ಚೀನಾ, ಕೊರೋನಾ: ಪ್ರಧಾನಿಗೆ ರಾಹುಲ್ ತರಾಟೆ
ನವದೆಹಲಿ: ಹೆಚ್ಚುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ಮತ್ತು ಗಡಿಯಲ್ಲಿ ಚೀನಾದ ತಂಟೆಯ ವಿಷಯಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2020 ಮೇ 26ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.
೨೧ ದಿನಗಳಲ್ಲಿ ಕೊರೋನವೈರಸ್ಸನ್ನು ಸೋಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಆರಂಭಿಕ ಯೋಜನೆ ವಿಫಲವಾಗಿದೆ ಮತ್ತು ಅದು ಅವರನ್ನು ಹಿಮ್ಮುಖವಾಗಿ ಒಯ್ದಿದೆ ಎಂದು ಹೇಳಿದ ರಾಹುಲ್ ’ಮುಮ್ಮುಖವಾಗಿ ಕೆಲಸ ಮಾಡಿ’ ಎಂದು ಪ್ರಧಾನಿಯವರನ್ನು ಆಗ್ರಹಿಸಿದರು.
‘ಒಂದಾದ ಬಳಿಕ ಒಂದರಂತೆ ದಿಗ್ಬಂಧನಗಳನ್ನು (ಲಾಕ್ ಡೌನ್) ಜಾರಿಗೊಳಿಸಲಾಗಿದೆ. ಆದರೆ ಅದರಿಂದ ಕೊರೋನಾವೈರಸ್ ಸೋಂಕನ್ನು ತಡೆಗಟ್ಟಲು ನೆರವಾಗಿಲ್ಲ. ರಾಷ್ಟ್ರವು ಪ್ರಸ್ತುತ ೪ನೇ ಹಂತದ ದಿಗ್ಬಂಧನವನ್ನು ಎದುರಿಸುತ್ತಿದ್ದು ಅದು ಮೇ ೩೧ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ರಾಹುಲ್ ಹೇಳಿದರು.
‘ತಮ್ಮ ಮೊದಲ ಯೋಜನೆ ವಿಫಲವಾಗಿದೆ ಎಂದು ಪ್ರಧಾನಿಯವರು ಅಂಗೀಕರಿಸಬೇಕಾಗುತ್ತದೆ. ಪ್ರಧಾನಿಯವರು ಹಿಮ್ಮುಖವಾಗಿ ಸಾಗುತ್ತಿದ್ದಾರೆ, ನಾನು ಅವರಿಗೆ ಮುಮ್ಮುಖವಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ’ ಎಂದು ಕಾಂಗ್ರೆಸ್ ನಾಯಕ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಪತ್ರಿಕಾ ಸಂವಾದದಲ್ಲಿ ನುಡಿದರು.
ಹಿಂದೆ ಆದದ್ದನ್ನು ಟೀಕಿಸಲು ನಾನು ಹೋಗುವುದಿಲ್ಲ. ಏಕೆಂದರೆ ನನಗೆ ವರ್ತಮಾನದ ಬಗ್ಗೆ ಮತ್ತು ನಾಳೆ ಏನಾಗುತ್ತದೆ ಎಂಬ ಬಗ್ಗೆ ಆಸಕ್ತಿ ಇದೆ ಎಂದು ರಾಹುಲ್ ಹೇಳಿದರು.
ಎರಡು ತಿಂಗಳ ಹಿಂದೆ ನಾವು ಕೋವಿಡ್ -೧೯ರ ವಿರುದ್ಧ ೨೧ ದಿನಗಳ ಸಮರ ಹೂಡಲು ಹೋಗುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದರು. ನಾವು ಕೊರೋನಾವೈರಸ್ಸನ್ನು ೨೧ ದಿನಗಳಲ್ಲಿ ಪರಾಭವಗೊಳಿಸುತ್ತೇವೆ ಎಂಬುದು ಅವರ ನಿರೀಕ್ಷೆಯಾಗಿತ್ತು’ ಎಂದು ಕಾಂಗ್ರೆಸ್ ನಾಯಕ ನುಡಿದರು.
ಲಾಕ್ ಡೌನ್ ಉದ್ದೇಶದ ಸಾಧನೆಯಾಗಿಲ್ಲ. ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರವು ತನ್ನ ನೂತನ ತಂತ್ರ ಏನು ಎಂಬುದಾಗಿ ಹೇಳಬೇಕು ಎಂದು ವೇನಾಡ್ ಸಂಸತ್ ಸದಸ್ಯ ಆಗ್ರಹಿಸಿದರು.
