ಟ್ರಂಪ್ ಕೊಡುಗೆ: ಭಾರತಕ್ಕೆ
೨೬ ಲಕ್ಷ ಡಾಲರ್ ಮೊತ್ತದ ೨೦೦ ಸಂಚಾರಿ ವೆಂಟಿಲೇಟರ್
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತೀಯರಿಗೆ ನೆರವಾಗಲು ಭಾರತಕ್ಕೆ ಅಂದಾಜು ತಲಾ ೧೦ ಲಕ್ಷ ರೂಪಾಯಿ (ಒಂದು ಮಿಲಿಯನ್) ಮೌಲ್ಯದ ೨೦೦ ಸಂಚಾರಿ ವೆಂಟಿಲೇಟರುಗಳನ್ನು (ಮೊಬೈಲ್ ವೆಂಟಿಲೇಟರ್) ವಿಮಾನ ಮೂಲಕ ಕಳುಹಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಮೇ
16ರ ಶನಿವಾರ ಪ್ರಕಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಕೊರೋನಾವೈರಸ್ ವಿರುದ್ಧದ ಹೋರಾಟಕ್ಕಾಗಿ ನೂರಾರು ವೆಂಟಿಲೇಟರುಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಟ್ವಟ್ಟರಿನಲ್ಲಿ ಪ್ರಕಟಿಸಿದ್ದಕ್ಕೆ ಮೋದಿಯವರು ಟ್ವೀಟ್ ಮೂಲಕವೇ ಧನ್ಯವಾದ ಸಲ್ಲಿಸಿದರು.
‘ಡೊನಾಲ್ಡ್ ಟ್ರಂಪ್ ಅವರೇ ಧನ್ಯವಾದಗಳು. ಈ ಸಾಂಕ್ರಾಮಿಕದ ವಿರುದ್ಧ ನಾವೆಲ್ಲರೂ ಸಾಮೂಹಿಕವಾಗಿ ಹೋರಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ರಾಷ್ಟ್ರಗಳು ಸಾಧ್ಯವಾದಷ್ಟೂ ಒಟ್ಟಾಗಿ ಕೆಲಸ ಮಾಡುವುದು ಮತ್ತು ನಮ್ಮ ವಿಶ್ವವನ್ನು ಆರೋಗ್ಯಶಾಲಿಯನ್ನಾಗಿ ಮಾಡುವುದು ಹಾಗೂ ಕೋವಿಡ್-೧೯ರಿಂದ ಮುಕ್ತಗೊಳಿಸುವುದು ಅತ್ಯಂತ ಮುಖ್ಯವಾಗಿದೆ’
ಎಂದು ಪ್ರಧಾನಿ ಟ್ವೀಟ್ ಮಾಡಿದರು.
‘ಭಾರತ-ಅಮೆರಿಕ ಮೈತ್ರಿಗೆ ಇನ್ನಷ್ಟು ಬಲ’
ಎಂಬುದಾಗಿ ಮೋದಿ ಬಣ್ಣಿಸಿದರು.
ಭಾರತಕ್ಕೆ ವೆಂಟಿಲೇಟರುಗಳನ್ನು ಕಳುಹಿಸುವ ನಿರ್ಧಾರವನ್ನು ಟ್ರಂಪ್ ಅವರು ಟ್ವಿಟ್ಟರ್ ಮೂಲಕ ಪ್ರಕಟಿಸಿ, ಉಭಯ ರಾಷ್ಟ್ರಗಳ ನಡುವಣ ನಿಕಟ ಬಾಂಧವ್ಯವನ್ನು ಸಾರಿದರು.
‘ಅಮೆರಿಕವು ಭಾರತದಲ್ಲಿನ ನಮ್ಮ ಮಿತ್ರರಿಗೆ ವೆಂಟಿಲೇಟರುಗಳನ್ನು ದಾನ ನೀಡಲಿದೆ ಎಂದು ಪ್ರಕಟಿಸಲು ನನಗೆ ಹೆಮ್ಮೆ ಎನಿಸುತ್ತದೆ. ಈ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ನಾವು ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ.’ ಎಂದು ಟ್ರಂಪ್ ಟ್ವೀಟಿನಲ್ಲಿ ಬರೆದರು.
