ಗ್ರಾಹಕರ ಸುಖ-ದುಃಖ
My Blog List
Monday, July 6, 2020
ಚೀನಾ, ಭಾರತ ಪಡೆಗಳು ಗಲ್ವಾನ್ ಕಣಿವೆಯ ೩ ಕಡೆಗಳಿಂದ ವಾಪಸ್
ಚೀನಾ, ಭಾರತ ಪಡೆಗಳು ಗಲ್ವಾನ್
ನವದೆಹಲಿ: ಗಡಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ನಡೆದಿರುವ ಸೇನಾ ಮಾತುಕತೆಗಳು ಫಲಪ್ರದವಾಗಿರುವ ಮೊದಲ ಸಂಕೇತವಾಗಿ , ಜುಲೈ ೧೫ರಂದು ಹಿಂಸಾತ್ಮಕ ಘರ್ಷಣೆ ನಡೆದ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಸೇರಿದಂತೆ ನೈಜ ನಿಯಂತ್ರಣ ರೇಖೆಯಲ್ಲಿನ ಮೂರು ಘರ್ಷಣಾ ತಾಣಗಳಿಂದ ಚೀನಾ ಮತ್ತು ಭಾರತದ ಸೇನಾಪಡೆಗಳು ಹಿಂದಕ್ಕೆ ತೆರಳಿವೆ ಎಂದು ಸುದ್ದಿ ಮೂಲಗಳು 2020 ಜುಲೈ 6ರ ಸೋಮವಾರ ತಿಳಿಸಿದವು.
ಪಡೆಗಳು ಎಷ್ಟು ಹಿಂದಕ್ಕೆ ಹೋಗಿವೆ ಎಂಬುದು ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಆದರೆ ಕಳೆದೆರಡು ತಿಂಗಳುಗಳಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ಜಮಾವಣೆಯಾಗಿದ್ದ ಗಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಪ್ರದೇಶ ಮತ್ತು ಗೋಗ್ರಾ ಪಹರೆ ಸ್ಥಳಗಳಿಂದ, ಕಮಾಂಡರ್ ಮಟ್ಟದ ಮೂರು ಸುತ್ತಿನ ಮಾತುಕತೆಗಳ ಬಳಿಕ ಭದ್ರತಾ ಪಡೆಗಳು ಹಿಂದಕ್ಕೆ ಹೋಗಿವೆ.
ಭಾರತ ಮತ್ತು ಚೀನೀ ಪಡೆಗಳ ಮಧ್ಯೆ ’ತಟಸ್ಥ ವಲಯ’ ಸೃಷ್ಟಿಸಲಾಗಿದೆ. ಪರಸ್ಪರರ ಸೇನಾ ಪಡೆಗಳ ವಾಪಸಾತಿ ಭರವಸೆಯಂತೆ ಚೀನಾ ಕ್ರಮ ಕೈಗೊಂಡಿದೆಯೇ ಎಂಬುದಾಗಿ ರಿಶೀಲಿಸಲು ನಡೆಸಲಾದ ಸಮೀಕ್ಷೆಯಲ್ಲಿ ಚೀನಾ ಪಡೆಗಳು ವಾಪಸಾಗಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.
ಅಧಿಕಾರಿಯೊಬ್ಬರು ಸೇನಾ ಪಡೆಗಳ ವಾಪಸಾತಿಯನ್ನು ’ಸೇನಾ ಪಡೆ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಅಂಬೆಗಾಲು’ ಎಂದು ಬಣ್ಣಿಸಿದರು. ’ಇದು ನೈಜ ಹಾಗೂ ದೀರ್ಘಕಾಲೀನವಾದದ್ದೇ ಎಂಬುದನ್ನು ನೋಡಬೇಕಾಗಿದೆ’ ಎಂದು ಅವರು ಹೇಳಿದರು.
ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆಯಲ್ಲಿ ಪ್ರಗತಿಯಾಗಿರುವುದನ್ನು ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯನ್ ದೃಢ ಪಡಿಸಿದರು. ’ಮುಂಚೂಣಿಯ ಪಡೆಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮತ್ತು ಗಡಿಯಲ್ಲಿ ಉದ್ವಿಗ್ನತೆ ಶಮನಗೊಳಿಸಲು ಜೂನ್ ೩೦ರಂದು ನಡೆದ ಕಮಾಂಡರ್ ಮಟ್ಟದ ಮೂರನೇ ಸುತ್ತಿನ ಮಾತುಕತೆಗಳಲ್ಲಿ ಒಪ್ಪಲಾಗಿದ್ದು, ಇದರ ಜಾರಿ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿತು.
