Sunday, July 26, 2020

ಕಾಂಗ್ರೆಸ್ಸಿನಿಂದ ರಾಷ್ಟ್ರವ್ಯಾಪಿ ರಾಜಭವನ ಧರಣಿ

ಕಾಂಗ್ರೆಸ್ಸಿನಿಂದ ರಾಷ್ಟ್ರವ್ಯಾಪಿ ರಾಜಭವನ ಧರಣಿ

ನವದೆಹಲಿ: ರಾಜ್ಯ ಸರ್ಕಾರಗಳನ್ನು ಉರುಳಿಸುವ ಬಿಜೆಪಿ ಸಂಚಿನ ವಿರುದ್ಧ ರಾಷ್ಟ್ರಾದ್ಯಂತ ರಾಜಭವನಗಳ ಮುಂದೆ ಜುಲೈ ೨೭ರ ಸೋಮವಾರ ಧರಣಿ ನಡೆಸಲು ಕಾಂಗ್ರೆಸ್ ಪಕ್ಷವು ಕರೆ ಕೊಟ್ಟಿದ್ದು, ರಾಜಸ್ಥಾನದಲ್ಲಿ ರಾಜ್ಯಪಾಲ ಕಲರಾಜ್ ಮಿಶ್ರ ಅವರು 2020 ಜುಲೈ 26ರ ಭಾನುವಾರ ತಮ್ಮ ಅಧಿಕೃತ ಕಚೇರಿಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ವೇಳೆಯಲ್ಲಿ ಅವರು ರಾಜ್ಯದ ಕೊರೋನಾ ಸಾಂಕ್ರಾಮಿಕ ಸ್ಥಿತಿಗತಿ ಬಗೆಗೂ ಚರ್ಚಿಸಿದರು.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು  ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಮಧ್ಯೆ ನಡೆಯುತ್ತಿರುವ ಗಂಭೀರ ರಾಜಕೀಯ ಅಧಿಕಾರದ ಹೋರಾಟದ ಮಧ್ಯೆ, ಉಂಟಾಗಿರುವ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುಮಾರು ೧೦೦ ಮಂದಿ ಕಾಂಗ್ರೆಸ್ ಶಾಸಕರು ಗೆಹ್ಲೋಟ್ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ರಾಜಭವನದ ಹುಲ್ಲು ಹಾಸಿನ ಮೇಲೆ ಗಂಟೆಗಳ ಕಾಲ ಧರಣಿ ನಡೆಸಿದ್ದರು. ರಾಜ್ಯಪಾಲರು ತತ್ ಕ್ಷಣ ವಿಧಾನಸಭೆ ಅಧಿವೇಶನ ಕರೆದು ಬಲಾಬಲ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದರು.

ಸಾಕಷ್ಟು  ರಾಜಕೀಯ ನಾಟಕಗಳ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರವು ಜುಲೈ ೩೧ರಂದು ವಿಧಾನಸಭಾ ಅಧಿವೇಶನ ಕರೆಯುವಂತೆ ರಾಜ್ಯಪಾಲರನ್ನು ಆಗ್ರಹಿಸಿದೆ. ಇದೇ ವೇಳೆಗೆ ಪಕ್ಷವು ದೇಶಾದ್ಯಂತ ರಾಜಭವನಗಳ ಮುಂದೆ ಸೋಮವಾರ ಧರಣಿ ನಡೆಸುವಂತೆ ಕರೆ ಕೊಟ್ಟಿದೆ.

ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ರಾಜೀವ ಸ್ವರೂಪ್ ಮತ್ತು ಪೊಲೀಸ್ ಮಹಾ ನಿರ್ದೇಶಕ ಭೂಪೇಂದ್ರ ಯಾದವ್ ಅವರು ರಾಜಭವನದಲ್ಲಿ ನಡೆದ ಸಭೆಯಲ್ಲಿ ಸೋಮವಾರದ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರಿಸಿದರು.


No comments:

Advertisement