ಲಸಿಕೆ ತಯಾರಿ ಪ್ರಯತ್ನಗಳಿಗೂ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಅಮೆರಿಕವು ೨೦೦ ಸಂಚಾರಿ ವೆಂಟಿಲೇಟರುಗಳನ್ನು ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಿದೆ. ತಲಾ ೧೦ ಲಕ್ಷ ರೂಪಾಯಿ ಮೌಲ್ಯದ ಈ ವೆಂಟಿಲೇಟರುಗಳನ್ನು ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಭಾರತೀಯರಿಗೆ ಬಲ ತುಂಬಲು ಕಳುಹಿಸಲಾಗುತ್ತದೆ ಎಂದು ಮೂಲಗಳು ಹೇಳಿದವು.
ವೆಂಟಿಲೇಟರುಗಳ ಸರಕು ಈ ಮಾಸಾಂತ್ಯಕ್ಕೆ ಅಥವಾ ಜೂನ್ ಜೂನ್ ಆದಿಯಲ್ಲಿ ಭಾರತ ತಲುಪುವ ನಿರೀಕ್ಷೆ ಇದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ನುಡಿದರು.
ಪ್ರತಿಯೊಂದು ವೆಂಟಿಲೇಟರಿನ ಬೆಲೆ ಅಂದಾಜು ೧೩,೦೦೦ ಡಾಲರ್ (ಈಗಿನ ವಿನಿಮಯ ದರಗಳ ಪ್ರಕಾರ ೯.೬ ಲಕ್ಷ ರೂಪಾಯಿ) ಆಗುತ್ತದೆ. ಸಾಗಣೆ ವೆಚ್ಚ ಪ್ರತ್ಯೇಕ. ಒಟ್ಟಾರೆಯಾಗಿ ವೆಂಟಿಲೇಟರುಗಳ ವೆಚ್ಚ ೨,೬ ಮಿಲಿಯನ್ ಡಾಲರುಗಳು (ಅಥವಾ ೧೯೨ ಮಿಲಿಯನ್ ರೂಪಾಯಿಗಳು) ಆಗುತ್ತವೆ ಎಂದು ಅವರು ಹೇಳಿದರು.
ಭಾರತವು ಕೋರೋನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಚೀನಾದ ೮೨,೯೩೩ನ್ನು ಮೀರಿ ೮೫,೭೦೦ಕ್ಕೆ ಏರಿದ ಬಗೆಗಿನ ವರದಿಗಳ ಹೊತ್ತಿನಲ್ಲಿ ಟ್ವಿಟ್ಟರ್ ಮೂಲಕ ಈ ಕೊಡುಗೆಯನ್ನು ಪ್ರಕಟಿಸುವ ಮೂಲಕ ಟ್ರಂಪ್ ಸೌಜನ್ಯವನ್ನು ಮೆರೆದರು.
‘ನಾವು ಈ ಸಾಂಕ್ರಾಮಿಕದ ಹೊತ್ತಿನಲ್ಲಿ ಭಾರತ ಮತ್ತು ನರೇಂದ್ರ ಮೋದಿ ಅವರ ಜೊತೆಗೆ ನಿಲ್ಲುತ್ತೇವೆ. ನಾವು ಲಸಿಕೆ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಹಕರಿಸುತ್ತಿದ್ದೇವೆ. ಜೊತೆಯಾಗಿ ನಾವು ಈ ಅದೃಶ್ಯ ವೈರಿಯನ್ನು ಪರಾಭವಗೊಳಿಸುತ್ತೇವೆ’
ಎಂದು ಟ್ರಂಪ್ ಹೇಳಿದರು.
ಬಳಿಕ ತಮ್ಮ ಪತ್ರಿಕಾಗೋಷ್ಠಿಯಲ್ಲೂ ಟ್ರಂಪ್ ಅವರು ಈ ವಿಚಾರವನ್ನು ಪುನರುಚ್ಚರಿಸಿದರು.