ಜೂನ್ ೩೦ರ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳಲ್ಲಿ ತಿಳುವಳಿಕೆಯೊಂದಕ್ಕೆ ಬಂದ ಬಳಿಕ ಪಹರೆ ಪಾಯಿಂಟ್ ೧೪, ೧೫ ಮತ್ತು ೧೭ರಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕಳುಹಿಸಲು ಚೀನಾ ಒಪ್ಪಿದೆ ಎಂದು ಇದಕ್ಕೆ ಮುನ್ನ ಸುದ್ದಿ ಸಂಸ್ಥೆಯೊಂದು ತಿಳಿಸಿತ್ತು.
ಚೀನೀ ಪಡೆಗಳು ಗಲ್ವಾನ್ ಕಣಿವೆಯ ಪಾಯಿಂಟ್ ೧೪ರಲ್ಲಿ ತನ್ನ ನಿಯೋಜನಾ ತಾಣಗಳಿಂದ ಹಿಂದಕ್ಕೆ ಹೋಗಿದೆ ಎಂದು ಮೂಲಗಳು ಹೇಳಿವೆ. ಈ ಸ್ಥಳದಲ್ಲೇ ಉಭಯ ಸೇನೆಗಳ ಸೈನಿಕರ ಮಧ್ಯೆ ಹಿಂಸಾತ್ಮಕ ಘರ್ಷಣೆ ಸಂಭವಿಸಿ ಭಾರತದ ೨೦ ಯೋಧರು ಹುತಾತ್ಮರಾಗಿದ್ದರು. ಅಲ್ಲಿ ನಿರ್ಮಿಸಲಾದ ಉಭಯ ಕಡೆಗಳ ತಾತ್ಕಾಲಿಕ ಡೇರೆಗಳನ್ನೂ ಕಿತು ಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪೀಪಲ್ಸ್ ಲಿಬರೇಶಷನ್ ಆರ್ಮಿಯ (ಪಿಎಲ್‌ಎ) ಸೈನಿಕರು ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಲ್ಲಿನ ಪಾಯಿಂಟ್ ೧೫ ಮತ್ತು ಪಾಯಿಂಟ್ ೧೭ರಿಂದಲೂ ಹಿಂದಕ್ಕೆ ಹೋಗಿದ್ದಾರೆ. ಈ ಪ್ರದೇಶದಲ್ಲಿ ಚೀನೀ ಪಡೆಗಳು ಭಾರತವು ನೈಜ ನಿಯಂತ್ರಣ ರೇಖೆಯ ಪ್ರದೇಶ ಎಂಬುದಾಗಿ ಪ್ರತಿಪಾದಿಸುವ ಜಾಗದಲ್ಲಿ ಚೀನೀ ಪಡೆಗಳು ಹಲವಾರು ಮೀಟರುಗಳನ್ನು ದೂರಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದವು.
ನೈಜ ನಿಯಂತ್ರಣ ರೇಖೆಯಲ್ಲಿನ ’ಸಿಯಾಚೆನ್ ಐಸೇಷನ್’ ಎಂಬುದಾಗಿ ಕೆಲವು ತಜ್ಞರು ಬಣ್ಣಿಸುವ ಪರಿಸ್ಥಿತಿಯನ್ನು ತಪ್ಪಿಸುವ ಭರವಸೆಯನ್ನು ಉಭಯ ಕಡೆಗಳು ವ್ಯಕ್ತ ಪಡೆಸಿವೆ. ಸಿಯಾಚೆನ್ ಗ್ಲೇಸಿಯರ್‌ನಲ್ಲಿ ಎಂತಹುದೇ ಪ್ರತಿಕೂಲ ಹವಾಮಾನವಿದ್ದಾಗಲೂ ಪಡೆಗಳನ್ನು ನಿರಂತರವಾಗಿ ನಿಯೋಜಿಸಲಾಗುತ್ತದೆ ಮತ್ತು ಇಲ್ಲಿ ಆಗಾಗ ಸಂಭವಿಸುವ ಗುಂಡಿನ ಘರ್ಷಣೆಗಳಲ್ಲಿ ಹಲವಾರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
Subscribe to:
Post Comments (Atom)
No comments:
Post a Comment