Thursday, August 6, 2020

ರೆಪೋ ದರ ಬದಲಾವಣೆ ಇಲ್ಲ: ರಿಸರ್ವ್ ಬ್ಯಾಂಕ್

ರೆಪೋ ದರ ಬದಲಾವಣೆ ಇಲ್ಲ: ರಿಸರ್ವ್  ಬ್ಯಾಂಕ್

ನವದೆಹಲಿ: ೨೦೨೦-೨೧ರ ಹಣಕಾಸು ವರ್ಷದಲ್ಲಿ ದೇಶದ ನೈಜ ಸಮಗ್ರ ಆಂತರಿಕ ಉತ್ಪನ್ನವು (ಜಿಡಿಪಿ) ಋಣಾತ್ಮಕವಾಗಿಯೇ ಮುಂದುವರೆಯಲಿದೆ ಎಂದು 2020 ಆಗಸ್ಟ್ 06ರ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ಭವಿಷ್ಯ ನುಡಿದಿದ್ದು, ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಹಿನ್ನೆಲೆಯಲ್ಲಿ ಪ್ರಮುಖ ಸಾಲದರಗಳಾದ ರೆಪೋ ದರ ಮತ್ತು ರಿವರ್ಸ್ ರೆಪೋ ದರವನ್ನು ಬದಲಾಯಿಸದೇ ಇರಲು ನಿರ್ಧರಿಸಿದೆ.

ಆದಾಗ್ಯೂ, ಕೋವಿಡ್-೧೯ ಹತೋಟಿ ಯತ್ನಗಳಿಗೆ ಸಂಬಂಧಿಸಿದಂತೆ ಧನಾತ್ಮಕ ಸುದ್ದಿ ಬಂದಲ್ಲಿ ಜಿಡಿಪಿ ಸುಧಾರಣೆ ಆಗಬಹುದು ಎಂದು ಆರ್ ಬಿಐ ಗವರ್ನರ್ ಹಾಗೂ ಬ್ಯಾಂಕಿನ ನೀತಿ ಸಮಿತಿ ಮುಖ್ಯಸ್ಥ ಶಕ್ತಿಕಾಂತ ದಾಸ್ ಹೇಳಿದರು.

ಹೊಂದಾಣಿಕೆ ನಿಲುವನ್ನು ಮುಂದುವರೆಸಲು ನಿರ್ಧರಿಸಿರುವ ಸಮಿತಿ ರೆಪೋ ದರವನ್ನು ಶೇಕಡಾ ೪ರಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ .೩೫ರ ದರಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ. ಮೇ/ ಜೂನ್ ಅವಧಿಯಲ್ಲಿ ಸ್ಥಿತಿ ಸುಧಾರಿಸುವ ಬಗೆಗೆ ಇದ್ದ ನಿರೀಕ್ಷೆ ಕೋವಿಡ್ ಪ್ರಕರಣಗಳ ಹೆಚ್ಚಳದ ಕಾರಣ ಜುಲೈ ತಿಂಗಳಲ್ಲಿ ಕಮರಿದೆ ಎಂದು ದಾಸ್ ನುಡಿದರು.

ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳಿಗೆ ಅಗತ್ಯವಿದ್ದಾಗ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ. ೨೦೨೦ರಲ್ಲಿ ಈಗಾಗಲೇ ಆರ್‌ಬಿಐ ರೆಪೋ ದರವನ್ನು ೧೧೫ ಮೂಲಾಂಶದಷ್ಟು ಕಡಿತ ಮಾಡಿದೆ.

ಯಥಾಸ್ಥಿತಿ ಪಾಲನೆಗೆ ಸರ್ವಾನುಮತದ ಒಪ್ಪಿಗೆ ನೀಡಿದ ಸಮಿತಿ, ೨೦೨೧ರ ದ್ವಿತೀಯ ತ್ರೈಮಾಸಿಕದಲ್ಲಿ ಹಣದುಬ್ಬರ ಏರಬಹುದು ಎಂದು ಹೇಳಿತು.

ಕೊರೋನಾವೈರಸ್ ಸೋಂಕಿನ ಕಾರಣದಿಂದಾಗಿ ದೇಶೀ ಆಹಾರ ಹಣದುಬ್ಬರ ಏರುಗತಿಯಲ್ಲೇ ಇದೆ. ಆಹಾರ ಹಣದುಬ್ಬರವು ಜೂನ್ ವೇಳೆಗೆ ಇತರ ಉಪಗುಂಪುಗಳ ಮೇಲೆ ಒತ್ತಡ ಉಂಟು ಮಾಡಲಿದೆ. ಕೃಷಿ ಉತ್ಪಾದನೆ ಸುಧಾರಿಸಿದರೆ ಆಹಾರ ಹಣದುಬ್ಬರ ಇಳಿಯಬಹುದು ಎಂದು ದಾಸ್ ನುಡಿದರು.

ಉತ್ತಮ ಮುಂಗಾರು ಮಳೆಯ ಕಾರಣ ಕೃಷಿ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದ್ದು, ಇದು ಕೃಷಿ ರಂಗದಲ್ಲಿ ಸಮೃದ್ಧಿಯನ್ನು ತರಬಲ್ಲುದು. ಉತ್ತಮ ಮಳೆಯ ಕಾರಣ ಮುಂಗಾರು ಬಿತ್ತನೆ ಪ್ರದೇಶವೂ ಹೆಚ್ಚುವ ಸಾಧ್ಯತೆ. ಇದರಿಂದ ಗ್ರಾಮೀಣ ಆರ್ಥಿಕತೆ ಸುಧಾರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಜಾಗತಿಕ ಆರ್ಥಿಕ ಚಟುವಟಿಕೆ ದುರ್ಬಲವಾಗಿದೆ ಎಂದು ದಾಸ್ ಹೇಳಿದರು. ಆದರೆ ಜಾಗತಿಕ ಹಣಕಾಸು ಮಾರುಕಟ್ಟೆಗಳು ಉಲ್ಲಾಸಭರಿತವಾಗಲಿವೆ ಎಂದು ಅವರು ಹೇಳಿದರು. ಸರಕುಗಳ ರಫ್ತು ಸತತ ನಾಲ್ಕನೇ ತಿಂಗಳು ಸಂಕುಚಿತಗೊಂಡಿದ್ದರೂ ಸಂಕೋಚನದ ವೇಗವು ಮಧ್ಯಮವಾಗಿದೆ ಎಂದು ಆರ್‌ಬಿಐ ಗವರ್ನರ್  ನುಡಿದರು.

ಆಗಸ್ಟ್ ರಂದು ನೀತಿ ಸಮಿತಿಯ ಮೂರು ದಿನಗಳ ಸಭೆ ಕರೆಯಲಾಗಿದೆ.

No comments:

Advertisement