Monday, July 13, 2020

ಪೈಲಟ್ ಬಂಡಾಯ, ಮುಖ್ಯಮಂತ್ರಿ ಗೆಹ್ಲೋಟ್, ಶಾಸಕರು ರೆಸಾರ್ಟ್‌ಗೆ

ಪೈಲಟ್ ಬಂಡಾಯ, ಮುಖ್ಯಮಂತ್ರಿ ಗೆಹ್ಲೋಟ್,
ಶಾಸಕರು ರೆಸಾರ್ಟ್ಗೆ

ನವದೆಹಲಿ: ರಾಜಸ್ಥಾನದಲ್ಲಿ ದಿಢೀರನೆ ಭುಗಿಲೆದ್ದಿರುವ ರಾಜಕೀಯ ಬಿರುಗಾಳಿಗೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತತ್ತರಿಸಿದ್ದು, ಮುಖ್ಯಮಂತ್ರಿಯವರು ತಮ್ಮ ಬೆಂಬಲಿಗ ಶಾಸಕರೊಂದಿಗೆ 2020 ಜುಲೈ 07ರ ಸೋಮವಾರ ರೆಸಾರ್ಟ್ವಾಸಕ್ಕೆ ಶರಣಾದರು.

ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥರಾಗಿರುವ ಸಚಿನ್ ಪೈಲಟ್ ಗುಂಪಿನ ಬಂಡಾಯದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಕಾಂಗ್ರೆಸ್ ಶಾಸಕರನ್ನು ಜೊತೆಯಾಗಿ ಹಿಡಿದಿಟ್ಟುಕೊಳ್ಳುವ ಸಲುವಾಗಿ ಗೆಹ್ಲೋಟ್ ಅವರು ಸೋಮವಾರ ಮಧ್ಯಾಹ್ನ ಪಕ್ಷದ ಶಾಸಕರ ಸಭೆ ಕರೆದಿದ್ದರು. ಸಭೆಯ ಬಳಿಕ ಗೆಹ್ಲೋಟ್ ಅವರು ಬೆಂಬಲಿಗ ಶಾಸಕರೊಂದಿಗೆ ತಾವೂ ರೆಸಾರ್ಟ್ ಕಡೆಗೆ ಹೊರಟ ಬಸ್ಸನ್ನೇರಿದರು ಎಂದು ವರದಿಗಳು ಹೇಳಿವೆ.

ಸಭೆಯ ಬಳಿಕ ಬೆಂಬಲಿಗರೊಂದಿಗೆ ಕ್ಯಾಮರಾಗಳನ್ನು ಎದುರಿಸಿದ ಗೆಹ್ಲೋಟ್ ವಿ ಸಂಕೇತವನ್ನು ತೋರಿಸಿದರು. ಗೆಹ್ಲೋಟ್ ಸರ್ಕಾರ ಅಲ್ಪಮತಕ್ಕೆ ಇಳಿದಿದೆ ಎಂದು ಸಚಿನ್ ಪೈಲಟ್ ಅವರು ಭಾನುವಾರ ಸಂಜೆ ಪ್ರತಿಪಾದಿಸಿದ್ದರು.

ಪೈಲಟ್ ಅವರ ಗುಂಪು ಭಾನುವಾರ ರಾತ್ರಿ ತಮಗೆ ೩೦ ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿತ್ತು. ಪೈಲಟ್ ಹೇಳಿಕೆಯ ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ನಡುರಾತ್ರಿ/ ನಸುಕಿನ .೩೦ ಗಂಟೆಗೆ ಪತ್ರಿಕಾಗೋಷ್ಠಿ ಕರೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸರ್ಕಾರಕ್ಕೆ ೧೦೯ ಶಾಸಕರ ಬೆಂಬಲ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೆಹ್ಲೋಟ್ ಹೇಳಿದ್ದರು.

೨೦೦ ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ ೧೦೧ ಸದಸ್ಯರ ಬೆಂಬಲ ಬೇಕು. ಪೈಲಟ್ ಬಂಡಾಯಕ್ಕಿಂತ ಮುನ್ನ ಸರ್ಕಾರವು ಕಾಂಗ್ರೆಸ್ಸಿನ ೧೦೭ ಸದಸ್ಯರ ಜೊತೆಗೆ ಇತರ ಪಕ್ಷೇತರರ ಬೆಂಬಲವನ್ನೂ ಹೊಂದಿತ್ತು.

ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯ ಬಳಿಕ ಶಾಸಕರು ಏರಿದ ಬಸ್ಸುಗಳು ಹೋಟೆಲ್ ಕಡೆಗೆ ದೌಡಾಯಿಸಿದವು ಎಂದು ವರದಿಗಳು ಹೇಳಿದವು.