‘ಈಗ ನಮಗೆ ಹಣ ಮತ್ತು ಬಂಡವಾಳದ ಚುಚ್ಚುಮದ್ದು ಬೇಕಾಗಿದೆ. ಇದನ್ನು ಮಾಡದೇ ಇದ್ದಲ್ಲಿ, ನಮಗೆ ಅದು ಮಾರಕವಾಗಲಿದೆ. ಕೋರೋನಾವೈರಸ್ ಸಮಸ್ಯೆಯಿಂದಾಗಿ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಹೆಚ್ಚಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ವಲಸಿಗರ ಪರಿಸ್ಥಿತಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಜೊತೆಗಿನ ಮಾತುಕತೆಗಳ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಾವು ನಂಬಿಕೆಯನ್ನೇ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ ಎಂದರು.
‘ಭ್ರಮ ನಿರಸನ ಅವರಲ್ಲಿ ಮನೆ ಮಾಡಿದೆ. ಅವರು ಅನಾಥರಾಗಿದ್ದಾರೆ. ’ಹಮಾರಾ ಭರೋಸಾ ಟೂಟ್ ಗಯಾ’ ಎಂಬುದಾಗಿ ಅವರು ನನ್ನಲ್ಲಿ ಹೇಳಿದ್ದಾರೆ.’ ಈ ಮಾತುಗಳನ್ನು ಕೇಳಲು ನನಗೆ ಇಷ್ಟವಾಗಲಿಲ್ಲ. ಭಾರತದ ಯಾವೊಬ್ಬ ವ್ಯಕ್ತಿಯೂ ಇಂತಹ ಮಾತು ಆಡುವುದನ್ನು ನಾನು ಬಯಸುವುದಿಲ್ಲ. ಅವರು ಈ ಮಾತುಗಳನ್ನು ಹೆಚ್ಚು ಹೆಚ್ಚಾಗಿ ಹೇಳುತ್ತಿದ್ದಾರೆ. ಯಾರೂ ನಂಬಿಕೆ ಕಳೆದುಕೊಳ್ಳಬಾರದು. ನಾವು ಈಗಲೂ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಕಾರ್ಮಿಕರಿಗೆ ಪ್ರತಿ ತಿಂಗಳೂ ೭,೫೦೦ ರೂಪಾಯಿಗಳನ್ನು ಕೊಡಬೇಕು ಎಂದು ರಾಹುಲ್ ನುಡಿದರು.
ಚೀನಾ ಗಡಿ ಬಿಕ್ಕಟ್ಟು:
ಚೀನಾ ಜೊತೆಗಿನ ಗಡಿ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ರಾಹುಲ್, ’ಸರ್ಕಾರವು ಈ ಬಗ್ಗೆ ಪಾgದರ್ಶಕತೆ ತೋರಬೇಕು’ ಎಂದು ಹೇಳಿದರು.
‘ನಾವು ನೋಡಬಯಸುತ್ತಿರುವುದು ಏನು ನಡೆಯುತ್ತಿದೆ ಎಂಬ ಬಗ್ಗೆ ಇನ್ನಷ್ಟು ಪಾರದರ್ಶಕತೆಯನ್ನು. ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳದೆ ನಮಗೆ ಯಾವುದೇ ನಿಲುವು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಗಡಿಯಲ್ಲಿ ವಾಸ್ತವವಾಗಿ ಏನಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಜನರಿಗೆ ಸ್ಪಷ್ಟ ಪಡಿಸಬೇಕು’ ಎಂದು ರಾಹುಲ್ ನುಡಿದರು.
ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ನಾಲ್ಕು ಕಡೆಗಳಲ್ಲಿ ಮೇ ಆದಿಯಿಂದ ಭಾರತ ಮತು ಚೀನೀ ಸೈನಿಕರು ನೇರ ಘರ್ಷಣೆ ನಡೆಸುತ್ತಿದ್ದಾರೆ. ಸೋಮವಾರ ನಡೆದ ಸಭೆಯೂ ಸೇರಿದಂತೆ ಸ್ಥಳೀಯ ಸೇನಾ ಕಮಾಂಡರುಗಳ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಅವು ವಿಫಲಗೊಂಡಿದ್ದು ಸಿಕ್ಕಿಂ ಮತ್ತು ಲಡಾಖ್ ವಿಭಾಗಗಲ್ಲಿ ಮೂರು ವಾರಗಳ ಹಿಂದೆ ಸೇನಾ ಪಡೆಗಳ ಮಧ್ಯೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ.