ಫೆಬ್ರುವರಿ ತಿಂಗಳಲ್ಲಿ ತಮ್ಮ ಭಾರತ ಭೇಟಿಯ ಕ್ಷಣಗಳನ್ನು ನೆನಪಿಸಿದ ಟ್ರಂಪ್ ಅಮೆರಿಕದಲ್ಲಿ ಭಾರತೀಯ ವಲಸಿಗರು ವಹಿಸುತ್ತಿರುವ ಪಾತ್ರವನ್ನು ಉಲ್ಲೇಖಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಅತ್ಯುತ್ತಮ ಮಿತ್ರ ಎಂಬುದಾಗಿ ಬಣ್ಣಿಸಿದರು.
ಫೆಬ್ರುವರಿ ತಿಂಗಳಲ್ಲಿ ತಮ್ಮ ಭಾರತ ಭೇಟಿಯ ಕ್ಷಣಗಳನ್ನು ನೆನಪಿಸಿದ ಟ್ರಂಪ್ ಅಮೆರಿಕದಲ್ಲಿ ಭಾರತೀಯ ವಲಸಿಗರು ವಹಿಸುತ್ತಿರುವ ಪಾತ್ರವನ್ನು ಉಲ್ಲೇಖಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಅತ್ಯುತ್ತಮ ಮಿತ್ರ ಎಂಬುದಾಗಿ ಬಣ್ಣಿಸಿದರು.
‘ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ’
ಎಂದು ಟ್ರಂಪ್ ನುಡಿದರು.
ಅಮೆರಿಕ ಮತ್ತು ಭಾರತ ಕೊರೋನಾವೈರಸ್ ಸೋಂಕಿನ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲೂ ಪರಸ್ಪರ ಸಹಕರಿಸುತ್ತಿವೆ. ೩,೦೭,೦೦೦ ಮಂದಿಯಲ್ಲಿ ಈಗ ಸೋಂಕು ಸಕ್ರಿಯವಾಗಿದ್ದು, ಕಳೆದ ವರ್ಷ ಡಿಸೆಂಬರಿನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ವಿಶ್ವಾದ್ಯಂತ ೪.೫ ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಟ್ರಂಪ್ ಅವರ ಮನವಿಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಲೇರಿಯಾ ನಿಗ್ರಹ ಹೈಡ್ರಾಕ್ಸಿಕ್ಲೊರೋಕ್ವಿನ್ ರಫ್ತಿನ ಮೇಲಿನ ನಿಷೇಧವನ್ನು ರದ್ದು ಪಡಿಸಿದ ವಾರಗಳ ಬಳಿಕ ಅಮೆರಿಕವು ಭಾರತಕ್ಕೆ ಸಂಚಾರಿ ವೆಂಟಿಲೇಟರ್ ಕಳುಹಿಸುವ ಕ್ರಮ ಕೈಗೊಂಡಿದೆ. ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ’ಆಟ ಬದಲಾಯಿಸುವ ದಾಳ’
ಆಗಬಲ್ಲುದು ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಹೈಡ್ರಾಕ್ಸಿಕ್ಲೊರೋಕ್ವಿನ್ ಅಥವಾ ಎಚ್ಸಿಕ್ಯೂ
ಔಷಧವನ್ನು ಭಾರತದಲ್ಲಿ ಸಾಂಕ್ರಾಮಿಕ ವಿರೋಧಿ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ
ಸ್ವಾಸ್ಥ್ಯ ರಕ್ಷಣೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಭಾರತಕ್ಕೆ ವೆಂಟಿಲೇಟರ್ ಕಳುಹಿಸುವ ಟ್ರಂಪ್ ಕೊಡುಗೆ ಮತ್ತು ಅವರ ಬಹಿರಂಗ ಹೇಳಿಕೆಗಳು ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಗಾಢಗೊಳ್ಳುತ್ತಿರುವುದು ಮತ್ತು ವಿವಿಧ ಹಂತಗಳಲ್ಲಿ ಉಭಯ ರಾಷ್ಟ್ರಗಳು ನಿಕಟವಾಗುತ್ತಿರುವುದರ ಸೂಚಕ ಎಂದು ಸೂಚನೆ ಎಂದು ವಾಷಿಂಗ್ಟನ್ ಮತ್ತು ನವದೆಹಲಿಯಲ್ಲಿನ ರಾಜತಾಂತ್ರಿಕರು ಹೇಳಿದ್ದಾರೆ.
