ಕೋವಿಡ್: ಬಯೋಕಾನ್
ನಿಂದ ವಿಶ್ವದ ಮೊದಲ ಜೈವಿಕ ಔಷಧ
ನವದೆಹಲಿ: ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಬಯೊಕಾನ್ ಕೋವಿಡ್-೧೯ ರೋಗಿಗಳ ಚಿಕಿತ್ಸೆಗಾಗಿ ‘ವಿಶ್ವದ ಮೊದಲ ಜೈವಿಕ ಮೂಲದ ಔಷಧ’ ಬಿಡುಗಡೆ ಮಾಡುವುದಾಗಿ ಸೋಮವಾರ ಹೇಳಿತು.
ಇಟೊಲೈಜುಮ್ಯಾಬ್ (Itolizumab) ಹೆಸರಿನ ಔಷಧ ಪ್ರತಿ ಸೀಸೆಗೆ (vial) ಸುಮಾರು ೮,೦೦೦ ರೂಪಾಯಿ ಇರಲಿದ್ದು, ೨೫ಎಂಜಿ/ ೫ಎಂಎಲ್ ಇಟೊಲೈಜುಮ್ಯಾಬ್ ಚುಚ್ಚುಮದ್ದು ಮಾರಾಟ ಮಾಡಲು ಭಾರತದ ಪ್ರಧಾನ ಔಷಧಿ ನಿಯಂತ್ರಕದ (ಡಿಸಿಜಿಐ) ಅನುಮತಿಯನ್ನು ಬಯೊಕಾನ್ ಅನುಮತಿ ಪಡೆದುಕೊಂಡಿದೆ.
ಕೋವಿಡ್-೧೯ನಿಂದ ಉಂಟಾಗುವ ಉಸಿರಾಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಈ ಔಷಧ ಸಹಕಾರಿಯಾಗಲಿದೆ. ಸಾಧಾರಣ ಸ್ಥಿತಿಯಿಂದ ಗಂಭೀರ ಪ್ರಕರಣಗಳವರೆಗೂ ಇದನ್ನು ಬಳಸಬಹುದು.
ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಮಗೆ ಲಸಿಕೆ ಲಭ್ಯವಾದರೂ, ಮತ್ತೆ ಸೋಂಕು ಹರಡದಿರುವ ಕುರಿತು ಯಾವುದೇ ಖಾತರಿ ಇಲ್ಲ. ಹೀಗಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಅದು ಉಪಯುಕ್ತವಾಗುವ ಖಾತರಿಯೂ ಇಲ್ಲ, ಆದ್ದರಿಂದ ನಾವು ಎಲ್ಲದಕ್ಕೂ ಸಿದ್ಧ ಸ್ಥಿತಿಯಲ್ಲಿ ಇರಬೇಕು ಎಂದು ತಜ್ಞರು ಹೇಳಿದ್ದಾರೆ.
ಸೋಂಕಿನಿಂದ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಟೊಲೈಜುಮ್ಯಾಬ್ ಉಪಯುಕ್ತವಾಗಲಿದೆ. ’ಔಷಧಿಯ ಬೆಲೆ ಒಂದು ಸೀಸೆಗೆ ೭,೯೫೦ ರೂಪಾಯಿ ಎಂಬುದಾಗಿ ನಿಗದಿಯಾಗಿದ್ದು, ಒಬ್ಬ ರೋಗಿಗೆ ಗರಿಷ್ಠ ೪ ಸೀಸೆಗಳ ಚುಚ್ಚುಮದ್ದು ಬಳಕೆಯಾಗಬಹುದಾಗಿದ್ದು, ಒಟ್ಟು ೩೨,೦೦೦ ರೂಪಾಯಿ ವೆಚ್ಚವಾಗಲಿದೆ’ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಬೆಂಗಳೂರಿನ ಬಯೊಕಾನ್ ಪಾರ್ಕಿನಲ್ಲಿ ಇಟೊಲೈಜುಮ್ಯಾಬ್ ತಯಾರಿಸಲಾಗುತ್ತಿದೆ.
ಇಡೀ ಜಗತ್ತಿನಲ್ಲಿ ಕೋವಿಡ್-೧೯ ಸಂಬಂಧಿತ ಚಿಕಿತ್ಸೆಗಳಿಗಾಗಿ ಅನುಮತಿ ಪಡೆದಿರುವ ಏಕೈಕ ಜೈವಿಕ ಮೂಲದ ಔಷಧಿ ಇಟೊಲೈಜುಮ್ಯಾಬ್ ಎಂದು ಬಯೊಕಾನ್ ಪ್ರತಿಪಾದಿಸಿದೆ.
’ಕೋವಿಡ್ಗೆ ಲಸಿಕೆ ಬರುವವರೆಗೂ ನಮಗೆ ಜೀವ ರಕ್ಷಕ ಔಷಧಗಳ ಅಗತ್ಯವಿದೆ. ಕೊರೊನಾ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಜಗತ್ತಿನಾದ್ಯಂತ ಇರುವ ಔಷಧಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಹುಡುಕಾಟ ಅಥವಾ ಹೊಸ ಔಷಧಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದೇವೆ’ ಎಂದು ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದರು.
No comments:
Post a Comment