Thursday, May 21, 2020

ಒಂದು ಬ್ಯಾಗ್ ಮಾತ್ರ, ವಿಮಾನದಲ್ಲಿ ತಿಂಡಿ ತಿನ್ನುವಂತಿಲ್ಲ: ದೇಶೀ ವಿಮಾನಯಾನಕ್ಕೆ ಹೊಸ ಮಾರ್ಗಸೂಚಿ

ಒಂದು ಬ್ಯಾಗ್ ಮಾತ್ರ, ವಿಮಾನದಲ್ಲಿ ತಿಂಡಿ ತಿನ್ನುವಂತಿಲ್ಲ: ದೇಶೀ ವಿಮಾನಯಾನಕ್ಕೆ ಹೊಸ ಮಾರ್ಗಸೂಚಿ
ನವದೆಹಲಿ: ಮುಂದಿನವಾರ ಆರಂಭವಾಗಲಿರುವ ದೇಶೀ ವಿಮಾನಯಾನಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗಾಗಿ ಹೊಸ ವಿಮಾನಯಾನ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ  2020 ಮೇ 21 ಗುರುವಾರ ಬಿಡುಗಡೆ ಮಾಡಿದ್ದು ಮೂರನೇ ಒಂದರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ತಿಳಿಸಿತು.

ಪ್ರಯಾಣಿಕರು ವಿಮಾನದ ಒಳಕ್ಕೇ ಒಯ್ಯಬಹುದಾದ ಒಂದು ಬ್ಯಾಗನ್ನು ಮಾತ್ರವೇ ಒಯ್ಯಬಹುದು. ಗರ್ಭಿಣಿಯರು ಮತ್ತು ಅಸ್ವಸ್ಥ ಪ್ರಯಾಣಿಕರು ವಿಮಾನಯಾನ ಮಾಡುವುದು ಬೇಡ ಎಂದು ಮಾರ್ಗಸೂಚಿ ತಿಳಿಸಿತು.

ವಿಮಾನಯಾನ ದರಗಳನ್ನು ಸರ್ಕಾರ ನಿಗದಿ ಪಡಿಸಲಿದೆ ಎಂದು ನಾಗರಿಕ ವಿಮಾನಯಾನದ ಮಾರ್ಗಸೂಚಿ ಹೇಳಿತು.

ವಿಮಾನಯಾನ ಸಂಸ್ಥೆಗಳು ಕೋವಿಡ್ ೧೯ ಸಾಂಕ್ರಾಮಿಕದ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿ ಪಡಿಸುವ ದರಗಳಿಗೆ ಬದ್ಧವಾಗಿರಬೇಕು ಎಂದು ಸಚಿವಾಲಯ ಹೇಳಿತು.
ಭಾರತವು ಮೇ ೨೫ರಿಂದ ದೇಶೀ ವಿಮಾನಯಾನಗಳನ್ನು ಪುನಾರಂಭ ಮಾಡಲಿದೆ ಎಂದು ಸರ್ಕಾರ ಬುಧವಾರ ಪ್ರಕಟಿಸಿತ್ತು.

ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆಗಳು ಇರುವವರು ಪ್ರಯಾಣ ಮಾಡದಿರುವಂತೆ ಸಲಹೆ ಮಾಡಲಾಗಿದೆ. ಕಂಟೈನ್ ಮೆಂಟ್ ವಲಯದಲ್ಲಿ ವಾಸವಾಗಿರುವ ಪ್ರಯಾಣಿಕರಿಗೆ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದಿಲ್ಲ. ಕೋವಿಡ್ -೧೯ ಸೋಂಕಿನ ಪಾಸಿಟಿವ್ ವರದಿ ಬಂದರೆ ಅಂತಹವರು ಪ್ರಯಾಣ ಮಾಡುವಂತಿಲ್ಲ ಎಂದು ಮಾರ್ಗಸೂಚಿ ಹೇಳಿದೆ.

ಸ್ವಯಂ ಘೋಷಣೆ/ ಆರೋಗ್ಯ ಸೇತು ಆಪ್ ಸ್ಟಾಟಸ್‌ನ್ನು ಕೂಡಾ ಪಡೆದುಕೊಳ್ಳಲಾಗುವುದು ಮತ್ತು ತನ್ಮೂಲಕ ಪ್ರಯಾಣಿಕರು ಕೋವಿಡ್ -೧೯ ಲಕ್ಷಣಗಳಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಖಚಿತಪಡಿಸಿಕೊಳ್ಳಲಾಗುವುದು. ಆರೋಗ್ಯ ಸೇತು ಆಪ್‌ನಲ್ಲಿಕೆಂಪುಸ್ಟಾಟಸ್ ಇದ್ದವರಿಗೆ ಪಯಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಮಾರ್ಗಸೂಚಿ ತಿಳಿಸಿದೆ.