ಸಭೆಯು ಅಶೋಕ ಗೆಹ್ಲೋಟ್ ನಾಯಕತ್ವವನ್ನು ಅನುಮೋದಿಸಿತು ಮತ್ತು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವದ ತಲೆಗೆ ಹೊಡೆಯುತ್ತಿದೆ ಎಂದು ಆಪಾದಿಸಿತು. ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಭೆ ಕರೆ ನೀಡಿತು.

ಸಭೆಯು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿರುವ ಅಥವಾ ಯಾವುದೇ ಸಂಚಿನಲ್ಲಿ ಶಾಮೀಲಾದ ಯಾರೇ ಪದಾಧಿಕಾರಿ ಅಥವಾ ಶಾಸಕಾಂಗ ಪಕ್ಷದ ಸದಸ್ಯನ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದು ನಿರ್ಣಯ ಹೇಳಿದೆ.

ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬಸ್ಸು ಹತ್ತುವ ಮುನ್ನ ಸಚಿವ ಮಮ್ತ ಭೂಪೇಶ್ ಹೇಳಿದರು.

ಕೆಲವು ವಾರಗಳ ಹಿಂದೆ, ರಾಜ್ಯಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ರೆಸಾರ್ಟಿಗೆ ಒಂದು ವಾರದ ಅವಧಿಗೆ ಒಯ್ದಿತ್ತು. ಮತದಾನಕ್ಕೆ ಮುನ್ನ ಶಾಸಕgನ್ನು ಯಾರೂ ಆಮಿಷಕ್ಕೆ ಬಲಿಯಾಗಿಸದಿರಲಿ ಎಂದು ಪಕ್ಷವು ಕ್ರಮ ಕೈಗೊಂಡಿತ್ತು.

ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಶಾಸಕರ ಸಭೆಗೆ ಮುನ್ನ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಅವರು ಪಕ್ಷವು ಸಚಿನ್ ಪೈಲಟ್ ಅವರಿಗೆ ತನ್ನ ಬಾಗಿಲುಗಳನ್ನು ಮುಚ್ಚಿಲ್ಲ ಎಂದು ಘೋಷಿಸಿದ್ದರು.

ಕಾಂಗ್ರೆಸ್ ನಾಯಕತ್ವವು ಪೈಲಟ್ ಅವರ ಬಳಿ ಕಳೆದ ೪೮ ಗಂಟೆಗಳ ಅವಧಿಯಲ್ಲಿ ಹಲವಾರು ಬಾರಿ ಮಾತನಾಡಿತ್ತು ಮತ್ತು ಕುಟುಂಬದಲ್ಲಿ ಯಾರಾದರೂ ಭ್ರಮನಿರಸನಗೊಂಡಿದ್ದರೆ ಅವರು ಇತರ ಸದಸ್ಯರ ಜೊತೆಗೆ ಕುಳಿತು ಚರ್ಚಿಸುವ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಹೇಳಿತ್ತು.

ಸೋನಿಯಾಜಿ ಮತ್ತು ರಾಹುಲ್ ಜಿ ಸೇರಿದಂತೆ ಕಾಂಗ್ರೆಸ್ ನಾಯಕತ್ವದ ಪರವಾಗಿ ನಾನು ಕಾಂಗ್ರೆಸ್ ಪಕ್ಷದ ಬಾಗಿಲುಗಳು ಸಚಿನ್ ಜಿ ಮತ್ತು ಯಾರೇ ಸದಸ್ಯರಿಗೆ ಯಾವಾಗಲೂ ತೆರೆದಿರುತ್ತವೆ ಎಂದು ತಿಳಿಸುತ್ತಿದ್ದೇನೆ ಎಂದು ಸುರ್ಜೆವಾಲ ಹೇಳಿದ್ದರು.

ಸಚಿನ್ ಪೈಲಟ್ ಶಿಬಿರದಿಂದ ಮುಂದಿನ ಕ್ರಮದ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ತಮ್ಮ ನಾಯಕ ಬಿಜೆಪಿ ಸೇರುತ್ತಿಲ್ಲ ಎಂದು ಉಪ ಮುಖ್ಯಮಂತ್ರಿಯ ನಿಕಟವರ್ತಿಯೊಬ್ಬರು ಬೆಳಗ್ಗೆ ತಿಳಿಸಿದ್ದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷ ಕಾರ್ಯಕರ್ತರು ರಾಜ್ಯ ಘಟಕ ಮುಖ್ಯಸ್ಥ ಸಚಿನ್ ಪೈಲಟ್ ಅವರ ಭಾವಚಿತ್ರಗಳಿದ್ದ ಪೋಸ್ಟರ್ ಗಳು ಮತ್ತು ಬ್ಯಾನರುಗಳನ್ನು ತೆಗೆದುಹಾಕಿದ್ದರು.

No comments:

Advertisement