ಮೆಹಬೂಬಾ ಮುಫ್ತಿ ಸೆರೆವಾಸ 3 ತಿಂಗಳು ವಿಸ್ತರಣೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಸೆರೆವಾಸವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಮೂರು ತಿಂಗಳ ಅವಧಿಗೆ ವಿಸ್ತರಿಸಿ 2020 ಜುಲೈ 31ರ ಶುಕ್ರವಾರ ಆದೇಶ ಹೊರಡಿಸಿದೆ.
ಕಳೆದ ವರ್ಷ ಆಗಸ್ಟ್ ೫ ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮಕ್ಕೆ ಮುಂಚಿತವಾಗಿ ಮುಂಜಾಗರೂಕತಾ ಕ್ರಮವಾಗಿ ಬಂಧಿಸಲ್ಪಟ್ಟ ನೂರಾರು ಮಂದಿಯಲ್ಲಿ ಮುಫ್ತಿ ಅವರೂ ಸೇರಿದ್ದಾರೆ.
ಮಾಜಿ ಮುಖ್ಯಮಂತ್ರಿಯವರ ಪ್ರಸ್ತುತ ಬಂಧನ ಆದೇಶವು ಆಗಸ್ಟ್ ೫ ರಂದು ಮುಕ್ತಾಯಗೊಳ್ಳುತ್ತಿದೆ. ಈಗ ಅದಕ್ಕೆ ಮುನ್ನವೇ ಮುಫ್ತಿ ಅವರ ಬಂಧನ ವಿಸ್ತರಿಸಿರುವ ಸುದ್ದಿಯನ್ನು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು ಟ್ವೀಟ್ ಮೂಲಕ ದೃಢ ಪಡಿಸಿದೆ.
ಗೃಹ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಮುಫ್ತಿ ಅವರು ’ಆಧೀನ ಸೆರೆಮನೆ’ ಎಂಬುದಾಗಿ ಘೋಷಿಸಲ್ಪಟ್ಟಿರುವ ತಮ್ಮ ಅಧಿಕೃತ ನಿವಾಸವಾದ ಫೇರ್‌ವ್ಯೂ ಬಂಗಲೆಯಲ್ಲಿ ಇನ್ನೂ ಮೂರು ತಿಂಗಳು ಬಂಧನದಲ್ಲಿರುತ್ತಾರೆ.
"ಕಾನೂನು ಜಾರಿ ಸಂಸ್ಥೆಗಳು ಇನ್ನಷ್ಟು ಪರಿಶೀಲನೆ ಸಲುವಾಗಿ ಮತ್ತಷ್ಟು ವಿಸ್ತರಣೆಯನ್ನು ಶಿಫಾರಸು ಮಾಡಿವೆ ಅದನ್ನು ಅನುಸರಿಸಿ ಬಂಧನ ಅವಧಿ ವಿಸ್ತರಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಫರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ ಅಬ್ದುಲ್ಲ್ಲ ಸೇರಿದಂತೆ ಮುಖ್ಯವಾಹಿನಿಯ ಇತರ ಅನೇಕ ರಾಜಕಾರಣಿಗಳನ್ನು ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಮುಫ್ತಿ ಅವರನ್ನು ಮೊದಲಿಗೆ ಕಳೆದ ವರ್ಷ ಆಗಸ್ಟ್ ೫ ರಂದು ಬಂಧಿಸಲಾಗಿತ್ತು. ಉಪ-ಸೆರೆಮನೆಗಳು ಎಂಬುದಾಗಿ ನಿಗದಿ ಪಡಿಸಿದ ಎರಡು ಸರ್ಕಾರಿ ಸೌಲಭ್ಯಗಳಲ್ಲಿ ಎಂಟು ತಿಂಗಳ ಕಾಲ ಬಂಧನಕ್ಕೊಳಗಾಗಿದ್ದ ಅವರನ್ನು ಬಳಿಕ ಭಾಗಶಃ ಪರಿಹಾರವಾಗಿ ಏಪ್ರಿಲ್ ೭ ರಂದು ಸ್ವಂತ ನಿವಾಸಕ್ಕೆ ಸ್ಥಳಾಂತರಿಸಲಾಯಿತು.
ಆರಂಭದಲ್ಲಿ ಮುಂಜಾಗರೂಕತಾ ಕ್ರಮವಾಗಿ ಮುಫ್ತಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಈ ವರ್ಷ ಫೆಬ್ರವರಿ ೫ ರಂದು ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಬಂಧನಕ್ಕೆ ಗುರಿ ಪಡಿಸಲಾಯಿತು.
೨೦೧೮ರ ಜೂನ್‌ವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ ಮುಫ್ತಿ ಮುಖ್ಯಸ್ಥರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ೩೭೦ ನೇ ವಿಧಿಯನ್ನು ಹಿಂತೆಗೆದುಕೊಳ್ಳಲು ಕೇಂದ್ರವು ಪ್ರಸ್ತಾಪಿಸಿದ ಕೆಲವೇ ಗಂಟೆಗಳ ನಂತರ ರಾಜಕೀಯ ನಾಯಕರನ್ನು ಕಳೆದ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಪ್ರಸ್ತಾಪಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ನಾಯಕರಾದ ಸಜ್ಜದ್ ಲೋನ್ ಮತ್ತು ಇಮ್ರಾನ್ ಅನ್ಸಾರಿ ಅವರನ್ನು ಕೂಡಾ ಬಂಧಿಸಲಾಗಿತ್ತು.
No comments:
Post a Comment