ಆದಾಗ್ಯೂ ೧೪ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆರೋಗ್ಯ ಸೇತು ಕಡ್ಡಾಯವಲ್ಲ. ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಕ್ಯಾಬ್‌ಗಳ ಲಭ್ಯತೆಯನ್ನು ಖಾತರಿ ಪಡಿಸಬೇಕು.

ಆರೋಗ್ಯ ಸೇತು ಆಪ್ ಇಲ್ಲದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸೇತು ಡೌನ್ ಲೋಡ್ ಮಾಡಬಹುದಾದ ಕೌಂಟರಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ಮಾರ್ಗಸೂಚಿ ತಿಳಿಸಿತು.

ತಾವು ತಲುಪಬೇಕಾದ ಸ್ಥಳ ತಲುಪಿದ ಬಳಿಕ ಪ್ರಯಾಣಿಕರು ರಾಜ್ಯಗಳು ನಿರ್ಧರಿಸುವ ನಿಯಮಾವಳಿಗಳಿಗೆ ಅನುಗುಣವಾಗಿ ಕ್ವಾರಂಟೈನ್‌ಗೆ ಒಳಪಡಬೇಕು.

ಗಮ್ಯ ವಿಮಾನನಿಲ್ದಾಣಕ್ಕೆ ಬಂದಿಳಿದೊಡನೆಯೇ ಪ್ರಯಾಣಿಕರು ತಲುಪುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೂಚಿಸಲಾಗುವ ಆರೋಗ್ಯ ಶಿಷ್ಟಾಚಾರಗಳಿಗೆ ಬದ್ಧರಾಗಬೇಕು ಎಂದೂ ಮಾರ್ಗಸೂಚಿ ಹೇಳಿತು.

ಪ್ರಯಾಣಿಕರು ಮುಖಗವಸು (ಮಾಸ್ಕ್) ಧರಿಸಿರಬೇಕು ಮತ್ತು ವಿಮಾನ ಹೊರಡುವುದಕ್ಕೆ ಕನಿಷ್ಠ ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಿರಬೇಕು. ವಿಮಾನದಲ್ಲಿ ಊಟ ಒದಗಿಸಲಾಗುವುದಿಲ್ಲ ಎಂದು ಅದು ಹೇಳಿತು.

ವಿಮಾನ ನಿಲ್ದಾಣದ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಪ್ರಯಾಣಿಕರು ಕರಗತ ಮಾಡಿಕೊಳ್ಳಬೇಕು, ನಿರ್ದಿಷ್ಟವಾಗಿ ಸಾಮಾಜಿಕ ಅಂತರ, ಬ್ಯಾಗು ಮಿತಿ, ಕೋವಿಡ್-೧೯ ಘೋಷಣೆ, ಆರೋಗ್ಯ ಸೇತು ಆಪ್ ನೋಂದಣಿ, ಅಧಿಕೃತ ಟ್ಯಾಕ್ಸಿಗಳಿಗೆ ಡಿಜಿಟಲ್ ಪಾವತಿಗಳನ್ನು ಕಲಿತುಕೊಂಡಿರಬೇಕು ಎಂದು ಮಾರ್ಗಸೂಚಿ ಹೇಳಿತು.

ಕೊನೆಯ ಕ್ಷಣದಲ್ಲಿ ವಿಮಾನ ನಿಲ್ದಾಣಕ್ಕೆ ಓಡಿ ಬರಬೇಡಿ, ವಿಮಾನದೊಳಗೆ ತಿಂಡಿ ತಿನ್ನಬೇಡಿ ಎಂದೂ ಮಾರ್ಗಸೂಚಿ ಸಲಹೆ ಮಾಡಿತು.

ಮಾರ್ಚ್ ೨೨ರಿಂದ ಭಾರತಕ್ಕೆ ಯಾವುದೇ ಅಂತಾರಾಷ್ಟ್ರೀಯ ವಿಮಾನ ಬಂದಿಲ್ಲ. ವಿದೇಶಗಳಲ್ಲಿ ಇರುವ ಭಾರತೀಯರನ್ನು ಕರೆತರಲು ಕಾರ್ಗೋ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಹಂತಹಂತವಾಗಿ ಹೊರಬರುವ ದಿಕ್ಕಿನಲ್ಲಿ ದೇಶೀ ವಿಮಾನಯಾನ ಆರಂಭ ಒಂದು ಹೆಜ್ಜೆಯಾಗಿದೆ. ಮೇ ತಿಂಗಳ ಅಂತ್ಯದವರೆಗೆ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಸರ್ಕಾರ ವಿಸ್ತರಿಸಿದೆ.

No comments:

Advertisement