ಅಸ್ಸಾಮಿನ ಮಾಜಿ ಸಿಎಂ ತರುಣ್ ಗೊಗೊಯ್ಗೆ ಕೊರೋನಾ
ನವದೆಹಲಿ: ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತ ಪಟ್ಟಿದೆ.
’ಮಂಗಳವಾರ ನನಗೆ ಕೋವಿಡ್-೧೯ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ಕೆಲ ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದೀರೋ ಅವರೆಲ್ಲ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಗೊಗೋಯ್ 2020 ಆಗಸ್ಟ್ 26ರ ಬುಧವಾರ ಟ್ವೀಟ್ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್, ಕೃಷಿ ಖಾತೆ ರಾಜ್ಯ ಸಚಿವರಾದ ಕೈಲಾಶ್ ಚೌಧರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಪಿ.ಸಿ. ಶರ್ಮಾ ಅವರು ಸೇರಿದಂತೆ ಹಲವಾರು ನಾಯಕರಿಗೆ ಕೋವಿಡ್-೧೯ ಸೋಂಕು ತಗುಲಿದ್ದು, ಕೆಲವರು ಗುಣಮುಖರಾಗಿದ್ದಾರೆ.
ದೇಶದಲ್ಲಿ ಬುಧವಾರ ೬೭,೧೫೧ ಹೊಸ ಕೋವಿಡ್ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೩೨,೩೪,೪೭೫ಕ್ಕೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೧,೦೫೯ ಜನರು ಕೊರೋನಾವೈರಸ್ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ೨೪,೬೭,೭೫೯ ಜನರು ಗುಣಮುಖರಾಗಿದ್ದು ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೭,೦೭,೨೬೭ ಆಗಿದೆ. ಒಟ್ಟಾರೆ ೫೯,೪೪೯ ಜನರು ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ತಿಳಿಸಿದೆ.
No comments:
Post a Comment