ರಾಜ್ಯಸಭಾ ಸದಸ್ಯ, ಮಾಜಿ ಎಸ್‌ಪಿ ನಾಯಕ ಅಮರಸಿಂಗ್ ಇನ್ನಿಲ್ಲ
ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರಸಿಂಗ್ (೬೪) 2020 ಆಗಸ್ಟ್ 01ರ ಶನಿವಾರ ನಿಧನರಾದರು.
ಹಲವಾರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅಮರಸಿಂಗ್ ಕಳೆದ ಏಳು ತಿಂಗಳುಗಳಿಂದ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ ಅವರು ಶನಿವಾರ ಕೊನೆಯುಸಿರೆಳೆದರು.
ಎರಡೂ ಮೂತ್ರಪಿಂಡಗಳ ಕಸಿ ಮಾಡಿಸಿಕೊಂಡಿದ್ದ ಅಮರಸಿಂಗ್ ಹಲವು ವರ್ಷಗಳಿಂದ ತೀವ್ರ ಅಸ್ವಸ್ಥರಾಗಿದ್ದರು.
ಸಮಾಜವಾದಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಮರಸಿಂಗ್ ಅವರು ಮುಲಾಯಂ ಸಿಂಗ್ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಿನಿಮಾ ರಂಗ ಮತ್ತು ಉದ್ಯಮಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅಮರಸಿಂಗ್, ಸಮಾಜವಾದಿ ಪಕ್ಷವು ನವದೆಹಲಿಯಲ್ಲಿ ಹೆಚ್ಚು ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಕೊನೆಯುಸಿರು ಎಳೆಯುವುದಕ್ಕೆ ಮುನ್ನ ಶನಿವಾರ ಅಮರಸಿಂಗ್ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಬಾಲ ಗಂಗಾಧರ ತಿಲಕ ಅವರಿಗೆ ಪುಣ್ಯತಿಥಿಯ ಅಂಗವಾಗಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದರು. ಮತ್ತು ತಮ್ಮ ಎಲ್ಲ ಬೆಂಬಲಿಗರಿಗೆ ’ಈದ್ ಅಲ್ ಅಧಾ’ ಶುಭ ಹಾರೈಸಿದ್ದರು.
೨೦೧೩ರ ಫೆಬ್ರುವರಿಯಲ್ಲಿ ನಿಯಮಿತ ವೈದ್ಯಕೀಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳುತ್ತಿದ್ದಾಗ ಸಿಂಗ್ ಅವರು ದುಬೈ ವಿಮಾನ ನಿಲ್ದಾಣದಲ್ಲಿ ಮೂರ್ಛೆ ಹೋಗಿದ್ದರು. ಈ ಘಟನೆಗೆ ಕೆಲವು ವರ್ಷಗಳ ಮುನ್ನ ಅವರು ಮೂತ್ರಪಿಂಡದ ಕಾಯಿಲೆಗೆ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಅನಾರೋಗ್ಯದ ಹೊರತಾಗಿಯೂ ಅಮರಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬ ಸಕ್ರಿಯರಾಗಿದ್ದರು ಎಂಬುದನ್ನು ಅವರ ಟ್ವಿಟ್ಟರ್ ಪ್ರೊಫೈಲ್ ಸೂಚಿಸುತ್ತದೆ.
ಮಾರ್ಚ್ ೨೨ ರಂದು ತಮ್ಮ ಆಸ್ಪತ್ರೆಯ ಹಾಸಿಗೆಯಿಂದಲೇ ಟ್ವಿಟ್ಟರಿನಲ್ಲಿ ಕಿರು ವಿಡಿಯೋ ಸಂದೇಶವನ್ನು ಅಮರಸಿಂಗ್ ಪ್ರಕಟಿಸಿದ್ದರು. ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಅವರು ತಮ್ಮ ಎಲ್ಲಾ ಬೆಂಬಲಿಗರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದರು.
ಮಾರ್ಚ್ ೨ ರಂದು, ತಮ್ಮ ಸಾವಿನ ಕುರಿತ ವದಂತಿಗಳಿಗೆ ತೆರೆ ಎಳೆಯಲು ಅಮರಸಿಂಗ್ ವಿಡಿಯೋ ಸಂದೇಶ ಒಂದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದರು.
"ಟೈಗರ್ ಜಿಂದಾ ಹೈ’ (ಹುಲಿ ಜೀವಂತವಾಗಿದೆ) ಎಂಬುದಾಗಿ ಅಮರಸಿಂಗ್ ಅವರು ಈ ಕಿರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.
ಸಮಾಜವಾದಿ ಪಕ್ಷವನ್ನು ತೊರೆದ ನಂತರ ಅಮರಸಿಂಗ್ ಅವರ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಮುಲಾಯಂ ಸಿಂಗ್ ಅವರ ಆಪ್ತ ಎಂಬುದಾಗಿ ಪರಿಗಣಿತರಾಗಿದ್ದ ಅಮರಸಿಂಗ್ ’ಮತ್ತೆ ಸಮಾಜವಾದಿ ಪಕ್ಷಕ್ಕೆ ವಾಪಸಾಗುವುದಿಲ್ಲ’ ಎಂದ ಇತ್ತೀಚೆಗೆ ಟ್ವೀಟ್ ಮಾಡಿದ್ದರು.
೨೦೧೦ರ ಜನವರಿ ೬ರಂದು ಅಮರಸಿಂಗ್ ಸಮಾಜವಾದಿ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು. ರಾಜೀನಾಮೆಯ ಬಳಿಕ ಅವರನ್ನು ಸಮಾಜವಾದಿ ಪಕ್ಷದಿಂದ ಹೊರ ಹಾಕಲಾಗಿತ್ತು.
೨೦೧೧ ರಲ್ಲಿ ಅಮರಸಿಂಗ್ ತಮ್ಮದೇ ರಾಜಕೀಯ ಸಂಘಟನೆ ರಾಷ್ಟ್ರೀಯ ಲೋಕ ಮಂಚ್ ಸ್ಥಾಪಿಸಿದ್ದರು. ಈ ಪಕ್ಷದ ಅಭ್ಯರ್ಥಿಗಳನ್ನು ಅವರು ೨೦೧೨ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಣಕ್ಕಿಳಿಸಿದ್ದರು. ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ೨೦೧೪ರಲ್ಲಿ ಅವರು ಜಾಟ್ ನಾಯಕ ಅಜಿತ್ ಸಿಂಗ್ ಅವರ ಪಕ್ಷವಾದ ಲೋಕ ದಳವನ್ನು ಸೇರಿದ್ದರು.
No comments:
Post a Comment