ಭಾರತದ ಪಡೆಗಳು ಎಲ್ ಎಸಿಯಲ್ಲಿ ಅತಿಕ್ರಮಣ ನಡೆಸಿದೆ ಎಂಬ ಚೀನಾದ ವಾದವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಮತ್ತು ಚೀನೀ ಪಡೆಗಳು ವಿವಾದಿತ ಪ್ರದೇಶದಲ್ಲಿನ ಭಾರತೀಯ ಕಡೆಯಲ್ಲಿ ಗಸ್ತು ನಡೆಸುವುದಕ್ಕೆ ಅಡ್ಡಿ ಉಂಟು ಮಾಡುತ್ತಿವೆ ಎಂದು ಆಪಾದಿಸಿದೆ.
ಚೀನಾವು ವಿವಾದಿತ ಲಡಾಖ್ ವಿಭಾಗದಲ್ಲಿ ಗಡಿಯಾಚೆಗಿನ ತನ್ನ ನೆಲದಲ್ಲಿ ಚೀನಾವು ೫೦೦೦ ಸೈನಿಕರನ್ನು ಜಮಾಯಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಕೂಡಾ ತನ್ನ ರಕ್ಷಣಾ ತಂಡವನ್ನು ಬಲಪಡಿಸಲು ಹೆಚ್ಚುವರಿ ತುಕಡಿಗಳನ್ನು ಕಳುಹಿಸಿದೆ. ಗಡಿಯಲ್ಲಿನ ಈ ಬೆಳವಣಿಗೆಗಳು ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
‘ನಾವು ವಿಭಿನ್ನ ಕಥೆಗಳನ್ನು ಕೇಳುತ್ತಿದ್ದೇವೆ. ಈ ಬಗೆಗಿನ ಅನುಮಾನಗಳ ಬಗ್ಗೆ ನಾನು ಮಾತನಾಡುವುದಿಲ್ಲ. ವಿವರಗಳನ್ನು ಅರಿತುಕೊಳ್ಳದೆ ಟೀಕಿಸುವುದು ಸರಿಯಾಗುವುದಿಲ್ಲ ಎಂದು ನನ್ನ ಅನಿಸಿಕೆ. ಆದರೆ ಮುಖ್ಯವಾದದ್ದು ಏನು ಎಂದರೆ ಗಡಿಯಲ್ಲಿ ಏನಾಗುತ್ತಿದೆ ಎಂದು ಭಾರತ ಸರ್ಕಾರವು ಸ್ಪಷ್ಟ ಪಡಿಸಬೇಕು. ಇದರಿಂದ ಜನರಿಗೆ ತಮ್ಮ ನಿಲುವು ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ ಎಂದು ರಾಹುಲ್ ಹೇಳಿದರು.
‘ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ಇಲ್ಲಿ ಸ್ಪಷ್ಟತೆ ಇಲ್ಲ. ಲಡಾಖ್ನಲ್ಲಿ ಚೀನಾ ಜೊತೆಗೆ ಅಥವಾ ನೇಪಾಳದ ಜೊತೆಗೆ ಏನಾಗುತ್ತಿದೆ ಎಂಬ ಸ್ಪಷ್ಟತೆ ಇಲ್ಲ. ನನಗೆ ಯಾವುದೇ ಪಾರದರ್ಶಕತೆ ಕಂಡು ಬರುತ್ತಿಲ್ಲ. ಚೀನಾಕ್ಕೆ ಸಂಬಂಧಿಸಿದಂತೆ ಇದು ಜೀವಂತ ವಿಚಾರ. ಆದ್ದರಿಂದ ನಾನು ಟೀಕಿಸಲು ಬಯಸುವುದಿಲ್ಲ. ನಾನು ಇದನ್ನು ಸರ್ಕಾರದ ವಿವೇಚನೆಗೆ ಬಿಡುತ್ತೇನೆ’ ಎಂದು ಕಾಂಗ್ರೆಸ್ ನಾಯಕ ನುಡಿದರು.
No comments:
Post a Comment