ಕೊರೋನವೈರಸ್ ಮೂಲದ ಬಗ್ಗೆ ಹೊಣೆಗಾರಿಕೆ ಮತ್ತು ಪಾರದರ್ಶಕತೆ, ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ನೇತೃತ್ವದ ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಸುಧಾರಣೆಗಳು ಮತ್ತು ಭಯೋತ್ಪಾದನೆ ಮತ್ತು ಇಂಡೋ ಫೆಸಿಫಿಕ್ ಪ್ರದೇಶದ ಪರಿಸ್ಥಿತಿಯಂತಹ ನಿರ್ಣಾಯಕ ವಿಷಯಗಳ ಕುರಿತ ಕಾರ್ಯತಂತ್ರದ ಬಗ್ಗೆ ಉಭಯ ದೇಶಗಳ ನಡುವಿನ ಅಭಿಪ್ರಾಯಗಳಗಲ್ಲಿ ಸಾಮ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಕಳೆದ ವರ್ಷ ಮಧ್ಯ ಚೀನಾದ ವುಹಾನ್ ನಗರದಲ್ಲಿ ಈ ರೋಗ ಪತ್ತೆಯಾದಾಗ, ವೈರಸ್ ಕುರಿತ ಚೀನಾದ ಪ್ರತಿಪಾದನೆಯನ್ನೇ ನಂಬಿಕೊಂಡು ಕುಳಿತದ್ದಕ್ಕಾಗಿ ಟ್ರಂಪ್ ಅವರು ವಾರಗಟ್ಟಲೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಅರೆದಿದ್ದರು. ಸಾರ್ಸ್-ಕೋವಿ -೨ ವೈರಸ್ ಸ್ವಾಭಾವಿಕವಾಗಿರದೆ ಇರಬಹುದು ಮತ್ತು ಪ್ರಯೋಗಾಲಯದಲ್ಲಿ ಜನಿಸಿರಬಹುದು ಎಂಬ ಆರೋಪ ಅಮೆರಿಕದಿಂದ ಬಂದಿದೆ, ಈ ಸಾಧ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸಹೋದ್ಯೋಗಿ ನಿತಿನ್ ಗಡ್ಕರಿ ಅವರೂ ಮಾಧ್ಯಮ ಸಂದರ್ಶನದಲ್ಲಿ ಪ್ರತಿಧ್ವನಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ನಡೆಸಿದ ಏಳು ರಾಷ್ಟ್ರಗಳ ವಿಡಿಯೋ ಸಮ್ಮೇಳನದಲ್ಲಿ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಒಂದೇ ಅಭಿಪ್ರಾಯ ವ್ಯಕ್ತಪಡಿಸಿವೆ.
ವಿಶ್ವಾದ್ಯಂತ ೩ ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ರೋಗದ ಹರಡುವಿಕೆ ವಿಚಾರದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಒತ್ತು ನೀಡುವ ಅಗತ್ಯತೆಯ ಬಗ್ಗೆ ಉಭಯ ರಾಷ್ಟ್ರಗಳು ಒತ್ತು ನೀಡಿದ್ದವು.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಿದ ಈ ಸಭೆಯಲ್ಲಿ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯನ್ನು ಉದ್ದೇಶಿಸಿಯೇ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ನೀಡಲಾಗಿತ್ತು. ವಿಶ್ವಸಂಸ್ಥೆಯು ಇದೀಗ ಸೋಮವಾರ ತನ್ನ ವಾರ್ಷಿಕ ಸಭೆ ನಡೆಸಲಿದೆ.
No comments:
Post a Comment