಸೋಂಕಿತರು ೨,೮೧,೯೦೪, ಸಾವು ೨೮,೬೨೮
ಇಟಲಿ ಸೋಂಕಿತರು ೨,೨೮,೬೫೮, ಸಾವು ೩೨,೬೧೬
ಜರ್ಮನಿ ಸೋಂಕಿತರು ೧,೭೯,೭೫೮ ಸಾವು ೮,೩೫೩
ಚೀನಾ ಸೋಂಕಿತರು ೮೨,೯೭೧, ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೫೪,೧೯೫, ಸಾವು ೩೬,೩೯೩
ಅಮೆರಿಕದಲ್ಲಿ ೪೯, ಇರಾನಿನಲ್ಲಿ ೫೯, ಬೆಲ್ಜಿಯಂನಲ್ಲಿ ೨೫, ಇಂಡೋನೇಷ್ಯ ೨೫, ನೆದರ್ ಲ್ಯಾಂಡ್ಸ್‌ನಲ್ಲಿ ೨೩, ರಶ್ಯಾದಲ್ಲಿ ೧೩೯, ಸ್ವೀಡನ್‌ನಲ್ಲಿ ೬೭, ಮೆಕ್ಸಿಕೋದಲ್ಲಿ ೪೭೯ ಒಟ್ಟಾರೆ ವಿಶ್ವಾದ್ಯಂತ ೧೨೭೦ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment